ದಾವಣಗೆರೆ, ಜೂ.7- ವಿದ್ಯಾರ್ಥಿ ಭವನ ವೃತ್ತದಿಂದ ಚಿಗಟೇರಿ ಜಿಲ್ಲಾಸ್ಪತ್ರೆಗೆ ತೆರಳುವ ರಸ್ತೆಯಲ್ಲಿ ಪುಟ್ಟದೊಂದು ಕಾಮಗಾರಿ ನಡೆಯುತ್ತಿದೆ. ಕಳೆದ ಕೆಲ ವರ್ಷಗಳಿಂದ ರಸ್ತೆ ಅಗೆತ ನೋಡಿದ್ದ ಜನತೆ ಇದೂ ಸಹ ಅಂತಹದ್ದೇ ಗುಂಡಿ ಅಗೆತ ಎಂದು ಕಣ್ಣಾಯಿಸಿ ತೆರಳುತ್ತಿದ್ದಾರೆ.
ಆದರೆ, ಈ ಕಾಮಗಾರಿಯಲ್ಲೊಂದು ವಿಶೇಷವಿದೆ. ಅದು `ಜರ್ಮನ್ ಮಾದರಿ’ ಹೌದು, ಇದೇ ಪ್ರಥಮ ಬಾರಿಗೆ ದಾವಣಗೆರೆಯಲ್ಲಿ ಜರ್ಮನ್ ಮಾದರಿಯನ್ನು ಈ ವೃತ್ತದ ಮೂಲಕ ಪರಿಚಯಿಸಲಾಗುತ್ತಿದೆ.
ದಾವಣಗೆರೆ ರಸ್ತೆಗಳು ಹಾಗೂ ವೃತ್ತಗಳಿಗೆ ವಿದೇಶಿ ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು ಎನ್ನುವುದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕನಸು.
ಈಗಾಗಲೇ ವೈಟ್ ಸಿಮೆಂಟ್ ರಸ್ತೆಗಳನ್ನು ನಿರ್ಮಿಸಿ ಅಭಿವೃದ್ಧಿಗೆ ಮುನ್ನುಡಿ ಬರೆದಿರುವ ಸಚಿವ ಎಸ್ಸೆಸ್ಸೆಂ ಅವರೀಗ ಜರ್ಮನ್ ಮಾದರಿ ವೃತ್ತವನ್ನು ಪರಿಚಯಿಸುತ್ತಿದ್ದಾರೆ.
ಸಚಿವರ ಆಶಯದಂತೆ ಪ್ರಾಯೋಗಿಕ ವಾಗಿ ವಿದ್ಯಾರ್ಥಿ ಭವನ ವೃತ್ತದ ಮೊದಲ ಭಾಗವಾಗಿ ಜಿಲ್ಲಾಸ್ಪತ್ರೆಗೆ ಕಡೆ ತೆರಳುವ ಸುಮಾರು 50 ಅಡಿ ಅಗಲದ ರಸ್ತೆಯಲ್ಲಿ 25 ಅಡಿಯಲ್ಲಿ ಕಾಮಗಾರಿ ನಡೆಯುತ್ತಿದೆ.
ಅಂದ ಹಾಗೆ ಕಲ್ಲು, ಸಿಮೆಂಟ್, ಕೆಮಿಕಲ್ ವಸ್ತುಗಳಿಂದ ನಿರ್ಮಿಸುವ ಈ ವೃತ್ತದ ಸುತ್ತಲಿನ ಪ್ರದೇಶ ಬಹು ವರ್ಷ ಬಾಳಿಕೆಗೆ ಬರುತ್ತದೆ ಎನ್ನಲಾಗಿದೆ. ಒಂದು ಅಡಿ ನಾಲ್ಕು ಇಂಚು ಅಳದಲ್ಲಿ 100 ಎಂಎ ಜಿಲ್ಲಿ ಕಲ್ಲು, 100 ಎಂಎಂ ಡಿಎಲ್ಪಿ, ಉತ್ತಮ ದರ್ಜೆಯ ಕಾಂಕ್ರಿಟ್ ಹಾಕಲಾಗುತ್ತದೆ. ಜೊತೆಗೆ ಆಂಧ್ರ ಪ್ರದೇಶದಿಂದ ತರಿಸಲಾಗಿರುವ ಗ್ರಾನೈಟ್ ಕಲ್ಲುಗಳನ್ನು ಹೊಂದಿಸಲಾಗುತ್ತದೆ.
ನಗರದ ಅಂದ ಹೆಚ್ಚಿಸುವ ಹಾಗೂ ಬಾಳಿಕೆ ಬರುವಂತಹ ಈ ಜರ್ಮನ್ ಬಾದರಿ ಯಶಶ್ವಿಯಾದರೆ, ಉಳಿದ ವೃತ್ತಗಳೂ ಸಹ ಅಂದಗೊಳ್ಳುವುದರಲ್ಲಿ ಸಂದೇಹವಿಲ್ಲ.