ದೀಪಾವಳಿ ಖರೀದಿ ಭರಾಟೆ ಜೋರು

ದೀಪಾವಳಿ ಖರೀದಿ ಭರಾಟೆ ಜೋರು

ದಾವಣಗೆರೆ, ಅ.31- ಬೆಳಕಿನ ಹಬ್ಬ ದೀಪಾವಳಿ ಆಚರಣೆ ಸಿದ್ದತೆ ಜಿಲ್ಲೆಯಾದ್ಯಂತ ಭರದಿಂದ ನಡೆಯು ತ್ತಿತ್ತು, ಲಕ್ಷ್ಮಿ ಪೂಜೆಗೆ ಬೇಕಾದ ಅಗತ್ಯ ವಸ್ತುಗಳ ಖರೀದಿ ಭರಾಟೆ ಗುರುವಾರ ಬೆಳಗ್ಗೆಯಿಂದಲೇ ಶುರುವಾಯಿತು.

ನಗರದ ಪ್ರವಾಸಿ ಮಂದಿರ ರಸ್ತೆ, ರಾಜನಹಳ್ಳಿ ಛತ್ರದ ಮುಂಭಾಗ, ಮಂಡಿಪೇಟೆ ಮತ್ತು ಹದಡಿ ರಸ್ತೆ ಸೇರಿದಂತೆ  ಕೆಲವಡೆ ಹಬ್ಬದ ಮಾರುಕಟ್ಟೆ ಗ್ರಾಹಕರಿಂದ ತುಂಬಿತ್ತು.

ದೀಪಾವಳಿ ಹಬ್ಬಕ್ಕೆ ಬೆಳಕು ನೀಡುವ ತರಹೇವಾರಿ ಹಣತೆಗಳು, ಚಿತ್ತಾಕರ್ಷಕ ಆಕಾಶ ಪುಟ್ಟಿ, ರಂಗು-ರಂಗಿನ ಹೂವುಗಳು, ಕಂಗೊಳಿಸುವ ವಿದ್ಯುತ್‌ ದೀಪಗಳು, ಅಲಂಕಾರಿಕ ವಸ್ತುಗಳು, ಬಗೆ-ಬಗೆಯ ಹಣ್ಣುಗಳು ಹಾಗೂ ಪೂಜಾ ಸಾಮಗ್ರಿಗಳು ಹಬ್ಬದ ಮಾರುಕಟ್ಟೆಯ ಸೊಬಗನ್ನು ಇಮ್ಮಡಿಗೊಳಿಸುವುದು.

ಹಬ್ಬಕ್ಕೆ ಮುಖ್ಯವಾಗಿ ಬೇಕಾದ ಮತ್ತು ನಗರ ಪ್ರದೇಶದಲ್ಲಿ ವಿರಳವಾಗಿರುವ ತಾವರೆ ಹೂವು, ಹೊನ್ನಾರಿಕೆ ಹೂವು, ಕಾಚಿ ಕಡ್ಡಿ, ಅಣ್ಣೆ ಸೊಪ್ಪು, ಉತ್ತರಾಣಿ ಕಡ್ಡಿ, ಬಾಳೆ ಕಂಬ ಮತ್ತು ಗೋವಿನ ಸಗಣೆಯನ್ನು ರೈತರು ಮಾರಾಟ ಮಾಡಿ ಸಂಭ್ರಮಿಸಿದರು.

ಬಟ್ಟೆ ಅಂಗಡಿಗಳಲ್ಲಿ ಬಟ್ಟೆ ಕೊಳ್ಳಲು ಜನ ಕಿಕ್ಕಿರಿದು ತುಂಬಿರುವುದು ಒಂದೆಡೆಯಾದರೆ ಬೆಳ್ಳಿ, ಬಂಗಾರ, ಕಾರು ಮತ್ತು ಬೈಕ್‌ ಸೇರಿದಂತೆ ವಿವಿಧ ವಾಹನ ಹಾಗೂ ಗೃಹೋಪಯೋಗಿ ವಸ್ತುಗಳು ಮಾರಾಟ ಮಾಡಲ್ಪಟ್ಟವು.

ತುಸು ಬೆಲೆ ಏರಿಕೆಯಿಂದಾಗಿ ಗ್ರಾಹಕರು ಒಂದಂಗಡಿಯಿಂದ ಮತ್ತೊಂದಂಗಡಿಗೆ ಅಲೆದಾಡಿ ಉತ್ತಮ ಬೆಲೆಗೆ ವಸ್ತು ಖರೀದಿಸಲು ಮುಂದಾದ ದೃಶ್ಯ ಮಾರುಕಟ್ಟೆಯಲ್ಲಿ ಕಂಡಿತು.

`ಹಬ್ಬ-ಹರಿದಿನಗಳಲ್ಲಿ ಹಣ್ಣುಗಳ ಬೆಲೆ ಏರಿಕೆ ಸರ್ವೇ ಸಾಮಾನ್ಯ. ಬಿಡುವಿನ ದಿನಕ್ಕಿಂತ ಹಬ್ಬದಲ್ಲಿ 20ರಿಂದ 30 ರೂ.ಗಳ ದರ ಹೆಚ್ಚಾಗಿರುತ್ತದೆ’ ಎಂದು ಹಣ್ಣಿನ ವ್ಯಾಪಾರಿ ನಾರಾಯಣಪ್ಪ ತಿಳಿಸಿದರು.

ಪಟಾಕಿ ಖರೀದಿ : ರಾಜ್ಯ ಸರ್ಕಾರವು ಪಟಾಕಿ ಮಾರಾಟಕ್ಕೆ ಕೆಲವು ಕಠಿಣ ನಿಬಂಧನೆಗಳನ್ನು ಹಾಕಿದೆ. ಈ ನಡುವೆ ಪಟಾಕಿ ವರ್ತಕರು ಸರ್ಕಾರಿ ನಿಯಮಗಳಿಗೆ ಬದ್ಧರಾಗಿ ಪಟಾಕಿ ಮಾರಾಟ ಮಾಡಿದರು.

ನಗರದ ಹೆಸ್ಕೂಲ್‌ ಮೈದಾನದಲ್ಲಿದ್ದ 70ಕ್ಕೂ ಅಧಿಕ ಪಟಾಕಿ ಮಳಿಗೆಗಳಲ್ಲಿ ಮಾರಾಟ ಪ್ರಕ್ರಿಯೆ ನಡೆಯಿತು. ಮೈದಾನದತ್ತ ಧಾವಿಸುತ್ತಿದ್ದ ಯುವಕರ ದಂಡು ಕ್ಯೂಆರ್‌ ಕೋಡ್‌ವುಳ್ಳ ಹಸಿರು ಪಟಾಕಿ ಖರೀದಿಸಿದರು.

error: Content is protected !!