ಹಕ್ಕೋತ್ತಾಯಗಳು..
* ರೈತ ವಿರೋಧಿ ಮೂರು ಕೃಷಿ ಕಾಯ್ದೆಗಳನ್ನು ಕೂಡಲೇ ಕೈಬಿಡಬೇಕು.
* ಕಾರ್ಮಿಕ ವಿರೋಧಿ ನಾಲ್ಕು ಕೋಡ್‌ಗಳನ್ನು ರದ್ದು ಪಡಿಸಬೇಕು.
* ಜಿಲ್ಲೆಯಲ್ಲಿ ನಿರಾವರಿ ಯೋಜನೆ ಸಮಗ್ರವಾಗಿ ಅನುಷ್ಠಾನ ಗೊಳಿಸಬೇಕು.
* ರೈತರ ಬೆಳೆ ಖರೀದಿಸಲು ಖರೀದಿ ಕೇಂದ್ರ ತೆರೆಯಬೇಕು.
* ರೈತರ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ನಿಯಮ ಕೈ ಬಿಡಬೇಕು.
ಸಾಲಕ್ಕೆ ಆತ್ಮಹತ್ಯೆ ಬೇಡ..!
ರೈತರು ಸಾಲಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಬಾರದು. ಸೊಸೈಟಿ ಹಾಗೂ ಬ್ಯಾಂಕಿನವರು ಸಾಲ ವಸೂಲಿಗೆ ಬಂದಾಗ ಅವರನ್ನೇ ಕಟ್ಟಿಹಾಕಿ. ನಿಮ್ಮ ಹಿಂದೆ ರೈತ ಸಂಘಟನೆ ಸದಾ ಇರಲಿದೆ ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಹೇಳಿದರು.
ನ.26ರಂದು ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಸರ್ಕಾರಕ್ಕೆ ಮನವಿ: ಬಸವರಾಜಪ್ಪ
ದಾವಣಗೆರೆ, ಅ.30- ರೈತ ಹಾಗೂ ಕಾರ್ಮಿಕ ವಿರೋಧಿ ಕಾಯ್ದೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ನ.26ರಂದು ದೇಶಾದ್ಯಂತ ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ತಿಳಿಸಿದರು.
ಸಂಯುಕ್ತ ಹೋರಾಟ ಕರ್ನಾಟಕ ಸಂಘಟನೆ ವತಿಯಿಂದ ನಗರದ ಎಪಿಎಂಸಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜಿಲ್ಲಾ ಸಂಘಟನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರವು ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಬೇಕು ಮತ್ತು ವಿದ್ಯುಚ್ಛಕ್ತಿ ಖಾಸಗೀಕರಣ ಜಾರಿ ಮಾಡುವ ಯೋಚನೆ ಕೈ ಬಿಡಬೇಕು. ಇಲ್ಲದಿದ್ದರೇ ದೇಶಾದ್ಯಂತ ರಕ್ತಪಾತ ಆಗಲಿದೆ ಎಂದು ಎಚ್ಚರಿಕೆ ನೀಡಿದರು.
ವಿದ್ಯುಚ್ಛಕ್ತಿ ಖಾಸಗೀಕರಣ ರೈತರಿಗಷ್ಟೇ ಅಲ್ಲ, ದೇಶದ ಜನರಿಗೆ ಮರಣ ಶಾಸನ ಆಗಿದೆ. ಆದ್ದರಿಂದ ಎಲ್ಲರೂ ಒಗ್ಗಟ್ಟಾಗಿ ಧ್ವನಿ ಎತ್ತಬೇಕು. ಕಾಯ್ದೆ ಜಾರಿ ಹಿಂದೆ ಮೋದಿ ಸ್ನೇಹಿತರಿಗೆ ಅನುಕೂಲ ಮಾಡುವ ಹುನ್ನಾರ ನಡೆದಿದೆ ಎಂದು ಹೇಳಿದರು.
ಭೂ-ಸುಧಾರಣೆ ಮತ್ತು ಭೂ-ಸ್ವಾಧೀನ ಕಾಯ್ದೆ ರೈತ ವಿರೋಧಿಯಾಗಿದೆ. ಇಂತಹ ಕಾಯ್ದೆಯಿಂದ ಜಮೀನುಗಳು ರೈತರ ಕೈ ತಪ್ಪಿ ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ತುತ್ತಾಗುತ್ತಿವೆ. ಆಹಾರ ಭದ್ರತೆಯ ದೃಷ್ಟಿಯಿಂದಾದರೂ ಭೂಮಿ ರೈತರ ಬಳಿ ಉಳಿಯಬೇಕು ಎಂದರು.
ಸರ್ಕಾರವು ಬಗರ್ ಹುಕ್ಕುಂ ಸಾಗುವಳಿದಾರ ರನ್ನು ಒಕ್ಕಲೆಬ್ಬಿಸದೇ ಅವರಿಗೆ ಹಕ್ಕು ಪತ್ರ ವಿತರಿಸಬೇಕು ಮತ್ತು ಮುಖ್ಯಮಂತ್ರಿಗಳು ರೈತರು ಮತ್ತು ಕಾರ್ಮಿಕರನ್ನು ಜನತಾ ಅಧಿವೇಶನ ಕರೆಯಬೇಕೆಂದು ಒತ್ತಾಯಿಸಿದರು.
ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿ ಕೇಂದ್ರ ಸರ್ಕಾರ ಕಾರ್ಮಿಕರ ಕಾಯ್ದೆಗಳನ್ನು ಬುಡಮೇಲು ಮಾಡಿದೆ. ರಾಜ್ಯ ಸರ್ಕಾರವೂ ಸಹ ಕಂಪನಿಗಳ ಪರ ಬ್ಯಾಟ್ ಬೀಸುತ್ತಿದೆ ಹಾಗಾಗಿ ಈ ಎರಡೂ ಸರ್ಕಾರಗಳ ವಿರುದ್ಧ ಹೋರಾಟ ಮಾಡಲಿದ್ದೇವೆ ಎಂದು ಹೇಳಿದರು.
ಹಿಂದೆ ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿದ್ದಾಗ 3 ಕೃಷಿ ಕಾಯ್ದೆ ಜಾರಿಗೆ ತಂದಿದ್ದರು. ಈ ಕಾಯ್ದೆಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ರದ್ದು ಪಡಿಸುವುದಾಗಿ ನೀಡಿದ ಭರವಸೆ ಹುಸಿಯಾಗಿದೆ. ಹಾಗಾಗಿ ರೈತ ಸಂಘಕ್ಕೆ ಸರ್ಕಾರ ಬದಲಿಸುವ ಶಕ್ತಿಯಿದೆ ಎಂದು ಕಿಡಿಕಾರಿದರು.
ಎಐಕೆಎಸ್ ಜಿಲ್ಲಾಧ್ಯಕ್ಷ ಆವರಗೆರೆ ಉಮೇಶ್ ಪ್ರಾಸ್ತಾವಿಕ ಮಾತನಾಡಿದರು. ಎಐಕೆಕೆಎಂಎಸ್ ಜಿಲ್ಲಾಧ್ಯಕ್ಷ ಮಧು ತೊಗಲೇರಿ ನಿರೂಪಿಸಿದರು.
ಈ ವೇಳೆ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಹೊನ್ನೂರು ಮುನಿಯಪ್ಪ, ಗುಮ್ಮನೂರು ಬಸವರಾಜ್, ಕೆಪಿಆರ್‌ಎಸ್ ಜಿಲ್ಲಾ ಸಂಚಾಲಕ ಶ್ರೀನಿವಾಸ್, ಆನಂದರಾಜ್, ಆವರಗೆರೆ ಚಂದ್ರು, ಮಂಜುನಾಥ್ ಕೈದಾಳೆ, ಪವಿತ್ರ, ಕುರುವ ಗಣೇಶ್, ಅರುಣ್ ಕುಮಾರ್ ಕುರುಡಿ ಮತ್ತಿತರರಿದ್ದರು.