ದಾವಣಗೆರೆ, ನ.4- ವಕ್ಫ್ ಹೆಸರಿನಲ್ಲಿ ರೈತರ ಜಮೀನು ಕಬಳಿಸುವ ಹುನ್ನಾರವನ್ನು ವಿರೋಧಿಸಿ ಹಾಗೂ ಸಚಿವ ಜಮೀರ್ ಅಹಮದ್ ಅವರನ್ನು ಕೂಡಲೇ ಸಚಿವ ಸಂಪುಟ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿ ಸೋಮವಾರ ಬಿಜೆಪಿ ಮುಖಂಡರು ಇಲ್ಲಿನ ಉಪವಿಭಾಗಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು.
ನಗರದ ಜಿಲ್ಲಾ ಭಾಜಪ ಕಚೇರಿ ಬಳಿ ಜಮಾಯಿಸಿದ್ದ ಬಿಜೆಪಿಯ ಮುಖಂಡರು ಮತ್ತು ಕಾರ್ಯಕರ್ತರು, ಕಾಂಗ್ರೆಸ್ ಸರ್ಕಾರ ಹಾಗೂ ಸಚಿವ ಜಮೀರ್ ಅಹಮದ್ ವಿರುದ್ಧ ಘೋಷಣೆ ಹಾಕುತ್ತಾ ಎಸಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ವೇಳೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಗಾಯತ್ರಿ ಸಿದ್ದೇಶ್ವರ, ಮಾಜಿ ಶಾಸಕ ಎಂ.ಪಿ. ರೇಣುಕಾಚಾರ್ಯ, ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ಜಿಲ್ಲಾಧ್ಯಕ್ಷ ಎನ್. ರಾಜಶೇಖರ್ ಮತ್ತು ಬಿ.ಜಿ. ಅಜಯ್ ಕುಮಾರ್ ಸೇರಿದಂತೆ 50ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಆರಕ್ಷಕರು ಬಂಧಿಸಿ, ನಂತರ ಪೊಲೀಸ್ ಕವಾಯತು ಮೈದಾನದಲ್ಲಿ ಬಿಡುಗಡೆಗೊಳಿಸಿದರು.
ಇದಕ್ಕೂ ಮುನ್ನ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಮಠಗಳು, ದೇವಸ್ಥಾನಗಳು, ಹಿಂದೂಗಳ ಆಸ್ತಿ ಮತ್ತು ರೈತರ ಜಮೀನು ಸೇರಿದಂತೆ 1 ಲಕ್ಷಕ್ಕೂ ಅಧಿಕ ಹೆಕ್ಟೇರ್ ಜಮೀನುಗಳನ್ನು ವಕ್ಫ್ ಕಬಳಿಸುತ್ತಿದೆ. ಹಾಗಾಗಿ ದೇಶದಲ್ಲಿ ನಮ್ಮ ಹಕ್ಕು ಉಳಿಸಿಕೊಳ್ಳಲು ನಾವು ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ ಎಂದರು.
ಸಿದ್ದರಾಮಯ್ಯನವರು ಕೇವಲ ಮೌಖಿಕ ವಾಗಿ ನೋಟಿಸ್ ಹಿಂಪಡೆದರೆ ಸಾಲದು 1974-75ರ ಗೆಜೆಟ್ ನೋಟಿಫಿ ಕೇಷನ್ ರದ್ದುಗೊಳಿಸುವ ಜತೆಗೆ ಕಾಲಂ ನಂಬರ್ 11ರಲ್ಲಿ ವಕ್ಫ್ ಆಸ್ತಿ ಎಂದು ನಮೂ ದಾಗುತ್ತಿರುವುನ್ನು ಕೈ ಬಿಡಬೇಕು ಅಲ್ಲಿಯ ವರೆಗೂ ಪಕ್ಷದ ಹೋರಾಟ ನಿಲ್ಲಲ್ಲ ಎಂದು ಗುಡುಗಿದರು.
ವಕ್ಫ್ ಬೋರ್ಡಿನ ರದ್ದತಿಗೆ ಎಲ್ಲರೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಬೇಕು. 3ನೇ ಅವಧಿಯಲ್ಲಿ ಪ್ರಧಾನಿ ಅವಧಿಯಲ್ಲಿ ಪ್ರಧಾನಿ ಸ್ಥಾನಕ್ಕೆ ಮೋದಿ ಆಯ್ಕೆಯಾಗದಿದ್ದರೆ ಸಂಸತ್ ಭವನದ ಕಟ್ಟಡವನ್ನೂ ಕಬಳಿಸುತ್ತಿದ್ದರು ಎಂದು ಆರೋಪಿಸಿದರು.
ಒಂದಿಂಚು ಜಾಗವನ್ನೂ ಬಿಡುವುದಿಲ್ಲ..!
ಮುಡಾ ಹಾಗೂ ವಾಲ್ಮೀಕಿ ಹಗರಣದಲ್ಲಿ ಕಾಂಗ್ರೆಸ್ ಮುಳುಗಿದೆ. ಮುಡಾ ಹಗರಣವನ್ನು ಜನರಿಂದ ಮರೆಸಲು ವಕ್ಫ್ ಗೊಂದಲ ಸೃಷ್ಟಿಸುತ್ತಿದ್ದಾರೆ. ನಾವೆಲ್ಲಾ ಹಿಂದೂಗಳು, ಒಗ್ಗಟ್ಟಿನಿಂದ ಇದನ್ನು ಎದುರಿಸಿ ಒಂದಿಂಚು ಜಾಗವನ್ನು ಬಿಟ್ಟು ಕೊಡದಂತೆ ಈ ದುರಾಡಳಿತದ ವಿರುದ್ಧ ಹೋರಾಟ ನಡೆಸೋಣ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಹೇಳಿದರು.
ಜಮೀರ್ ಅಹಮದ್ ಖಾನ್ ಒಬ್ಬ ಮತಾಂಧ ಎಂದ ಅವರು, `ಮಿಸ್ಟರ್ ಜಮೀರ್ ಅಹಮದ್ ಖಾನ್ ಇದು ಪಾಕಿಸ್ತಾನ, ಬಾಂಗ್ಲಾ ದೇಶವಲ್ಲ’ ನಿನ್ನ ಉದ್ಧಟತನದ ಹೇಳಿಕೆಗಳು ಮರುಕಳಿಸಿದರೆ ಗಡಿ ಪಾರು ಮಾಡಿ ಪಾಕಿಸ್ತಾನಕ್ಕೆ ಕಳಿಸಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಶಿವಯೋಗಿ ಸ್ವಾಮಿ ಮಾತನಾಡಿ, ಬ್ರಿಟಿಷರು ಭಾರತದಲ್ಲಿ ತಮ್ಮ ಆಡಳಿತವನ್ನು ಮುಂದುವರೆಸಲು ಅನುಸರಿಸುತ್ತಿದ್ದ ಒಡೆದು ಆಳುವ ನೀತಿಯನ್ನೇ ಕಾಂಗ್ರೆಸ್ ಸರ್ಕಾರ ಪಾಲಿಸುತ್ತಿದ್ದು, ಈ ನಿಟ್ಟಿನಲ್ಲಿ ಹಿಂದೂ ಮತ್ತು ಮುಸ್ಲಿಮರ ಮಧ್ಯೆ ಕೋಮು ದ್ವೇಷ ಬಿತ್ತುತ್ತಿದೆ ಎಂದರು.
ಉಪ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮೌಖಿಕವಾಗಿ ನೋಟಿಸ್ ಹಿಂಪಡೆದಿರುವುದು ಜನರಿಗೂ ತಿಳಿದಿದೆ. ಹಾಗಾಗಿ ಮೊದಲು 11ನೇ ಕಾಲಂನಲ್ಲಿ ವಕ್ಫ್ ಆಸ್ತಿ ಎಂದು ಬರೆಯುವುದನ್ನು ಕೂಡಲೇ ರದ್ದುಗೊಳಿಸಿ ಎಂದು ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದರು.
ಹಿಂದೂ ಸಮಾಜದ ಮೇಲೆ ಮುಖ್ಯಮಂತ್ರಿಗಳಿಗೆ ನಿಜವಾದ ಕಾಳಜಿ ಇದ್ದರೆ ಜಮೀರ್ ಅಹಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಿ ಎಂದರು.
ದೂಡಾ ಮಾಜಿ ಅಧ್ಯಕ್ಷ ಬಿ.ಜಿ. ಅಜಯ್ ಕುಮಾರ್ ಮಾತನಾಡಿ, 1974ರಲ್ಲಿ ಮಾಡಿರುವ ಗೆಜೆಟ್ ನೋಟಿಫಿಕೇಷನ್ನನ್ನು ಅಲ್ಪ ಸಂಖ್ಯಾತರ ತುಷ್ಟೀಕರಣಕ್ಕಾಗಿ ರಾಜ್ಯ ಸರ್ಕಾರ 50 ವರ್ಷಗಳ ನಂತರ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ರೈತರಿಗೆ ಅನ್ಯಾಯ ಮಾಡುತ್ತಿದೆ ಎಂದು ದೂರಿದರು.
ಈಗಾಗಲೇ ಅವರು ಮಾಡಿರುವ ಅಕ್ರಮ ತಿದ್ದುಪಡಿಗಳನ್ನು ಇ.ಡಿಗೆ ಒಪ್ಪಿಸಬೇಕು. ರೈತರ, ದೀನ-ದಲಿತರ ಹಾಗೂ ಮಠ-ಮಾನ್ಯಗಳ ಆಸ್ತಿಗಳನ್ನು ಬಿಡುಗಡೆಗೊಳಿಸಿ, ಜಮೀರ್ ಅಹಮದ್ ಖಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸ ಬೇಕೆಂದು ಆಗ್ರಹಿಸಿದರು.
ಈ ವೇಳೆ ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ಮಾಜಿ ಶಾಸಕರಾದ ಬಸವರಾಜ್ ನಾಯ್ಕ, ರಾಜೇಶ್, ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾದವ್, ಕೆ.ಎಂ. ವೀರೇಶ್, ಅಣಬೇರು ಜೀವನ್ ಮೂರ್ತಿ, ಲೋಕಿಕೆರೆ ನಾಗರಾಜ್, ಪಕ್ಷದ ಮುಖಂಡರು, ಕಾರ್ಯಕರ್ತರು, ಮಹಿಳಾ ಮುಖಂಡರು ಇದ್ದರು.