ಕೆಂಪು-ಹಸಿರು- ನೀಲಿ ಬಾವುಟಗಳು ಒಂದಾಗಬೇಕಿದೆ

ಕೆಂಪು-ಹಸಿರು- ನೀಲಿ ಬಾವುಟಗಳು ಒಂದಾಗಬೇಕಿದೆ

ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಪ್ರಥಮ ಸಮ್ಮೇಳನದಲ್ಲಿ ಡಾ.ರಾಮಚಂದ್ರಪ್ಪ

ದಾವಣಗೆರೆ, ನ. 8-  ಕೆಂಬಾವುಟದ ಕಾರ್ಮಿಕರು, ಹಸಿರು ಬಾವುಟದ ಅನ್ನದಾತರು ಮತ್ತು ನೀಲಿ ಬಾವುಟದ ದಲಿತರು ಒಂದಾಗಿ ಭಾರತದ ತ್ರಿವರ್ಣ ಧ್ವಜ ರಕ್ಷಣೆ ಮಾಡುವ ಅವಶ್ಯವಿದೆ. ಈ ಮೂವರು ಒಟ್ಟಾಗಿ ನಿರಂತರವಾದ ಆಂದೋಲನ ನಡೆಸಿದಾಗ ಮಾತ್ರ ಭಾರತದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ, ಅನ್ನದಾತರ ಭೂಮಿ, ಹಕ್ಕುಗಳು ಉಳಿಯಲು ಸಾಧ್ಯ ಎಂದು ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಡಾ. ಎ.ಬಿ. ರಾಮಚಂದ್ರಪ್ಪ ಹೇಳಿದರು.

ನಗರದ ಜಯದೇವ ವೃತ್ತದ ಬಳಿ ಇರುವ ಶ್ರೀ ನಾಟ್ಯಾಚಾರ್ಯ ಕುಲಕರ್ಣಿ ರಸ್ತೆಯಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಪ್ರಥಮ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ದಲಿತ ಮತ್ತು ಕಾರ್ಮಿಕ ಸಂಘಟನೆಗಳು ಒಂದೇ ವೇದಿಕೆಯಡಿ ಒಗ್ಗೂಡುವ ತುರ್ತು ಅಗತ್ಯ ಮತ್ತು ಅನಿವಾರ್ಯ ಕೂಡ. ದಲಿತರು, ರೈತರು ಮತ್ತು ಕಾರ್ಮಿಕರು ಆಂದೋಲನದ ಮೂಲಕ ದೇಶ ಕಟ್ಟುವಲ್ಲಿ ಹೊಸ ಭಾಷ್ಯ ಬರೆಯಬೇಕೆಂದರು.

ದೇಶದ ಮೂಲ ನಿವಾಸಿಗಳಾದ ದ್ರಾವಿಡರು ನಿರಂತರವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಸಹ ತಮಗೆ ದೊರೆಯಬೇಕಾಗಿದ್ದ ಹಕ್ಕುಗಳು ಸಿಗಲಿಲ್ಲ. ಇದೀಗ ಸಂಘಟನಾತ್ಮಕ ಹೋರಾಟದಿಂದ ಹಕ್ಕುಗಳನ್ನು ಪಡೆಯಬೇಕಾಗಿದೆ ಎಂದರು.

ಪ್ರಾಚೀನ ಕಾಲದಿಂದಲೂ ವರ್ಗ ಮತ್ತು ಜಾತಿ ವ್ಯವಸ್ಥೆ ವಿರುದ್ಧದ ಹೋರಾಟ ನಡೆಯುತ್ತಲೇ ಬರುತ್ತಿದೆ. ಲೋಹಿಯಾ ಅವರು ಜಾತಿ ಮತ್ತು ವರ್ಗ ಹೋರಾಟ ಒಟ್ಟಾಗಿಯೇ ನಡೆಯಬೇಕೆಂದು ಹೇಳಿದ್ದರು. ಅಂಬೇಡ್ಕರ್ ಅವರ ನಿಲುವು ಸಹ ಅದೇ ಆಗಿತ್ತು. ಈಗ ಸಂಘಟಿತ ಹೋರಾಟ ನಡೆಸುವ ಮೂಲಕ ಹಕ್ಕುಗಳನ್ನು ಪಡೆಯಬೇಕೆಂದು ಸಲಹೆ ನೀಡಿದರು.

ದಲಿತ ಸಮುದಾಯಗಳ ಹಕ್ಕುಗಳಿಗೆ ಮೊದಲ ತಡೆ ಎಂದರೆ ಸನಾತನತೆ, ಧರ್ಮ, ದೇವರ ಹೆಸರಿನಲ್ಲಿ ದಲಿತ ಸಮುದಾಯಗಳಿಗೆ ದೊರಕಬೇಕಾದ ಹಕ್ಕುಗಳ ದಮನ ಮಾಡಲಾಗುತ್ತಿದೆ. ಪುರಾತನತೆಯ ಪ್ರಕಾರ ಎಲ್ಲರೂ ಸಮಾನರು. ಆದರೆ ಸನಾತನತೆ ಅದಕ್ಕೆ ಅವಕಾಶ ನೀಡುತ್ತಿಲ್ಲ. ಕತ್ತಿ ಚುಚ್ಚುತ್ತೇ ಎಂಬ ಸತ್ಯ ಗೊತ್ತಿದ್ದರೂ ಅದನ್ನು ಚುಂಬಿಸುವ ಕೆಲಸ ನಡೆಯುತ್ತಿದೆ. ಹಕ್ಕುಗಳನ್ನು ಕೇಳುವವರಿಗೆ ನಗರ ನಕ್ಸಲರ ಪಟ್ಟ ಕಟ್ಟಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಅನೇಕ ಕಾರ್ಮಿಕ ಚಳವಳಿಗಳಿಗೆ ನಾಂದಿ ಹಾಡಿರುವ, ಹೋರಾಟದ ಕಿಚ್ಚು ಹಚ್ಚಿರುವ ದಿ. ಪಂಪಾಪತಿ ಅವರ ಕರ್ಮಭೂಮಿಯಲ್ಲಿ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಪ್ರಥಮ ಸಮ್ಮೇಳನ ಹಮ್ಮಿಕೊಂಡಿರುವುದು ಸಂತಸದ ಸಂಗತಿ ಎಂದರು.

ಶಿಕ್ಷಣದಿಂದ ಮಾತ್ರ ಸಮಾಜ ಬದಲಾವಣೆ ಸಾಧ್ಯ ಎಂಬ ಸತ್ಯವನ್ನು ಎಲ್ಲರೂ ಅರಿಯಬೇಕಾಗಿದೆ. ದಲಿತರು, ಕಾರ್ಮಿಕರು ಮತ್ತು ರೈತರ ಚಿಂತನೆಗಳೆಲ್ಲವೂ ಒಂದೇ ಆಗಿದ್ದು, ಇವುಗಳನ್ನು ಒಗ್ಗೂಡಿಸಿ ಮುನ್ನಡೆಸುವ ದಿಟ್ಟ ಸಾರಥಿ ಅಗತ್ಯವಿದೆ. ಹಿಂದಿನ ಕಾರ್ಮಿಕ ಸಂಘಟನೆಗಳು ಒಂದು ಕರೆ ಕೊಟ್ಟರೂ ಸಾಕು ಲಕ್ಷಾಂತರ ಕಾರ್ಮಿಕರು ಸೇರುತ್ತಿದ್ದ ಉದಾಹರಣೆಗಳಿವೆ ಎಂಬುದನ್ನು ನೆನಪು ಮಾಡಿಕೊಂಡರು.

ಸರ್ಕಾರಕ್ಕೆ ಚಾಟಿ ಬೀಸುವ ಜನಾಂದೋಲನ ನಡೆದಾಗ ಮಾತ್ರ ಆಗ ಯಾವುದೇ ಸರ್ಕಾರಗಳಿರಲಿ ಸ್ಪಂದಿಸಲು ಮುಂದಾಗುತ್ತವೆ ಎಂದು ಹೇಳಿದರು.

ಶಿಕ್ಷಣ ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ಪ್ರಮುಖ ಗುರಿಯಾಗಬೇಕು. ಪ್ರತಿಯೊಬ್ಬರೂ ಶಿಕ್ಷಣವಂತರಾದಾಗ ತಮಗೆ ಸಿಗಬೇಕಾದ ಹಕ್ಕುಗಳು ಮತ್ತು ಸವಲತ್ತುಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಿಮ್ಮೊಂದಿಗೆ ನಾನೂ ಸಹ ಇರುತ್ತೇನೆ ಎಂದು ಆಶ್ವಾಸನೆ ನೀಡಿದರು.

 `ಹೊಸತು’ ಮಾಸ ಪತ್ರಿಕೆ ಸಂಪಾದಕರೂ, ಹಿರಿಯ ಕಾರ್ಮಿಕ ಮುಖಂಡರಾದ ಡಾ. ಸಿದ್ಧನಗೌಡ ಪಾಟೀಲ್ ಮಾತನಾಡಿ, ತ್ರಿವರ್ಣ ಧ್ವಜದ ಘನತೆ ಕಾಪಾಡಲು ಕಾರ್ಮಿಕರ ಕೆಂಪು, ರೈತರ ಹಸಿರು ಮತ್ತು ದಲಿತರ ನೀಲಿ ಬಾವುಟಗಳು ಒಂದಾಗಬೇಕಾಗಿದೆ. ಈ ಮೂರು ಸಂಘಟನೆಗಳು ಒಗ್ಗೂಡಿ ಪ್ರಭುತ್ವ ಸಮಾಜವಾದ ರೂಪಿಸಬೇಕಾದ ಅಗತ್ಯವಿದೆ ಎಂದರು.

ಭಾರತದ ತ್ರಿವರ್ಣ ಧ್ವಜ, ಭಾಷಾವಾರು ಪ್ರಾಂತ್ಯ ನೀತಿಯನ್ನು ಒಪ್ಪಿಕೊಂಡಿಲ್ಲವೋ ಅಂತಹವರ ಕೈಯಲ್ಲಿ ದೇಶದ ಅಧಿಕಾರವಿದೆ. ಅಪಾಯಕಾರಿ ಆಳ್ವಿಕೆಯ ತತ್ವದಿಂದಾಗಿ ದಲಿತರು, ರೈತರು, ಕಾರ್ಮಿಕರು ತಮಗೆ ದಕ್ಕಬೇಕಾಗಿದ್ದ ಹಕ್ಕುಗಳಿಂದ ವಂಚಿತರಾಗುತ್ತಿದ್ದಾರೆ. ಅಂಬೇಡ್ಕರರ ಆಶಯದಂತೆ ಜನಪರರು ಮತ್ತು ಪ್ರಗತಿಪರರು ಒಂದಾಗಬೇಕಾದ ಅನಿವಾರ್ಯತೆ ಎದುರಾಗಿದೆ. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಆತಂಕ ವ್ಯಕ್ತಪಡಿಸಿದರು.

ದಲಿತ ಚಿಂತಕ ಡಾ. ಸದಾಶಿವ ಮರ್ಜಿ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನದ ರಾಷ್ಟ್ರೀಯ ಮಂಡಳಿ ಅಧ್ಯಕ್ಷ ಎ. ರಾಮಮೂರ್ತಿ, ಎಐಟಿಯುಸಿ ರಾಜ್ಯ ಮಂಡಳಿ ಉಪಾಧ್ಯಕ್ಷ ಹೆಚ್.ಜಿ. ಉಮೇಶ್ ಆವರಗೆರೆ, ಎನ್.ಎಫ್‌.ಐ. ಡಬ್ಲ್ಯೂ ರಾಜ್ಯ ಮಂಡಳಿ ಪ್ರಧಾನ ಕಾರ್ಯದರ್ಶಿ ರೇಣುಕಮ್ಮ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು, ಇತರೆ ಸಂಘಟನೆಗಳ ಮುಖಂಡರಾದ ಪಿ. ಷಣ್ಮುಖಸ್ವಾಮಿ, ಮಂಜುಳಾ ಸದಾಶಿವ ಮರ್ಜಿ, ವೀಣಾ ನಾಯಕ್, ಕೆ.ಎಸ್. ಜನಾರ್ದನ್, ಹೆಗ್ಗೆರೆ ರಂಗಪ್ಪ, ಹೆಚ್.ಎಂ. ಸಂತೋಷ್, ಡಾ. ಮಹೇಶ ಕುಮಾರ್ ರಾಥೋಡ್, ಸುರೇಶ್, ಹರಿಹರದ ಹೆಚ್. ಮಲ್ಲೇಶ್, ಐರಣಿ ಚಂದ್ರು, ದ್ವಾರಕೀಶ್, ಶೌಕತ್ ಅಲಿ, ಹುಲುಗಪ್ಪ ಅಕ್ಕಿರೊಟ್ಟಿ, ನರೇಗಾ ರಂಗನಾಥ್ ಮತ್ತಿತರರು ಭಾಗವಹಿಸಿದ್ದರು.

error: Content is protected !!