ದಾವಣಗೆರೆ, ನ.6- ಸರ್ಕಾರದ ದೂಡಾ ನಿಯಮ ಉಲ್ಲಂಘಿಸಿ, ನಗರದ ಹೊರವಲಯದ ಆವರಗೆರೆಯಲ್ಲಿ ನಿರ್ಮಾಣಗೊಂಡ ಅಂಬಿಕಾ ಬಡಾವಣೆಯ ನಕ್ಷೆಯನ್ನು ರದ್ದು ಪಡಿಸಲಾಗಿದೆ ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ದೂಡಾ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬಿಕಾ ಬಡಾವಣೆಯ ನಕ್ಷೆಯಲ್ಲಿ ನಿಯಮಾವಳಿ ಉಲ್ಲಂಘನೆ ಹಾಗೂ ಉದ್ಯಾನವನ ಜಾಗ ಕಾಯ್ದಿರಿಸದಿರುವುದು ಮತ್ತು ಸಿಎ ಸೈಟ್‌ಗಳನ್ನು ಅವರೇ ಮಾರಾಟ ಮಾಡಿದ್ದರಿಂದ ಸಂಪೂರ್ಣ ಬಡಾವಣೆಯ ನಕ್ಷೆಯನ್ನು ದೂಡಾ ರದ್ದುಗೊಳಿಸಿದೆ ಎಂದರು. ಹರಿಹರದ ಗ್ರೀನ್ ಸಿಟಿ ಬಡಾವಣೆಯಲ್ಲಿ ಚಿರಂತನಾ ಸಂಸ್ಥೆಗೆ ಮಂಜೂ ರಾಗಿದ್ದ ಸಿಎ ಸೈಟ್ (ನಾಗರಿಕ ಸೌಲಭ್ಯ ನಿವೇಶನ) ಒತ್ತುವರಿಯಾ ಗಿದ್ದರಿಂದ ಬಡಾವಣೆ ಅಭಿವೃದ್ಧಿಗೊಳಿಸಿದ ಗ್ರೀನ್ ಸಿಟಿ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ನಿವೇಶನವನ್ನು ಅತಿಕ್ರಮಗೊಳಿಸಿ ಅನಧಿಕೃತವಾಗಿ ಪವರ್ ಗ್ರಿಡ್ ನಿರ್ಮಿಸಿದ್ದನ್ನು ತೆರವುಗೊಳಿಸುವಂತೆ 2 ಬಾರಿ ನೋಟಿಸ್ ನೀಡಿದ್ದು, ಇದಕ್ಕೆ ಅವರು ಪ್ರತಿಕ್ರಿಯಿಸದೇ ಇರುವುದರಿಂದ ದೂಡಾ ನಿಯಮಾನುಸಾರ ಕ್ರಮ ಕೈಗೊಳ್ಳಲಿದ್ದೇವೆ ಎಂದರು. ಅನಧಿಕೃತ ಹಾಗೂ ಕಾನೂನು ಬಾಹಿರವಾಗಿ ನಿರ್ಮಾಣಗೊಂಡ ನಿವೇಶನಗಳನ್ನು ನಾಗರಿಕರು ಖರೀದಿಸಬಾರದು ಮತ್ತು ಅನಧಿಕೃತ ಹಾಗೂ ಕಾನೂನು ಬಾಹಿರವಾಗಿ ನಿರ್ಮಾಣಗೊಳ್ಳುತ್ತಿರುವ ಬಡಾವಣೆಗಳು ಕಂಡು ಬಂದಲ್ಲಿ ಇಲಾಖೆ ಗಮನಕ್ಕೆ ತರುವಂತೆ ನಾಗರಿಕರಿಗೆ ಸೂಚಿಸಿದರು.
ಹರಿಹರ ಮತ್ತು ದಾವಣಗೆರೆ ವ್ಯಾಪ್ತಿಯಲ್ಲಿ ಒಟ್ಟು 21 ಸಿಎ ನಿವೇಶನಗಳಿದ್ದು, ಹರಿಹರದಲ್ಲಿ 5, ದಾವಣಗೆರೆಯಲ್ಲಿ 15 ನಿವೇಶನಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ವಿವಿಧ ಸಂಘ-ಸಂಸ್ಥೆಗಳು ಅಗತ್ಯ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು ಎಂದರು.
11ಕ್ಕೆ ಹರಿಹರದಲ್ಲಿ ದೂಡಾ ಕಚೇರಿ ಉದ್ಘಾಟನೆ
ತಾಲ್ಲೂಕಿನ ಹರಿಹರದಲ್ಲಿ ಜನರ ಅಲೆದಾಟ ತಪ್ಪಿಸಲು ಅಲ್ಲಿನ ನಗರಸಭೆಯಲ್ಲೇ ನ.11ರ ಸೋಮವಾರ ಬೆಳಗ್ಗೆ 11ಕ್ಕೆ ನೂತನ ದೂಡಾ ಕಚೇರಿ ಉದ್ಘಾಟಿಸಲಾಗುವುದು ಎಂದು ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ತಿಳಿಸಿದರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಕಚೇರಿ ಉದ್ಘಾಟಿಸಲಿದ್ದು, ಸ್ಥಳೀಯ ಶಾಸಕ ಬಿ.ಪಿ. ಹರೀಶ್, ನಗರ ಸಭೆ ಆಯುಕ್ತರು ಹಾಗೂ ಅಧ್ಯಕ್ಷರು ಉಪಸ್ಥಿತರಿರುವರು ಎಂದು ಹೇಳಿದರು.
ರಿಂಗ್ ರಸ್ತೆಯ ಅಭಿವೃದ್ಧಿಗೆ ದೂಡಾದ ವತಿಯಿಂದ 5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಗಳು ಮುಂದಿನ ವಾರ ಪ್ರಾರಂಭವಾಗಲಿವೆ.
-ಹುಲ್ಲುಮನಿ ತಿಮ್ಮಣ್ಣ., ದೂಡಾ ಆಯುಕ್ತ
ನಗರಾಭಿವೃದ್ಧಿ ಪ್ರಾಧಿಕಾರದಿಂದ ಮುಂದಿನ 15 ದಿನಗಳಲ್ಲಿ ದಾವಣಗೆರೆಯಲ್ಲಿ ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದ ಅವರು, ಇಲ್ಲಿನ ಜೆ.ಹೆಚ್. ಪಟೇಲ್ ಬಡಾವಣೆಯಲ್ಲಿ ಅಪಾರ್ಟ್‌ಮೆಂಟ್ ಹಾಗೂ ಮಾಲ್ ನಿರ್ಮಿಸಲು ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ತೀರ್ಮಾನಿಸಲಾಗಿದೆ ಎಂದರು.
ದಾವಣಗೆರೆ ಮತ್ತು ಹರಿಹರ ನಗರದಲ್ಲಿ ವಿವಿಧ ಸರ್ಕಲ್‌ಗಳ ಅಭಿವೃದ್ಧಿಗೆ 1226 ಕೋಟಿ ರೂ. ಹಣ ಬಿಡುಗಡೆಗಾಗಿ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಸಮ್ಮತಿಸಿದ ಮುಖ್ಯಮಂತ್ರಿಗಳು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಣ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಹೇಳಿದರು.
50:50 ಅನುಪಾತದ ಆಧಾರದಲ್ಲಿ ರೈತರ ಜಮೀನುಗಳನ್ನು ಖರೀದಿಸಿ ಬಡಾವಣೆ ನಿರ್ಮಿಸಲು ಯೋಜನೆ ರೂಪಿಸಿಕೊಂಡಿದ್ದು, ಹರಿಹರ, ಬಾತಿ ಮತ್ತು ಬೂದಾಳ್ ರಸ್ತೆ ಸೇರಿದಂತೆ ಕೆಲವೆಡೆ ರೈತರು ಜಮೀನುಗಳನ್ನು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ರೈತರಿಗೆ ನಷ್ಟವಾಗುವುದಿಲ್ಲ. ರೈತರು ಜಮೀನು ನೀಡಲು ಮುಂದೆ ಬಂದಾಗ ನಿವೇಶನ ಹಂಚಿಕೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಈ ವೇಳೆ ದೂಡಾ ಆಯುಕ್ತ ಹುಲ್ಲುಮನಿ ತಿಮ್ಮಣ್ಣ, ಸದಸ್ಯರಾದ ವಾಣಿ ಬಕ್ಕೇಶ್, ಅಬ್ದುಲ್ ಜಬ್ಬಾರ್ ಖಾನ್, ಇಂಜಿನಿಯರ್ ರವಿ, ದೇವರಾಜ್, ಪರಮೇಶ್ವರ್ ಸೇರಿದಂತೆ ಸಿಬ್ಬಂದಿಗಳು ಸುದ್ದಿಗೋಷ್ಠಿಯಲ್ಲಿದ್ದರು.