ದಾವಣಗೆರೆಯಲ್ಲಿ ಮಧ್ಯಮ ವರ್ಗಕ್ಕೆ ಕೈಗೆಟುಕದ ನಿವೇಶನಗಳು

ದಾವಣಗೆರೆಯಲ್ಲಿ ಮಧ್ಯಮ ವರ್ಗಕ್ಕೆ ಕೈಗೆಟುಕದ ನಿವೇಶನಗಳು

ಸ್ಮಾರ್ಟ್ ಸಿಟಿ ಹೆಸರಲ್ಲಿ ದರ ದುಪ್ಪಟ್ಟು, ಸೈಟುಗಳಿದ್ದರೂ ಕೊಳ್ಳಲಾಗದ ಜನತೆ, ನಿಂತ ನೀರಾಗಿದೆ ಭೂ ವ್ಯಾಪಾರ

ದಾವಣಗೆರೆ: ನಿವೇಶನ ಕೊಳ್ಳುವುದು, ಮನೆ ಕಟ್ಟಿಸುವುದು ಮಧ್ಯಮ ವರ್ಗದವರ ಕನಸು. ಆದರೆ ದಾವಣಗೆರೆಯಂತಹ ನಗರದಲ್ಲಿ ಮಧ್ಯಮ ವರ್ಗದವರು ನಿವೇಶನ ಕೊಳ್ಳುವುದು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ದರಗಳು ಏರಿಕೆಯಾಗಿಬಿಟ್ಟಿವೆ.

ಮಾರ್ಗಸೂಚಿ ದರ ಏರಿಕೆ, ಮುದ್ರಾಂಕ ಶುಲ್ಕದ ಹೊರೆ, ಸಾಲು ಸಾಲು ಹಬ್ಬಗಳು ಮತ್ತಿತರೆ ಕಾರಣಗಳಿಂದಾಗಿ ಕಳೆದ ಮೂರ್ನಲ್ಕು ತಿಂಗಳಿನಿಂದ ಭೂ ವ್ಯವಹಾರಕ್ಕೆ ಗರ ಬಡಿದಂತಾಗಿದೆ ಎಂಬುದು ಮಧ್ಯವರ್ತಿಗಳ ಮಾತು. ಆದರೆ ಮಧ್ಯವರ್ತಿಗಳ  `ಕೃತಕ ದರ ಏರಿಕೆ’ ಕಾರಣವೂ ಇದಕ್ಕೆ ಕಾರಣ ಇರಬಹುದು.

ನಗರದ ಸುತ್ತಲಿನ ಐದಾರೂ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿವೇಶನಗಳಿದ್ದರೂ ಮಧ್ಯಮ ವರ್ಗಕ್ಕೆ ಕೈ ಗೆಟುಕುವಂತಿಲ್ಲ. ಹೀಗಾಗಿ ಕಳೆದ ಮೂರ್ನಾಲ್ಕು ತಿಂಗಳಿನಿಂದ ರಿಯಲ್ ಎಸ್ಟೇಟ್ ದಂಧೆ ನಿಂತ ನೀರಾಗಿದೆ. ಬಂಡವಾಳ ಶಾಹಿಗಳು ಮಾತ್ರ ಇಲ್ಲಿ ಹಣ ತೊಡಗಿಸುತ್ತಿದ್ದಾರೆಯೇ ವಿನಃ ಮಧ್ಯಮ ವರ್ಗ ಸದ್ಯಕ್ಕೆ ಕೊಳ್ಳುವಿಕೆಯಿಂದ ದೂರು ಉಳಿದಿದೆ.

2016ರಲ್ಲಿ ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗುತ್ತಲೇ ನಿವೇಶನಗಳ ಬೆಲೆ ಗಗನ ಮುಖಿಯಾಗಿಯಾಗ ತೊಡಗಿದವು. ಪ್ರತಿ ಅಡಿಗೆ 1500 ರೂ. ಇದ್ದ ನಿವೇಶನದ ಬೆಲೆ ದಿಢೀರನೆ 3 ಸಾವಿರ ರೂ.ಗಳಿಗೆ ಏರಿತ್ತು. 

ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ಬರುತ್ತದೆ. ದಾವಣಗೆರೆ ಸಿಂಗಾಪುರದಂತಾಗುತ್ತದೆ ಎಂದು ಭಾವಿಸಿದ ಬಂಡವಾಳ ಶಾಹಿಗಳು ನಿವೇಶನಗಳನ್ನು, ಮನೆಗಳನ್ನು ಕೊಳ್ಳತೊಡಗಿದರು.  ಇದು ಮಧ್ಯಮ ವರ್ಗಕ್ಕೆ ಬಿಸಿ ತುಪ್ಪವಾಯ್ತು.

ಇದಾದ ನಂತರವೂ ಅಂದರೆ ಕಳೆದ ಐದಾರು ವರ್ಷಗಳಿಂದ ಸ್ಮಾರ್ಟ್‌ ಹೆಸರಲ್ಲಿ ಬೆಲೆ ಏರುತ್ತಲೇ ಸಾಗಿತ್ತು. ಆದರೆ ಸ್ಮಾರ್ಟ್‌ ಯೋಜನೆ ಮುಗಿಯುತ್ತಾ ಬಂದರೂ, ದಾವಣಗೆರೆಯಲ್ಲಿ ಜನರ ಕಲ್ಪನೆಯಲ್ಲಿದ್ದ `ಸ್ಮಾರ್ಟ್’ ಸಿಟಿ ಮಾತ್ರ ಕನಸಾಗಿಯೇ ಉಳಿಯಿತು.

ಎರಡು ಬಸ್ ನಿಲ್ದಾಣಗಳು, ತುಂಗಭದ್ರಾ ನದಿ ಬಳಿ ಒಂದು ಬ್ಯಾರೇಜ್, ಒಂದಿಷ್ಟು ಸಿಮೆಂಟ್ ರಸ್ತೆಗಳನ್ನು ಬಿಟ್ಟರೆ, ಅಂತಹ ಘನಾಂಧಾರಿ ಕೆಲಸಗಳಾವುವೂ ಆಗಲೇ ಇಲ್ಲ. ಸ್ಮಾರ್ಟ್ ಸಿಟಿ ನೆಪದಿಂದ ಸ್ಮಾರ್ಟ್‌ ಆಗಿದ್ದು ಮಾತ್ರ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿದ್ದವರು.

ದಾವಣಗೆರೆ ನಾಲ್ಕೈದು ಕಿಲೋ ಮೀಟರ್ ಸುತ್ತ ನಿವೇಶನ ದರ ಪ್ರತಿ ಅಡಿಗೆ 4 ಸಾವಿರ ರೂ. ಆಸುಪಾಸಿದೆ. ಇಲ್ಲಿ ನಿವೇಶನ ಕೊಂಡು ಮನೆಕಟ್ಟುವುದು ಕಷ್ಟ. ಇನ್ನು ಹೃದಯ ಭಾಗದಲ್ಲಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಅಳಿದುಳಿದ ನಿವೇಶನಗಳಿಗೆ ಬಂಗಾರದ ಬೆಲೆ.

ಪಶ್ಚಿಮ ಭಾಗ ನಗರದಿಂದ ಹರಿಹರದವರೆಗೂ ಹೊಸ ಬಡಾವಣೆಗಳು ತಲೆ ಎತ್ತಿವೆ. ಇನ್ನೇನು ಕೆಲವೇ ವರ್ಷಗಳಲ್ಲಿ ದಾವಣಗೆರೆ-ಹರಿಹರ ಒಂದಾಗುವ ಹಂತದಲ್ಲಿದೆ. ನಗರದ ಸುತ್ತ ನಿವೇಶನ ಕೊಳ್ಳಲಾಗದ ಬಡ ವರ್ಗ ಈಗ ಬಾತಿ, ಕುಂದುವಾಡದ ಬಳಿ ಇರುವ ನಿವೇಶನಗಳತ್ತ ಕಣ್ಣು ಹಾಯಿಸಿದ್ದಾರೆ. ಆದರೆ ಕಳೆದ ಎರಡು ವರ್ಷಗಳಲ್ಲಿ ಅಲ್ಲಿಯೂ ನಿವೇಶನಗಳು ದುಬಾರಿಯಾಗಿದ್ದವು. 

ದಕ್ಷಿಣ ಭಾಗದಲ್ಲಿ ಕೊಂಡಜ್ಜಿ ರಸ್ತೆಯ ಯರಗುಂಟೆ ಬಳಿಯ ಜಮೀನುಗಳೂ ಈಗಾಗಲೇ ಬಡಾವಣೆಗಳಾಗಿ ಮನೆಗಳು ನಿರ್ಮಾಣಗೊಂಡಿವೆ. ಸಮೀಪದ ಕಕ್ಕರಗೊಳ್ಳದಲ್ಲೂ ಬಡಾವಣೆ ನಿರ್ಮಾಣವಾಗಿ. ಈಗಾಗಲೇ ಹಲವರು ನಿವೇಶನ ಖರೀದಿಸಿದ್ದಾರೆ. ಉತ್ತರ ಭಾಗದಲ್ಲಿ ಈಗಾಗಲೇ ಶಿರಮಗೊಂಡನಹಳ್ಳಿ ಬಳಿ ಜಮೀನುಗಳ ಬೆಲೆ ಹೆಚ್ಚಾಗಿದೆ.

ಇನ್ನು ಶಾಮನೂರು ಆಚೆ ದೂಡಾದಿಂದ ನಿರ್ಮಾಣವಾಗಿದ್ದ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಂತೂ ಅತಿವೇಗವಾಗಿ ಮನೆಗಳು ನಿರ್ಮಾಣವಾದವು. ಇಲ್ಲಿ ನಿವೇಶನಗಳು ಸಿಗುವುದೂ ಕಷ್ಟ ಎಂಬಂತ ಪರಿಸ್ಥಿತಿ ನಿರ್ಮಾಣವಾಗಿತ್ತು. ಶಿವಪಾರ್ವತಿ ಬಡಾವಣೆ, ಡಾಲರ್ಸ್ ಕಾಲೋನಿ ದಾಟಿ ಈಗ ಬಡಾವಣೆಗಳು ನಿರ್ಮಾಣವಾಗುತ್ತಿವೆ. ಆದರೆ ನಿವೇಶನ ಕೊಳ್ಳುವುದು ಕಷ್ಟ.

ನಗರದ ಪೂರ್ವ ಭಾಗಕ್ಕೆ ಅಷ್ಟಾಗಿ ಬೇಡಿಕೆ ಬರಲಿಲ್ಲವಾದರೂ ತೋಳಹುಣಸೆವರೆಗೂ ನಿವೇಶನಗಳಾಗಿವೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರಕ್ಕೆ ಸಾವಿರಾರೂ ಕೋಟಿ ರೂ. ಅನುದಾನ ಇದ್ದರೂ, ನಗರದಲ್ಲಿ ಮೂತ್ರ ವಿಸರ್ಜನೆಗೂ ಜಾಗ ಹುಡುಕಾಡಬೇಕಾದ ಪರಿಸ್ಥಿತಿ ಇದೆ. 

ಪಿ.ಜೆ. ಬಡಾವಣೆ, ತರಳಬಾಳು ಬಡಾವಣೆ, ವಿದ್ಯಾನಗರ, ಎಂ.ಸಿ.ಸಿ. ಎ ಹಾಗೂ ಬಿ ಬ್ಲಾಕ್ ನಂತಹ ಬಡಾವಣೆಗಳಲ್ಲೇ ಶೌಚಾಲಯಗಳಿಲ್ಲ. ಇನ್ನು ನೂತನ ಬಡಾವಣೆಗಳಲ್ಲಂತೂ ಕನಸಿನ ಮಾತೇ ಸರಿ. ಆದರೂ ನಿವೇಶನಗಳ ಬೆಲೆ ಏರಿಕೆಯಾಗಿದೆ. ಬಡವರು ಕೊಳ್ಳುವುದಾದರೂ ಹೇಗೆ ಎನ್ನುತ್ತಾರೆ ವಿದ್ಯಾನಗರದ ಹರಿಣಿ ಫ್ಯಾನ್ಸಿ ಸ್ಟೋರ್ ಮಾಲೀಕ ತರುಣ್.


ಕೆ.ಎನ್. ಮಲ್ಲಿಕಾರ್ಜುನ ಮೂರ್ತಿ [email protected]

error: Content is protected !!