‘ಹಿರಿಯಣ್ಣ’ನಾಗಲು ಬೇಕು ಕೌಶಲ್ಯ

‘ಹಿರಿಯಣ್ಣ’ನಾಗಲು ಬೇಕು ಕೌಶಲ್ಯ

ಜಿ.ಎಂ. ವಿವಿ ವಿದ್ಯಾರ್ಥಿ ನಿಲಯ ಉದ್ಘಾಟನೆ ಹಾಗೂ  ಮಹಿಳಾ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ದಾವಣಗೆರೆ, ನ. 13 – ಭಾರತಕ್ಕೆ ಜಾಗತಿಕ ಹೂಡಿಕೆ ಬರುತ್ತಿದೆ. ನವೋದ್ಯಮಗಳೂ ದೊಡ್ಡ ಸಂಖ್ಯೆಯಲ್ಲಿ ಸ್ಥಾಪನೆಯಾಗುತ್ತಿವೆ. ಜಾಗತಿಕವಾಗಿ ಮುಂಚೂಣಿಗೆ ಬರುವ ಅವಕಾಶವೂ ಇದೆ. ಈ ಹಂತದಲ್ಲಿ ಯುವ ಪೀಳಿಗೆ ಕೌಶಲ್ಯ ಹೊಂದಿದಲ್ಲಿ ಭಾರತ ಜಾಗತಿಕವಾಗಿ ‘ಹಿರಿಯಣ್ಣ’ನಾಗಲಿದೆ ಎಂದು ಕೇಂದ್ರದ ಗ್ರಾಹಕರ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

ಇಲ್ಲಿನ ಶ್ರೀಶೈಲ ಎಜುಕೇಷನ್ ಟ್ರಸ್ಟ್‌ನ ಜಿ.ಎಂ. ವಿಶ್ವವಿದ್ಯಾಲಯದ ವಿದ್ಯಾರ್ಥಿ ನಿಲಯ ಉದ್ಘಾಟನೆ ಹಾಗೂ ಮಹಿಳಾ ನೂತನ ವಿದ್ಯಾರ್ಥಿ ನಿಲಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆಯ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವಯುದ್ಧಕ್ಕೆ ಮುಂಚೆ ಬ್ರಿಟನ್ ಸೂರ್ಯ ಮುಳುಗದ ಸಾಮ್ರಾಜ್ಯ ಎಂದು ಹೆಸರಾಗಿತ್ತು. ವಿಶ್ವಯುದ್ಧದ ನಂತರ ಅಮೆರಿಕ ಹಾಗೂ ಯು.ಎಸ್.ಎಸ್.ಆರ್.ಗಳು ಪ್ರಬಲ ದೇಶಗಳಾದವು. 1991ರಲ್ಲಿ ಯು.ಎಸ್.ಎಸ್.ಆರ್. ಪತನದ ನಂತರ ಅಮೆರಿಕ ಪ್ರಬಲವಾಗಿದೆ. ಈಗ ವಿಶ್ವದ ದೇಶಗಳ ಶ್ರೇಣಿ ಮತ್ತೆ ಬದಲಾಗುತ್ತಿದೆ. ಭಾರತ ಹಿರಿಯಣ್ಣನ ಸ್ಥಾನಕ್ಕೆ ಬರುವ ಅವಕಾಶವಿದೆ ಎಂದು ತಿಳಿಸಿದರು.

2016ರಲ್ಲಿ ಭಾರತದಲ್ಲಿ 450 ನವೋದ್ಯಮಗಳಿದ್ದವು. ಇಂದು ಅವು 1.28 ಲಕ್ಷಕ್ಕೇರಿವೆ. ಈ ಉದ್ಯಮಗಳಿಂದ 1.30 ಕೋಟಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚಿನ ಮೊತ್ತವನ್ನು ಮೂಲಭೂತ ಸೌಲಭ್ಯ ವಲಯಕ್ಕೆ ಹೂಡಿಕೆ ಮಾಡುತ್ತಿದೆ. ಮೂಲಭೂತ ಸೌಲಭ್ಯದಲ್ಲಿ ಐದು ವರ್ಷಗಳಲ್ಲಿ 100 ಲಕ್ಷ ಕೋಟಿ ರೂ.ಗಳ ಹೂಡಿಕೆ ಮಾಡಲಿದೆ ಎಂದವರು ಹೇಳಿದರು.

ಭಾರತ ಜಾಗತಿಕವಾಗಿ ಸರಕುಗಳ ಉತ್ಪಾದನಾ ತಾಣ ಹಾಗೂ ಜಾಗತಿಕ ಕಾರ್ಖಾನೆಯಾಗಬೇಕಿದೆ. ಭಾರತದಲ್ಲಿ ಈಗ ಬೆಳವಣಿಗೆಯ ವೇಗವಿದೆ. ಬೆಳವಣಿಗೆಯ ಪ್ರಮಾಣವೂ ಅಗಾಧವಾಗಿದೆ ಎಂದು ಜೋಶಿ ತಿಳಿಸಿದರು.

60 ವರ್ಷದಲ್ಲಿ 70 ವಿಮಾನ ನಿಲ್ದಾಣಗಳಿದ್ದವು ಹಾಗೂ 33 ಸಾವಿರ ಕಿ.ಮೀ.ವರೆಗೆ ರೈಲ್ವೆ ವಿದ್ಯುದೀಕರಣ ನಡೆದಿತ್ತು. ಆದರೆ, ಕಳೆದ 10 ವರ್ಷಗಳಲ್ಲಿ 75 ಹೊಸ ವಿಮಾನ ನಿಲ್ದಾಣಗಳು ನಿರ್ಮಾಣವಾಗಿವೆ ಹಾಗೂ ಹೊಸದಾಗಿ 40 ಸಾವಿರ ಕಿ.ಮೀ.ವರೆಗೆ ರೈಲ್ವೆ ವಿದ್ಯುದೀಕರಣ ನಡೆದಿದೆ ಎಂದವರು ಬೆಳವಣಿಗೆಯ ವೇಗವನ್ನು ವಿವರಿಸಿದರು.

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ಹಳ್ಳಿಗರಿರಲಿ, ನಗರವಾಸಿಗಳೇ ಇರಲಿ ಎಲ್ಲರಿಗೂ ಇಂದು ಅಕ್ಷರಜ್ಞಾನದ ಅಗತ್ಯವಿದೆ. ಶಿಕ್ಷಣದಲ್ಲಿ ಯಾವುದೇ ತಾರತಮ್ಯವಿಲ್ಲ. ಯಾವುದೇ ಸರ್ಕಾರ ಶಿಕ್ಷಣಕ್ಕೆ ತಕ್ಕ ಉದ್ಯೋಗ ಸೃಷ್ಟಿಸಬೇಕು ಎಂದು ಆಶಿಸಿದರು.

ಭಾರತದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣಕ್ಕೆ ವಿದೇಶಗಳಿಗೆ ತೆರಳುತ್ತಿದ್ದಾರೆ. ಭಾರತದಲ್ಲೇ ಉತ್ತಮ ಗುಣಮಟ್ಟದ ಶಿಕ್ಷಣಕ್ಕೆ ವ್ಯವಸ್ಥೆ ಮಾಡಿದಲ್ಲಿ, ವಿದ್ಯಾರ್ಥಿಗಳು ಬೇರೆ ದೇಶಕ್ಕೆ ಹೋಗುವುದು ನಿಲ್ಲಲಿದೆ. ಬೇರೆ ದೇಶಗಳ ವಿದ್ಯಾರ್ಥಿಗಳೇ ಇಲ್ಲಿಗೆ ಬರುತ್ತಾರೆ ಎಂದರು.

ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ನೀರಾವರಿ ಹೆಚ್ಚಿರುವ ಮಂಡ್ಯ ಜಿಲ್ಲೆಯಲ್ಲಿ ರೈತ ಆತ್ಮಹತ್ಯೆ ಹೆಚ್ಚಿವೆ. ಬರದ ನಾಡಾಗಿದ್ದ ಕೋಲಾರದಲ್ಲಿ ಟೊಮ್ಯಾಟೋ, ಮಾವಿನ ಬೆಳೆಗಾರರು ಉತ್ಪನ್ನಗಳನ್ನು ವಿದೇಶಗಳಿಗೆ ರಫ್ತು ಮಾಡುತ್ತಿದ್ಧಾರೆ. ಹೊಸ ರೀತಿಯ ಆಲೋಚನೆ ಹಾಗೂ ಪ್ರಯತ್ನಗಳಿಂದಾಗಿ ಕೋಲಾರದ ರೈತರು ಪ್ರಗತಿ ಕಂಡಿದ್ದಾರೆ. ಇದೇ ರೀತಿಯ ಆಲೋಚನೆಗಳು ಮೂಡಿದಲ್ಲಿ ಬೆಳವಣಿಗೆ ಸಾಧ್ಯ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ, 143 ವಿದ್ಯಾರ್ಥಿಗಳಿಂದ ಆರಂಭವಾದ ಜಿಎಂಐಟಿ ಸಂಸ್ಥೆಯಲ್ಲಿ ಇಂದು 8 ಸಾವಿರಕ್ಕೂ ಹೆಚ್ಚು  ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಹಾಸ್ಟೆಲ್ ನಿರ್ಮಿಸಲಾಗುತ್ತಿದೆ. ಇಲ್ಲಿ ಓದಿದವರಿಗೆ ಉದ್ಯೋಗದ ಭರವಸೆ ಸಿಕ್ಕಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಪರಿಷತ್ ಸದಸ್ಯ ಕೆ.ಎಸ್.ನವೀನ್, ಶಾಸಕ ಬಿ.ಪಿ.ಹರೀಶ್, ಮಾಜಿ ಶಾಸಕ ಎಸ್.ವಿ.ರಾಮಚಂದ್ರ, ಹೆಚ್.ಪಿ.ರಾಜೇಶ್, ಮುಖಂಡರಾದ ಗಾಯತ್ರಿ ಸಿದ್ದೇಶ್ವರ, ಹೆಚ್.ಎಸ್. ಶಿವಕುಮಾರ್, ವೀರೇಶ್ ಹನಗವಾಡಿ, ಟ್ರಸ್ಟಿಗಳಾದ ಜಿ.ಎಂ.ಪ್ರಸನ್ನಕುಮಾರ್, ಜಿ.ಎಂ. ಲಿಂಗರಾಜು, ಜಿ.ಎಸ್. ಅನಿತ್‌ಕುಮಾರ್, ಕುಲಪತಿ ಡಾ. ಎಸ್. ಆರ್. ಶಂಕಪಾಲ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!