`ಒದ್ದೆ ಪಟಾಕಿ ಅರೆದವ ವಿದೇಶದಲ್ಲಿ ಮೆರೆದ ?!

`ಒದ್ದೆ ಪಟಾಕಿ ಅರೆದವ ವಿದೇಶದಲ್ಲಿ ಮೆರೆದ ?!

ದಶಕಗಳ ಹಿಂದೆ ದೀಪಾವಳಿ ಪಟಾಕಿಗಳೆಂದರೆ ಕಿವಿ ಗಡ ಚಿಕ್ಕುವ `ಢಮ್ ಢಮ್’ ಶಬ್ದಗಳಿಗೆ ಆದ್ಯತೆ ಇಲ್ಲದೇ ಕಣ್ಣಿಗೆ ಹಬ್ಬ ನೀಡುವ ಹೂ ಮತಾಪುಗಳೇ ಹೆಚ್ಚಾಗಿ ಬಳಕೆಯಲ್ಲಿದ್ದವು. ಈಗಿನಂತೆ ಅಗ್ಗದ ನೆಪದಲ್ಲಿ ಅಪಾಯಕಾರಿ ಚೀನಾ ದೇಶದ ಪಟಾಕಿಗಳೂ ಆಗ ಇರಲಿಲ್ಲ. ದೇಶೀಯ ಪಟಾಕಿಗಳು ಪ್ರಾದೇಶಿಕ ಹೆಸರುಗಳಲ್ಲಿ ಬಿಕರಿಯಾಗುತ್ತಿದ್ದವು.

ಹನುಮಂತನ ಬಾಲ, ಹಾವಿನ ಗುಳಿಗೆ, ನಕ್ಷತ್ರಕಡ್ಡಿ, ಮಸಿ ಕುಡಿಕೆ, ಪೆಟ್ಲುಸರ, ಭೂ ಚಕ್ರ, ವಿಷ್ಣುಚಕ್ರ, ಆಕಾಶಬಾಣ, ಬೆಳ್ಳುಳ್ಳಿ, ಕುಬಸದ ಕಣ, ಸುರ್ಸುರ್ ಬತ್ತಿ, ನೆಲಗುಮ್ಮ, ಮೆಣಸಿನಕಾಯಿ, ದಢಾಕಿ, ಗರ್ನಾಲು ಮುಂತಾಗಿ ಪ್ರಾದೇಶಿಕ ಹೆಸರುಗಳಿದ್ದವೇ ಹೊರತು ಫ್ಲವರ್ ಪಾಟ್, ಗ್ರೌಂಡ್ ವೀಲ್, ಸ್ಪಾರ್ಕ್ಲರ್ಸ್, ಪೀ ಕ್ರಾಕರ್ಸ್,  ಬಾಸ್ ಬಾಂಬ್, ಸರ್ಪೆಂಟ್ ಎಗ್, ರೋಮನ್ ಕ್ಯಾಂಡಲ್, ಸ್ಮೋಕ್ ಬಾಂಬ್, ರಾಕೆಟ್ ಬಾಂಬ್, ಜೂಟ್ ಟ್ವೈನ್ ಬಾಂಬ್,  ಗಾರ್ಲ್ಯಾಂಡ್ ಎಂಬ ಹೆಸರುಗಳೇ ಇರಲಿಲ್ಲ.

ಮಾರುದ್ದ ಮೈಲುದ್ದದ ಪಟಾಕಿ ಸರಗಳನ್ನು ಆಗ ಅಷ್ಟಾಗಿ ಯಾರೂ ಹಚ್ಚುತ್ತಿರಲಿಲ್ಲ. ಹಾಗೆ `ಡಮ್ ಢಮ್’ ಮಾಡಿದರೆ ಯಾವ ಪಿಶಾಚಿಯೂ ಓಡಿ ಹೋಗುವುದೂ ಇಲ್ಲ, ಯಾವ ಲಕ್ಷ್ಮಿಯೂ ಓಡಿ ಬರುವುದೂ ಇಲ್ಲ, ಹಕ್ಕಿ ಪಕ್ಷಿಗಳು  ಹೆದರಿ ಹೋಗುತ್ತವೆ. ನಮ್ಮ ಕಿವಿಗಳಿಗೆ ನಿಧಾನವಾಗಿ ಕಿವುಡುತನ ಬರುತ್ತದೆ ಅಷ್ಟೇ. 

ನಮ್ಮ ಬಾಲ್ಯದಲ್ಲಿ ನಾನು ಕಂಡ ಹಾಗೆ ಮಂಡಿಪೇಟೆಯ ಕಾಸಲ ಶ್ರೀನಿವಾಸ ಶ್ರೇಷ್ಠಿಯವರ ಅಂಗಡಿಯ ಆಜುಬಾಜಿನಲ್ಲಿ ಯಾರೋ ಒಬ್ಬರು ಸುಮಾರು ಮೂರ್ನಾಲ್ಕು ಮಾರುದ್ದದ ಪಟಾಕಿ ಸರವನ್ನು ಉದ್ದದ ಬಂಬೊವೊಂದಕ್ಕೆ  ಕಟ್ಟಿ ನೇತುಬಿಟ್ಟು ಮಹಡಿಯ ಮೇಲೆ ನಿಂತು ಅದನ್ನು ಸಿಡಿಸುತ್ತಿದ್ದರು. ಇದನ್ನು ನೋಡಲು ಮಕ್ಕಳು ದೊಡ್ಡವರು ಎಲ್ಲರೂ ಅಲ್ಲಿ ಸೇರುತ್ತಿದ್ದರು. ಪಟಾಕಿಗಳೆಲ್ಲಾ ಸುಟ್ಟ ಮೇಲೆ ಅನೇಕ ಪಟಾಕಿಗಳು ಸಿಡಿಯದೇ ಹಾಗೆ ಬಿದ್ದಿರುತ್ತಿದ್ದವು. ಅದನ್ನೆಲ್ಲಾ ಮಕ್ಕಳು ಆಯ್ದುಕೊಂಡು ಹೋಗಿ ಹೊರಗಿನ ಕಾಗದದ ಸುರಳಿಯನ್ನೆಲ್ಲಾ ಕಲ್ಲಿನಿಂದ ಜಜ್ಜಿ ಒಳಗಿನ ಮದ್ದು ಪುಡಿ, ತೆಗೆದು ಅದನ್ನು ಕಾಗದದಲ್ಲಿ ಸುತ್ತಿ  ಬೆಂಕಿ ಕೊಟ್ಟಾಗ ಅದು ಸಣ್ಣ ಮಸಿ ಕುಡಿಕೆಯಂತೆ ಉರಿಯುತ್ತಿತ್ತು.  

ಒಮ್ಮೆ ಹಳೆಪೇಟೆ ಆಸುಪಾಸಿನ ಕಡೆಯ ಬಾಲಕ ಬಹುಷಃ ಶ್ರೀಧರ ಎಂದಿರಬೇಕು. ಅರೆಬರೆ ಸುಟ್ಟ ಪಟಾಕಿಗಳನ್ನು ಆರಿಸಿಕೊಂಡು ಹೋಗಿ ಮನೆಯಲ್ಲಿ ಇಟ್ಟಿದ್ದ. ಅದನ್ನು ಜಜ್ಜಿ ಕುಟ್ಟಿ ಮದ್ದು ತೆಗೆಯಲು ಹೋಗಿ ಮಗ ಏನಾದರೂ ಅಪಾಯ ಮಾಡಿಕೊಂಡಾನೆಂದು ತಾಯಿ ನಾಗರತ್ನಮ್ಮ ಅದಕ್ಕೆ ನೀರು ಹಾಕಿದರಂತೆ. ಒದ್ದೆ ಮುದ್ದೆಯಾದ ಪಟಾಕಿಗಳನ್ನು ನೋಡುತ್ತಾ ಶ್ರೀಧರ ಅಳುತ್ತಲೇ ಅದನ್ನು ಕಲ್ಲಿನಿಂದ ಚೆನ್ನಾಗಿ ಜಜ್ಜಿದನಂತೆ. ಒದ್ದೆಯಾದ ಪಟಾಕಿಗಳಿಗೆ ಸುತ್ತಿದ ಕಾಗದದ ಸುರಳಿಗಳು ಒಂದು ರೀತಿ ಗಟ್ಟಿ ಪೇಸ್ಟ್ ನಂತಾಯಿತು.

ಆ ಪೇಸ್ಟಿನಿಂದ ಶ್ರೀಧರ ಮಸಿ ಕುಡಿಕೆಯ ಆಕಾರ ಮಾಡಿ ಒಣಗಿಸಿ ಅದಕ್ಕೆ ಬಣ್ಣ ಕೊಟ್ಟನಂತೆ!, ಅದು ಎಷ್ಟು ಚೆನ್ನಾಗಿ ಬಂದಿತೆಂದರೆ ನಾಗರತ್ನಮ್ಮ ಅದನ್ನು ಆಚೀಚೆ ಮನೆಯವರಿಗೆಲ್ಲಾ ತೋರಿಸಿದರಂತೆ.
ಎಲ್ಲರೂ ಶ್ರೀಧರನ ಆ ಪೇಪರ್ ಪೇಸ್ಟ್ ಕಲೆಗಾರಿಕೆಯನ್ನು ಕೊಂಡಾಡಿದಾರಂತೆ. ಇದನ್ನೆಲ್ಲಾ ನಾಗರತ್ನಮ್ಮನೇ ಹೇಳುತ್ತಿದ್ದರು.

ಅದಾಗಿ ಕೆಲ ದಶಕಗಳ ಬಳಿಕ ಯಾರೋ ಹೇಳಿದರು, ಶ್ರೀಧರ ಪೇಪರ್ ಪಲ್ಪಿನ ಕಲೆಗಾರಿಕೆಯಲ್ಲಿ ಅಪಾರ ನೈಪುಣ್ಯತೆ
ಸಾಧಿಸಿ, ಯಾವುದೋ ಪಾಶ್ಚಿಮಾತ್ಯ ದೇಶದಲ್ಲಿ ಉತ್ತಮ ಬದುಕು ಕಟ್ಟಿಕೊಂಡಿದ್ದಾನೆ. ತಾಯಿ – ಮಗ
ಫಾರಿನ್‌ನಲ್ಲಿ  ಚೆನ್ನಾಗಿದ್ದಾರೆ ಎಂದು
`ಒದ್ದೆ ಪಟಾಕಿ ಅರೆದವ ವಿದೇಶದಲ್ಲಿ ಮೆರೆದ!’.

  ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!