ದಾವಣಗೆರೆ, ನ.13- ಮಹಾನಗರ ಪಾಲಿಕೆಯಿಂದ ಜನರಿಗೆ ತ್ವರಿತವಾಗಿ ಇ-ಆಸ್ತಿ ಒದಗಿಸುವ ಉದ್ದೇಶದಿಂದ ನ.13ರಿಂದ ಡಿ.31ರ ವರೆಗೆ ಇ-ಆಸ್ತಿ ವಿಶೇಷ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ನಗರದ ಶಾಮನೂರು ರಸ್ತೆಯಲ್ಲಿರುವ ಪಾಲಿಕೆ ವಲಯ ಕಚೇರಿಯಲ್ಲಿ ಇ-ಆಸ್ತಿ ವಿಶೇಷ ಆಂದೋಲನಕ್ಕೆ ಮೇಯರ್ ಕೆ. ಚಮನ್ ಸಾಬ್ ಬುಧವಾರ ಚಾಲನೆ ನೀಡಿದರು.
ಇ-ಆಸ್ತಿ ಪಡೆಯಲು ಬರುವವರು ಸ್ವತ್ತಿನ ಫೋಟೋ, ಮಾಲೀಕರ ಭಾವಚಿತ್ರ, 2024ರಲ್ಲಿ ಕಂದಾಯ ಪಾವತಿಸಿದ ಚಲನ್, ಹೊಸ ಬಡಾವಣೆ ಆಗಿದ್ದರೆ ಸಕ್ಷಮ ಮಂಜೂರಾತಿ ನಕ್ಷೆ ದಾಖಲೆಗಳನ್ನು ತರಬೇಕು ಎಂದು ಕಂದಾಯ ಇಲಾಖೆ ಆಯುಕ್ತೆ ಲಕ್ಷ್ಮಿ ಮಾಹಿತಿ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ, ನಿವೇಶನ ಸೇರಿದಂತೆ ವಿವಿಧ ಜಾಗಗಳ 1 ಲಕ್ಷದ 74 ಸಾವಿರ ಇ-ಆಸ್ತಿ ಇದ್ದು, ಅದರಲ್ಲಿ 2022ರಿಂದ 46 ಸಾವಿರ ಇ-ಆಸ್ತಿ ನೀಡಲಾಗಿದೆ. ಶಾಮನೂರು ರಸ್ತೆ, ಟಿವಿ ಸ್ಟೇಷನ್ ಬಳಿ, ದೇವರಾಜ್ ಅರಸ್ ಬಡಾವಣೆ ಸೇರಿದಂತೆ ನಗರದಲ್ಲಿರುವ ಒಟ್ಟು ಮೂರು ಪಾಲಿಕೆ ವಲಯ ಕಚೇರಿಯಲ್ಲಿ ಇ-ಆಸ್ತಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಇ-ಆಸ್ತಿಗಾಗಿ ವಲಯ ಕಚೇರಿ 1ರಲ್ಲಿ 27 ಅರ್ಜಿಗಳು, ವಲಯ ಕಚೇರಿ 2ರಲ್ಲಿ 27 ಅರ್ಜಿಗಳು ಮತ್ತು ವಲಯ ಕಚೇರಿ 3ರಲ್ಲಿ 30 ಅರ್ಜಿಗಳು ಸೇರಿದಂತೆ ಬುಧವಾರ ಒಟ್ಟು 84 ಅರ್ಜಿಗಳನ್ನು ವಿಲೇವಾರಿ ಮಾಡಿ ಇ-ಆಸ್ತಿ ವಿತರಿಸಲಾಗಿದೆ.
ಸಾರ್ವಜನಿಕರು ಕೂಡಲೇ ತಮ್ಮ ವಾರ್ಡಿಗೆ ಸಂಬಂಧಿಸಿದ ವಲಯ ಕಚೇರಿಗಳಿಗೆ ಭೇಟಿ ನೀಡಿ, ನಿಗದಿತ ದಾಖಲೆಗಳನ್ನು ಸಲ್ಲಿಸುವ ಮೂಲಕ ತಮ್ಮ ಸ್ವತ್ತುಗಳಿಗೆ ಇ-ಆಸ್ತಿ ಪಡೆಯುವಂತೆ ಆಯುಕ್ತರು ಹಾಗೂ ಪಾಲಿಕೆ ಮೇಯರ್ ತಿಳಿಸಿದರು.
ಈ ವೇಳೆ ಉಪ ಮೇಯರ್ ಸೋಗಿ ಶಾಂತ ಕುಮಾರ್, ವಲಯ ಆಯುಕ್ತೆ ಈರಮ್ಮ, ಕಂದಾಯ ಅಧಿಕಾರಿಗಳಾದ ಪಾಂಡುರಾಜು, ಕೃಷ್ಣ, ಮ್ಯಾನೇಜರ್ ತ್ರಿನೇತ್ರ ಸೇರಿದಂತೆ ಇತರರಿದ್ದರು.