2024ರ ಚಿತ್ರೋತ್ಸವ ಸಮಾರೋಪ ಸಮಾರಂಭದಲ್ಲಿ ಹರೀಶ್ ಮಾಳಪ್ಪನವರ್
ವಿದ್ಯಾರ್ಥಿಗಳು ಶೈಕ್ಷಣಿಕ ಜೀವನದಲ್ಲಿ ಕಾಲಹರಣ ಮಾಡಬಾರದು. ಇಟ್ಟುಕೊಂಡ ಗುರಿ ಸಾಧಿಸುವ ಕಡೆಗೆ ಶ್ರಮವಹಿಸಬೇಕು ಎಂದು ಶಿಲ್ಪಕಲಾ ಅಕಾಡೆಮಿ ಸದಸ್ಯ ಹರೀಶ ಮಾಳಪ್ಪನವರ್ ಹೇಳಿದರು.
ದಾವಣಗೆರೆ, ಅ.25- ರಾಜ್ಯದಲ್ಲಿರುವ ವಿವಿಧ ಕಲೆಗಳ ಏಳಿಗೆಗಾಗಿ ಎಲ್ಲರು ಶ್ರಮವಹಿಸಿ ದುಡಿಯಬೇಕಿದೆ ಎಂದು ಶಿಲ್ಪಕಲಾ ಅಕಾಡೆಮಿ ಸದಸ್ಯ ಹರೀಶ್ ಮಾಳಪ್ಪನವರ್ ಹೇಳಿದರು.
ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಚಿತ್ರೋತ್ಸವ 2024ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಕಾಲೇಜಿನ ವಿದ್ಯಾರ್ಥಿಗಳು ಎಲ್ಲಾ ಬಗೆಯ ಕಲಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಬೇಕು. ಈ ನಿಟ್ಟಿನಲ್ಲಿ ಕಲಿಕಾ ದಿನಗಳಲ್ಲೇ ಕಲಾ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ಅನಾವರಣ ಗೊಳಿಸಿಕೊಳ್ಳಬೇಕು ಎಂದರು.
ಇಂದಿನ ಕಲಾ ವಿದ್ಯಾರ್ಥಿಗಳಲ್ಲಿ ಪ್ರಾಯೋಗಿಕ ಅಭ್ಯಾಸ ಕಡಿಮೆ ಆಗುತ್ತಿದೆ. ಆದ್ದರಿಂದ ಕಲಾ ವಿದ್ಯಾರ್ಥಿಗಳು ನಿರಂತರ ಕಲಿಕೆಗೆ ಹೆಚ್ಚು ಒತ್ತು ನೀಡಬೇಕಿದೆ ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ತಮ್ಮ ಆಲೋಚನೆಗಳಿಗೆ ಬಣ್ಣ ಹಚ್ಚುವ ಮೂಲಕ ಗುರುಗಳೊಟ್ಟಿಗೆ ಉತ್ತಮ ಒಡನಾಟ ಇಟ್ಟುಕೊಳ್ಳುವ ಜತೆಗೆ ಅವರ ಮಾರ್ಗದರ್ಶನದಲ್ಲಿ ಉತ್ತಮ ಕಲಾವಿದರಾಗಿ ಸಮಾಜದಲ್ಲಿ ಹೊರ ಹೊಮ್ಮಬೇಕು ಎಂದರು.
ಕಲಿಕಾ ಹಂತದಲ್ಲಿರುವ ಕಲಾವಿದರು ಶಿಲ್ಪ ಕಲಾ ಅಕಾಡೆಮಿಯೊಂದಿಗೆ ಸಂಪರ್ಕ ಬೆಳೆಸಿ, ಅಲ್ಲಿನ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದ ಅವರು, ವಿದ್ಯಾರ್ಥಿ ಹಂತದಲ್ಲಿನ ದಿನಗಳು ಹಾಗೂ ಗುರುಗಳನ್ನು ಸ್ಮರಿಸಿದರು.
ಶಿಲ್ಪಕಲಾ ಅಕಾಡೆಮಿ ಸದಸ್ಯ ವೈ. ಕುಮಾರ್ ಮಾತನಾಡಿ, ಕಲಾವಿದರನ್ನು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವ ನಿಟ್ಟಿನಲ್ಲಿ ಈ ದೃಶ್ಯ ಕಲಾ ಮಹಾವಿದ್ಯಾಲಯ ಮಾಡುತ್ತಿದೆ ಎಂದು ಶ್ಲ್ಯಾಘಿಸಿದರು. ನೂತನ ಕಲಾವಿದರನ್ನು ಸೃಷ್ಟಿಸುವ ಈ ಕಲಾ ಶಾಲೆ, `ನಿಂತ ನೀರಾಗದೆ ಹರಿಯುವ ನೀರಿನಂತೆ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಬೆಳೆಯಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಚಿತ್ರೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಜಯಿಸಿದ ವಿದ್ಯಾರ್ಥಿಗಳಿಗೆ ಅತಿಥಿಗಳಿಂದ ಪ್ರಮಾಣ ಪತ್ರ ನೀಡಲಾಯಿತು.
ಈ ವೇಳೆ ಕಾಲೇಜಿನ ಪ್ರಾಚಾರ್ಯ ಡಾ. ಜೈರಾಜ್ ಎಂ. ಚಿಕ್ಕಪಾಟೀಲ್, ಲಲಿತ ಕಲಾ ಅಕಾಡೆಮಿ ಸದಸ್ಯೆ ನೂರ್ ಫಾತಿಮಾ, ಸಹಾಯಕ ಪ್ರಾಧ್ಯಾಪಕ ಡಾ. ಸತೀಶ್ ಕುಮಾರ್ ಪಿ. ವಲ್ಲೇಪುರೆ, ಬೋಧನಾ ಸಹಾಯಕ ದತ್ತಾತ್ರೇಯ ಎನ್. ಭಟ್ ಮತ್ತು ಕಾಲೇಜಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಿದ್ದರು.