ಸಿದ್ದಗಂಗಾ ಶಾಲೆಯ ವಾರ್ಷಿಕೋತ್ಸವ ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಡಾ. ಬಿ.ಪಿ. ವೀರಭದ್ರಪ್ಪ
ದಾವಣಗೆರೆ, ಜ. 20- ದೇಶ ಕಟ್ಟುವ ಜವಾಬ್ದಾರಿ ಎಲ್ಲರ ಮೇಲಿದ್ದು, ಯುವ ಜನತೆ ದೇಶಕ್ಕಾಗಿ ಕಾಣಿಕೆ ನೀಡುವಲ್ಲಿ ಮುಂದಾಗ ಬೇಕು. ಬಲಿಷ್ಠ ಆರ್ಥಿಕ ಭಾರತ ನಿರ್ಮಾಣದ ಮೂಲಕ ಜಗತ್ತಿಗೆ ತೋರಿಸಿಕೊಡುವ ಅಗತ್ಯವಿದೆ ಎಂದು ಕುವೆಂಪು ವಿಶ್ವವಿದ್ಯಾಲಯ ಜ್ಞಾನ ಸಹ್ಯಾದ್ರಿಯ ಕುಲಪತಿ ಡಾ. ಬಿ.ಪಿ. ವೀರಭದ್ರಪ್ಪ ಹೇಳಿದರು.
ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದು, ಸಿದ್ಧಗಂಗಾ ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದರು.
ಯುವ ಜನರು ನಾಯಕತ್ವವನ್ನು ರೂಪಿಸಿಕೊಳ್ಳುವ ಜೊತೆಗೆ ಬಲಿಷ್ಠ ಭಾರತ ನಿರ್ಮಾಣದ ಕಡೆ ಹಜ್ಜೆ ಹಾಕಬೇಕಾಗಿದೆ. ಪ್ರಸ್ತುತ ದಿನಮಾನಗಳಲ್ಲಿ ಕೌಶಲ್ಯ ರೂಢಿಸಿ ಕೊಳ್ಳುವುದು ಕಡಿಮೆಯಾಗುತ್ತಿದ್ದು, ವಿದ್ಯಾರ್ಥಿ ಯುವಜನರು ವಿವಿಧ ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ವಿದ್ಯಾರ್ಥಿಗಳಲ್ಲಿ ತನ್ನದೇ ಆದ ಸಾಮರ್ಥ್ಯ, ಶಕ್ತಿ ಇದ್ದೇ ಇರುತ್ತದೆ. ಅದನ್ನು ಹೊರಹಾಕುವ ಪ್ರಯತ್ನವನ್ನು ಮಾಡಬೇಕು. ಭಾರತ ವಿಶ್ವಗುರು ಆಗುವಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಭಾರತ ಇತರೆ ರಾಷ್ಟ್ರಗಳಿಗಿಂತ ಭಿನ್ನವಾಗಿದ್ದು, ಇಲ್ಲಿ ಶೇ. 65 ರಷ್ಟು ಯುವಕ-ಯುವತಿಯರಿದ್ದಾರೆ. ಸದೃಢ ಭಾರತ ಕಟ್ಟುವ ಜವಾಬ್ದಾರಿ ಯುವ ಜನರ ಮೇಲಿದೆ. ದೇಶ ನನಗೆ ಏನು ಕೊಟ್ಟಿದೆ ಎನ್ನುವುದಕ್ಕಿಂತ ನಾನು ದೇಶಕ್ಕೆ ಏನು ಕೊಡುಗೆ ಕೊಟ್ಟಿದ್ದೇನೆ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳು ಎಲ್ಲಾ ಕೌಶಲ್ಯಗಳನ್ನು ಕಲಿಯುವ ಮೂಲಕ ನಾಡಿಗೆ, ದೇಶಕ್ಕೆ ಹಾಗೂ ಸಮುದಾಯಕ್ಕೆ ಕೊಡುಗೆ ಕೊಡು ವುದು ಆದ್ಯ ಕರ್ತವ್ಯವಾಗಿದೆ. ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಗೈದು ತಂದೆ-ತಾಯಿ, ಶಾಲೆ, ದೇಶಕ್ಕೆ ಕೀರ್ತಿ ತರುವಂತಾಗಬೇಕು. ಶಿಕ್ಷಣದ ಸದುಪಯೋಗ ಪಡೆದುಕೊಳ್ಳುವ ಮೂಲಕ ಇರುವ ಅವಕಾಶಗಳನ್ನು ಬಳಸಿಕೊಳ್ಳುವಂತೆ ಕರೆ ನೀಡಿದರು.
ಹಿರಿಯ ವಿದ್ಯಾರ್ಥಿ ಎಸ್.ಎಸ್.ಐ.ಎಂ. ಎಸ್ ಅಂಡ್ ಆರ್.ಸಿ. ಯ ಸಹಾಯಕ ಪ್ರಾಧ್ಯಾಪಕ ಡಾ. ವಿನಯ್ ಅಪ್ಪಣ್ಣನವರ್ ಮಾತನಾಡಿ, ವಿದ್ಯಾರ್ಥಿಗಳು ಓದಿನಲ್ಲಿ ಆಸಕ್ತಿ, ನಿರ್ದಿಷ್ಟ ಗುರಿ ಹೊಂದಬೇಕು. ಕಠಿಣ ಪರಿಶ್ರಮ, ಸತತ ಅಧ್ಯಯನ ನಿಮ್ಮದಾಗಲಿ ಎಂದು ಆಶಿಸಿದರು.
ಜೀವನದ ಗುರಿ ಸಾಧನೆಗೆ ಉತ್ತಮ ಆಲೋಚನೆಗಳನ್ನು ಅಳವಡಿಸಿಕೊಳ್ಳಬೇಕು. ತಂದೆ-ತಾಯಿಗಳ ಕನಸನ್ನು ಸಾಕಾರಗೊಳಿಸಲು ಶ್ರಮಪಡಲೇ ಬೇಕೆಂದು ಸಲಹೆ ನೀಡಿದರು.
ಶ್ರೀ ಸಿದ್ಧಗಂಗಾ ಪಿಯು ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು. ಸಂಸ್ಥೆ ಮುಖ್ಯಸ್ಥರಾದ ಜಸ್ಟಿನ್ ಡಿಸೋಜ, ಹಿರಿಯ ಉಪನ್ಯಾಸಕರಾದ ಜಿ.ಯು. ಶ್ರೀಧರ, ಎಸ್. ಅನುರಾಧ, ಸಹ ಶಿಕ್ಷಕರಾದ ಎಂ. ಪುಟ್ಟಸ್ವಾಮಿ, ಝೀನತ್ ಆರಾ, ಕೆ.ಎಸ್. ರೇಖಾ ರಾಣಿ ಮತ್ತಿತರರಿದ್ದರು.