ದುಡಾ ಶಾಖಾ ಕಚೇರಿ ಉದ್ಘಾಟಿಸಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭರವಸೆ
ಹರಿಹರ, ನ.11- ಜಿಲ್ಲಾ ಉಸ್ತುವಾರಿ ಸಚಿವರ ಜೊತೆ ಚರ್ಚಿಸಿ ಹಿಂದುಳಿದಿರುವ ಹರಿಹರ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತರುವ ಮೂಲಕ ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರಸಭೆ ಆವರಣದಲ್ಲಿ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಶಾಖಾ ಕಚೇರಿ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣಾ ಪ್ರಚಾರದ ವೇಳೆ ಇಲ್ಲಿನ ಜನರು ದುಡಾ ಶಾಖಾ ಕಚೇರಿ ಆರಂಭಿಸುವಂತೆ ಮನವಿ ಮಾಡಿದ್ದರು. ಅಂದು ನೀಡಿದ ಭರವಸೆ ಮೇರೆಗೆ ಇಂದು ಕಚೇರಿ ಆರಂಭಿಸಲಾಗಿದೆ ಎಂದರು.
ಜನರ ಸಮಸ್ಯೆಗಳಿಗೆ ಪರಿಹಾರ ನೀಡುವಂತಾದಾಗ ಮಾತ್ರ ಇಲ್ಲಿ ಕಚೇರಿ ಆರಂಭಿಸಿದ್ದಕ್ಕೂ ಸಾರ್ಥಕವಾಗುತ್ತದೆ. ದುಡಾ ಅಧ್ಯಕ್ಷರು ಹಾಗೂ ಸದಸ್ಯರು ಜನರ ಸಮಸ್ಯೆಗಳಿಗೆ ಸರಿಯಾದ ರೀತಿ ಸ್ಪಂದಿಸಬೇಕು ಎಂದು ಸಲಹೆ ನೀಡಿದರು.
ಹರಿಹರ ನಗರದಲ್ಲಿ ಇರುವಂತಹ ಪಾರ್ಕ್ ಅಭಿವೃದ್ಧಿ, ಶಾಶ್ವತ ಕುಡಿಯುವ ನೀರು ಶೇಖರಣಾ ಘಟಕ ಸ್ಥಾಪನೆ. ರಸ್ತೆ ದುರಸ್ತಿ ಸಮಸ್ಯೆಗಳ ಬಗ್ಗೆ ನಗರಸಭೆ ಅಧ್ಯಕ್ಷರಾದ ಕವಿತ ನಮ್ಮ ಗಮನಕ್ಕೆ ತಂದಿದ್ದಾರೆ ಎಂದ ಸಂಸದರು, ಆದ್ಯತೆ ಮೇರೆಗೆ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿದರು.
ಶಾಸಕ ಬಿ. ಪಿ. ಹರೀಶ್ ಮಾತನಾಡಿ, ಹರಿಹರ ನಗರದಲ್ಲಿ ಶೇ.70ರಷ್ಟು ಬಡಾವಣೆಗಳು ಲೇ ಔಟ್ ಪ್ಲಾನ್ ಪ್ರಕಾರ ಇಲ್ಲ. ಇಲ್ಲಿನ ಜನರು ಸಾಕಷ್ಟು ಸಮಸ್ಯೆಗಳಲ್ಲಿ ಮುಳುಗಿದ್ದಾರೆ. ಅವುಗಳನ್ನು ಹೇಗೆ ಬಗೆಹರಿಸುತ್ತಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದರು.
ನಗರದಲ್ಲಿ ಯೋಜನಾ ಪ್ರಾಧಿಕಾರದಿಂದ ಅನುಮತಿ ಪಡೆಯದೆ, ಕಾನೂನು ಉಲ್ಲಂಘಿಸಿ ಬಡಾವಣೆ ನಿರ್ಮಿಸಿದ್ದಾರೆ. ದೇಶದಲ್ಲಿ ಎಲ್ಲಿಯೂ ಪ್ರಾಧಿಕಾರದ ಅನುಮತಿ ಇಲ್ಲದೆ ಬ್ಯಾಂಕ್ನವರು ಸಾಲ ನೀಡುವುದಿಲ್ಲ. ಆದರೆ ಇಲ್ಲಿನ ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ನೀಡುತ್ತಿರುವುದು ವಿಚಿತ್ರವಾಗಿದೆ ಎಂದರು.
ರಾಜ ಕಾಲುವೆ ಕಾಮಗಾರಿ ವೀಕ್ಷಣೆ ವೇಳೆ ಶಾಸಕರು ಹಾಗೂ ಜೆಡಿಎಸ್ ಪಕ್ಷದವರು ಸಹಕಾರ ನೀಡುತ್ತಿಲ್ಲ ಎಂದು ಸಂಸದರು ಆರೋಪಿಸಿದ್ದಾರೆ. ಆದರೆ ರಾಜ ಕಾಲುವೆ ನಿರ್ಮಾಣ ಕಾಮಗಾರಿ 2022ರ ಡಿಸೆಂಬರ್ ತಿಂಗಳಲ್ಲಿ ಬಿಜೆಪಿ ಸರ್ಕಾರ ಬಿಡುಗಡೆ ಮಾಡಿದ್ದ ಅನುದಾನದಿಂದಲೇ ನಡೆಯುತ್ತಿದೆ. ನಾವು ಅಭಿವೃದ್ಧಿ ವಿಚಾರದಲ್ಲಿ ಎಂದೂ ಅಸಹಕಾರ ತೋರಿಲ್ಲ ಎಂದು ಸ್ಪಷ್ಟಪಡಿಸಿದರು.
ತಾಲ್ಲೂಕಿನ ಅಧಿಕಾರಿಗಳಿಗೆ ಸರ್ಕಾರ ಇದ್ದವರನ್ನು ಮೆಚ್ಚಿಸಿಕೊಂಡರೆ ಸಾಕು ಎಂಬ ಮನಸ್ಥಿತಿ ಇದೆ. ಪ್ರೋಟೋಕಾಲ್ ಮರೆತು ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕದ ವಿಚಾರವನ್ನು ಹಕ್ಕು ಚ್ಯುತಿ ಸಮಿತಿಯಲ್ಲಿ ತರುತ್ತೇನೆ ಎಂದು ಎಚ್ಚರಿಸಿದರು.
ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಮಾತನಾಡಿ, ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರವು ಶೇ. 70- ದಾವಣಗೆರೆಗೆ, ಶೇ. 30 ರಷ್ಟು ಅನುದಾನ ಹರಿಹರ ನಗರಕ್ಕೆ ಎಂದು ಸರ್ಕಾರ ನಿರ್ದೇಶನ ನೀಡಿದೆ. ಅದರಂತೆ ನಗರದಲ್ಲಿ ಶೇ.30 ರ ಅನುದಾನ ದಿಂದ ಪಾರ್ಕ್, ರಸ್ತೆ, ಮುಂತಾದ ಅಭಿವೃದ್ಧಿ ಕೆಲಸಗಳಿಗೆ ದುಡಾ ಮುಂದಾಗುವಂತೆ ಹೇಳಿದರು.
ಈ ವೇಳೆ ಮಾಜಿ ಶಾಸಕ ಎಸ್. ರಾಮಪ್ಪ, ದುಡಾ ಆಯುಕ್ತರು ಮಾತನಾಡಿದರು. ಸದಸ್ಯರಾದ ವಾಣಿ ಬಕ್ಕೇಶ್, ಜಬ್ಬಾರಸಾಬ್, ಜಾಕೀರ್, ನಗರಸಭೆ ಉಪಾಧ್ಯಕ್ಷ ಜಂಬಣ್ಣ ಗುತ್ತೂರು, ನಗರಸಭೆ ಸದಸ್ಯರಾದ ಎ. ವಾಮನಮೂರ್ತಿ, ಶಂಕರ್ ಖಟಾವ್ಕರ್, ಕೆ.ಜಿ. ಸಿದ್ದೇಶ್, ಆರ್.ಸಿ. ಜಾವೇದ್, ಅಶ್ವಿನಿ ಕೃಷ್ಣ, ಪಿ.ಎನ್. ವಿರುಪಾಕ್ಷಪ್ಪ, ಪಕ್ಕೀರಮ್ಮ ನಾಗರತ್ನ, ಹನುಮಂತಪ್ಪ, ಸುಮಿತ್ರಮ್ಮ, ಪಾರ್ವತಮ್ಮ, ಉಷಾ ಮಂಜುನಾಥ್, ದಿನೇಶ್ ಬಾಬು, ದಾದಾ ಖಲಂದರ್, ಶಾಯಿನಾಬಾನು, ಲಕ್ಷ್ಮಿ ಮೋಹನ್, ಅಲೀಂ, ವಸಂತ್, ರಜನಿಕಾಂತ್, ಮುಖಂಡರಾದ ನಂದಿಗಾವಿ ಶ್ರೀನಿವಾಸ್, ಕೃಷ್ಣ ಸಾ ಭೂತೆ, ಗುತ್ತೂರು ಹಾಲೇಶ್ ಗೌಡ್ರು, ಟಿ.ಜೆ. ಮುರುಗೇಶಪ್ಪ, ಬಿ. ರೇವಣಸಿದ್ದಪ್ಪ, ಫೈರೋಜ್ ಆಹ್ಮದ್, ರೇವಣಸಿದ್ದಪ್ಪ ಅಮರಾವತಿ, ಸಿ.ಎನ್. ಹುಲುಗೇಶ್, ಅಜಿತ್ ಸಾವಂತ್, ದುಡಾ ಆಯುಕ್ತರು ಹಾಗೂ ಇತರರು ಹಾಜರಿದ್ದರು.