ಮಧುಮೇಹ ಮತ್ತು ಯೋಗಕ್ಷೇಮ

ಮಧುಮೇಹ ಮತ್ತು ಯೋಗಕ್ಷೇಮ

ಇಂದು ವಿಶ್ವ ಮಧುಮೇಹ ದಿನ

ಭಾರತದಲ್ಲಿ ಮಧುಮೇಹ ಮನೆ ಮನೆಯ ಸಮಸ್ಯೆಯಾಗಿ ಹೊಸ ಯುಗದ ಗಂಭೀರ ಕಾಯಿಲೆಯಾಗಿ ಪರಿಣಮಿಸಿದೆ. 2045 ರ ವೇಳೆಗೆ 70 ಕೋಟಿ ಜನರು ಮಧುಮೇಹದಿಂದ ಬಳಲಲಿದ್ದಾರೆ. ಭಾರತವನ್ನು ಮಧುಮೇಹದ ರಾಜಧಾನಿ ಎಂದು ಕರೆಯಲಾಗುತ್ತದೆ. ಇದಕ್ಕೆ ಕಾರಣವೇನೆಂದರೆ ಭಾರತೀಯರ ಜೀನ್ಸ್‌ನಲ್ಲಿ ಮಧುಮೇಹದ ಸಂಭವನೀಯತೆ ಅಧಿಕವಾಗಿದೆ. ಆತಂಕದ ವಿಷಯವೇನೆಂದರೆ ಹದಿಹರೆಯದವರಲ್ಲಿ ಮಧುಮೇಹ ಹೆಚ್ಚಾಗಿ ಕಂಡುಬರುತ್ತಿರುವುದು. ಪ್ರತಿ 10 ಮಂದಿ ಹದಿಹರೆಯದ ಮಕ್ಕಳ ಪೈಕಿ ಬಹುತೇಕ 6 ಮಂದಿಯಲ್ಲಿ ಮಧುಮೇಹ ಕಾಣಿಸಿಕೊಳ್ಳುತ್ತಿದೆ. ಇದೇ ವೇಗದಲ್ಲಿ ಮುಂದುವರಿದರೆ 20 ವರ್ಷಗಳಲ್ಲಿ ನವಜಾತ ಶಿಶುಗಳ ಜೀವಿತಾವಧಿ ನಮ್ಮ ಜೀವಿತಾವಧಿಗಿಂತ 20 ವರ್ಷ ಕಡಿಮೆಯಾಗುತ್ತದೆ. ಪ್ರತಿ ವರ್ಷ ನವೆಂಬರ್ 14 ರಂದು ವಿಶ್ವ ಮಧುಮೇಹ ದಿನವನ್ನು ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಬೆಂಬಲದೊಂದಿಗೆ 1991 ರಲ್ಲಿ ಇಂಟರ್‌ನ್ಯಾಷನಲ್ ಡಯಾಬಿಟಿಸ್ ಒಕ್ಕೂಟ ಈ ದಿನವನ್ನು ಪ್ರಸ್ತಾಪಿಸಿತು.

ವಿಶ್ವ ಮಧುಮೇಹ ದಿನವನ್ನು ಏಕೆ ಆಚರಿಸಲಾಗುತ್ತದೆ ?

ವಿಶ್ವ ಮಧುಮೇಹ ದಿನ ಜಾಗತಿಕ ಸಾರ್ವಜನಿಕ ಆರೋಗ್ಯ ಸಮಸ್ಯೆಯಾಗಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸಲು ಅವಕಾಶವನ್ನು ಒದಗಿಸುತ್ತದೆ ಮತ್ತು ಈ ಮೂಲಕ ಮಧುಮೇಹವನ್ನು ತಡೆಗಟ್ಟುವಿಕೆ, ರೋಗನಿರ್ಣಯ ಮತ್ತು ನಿರ್ವಹಣೆಗೆ ಸಹಾಯ ಮಾಡುತ್ತದೆ.

ಈ ವರ್ಷದ ವಿಶ್ವ ಮಧುಮೇಹದ ಘೋಷವಾಕ್ಯ: `ಮಧುಮೇಹ ಮತ್ತು ಯೋಗಕ್ಷೇಮ’

ಮಿಲಿಯನ್‌ಗಟ್ಟಲೆ ಮಧುಮೇಹ ರೋಗಿಗಳು ದಿನನಿತ್ಯದ ತಮ್ಮ ಜೀವನ ನಿರ್ವಹಣೆಗೆ ಕುಟುಂಬದಲ್ಲಿ, ಉದ್ಯೋಗ ಸ್ಥಳಗಳಲ್ಲಿ, ಶಾಲೆಗಳಲ್ಲಿ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಈಗಿರುವ ಮಧುಮೇಹದ ಆರೈಕೆ ಕೇವಲ ರಕ್ತದ ಸಕ್ಕರೆ ಅಂಶದ ನಿರ್ವಹಣೆಯ ಮೇಲೆ ಕೇಂದ್ರೀಕ್ರತವಾಗಿದೆ. ಈ ಸಲದ ವಿಶ್ವ ಮಧುಮೇಹ ದಿನವು ಮಧುಮೇಹದ ಆರೈಕೆಯ ಎಲ್ಲಾ ಆಯಾಮಗಳಿಗೆ ಒತ್ತು ನೀಡಿ ಹಾಗು ಡಯಾಬಿಟೀಸ್ ಯಾತನೆಯನ್ನು ನಿವಾರಿಸಿ ಅವರ ಜೀವನವನ್ನು ಉತ್ತಮವಾಗಿಸುವ ನಿಟ್ಟಿನಲ್ಲಿ ಮಧುಮೇಹದ ಮತ್ತು ಯೋಗಕ್ಷೇಮ ಎಂಬ ಘೋಷ ವಾಕ್ಯವನ್ನು ಅಳವಡಿಸಿಕೊಂಡಿದೆ.

ಡಯಾಬಿಟೀಸ್ ಯಾತನೆಯನ್ನು ನಿಭಾಯಿಸುವುದು ಹೇಗೆ ?

  • ನಿಮ್ಮ ಕಾಯಿಲೆಯ ಬಗ್ಗೆ ನಿಮಗೆ ಉದ್ಭವಿಸುವ ಭಾವನೆಗಳತ್ತ ಗಮನ ಹರಿಸಿ, ಅವುಗಳನ್ನು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ.
  • ಇತರರು ನಿಮ್ಮ ಕಾಯಿಲೆಯ ಬಗ್ಗೆ ಮಾಡುವ ಟೀಕೆಗಳನ್ನು ನಿಮ್ಮ ವೈದ್ಯರೊಂದಿಗೆ ಮುಕ್ತವಾಗಿ ಹಂಚಿಕೊಳ್ಳಿ
  • ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ನಿಮ್ಮ ಕಾಯಿಲೆಯ ಬಗ್ಗೆ ಇರುವ ಭಾವನೆಗಳನ್ನು ವ್ಯಕ್ತಪಡಿಸಿ.
  • ನಿಮ್ಮ ಕಾಯಿಲೆಗೆ ಔಷಧಿಗಳು ಉಚಿತವಾಗಿ ಎಲ್ಲಿ ಹಾಗು ಹೇಗೆ ದೊರೆಯುತ್ತವೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆಯಿರಿ, ಕಾಯಿಲೆಯ ಆರೈಯಲ್ಲಿ ನಿಮ್ಮ ಪ್ರೀತಿಪಾತ್ರರನ್ನು ತೊಡಗಿಸಿಕೊಳ್ಳಿ.
  • ಪ್ರತಿ ದಿನ ನಿಮ್ಮ ಆರೈಕೆಗಾಗಿ ನೀವು ಮಾಡಬೇಕಾದ ಎಲ್ಲಾ ಕಾರ್ಯಗಳ ಪಟ್ಟಿಯನ್ನು ಮಾಡಿ, ಪ್ರತಿ ಕೆಲಸವನ್ನು ಪ್ರತ್ಯೇಕವಾಗಿ, ಒಂದು ಸಮಯದಲ್ಲಿ ಒಂದೇ ಕೆಲಸ ಮಾಡಲು ಪ್ರಯತ್ನಿಸಿ ಹಾಗು ದೈಹಿಕ ಚಟುವಟಿಕೆಗಳ ಅವಧಿಯನ್ನು ನಿಧಾನವಾಗಿ ಹೆಚ್ಚಿಸಿ.

ಮಧುಮೇಹವನ್ನು ತಡೆಗಟ್ಟಲು ನೀವು ಏನು ಮಾಡಬಹುದು

  • ನಿಮ್ಮ ತೂಕವನ್ನು ನಿಯಂತ್ರಣದಲ್ಲಿಡಿ
  • ಅನಗತ್ಯ ಸಕ್ಕರೆ ಸೇವನೆ ಮತ್ತು ಸಿಹಿ ತಿಂಡಿಗಳನ್ನು ಕಡಿಮೆ ಮಾಡಿ λ ಒಂದು ದಿನದಲ್ಲಿ ಕನಿಷ್ಠ 30 ನಿಮಿಷಗಳ ಕಾಲ ನಡೆಯಿರಿ
  • ಒತ್ತಡದಿಂದ ದೂರವಿರಿ, ಧ್ಯಾನ, ಯೋಗದಂತಹ ಶಾಂತ ಸ್ಥಿತಿಗೆ ನೆರವಾಗುವ ವಿಧಾನಗಳನ್ನು ಅಭ್ಯಾಸ ಮಾಡಿ, ಹವ್ಯಾಸಗಳನ್ನು ಬೆಳೆಸಿಕೊಳ್ಳಿ λ 35 ವರ್ಷಗಳ ನಂತರ ನಿಯಮಿತವಾಗಿ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ
  • ಸಾಕಷ್ಟು ವಿಶ್ರಾಂತಿ ಮತ್ತು 6-8 ಗಂಟೆ ಪ್ರತಿನಿತ್ಯ ನಿದ್ರೆಮಾಡಿರಿ.

ಭಾರತೀಯರಲ್ಲಿ ಆನುವಂಶೀಯವಾಗಿ ಸಕ್ಕರೆ ಕಾಯಿಲೆಗೆ ಒಳಗಾಗುವ ಸಾಧ್ಯತೆ ಅಧಿಕವಾಗಿದೆ. ಅದನ್ನು ಶೀಘ್ರವಾಗಿ ಪತ್ತೆ ಹಚ್ಚುವುದರಿಂದ ಅದರಿಂದ ಸಂಭವಿಸುವ ತೊಡಕುಗಳನ್ನು ಹಾಗು ಡಯಾಬಿಟೀಸ್ ಯಾತನೆಯನ್ನು ನಿಭಾಯಿಸುವುದು ವೈದ್ಯ ಸಮುದಾಯದ ಜವಾಬ್ದಾರಿಯಾಗಿದೆ.

ಬಾಪೂಜಿ ಆಸ್ಪತ್ರೆಯ ಹೊರ ರೋಗಿ ವಿಭಾಗದಲ್ಲಿ ದಿನಾಂಕ 14-11-2024 ರಿಂದ 20-11-2024 ರವರೆಗೆ ಬೆಳಿಗ್ಗೆ 10.00 ರಿಂದ ಮಧ್ಯಾಹ್ನ 4.00 ಗಂಟೆಯವರೆಗೆ ಕೆಳಕಂಡ ಸೇವೆಗಳು ಉಚಿತವಾಗಿ ಲಭ್ಯವಿರುತ್ತವೆ.

  • ತಜ್ಞ ವೈದ್ಯರಿಂದ ತಪಾಸಣೆ ಹಾಗು ಸಮಾಲೋಚನೆ
  • ಸ್ವಯಂ ಆರೈಕೆಯ ಸಮಾಲೋಚನೆ
  • GRBS, HbA1C, RFT, ECG
  • ಡಯಾಬಿಟಿಕ್ ರೆಟಿನೋಪಥಿ ತಪಾಸಣೆ ಹಾಗು ನಿರ್ವಹಣೆ
  • ನರ ಪರೀಕ್ಷೆ

ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಸಾರ್ವಜನಿಕರು ಈ ಸೇವೆಗಳ ಸದುಪಯೋಗ ಪಡೆದುಕೊಂಡು ಆರೋಗ್ಯವಂತ ಜೀವನವನ್ನು ನಡೆಸಬೇಕೆಂದು ಆಶಿಸುತ್ತೇವೆ.

– ಸಮುದಾಯ ವೈದ್ಯಕೀಯ ವಿಭಾಗ,ಜ.ಜ.ಮು ವೈದ್ಯಕೀಯ ಮಹಾವಿದ್ಯಾಲಯ, ಮತ್ತು ಎಸ್.ಎಸ್. ಕೇರ್ ಟ್ರಸ್ಟ್,  ದಾವಣಗೆರೆ.

error: Content is protected !!