ಕನ್ನಡ ಪರ ಹೋರಾಟಗಾರ ಬಸವರಾಜ ಐರಣಿ
ದಾವಣಗೆರೆ, ಜ.20- ಗ್ರಾಮೀಣ ಪ್ರದೇಶದ ನೆಲೆಗಟ್ಟಿನಿಂದ ಬೆಳೆದು ಬಂದ ಜಾನಪದ ಕಲೆಗಳು, ವಿವಿಧ ಪ್ರಕಾರಗಳಾಗಿ ನಾಡಿನ ಸಾಂಸ್ಕೃತಿಕ ಸಂಪತ್ತನ್ನು ಶ್ರೀಮಂತಗೊಳಿಸಿವೆ. ಇತ್ತೀಚೆಗೆ ಆಧುನಿಕ ಮಾಧ್ಯಮಗಳ ಭರಾಟೆಯಲ್ಲಿ ಅವುಗಳು ನೇಪಥ್ಯಕ್ಕೆ ಸರಿಯುತ್ತಿರುವುದು ಆತಂಕದ ಸಂಗತಿಯಾಗಿದೆ. ಬದುಕಿಗೆ ಮೌಲ್ಯಗಳನ್ನು ನೀಡುವ, ಜನರ ಮನ ಪರಿವರ್ತಿಸುವ, ಸಮಾಜ ಸುಧಾರಣೆಗೂ ಪ್ರೇರಣಾ ಶಕ್ತಿಗಳಾಗಿರುವ ಕಲಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ, ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ ಎಂದು ಹಿರಿಯ ಪತ್ರಕರ್ತ ಹಾಗೂ ಕನ್ನಡ ಪರ ಹೋರಾಟಗಾರ ಬಸವರಾಜ ಐರಣಿ ತಿಳಿಸಿದರು.
ನಗರದ ರೋಟರಿ ಬಾಲ ಭವನದಲ್ಲಿ ಶ್ರೀ ಬಸವೇಶ್ವರ ಗ್ರಾಮೀಣ ಸಾಂಸ್ಕೃತಿಕ ಕಲಾ ವೇದಿಕೆ (ಎಲೆಬೇತೂರು) ಅವರು ಆಯೋಜಿಸಿದ್ದ `ಜಾನಪದ ಸಂಗೀತ ಹಾಗೂ ಸೋಬಾನೆ ಪದಗಳ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಡಿನ ಎಲ್ಲ ಕಲಾ ಪ್ರಕಾರಗಳನ್ನು ಹಾಗೂ ಹಿರಿಯ ಕಲಾ ಚೇತನಗಳ ಸಾಧನೆ, ಕೊಡುಗೆಯನ್ನು ಚಿತ್ರೀಕರಿಸುವ, ಧ್ವನಿ ಮುದ್ರಿಸುವ, ಪುಸ್ತಕ ರೂಪದಲ್ಲಿ ಪ್ರಕಟಿಸುವ ಮೂಲಕ ದಾಖಲೀಕರಣಗೊಳಿಸಿ, ಮುಂದಿನ ಪೀಳಿಗೆಗೆ ನಾಡಿನ ಕಲಾ ಸಂಪತ್ತನ್ನು ಪರಿಚಯಿಸುವಂತಾಗಬೇಕೆಂದು ಅವರು ಆಶಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಅಧ್ಯಕ್ಷ ಎಂ. ಪರಮೇಶ್ವರಪ್ಪ ಸಿರಿಗೆರೆ ಅವರು, ಕಲೆಗಳು ಜೀವನದ ಪದ್ಧತಿ ಕಲಿಸುತ್ತವೆ, ಕಲೆಯನ್ನು ಅರಿಯದವರು ಮನುಷ್ಯತ್ವದ ಕಳೆಯನ್ನೇ ಕಳೆದುಕೊಳ್ಳುತ್ತಾರೆ. ಅನೇಕ ಸಂಗೀತ ವಿದ್ವಾಂಸರಿಂದ ಸಂಗೀತ ಲೋಕ ಪ್ರಸಿದ್ಧಿಯನ್ನು ಕಂಡಿದೆ ಎಂದು ತಿಳಿಸಿದರು.
ಸಾಹಿತಿ ಎಸ್. ಸಿದ್ದೇಶ್ ಕುರ್ಕಿ ಅವರು ಮಾತನಾಡಿ, ಕಲೆಗಳು ಮನುಷ್ಯನ ಆಲಸ್ಯ, ಖಿನ್ನತೆಯನ್ನು ದೂರಮಾಡಿ ಚೈತನ್ಯದೊಂದಿಗೆ ಕ್ರಿಯಾಶೀಲರನ್ನಾಗಿಸುತ್ತವೆ ಎಂದರು.
ಮುಖ್ಯ ಅತಿಥಿಗಳಾಗಿ ಶರಣ ಸಾ.ಪ. ಜಿಲ್ಲಾಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ, ಕಲಾವಿದರ ಒಕ್ಕೂಟದ ಹೊನ್ನಾಳಿ ತಾಲ್ಲೂಕು ಅಧ್ಯಕ್ಷ ಹೆಚ್.ಬಿ. ಬಸವರಾಜಪ್ಪ, ಯುವ ಮುಖಂಡ ಬಿ.ಎಸ್. ಗಿರೀಶ್, ಸಾಂಸ್ಕೃತಿಕ ಸಂಘಟಕ ಎನ್.ಎಸ್. ರಾಜು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಬಸವರಾಜ ನೀರ್ಥಡಿ ಸ್ವಾಗತಿಸಿ, ವಂದಿಸಿದರು. ಶ್ರೀಮತಿ ವಾಣಿಶ್ರೀ ಚನ್ನ ಗಿರಿ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ದಲ್ಲಿ ಗ್ರಾಮೀಣ ಭಾಗದ 17 ಜನ ಕಲಾವಿದರಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ನಂತರ ಕಲಾವಿದರಿಂದ ಜಾನಪದ ಸಂಗೀತ, ಸೋಬಾನೆ ಪದಗಳು, ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.