ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ; ಹೆಚ್.ಎಸ್.ಶಿವಶಂಕರ್ ಗುಂಪಿಗೆ ಭರ್ಜರಿ ಜಯ

ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ; ಹೆಚ್.ಎಸ್.ಶಿವಶಂಕರ್ ಗುಂಪಿಗೆ ಭರ್ಜರಿ ಜಯ

32 ವರ್ಷಗಳ ನಂತರ ನಡೆದ ಚುನಾವಣೆ

ದಾವಣಗೆರೆ, ನ.5- ದಾವಣಗೆರೆ ತಾಲ್ಲೂಕು ದೊಡ್ಡಬಾತಿಯ ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ ನಿನ್ನೆ ನಡೆದ ಚುನಾವಣೆಯಲ್ಲಿ ಕಾರ್ಖಾನೆಯ ಹಾಲಿ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಅವರ ನೇತೃತ್ವದ ಗುಂಪಿಗೆ ಭರ್ಜರಿ ಜಯ ಲಭಿಸಿದೆ.

ಆಡಳಿತ ಮಂಡಳಿಯ ಒಟ್ಟು 19 ಸ್ಥಾನಗಳ ಪೈಕಿ ಐವರು ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ 14 ಸ್ಥಾನಗ ಳಿಗೆ ಆಯ್ಕೆ ಬಯಸಿ 26 ಜನರು ಸ್ಪರ್ಧೆ ಮಾಡಿದ್ದರು. ಇವರಲ್ಲಿ ಶಿವಶಂಕರ್ ಅವರೂ ಸೇರಿದಂತೆ, ಅವರ ಗುಂಪಿನಿಂದ ಸ್ಪರ್ಧಿಸಿದ್ದ ಎಲ್ಲಾ 14 ಜನರೂ ಜಯ ಗಳಿಸಿದ್ದಾರೆ.

ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಗೆ 32 ವರ್ಷಗಳ ನಂತರ ನಡೆದ ಈ ಚುನಾವಣೆಯು ಭಾರೀ ಕುತೂ ಹಲ ಮೂಡಿಸಿತ್ತು. 1992ರಲ್ಲಿ ಭಾರೀ ಚುನಾವಣೆ ನಡೆದು, ಮಾಜಿ ಸಚಿವ ಹೆಚ್. ಶಿವಪ್ಪ ಅವರ ನೇತೃತ್ವದ ಗುಂಪು ಆಯ್ಕೆಯಾ ಗಿತ್ತು. ಶಿವಪ್ಪ ಅವರು ಸತತವಾಗಿ ಅಧ್ಯಕ್ಷ ರಾಗಿ ಕಾರ್ಯ ನಿರ್ವಹಿಸಿದ್ದರು. 2002ರಲ್ಲಿ ಹೆಚ್. ಎಸ್.ಶಿವಶಂಕರ್ ಅವರು ನಿರ್ದೇಶ ಕರಾಗುವು ದರ ಮೂಲಕ ಕಾರ್ಖಾನೆಯನ್ನು ಪ್ರವೇಶಿ ಸಿದ್ದರು. 2007ರಲ್ಲಿ ನಿರ್ದೇಶಕ ರಾಗಿ ಪುನರಾಯ್ಕೆ ಯಾಗಿದ್ದ ಶಿವಶಂಕರ್ ಅಧ್ಯಕ್ಷ ರಾಗಿ ಆಯ್ಕೆ ಯಾಗಿದ್ದರು. ಅಲ್ಲಿಂದ ಸತತ ನಾಲ್ಕು ಬಾರಿ ಅವಿರೋಧವಾಗಿ   ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದ ಶಿವಶಂಕರ್ ಅವರಿಗೂ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು.

`ಎ’ ವರ್ಗ

ಕಾರ್ಖಾನೆ ಆಡಳಿತ ಮಂಡಳಿಯ ಒಟ್ಟು 19 ಸ್ಥಾನಗಳನ್ನು ಮೂರು ವರ್ಗಗಳ ನ್ನಾಗಿ ಹಂಚಿಕೆ ಮಾಡಲಾಗಿತ್ತು. ಬೆಳೆಗಾರರ ಸದಸ್ಯರಿಗೆ ಸೇರಿದ `ಎ’ ವರ್ಗವನ್ನು ಸಾಮಾನ್ಯ ಕ್ಷೇತ್ರವನ್ನಾಗಿಸಿ, 17 ಸ್ಥಾನಗಳನ್ನು ಮೀಸಲಿರಿಸಲಾಗಿತ್ತು.  `ಎ’ ವರ್ಗದ ಸಾಮಾನ್ಯ ಕ್ಷೇತ್ರದಲ್ಲಿ ಮೂವರು ಅವಿರೋ ಧವಾಗಿ ಆಯ್ಕೆಯಾದ ಕಾರಣ, ಉಳಿದ 14 ಸ್ಥಾನಗಳಿಗೆ ಚುನಾವಣೆ ನಡೆಯಿತು.

ವಿಜೇತರಾದ 14 ಜನರ ಪೈಕಿ ಹೆಚ್.ಎಸ್. ಶಿವಶಂಕರ್ ಅವರು ಅತ್ಯಧಿಕ ಮತಗಳನ್ನು ಪಡೆದಿದ್ದು, ಮತ ಗಳಿಕೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರು ಒಟ್ಟು 1631 ಮತಗಳನ್ನು ಗಳಿಸುವುದರ ಮೂಲಕ ಪ್ರತಿಸ್ಪರ್ಧಿಗಳಿಗೆ ತಿರುಗೇಟು ನೀಡಿದ್ದಾರೆ.

ಶಿವಶಂಕರ್ ಗುಂಪಿನಿಂದ ಸ್ಪರ್ಧಿಸಿದ್ದ ದೀಟೂರಿನ ಡಿ.ವಿ. ಚಂದ್ರಶೇಖರಪ್ಪ (1628), ಮಲೇಬೆನ್ನೂರಿನ ಬಿ.ಚಿದಾನಂದಪ್ಪ (1627), ಹುಲಿಕಟ್ಟೆಯ ಎ.ಆರ್. ಆನಂದ ಪಾಟೀಲ್ (1625), ಸಿರಿಗೆರೆ (ಹರಿಹರ) ಯ ಎಂ.ಜಿ. ಪರಮೇಶ್ವರಗೌಡ (1625), ಯಲವಟ್ಟಿಯ ದೊಡ್ಡಗೌಡ್ರು ಮುರುಗೆಪ್ಪ (1620), ಸಿರಿಗೆರೆ (ಹರಿಹರ)ಯ ಎನ್.ಜಿ. ರಾಮನಗೌಡ (1617), ನಂದಿತಾವರೆಯ ಎಂ. ಚಂದ್ರಶೇಖರಯ್ಯ (1617), ಬಿಳಸನೂರಿನ ಬಿ.ಆರ್. ರುದ್ರೇಶ್ (1610), ದೊಡ್ಡಬಾತಿಯ ಬಿ.ಜಿ. ವಿಶ್ವಾಂಬರ (1608), ವಾಸನದ ಜಿ. ಬಸವರಾಜಪ್ಪ (1604) ಅವರುಗಳು ಚುನಾಯಿತರಾಗಿದ್ದಾರೆ.

ಕೆ.ಜಿ. ಬಸವರಾಜಪ್ಪ (37), ಡಿ. ಕುಮಾರ್ (35), ಜಿ.ಬಿ. ಹಾಲಸ್ವಾಮಿ (31), ಆರ್.ಜಿ. ಪ್ರಭಾಕರ್ (26), ಬಿ.ರಮಾನಂದಪ್ಪ (24), ಜೆ.ನಾರಪ್ಪ (24) , ಕೆ.ಎಂ.ಲಿಂಗರಾಜ್ (21), ಡಿ. ಪ್ರಕಾಶ್ (17), ಕೆ.ಬಿ. ಬಸವಲಿಂಗಪ್ಪ (14), ಸಿ. ಶೇಖಪ್ಪ (13) ಅವರುಗಳು ಪರಾಭವಗೊಂಡಿದ್ದಾರೆ.

ಮಹಿಳಾ ಮೀಸಲು 2 ಸ್ಥಾನಗಳಿಗೆ ಮೂವರು ಸ್ಪರ್ಧೆ ಮಾಡಿದ್ದರು. ಶಿವಶಂಕರ್ ಗುಂಪಿನಿಂದ ರಾಣೇಬೆನ್ನೂರಿನ ಶ್ರೀಮತಿ ರಾಜೇಶ್ವರಿ ಪಾಟೀಲ್ (1653), ದಾವಣಗೆರೆಯ ಶ್ರೀಮತಿ ಕೆ.ಸಿ. ಮಮತ (1637) ಜಯ ಗಳಿಸಿದ್ದು, ಕೆ.ಜಿ. ಗಿರಿಜಮ್ಮ (27) ಪರಾಭವಗೊಂಡಿದ್ದಾರೆ.

ಪರಿಶಿಷ್ಟ ಪಂಗಡ ಮೀಸಲು ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು. ಶಿವಶಂಕರ್ ಗುಂಪಿನ ಬನ್ನಿಕೋಡು ಗ್ರಾಮದ ಟಿ. ಹಾಲಪ್ಪ ಕೋಸಿ (1648) ಜಯ ಗಳಿಸಿದ್ದರೆ, ಊರಮುಂದ್ಲ ಬಸಪ್ಪ (12) ಪರಾಭವಗೊಂಡಿದ್ದಾರೆ.

ಮಲೇಬೆನ್ನೂರಿನ ಬಸಪ್ಪ ಪೂಜಾರ್ (ಹಿಂದುಳಿದ ವರ್ಗ `ಎ’ ಮೀಸಲು), ಧೂಳೆಹೊಳೆಯ ಕೆ.ಜಿ. ರಾಮನಗೌಡ (ಹಿಂದುಳಿದ ವರ್ಗ `ಬ’ ಮೀಸಲು) ಮತ್ತು ಬನ್ನಿಕೋಡು ಗ್ರಾಮದ ಜೆ.ಕೆ. ರಾಮಚಂದ್ರಪ್ಪ (ಪರಿಶಿಷ್ಟ ಜಾತಿ ಮೀಸಲು) ಅವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 `ಸಿ’ ವರ್ಗ

ಬೆಳೆಗಾರರಲ್ಲದ ಸದಸ್ಯರನ್ನು `ಸಿ’ ವರ್ಗವನ್ನಾಗಿಸಿದ್ದು, `ಸಿ’ ವರ್ಗದಿಂದ ಕೊಟ್ಟೂರೇಶ್ವರ ಜಿನ್ನಿಂಗ್ ಫ್ಯಾಕ್ಟರಿಯ ಕೆ.ಆರ್. ಪ್ರಕಾಶ್ ಮಾತ್ರ ಸ್ಪರ್ಧೆ ಮಾಡಿದ್ದರು. ಈ ಕಾರಣದಿಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

 `ಡಿ’ ವರ್ಗ

ಸಹಕಾರ ಸಂಘಗಳ ಸದಸ್ಯರನ್ನು `ಡಿ’ ವರ್ಗಕ್ಕೆ ಮೀಸಲಿರಿಸಲಾಗಿತ್ತು. `ಡಿ’  ವರ್ಗದಿಂದ ಹೊಳೆಸಿರಿಗೆರೆಯ ಈಶ್ವರಪ್ಪ ಮಾತ್ರ ಸ್ಪರ್ಧಿಸಿದ್ದರು. ಅವರೂ ಸಹ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕೋರ್ಟ್ ಮೊರೆ ಹೋಗಿದ್ದ ಶಿವಶಂಕರ್ : ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಗೆ 2024, ಜುಲೈ 4 ರಂದು ಚುನಾವಣೆ ನಿಗದಿಯಾಗಿತ್ತು. ಈ ಪ್ರಕಾರ ಚುನಾವಣಾ ಪ್ರಕ್ರಿಯೆ ಕೂಡಾ ಆರಂಭಿಸಲಾಗಿತ್ತು. 

ಸಲ್ಲಿಸಲ್ಪಟ್ಟ ನಾಮಪತ್ರಗಳ ಪರಿಶೀಲನೆ ಸಂದರ್ಭದಲ್ಲಿ, ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿರುವುದಿಲ್ಲ ಎಂದು ಕಾರಣ ಕೊಟ್ಟು, ನಾಮಪತ್ರ ಸಲ್ಲಿಸಿದ್ದ ಎಲ್ಲಾ 45 ಜನರ ಉಮೇದುವಾರಿಕೆ ಅರ್ಜಿಗಳನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರು.

ಚುನಾವಣಾಧಿಕಾರಿಗಳ ಈ ಕ್ರಮವನ್ನು ಹೆಚ್.ಎಸ್. ಶಿವಶಂಕರ್ ಅವರು ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ವಾದ – ವಿವಾದವನ್ನು ಆಲಿಸಿದ ಹೈಕೋರ್ಟ್, ವಜಾ ಮಾಡಿದ್ದ ಎಲ್ಲಾ ನಾಮಪತ್ರಗಳನ್ನು ಅರ್ಹ ಎಂದು ಪರಿಗಣಿಸಿ ಚುನಾವಣೆಯನ್ನು ಸ್ಥಗಿತಗೊಂಡ ಪ್ರಕ್ರಿಯೆಯಿಂದ ಮುಂದುವರೆಸಿ ನ. 4 ರಂದು ಚುನಾವಣೆ ನಡೆಸುವಂತೆ ಆದೇಶಿಸಿತ್ತು.

ಈ ಹಿನ್ನೆಲೆಯಲ್ಲಿ ದಾವಣಗೆರೆ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರೂ ಆಗಿರುವ ಶ್ರೀಮತಿ ಎಸ್. ಮಂಜುಳಾ ಅವರು ಚುನಾವಣೆ ನಡೆಸಿದರು.

ಏತನ್ಮಧ್ಯೆ, ಚುನಾವಣೆ ಪ್ರಕ್ರಿಯೆ ಸ್ಥಗಿತಗೊಂಡ ದಿನದಿಂದ ಅಪರ ಜಿಲ್ಲಾಧಿಕಾರಿ ಲೋಕೇಶ್ ಅವರು ಭದ್ರಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚುನಾವಣಾ ಫಲಿತಾಂಶ ಈಗಾಗಲೇ ಪ್ರಕಟವಾಗಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಿಗದಿಯಾಗಬೇಕಿದ್ದು, ನಂತರ ಆಡಳಿತಾಧಿಕಾರಿಗಳು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.

error: Content is protected !!