ಹರಿಹರ ತಾಲ್ಲೂಕಿಗೆ ಆಗಮಿಸಿದ ಪಾದಯಾತ್ರೆಗೆ ಭೈರನಪಾದದ ಬಳಿ ಸ್ವಾಗತ
ಕೆ.ಎನ್.ಹಳ್ಳಿ : ಆರ್ಥಿಕ ತಜ್ಞ, ಪರಿಸರ ಕಾರ್ಯಕರ್ತ ಪ್ರೊ. ಕುಮಾರಸ್ವಾಮಿ
ಮಲೇಬೆನ್ನೂರು, ನ.13- ತುಂಗಭದ್ರಾ ನದಿ ಕಾವೇರಿ ನದಿಗಿಂತ ಹೆಚ್ಚು ಪ್ರಾಮುಖ್ಯತೆ ಪಡೆದಿರುವ ನದಿಯಾಗಿದ್ದು, ಅತಿ ಹೆಚ್ಚು ಉದ್ದ ಹರಿಯುವ ನದಿಯಾಗಿದೆ ಎಂದು ಆರ್ಥಿಕ ತಜ್ಞ ಹಾಗೂ ಪರಿಸರ ಕಾರ್ಯಕರ್ತ ಪ್ರೊ. ಕುಮಾರಸ್ವಾಮಿ ಹೇಳಿದರು.
ಅವರು ಬುಧವಾರ ಸಂಜೆ ಕಡರ ನಾಯ್ಕನಹಳ್ಳಿ ಗ್ರಾಮದಲ್ಲಿ ಹಮ್ಮಿ ಕೊಂಡಿದ್ದ ನಿರ್ಮಲ ತುಂಗಭದ್ರಾ ಅಭಿ ಯಾನ ಪಾದಯಾತ್ರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀಕ್ಷೇತ್ರ ಶೃಂಗೇರಿ ಬಳಿಯ ಗಂಗಡಿಕಲ್ಲು ಪ್ರದೇಶದಲ್ಲಿ ಹುಟ್ಟುವ ತುಂಗಾ ಮತ್ತು ಭದ್ರಾ ನದಿಗಳು ಬೇರೆ ಬೇರೆಯಾಗಿ ಹರಿದು ಮುಂದೆ ಹೊಳೆಹೊನ್ನೂರು ಸಮೀಪದ ಕೂಡ್ಲಿಯಲ್ಲಿ ಸಂಗಮವಾಗಿ ಮುಂದೆ ತುಂಗಭದ್ರಾ ನದಿಯಾಗಿ ಸುಮಾರು 500 ಕಿ.ಮೀ. ಹರಿಯುತ್ತಿದೆ.
ಮಲೆನಾಡಿನಲ್ಲಿ ಹುಟ್ಟುವ ಈ ನದಿ ಮಧ್ಯಕರ್ನಾಟಕ, ಬಯಲುನಾಡಿನ ಜೀವನಾಡಿಯಾಗಿ ಜನ-ಜಾನುವಾರು-ಪಶು ಪಕ್ಷಿಗಳಿಗೆ ಮತ್ತು ಸುಮಾರು 6 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದ್ದು, ನದಿ ಪಾತ್ರದ ಅನೇಕ ನಗರ-ಪಟ್ಟಣಗಳಿಗೆ ಮತ್ತು ಸಾವಿರಾರು ಹಳ್ಳಿ ಗಳಿಗೆ ಕುಡಿಯುವ ನೀರು ಪೂರೈಸುತ್ತಿದೆ.
ಕೃಷ್ಣಾನದಿ ಮೂಲಕ ಆಂಧ್ರಪ್ರದೇಶಕ್ಕೂ ಆಸರೆಯಾಗಿರುವ ತುಂಗಭದ್ರಾ ನದಿಯ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ನಾವು ನಿರ್ಮಲ ತುಂಗಭದ್ರಾ ಅಭಿಯಾನವನ್ನು ಶೃಂಗೇರಿಯಿಂದ ಕಿಷ್ಕಿಂಧಾವರೆಗೆ 400 ಕಿ.ಮೀ. ಪಾದಯಾತ್ರೆ ಆರಂಭಿಸಿ, ಈ ದಿನ ಹರಿಹರ ತಾಲ್ಲೂಕನ್ನು ಪ್ರವೇಶಿಸಿದ್ದೇವೆ.
ತುಂಗಭದ್ರಾ ಹಾಗೂ ಇತರೆ ನದಿಗಳ ಪಾವಿತ್ರ್ಯತೆ ಕಾಪಾಡುವುದು ಮತ್ತು ಜಲಾನಯನ ಪ್ರದೇಶದಲ್ಲಿ ಅರಣ್ಯ ನಾಶದಿಂದ ಮಳೆ ನೀರು ಇಂಗುವಿಕೆ ಕಡಿಮೆಯಾಗಿ ಮಳೆಗಾಲದಲ್ಲಿ ಪ್ರವಾಹ ಮತ್ತು ಬೇಸಿಗೆಯಲ್ಲಿ ಬರ ಸಮಸ್ಯೆಗಳಿಗೆ ಪರಿಹಾರವಾಗಿ ನದಿಗಳಲ್ಲಿ ನೀರಿನ ಹರಿವು ಸದಾ ಇರುವಂತೆ ಮಾಡಲು ಜಲಾನಯನ ಪ್ರದೇಶ ಅಭಿವೃದ್ಧಿ ಯೋಜನೆಗಳನ್ನು ರೂಪಿಸಲು ಸರ್ಕಾರ ಮುಂದಾಗಬೇಕೆಂದು ಕುಮಾರಸ್ವಾಮಿ ಒತ್ತಾಯಿಸಿದರು.
ಅಕ್ರಮ ಹಾಗೂ ಅವೈಜ್ಞಾನಿಕ ನದಿ ಮರಳು ಗಣಿಗಾರಿಕೆಯಿಂದ ನದಿದಂಡೆ ಕೊರೆತ, ಮೀನು ಸೇರಿದಂತೆ ಜಲಚರ ಸಂತತಿಗಳು ನಾಶವಾಗುತ್ತಿದ್ದು, ಇದನ್ನು ತಡೆಯಲು ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಗರ-ಪಟ್ಟಣ-ಗ್ರಾಮ ಗಳ ತ್ಯಾಜ್ಯ ನೀರು ನದಿಗೆ ನೇರವಾಗಿ ಸೇರದಂತೆ ಎಲ್ಲಾ ಕಡೆಗಳಲ್ಲಿ ತ್ಯಾಜ್ಯ ನೀರು ಶುದ್ಧೀಕರಣ ಘಟಕ ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದರು.
ತುಂಗಭದ್ರಾ ನದಿ ನೀರು ಕಲುಷಿತವಾಗುತ್ತಿದ್ದು, ಇದನ್ನು ತಡೆಗಟ್ಟಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಜ್ಞರ ಸಮಿತಿ ರಚನೆ ಮಾಡಬೇಕು ಮತ್ತು ಪಶ್ಚಿಮ ಘಟ್ಟಗಳ ಪರಿಸರ, ನೀರು, ಕೃಷಿ, ಆರ್ಥಿಕ ಹಾಗೂ ಸಾಮಾಜಿಕ ಅಧ್ಯಯನವನ್ನು ವೈಜ್ಞಾನಿಕವಾಗಿ ನಡೆಸಲು ಅನುಕೂಲವಾಗುವಂತೆ `ಪಶ್ಚಿಮ ಘಟ್ಟ ಅಧ್ಯಯನ ಕೇಂದ್ರ’ ಸ್ಥಾಪಿಸುವಂತೆ ಸರ್ಕಾರಗಳ ಮೇಲೆ ಒತ್ತಡ ಹಾಕುವುದು ನಮ್ಮ ಅಭಿಯಾನ ಹಾಗೂ ಪಾದ ಯಾತ್ರೆಯ ಮುಖ್ಯ ಉದ್ದೇಶವಾಗಿದೆ. ಈ ಮೂಲಕ ಸಾರ್ವಜನಿಕರಲ್ಲಿ ಜಲಜಾಗೃತಿ ಮತ್ತು ಸ್ವಚ್ಛತೆ ಜಾಗೃತಿ ಮೂಡಿಸಲಾಗು ವುದೆಂದು ಪ್ರೊ. ಕುಮಾರಸ್ವಾಮಿ ಹೇಳಿದರು.
ಮಾಜಿ ಶಾಸಕ ಮಹಿಮಾ ಪಟೇಲ್ ಅವರು ಗೋವಿನಹಾಳ್‌ನಿಂದ ಕೆ.ಎನ್. ಹಳ್ಳಿವರೆಗೂ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, ತುಂಗಭದ್ರಾ ನದಿ ಮುಂದಿನ ಪೀಳಿಗೆಗೂ ಬಳಕೆಗೆ ಬರಬೇಕೆಂದರೆ ನಾವು ಈ ಕ್ಷಣದಿಂದಲೇ ಜಾಗೃತರಾಗಿ, ನದಿ-ಕೆರೆ-ಕಟ್ಟೆ ಮತ್ತು ಊರು, ಕೇರಿಗಳ ಸ್ವಚ್ಛತೆಗೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಆರಂಭಿಸಿರುವ ಈ ಪಾದಯಾತ್ರೆಯಿಂದ ಜನರಲ್ಲಿ ಸ್ವಲ್ಪವಾದರೂ ಅರಿವು ಬರಲಿದೆ ಎಂಬ ವಿಶ್ವಾಸ ನನಗಿದೆ ಎಂದರು.
ಹೊನ್ನಾಳಿ ತಾಲ್ಲೂಕಿನ ಕೋಣನತಲೆ ಮೂಲಕ ಹರಿಹರ ತಾಲ್ಲೂಕಿನ ಭೈರನ ಪಾದಕ್ಕೆ ಆಗಮಿಸಿದ ಪಾದಯಾತ್ರೆಯನ್ನು ಸ್ವಾಗತಿಸಿದ ಬಿಜೆಪಿ ಮುಖಂಡ ಚಂದ್ರ ಶೇಖರ್ ಪೂಜಾರ್ ಅವರು ಗೋವಿನ ಹಾಳ್, ನಂದಿಗುಡಿ ಮಾರ್ಗವಾಗಿ ಕೆ.ಎನ್.ಹಳ್ಳಿವರೆಗೆ ಹೆಜ್ಜೆ ಹಾಕಿದರು.
ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ವಿವೇಕ್‌ತ್ಯಾಗಿ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ಐರಣಿ ಅಣ್ಣಪ್ಪ, ಕೆ.ಎನ್.ಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಬಸವನಗೌಡ, ತಾ. ಗ್ರಾ. ಬಿಜೆಪಿ ಕಾರ್ಯದರ್ಶಿ ಹುಗ್ಗಿ ಮಹಾಂತೇಶ್, ರಾಷ್ಟ್ರೀಯ ಸ್ವಾಭಿಮಾನಿ ಆಂದೋಲನದ ದಕ್ಷಿಣ ಪ್ರಾಂತ್ಯದ ಸಂಚಾಲಕ ಸಿ.ಪಿ. ಮಾಧವನ್, ಹರಿಹರ ತಾಲ್ಲೂಕು ಸಂಚಾಲಕರಾದ ವೀರೇಶ್, ಅಜ್ಜಣ್ಣನವರ್, ಶಾಂತಕುಮಾರಿ, ಕರಿಬಸಪ್ಪ ಕಂಚಿಕೇರಿ, ಹನುಮಂತ ಸಿಂಗಾಡಿ, ಕೆ.ಎನ್.ಹಳ್ಳಿ ಶಾಲೆಯ ಮುಖ್ಯ ಶಿಕ್ಷಕ ಎ.ಕೆ. ಮಂಜಪ್ಪ, ಶಿಕ್ಷಕ ಸಿ.ಪಿ. ಕುಬೇರಪ್ಪ, ನಂದಿಗುಡಿ ಶ್ರೀಕಾಂತ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ರಾತ್ರಿ ಹೊಸಳ್ಳಿ ವೇಮನ ಗುರುಪೀಠ ದಲ್ಲಿ ತಂಗಿರುವ ಪಾದಯಾತ್ರಿಗಳು ಗುರುವಾರ ಬೆಳಗ್ಗೆ ಹೊಸಳ್ಳಿಯಿಂದ ಬಿಳಸನೂರು ಮಾರ್ಗವಾಗಿ ರಾಜನಹಳ್ಳಿ ಮಠಕ್ಕೆ ಆಗಮಿಸಿ, ಅಲ್ಲಿಂದ ಸಂಜೆ ಪಂಚಮಸಾಲಿ ಪೀಠ ತಲುಪಲಿದ್ದಾರೆ. ಶುಕ್ರವಾರ ಹರಿಹರೇಶ್ವರ ದೇವಸ್ಥಾನ ದಿಂದ ಪಾದಯಾತ್ರೆ ಪ್ರಾರಂಭವಾಗಲಿದೆ.