ನ್ಯಾಯದೇವತೆ ಚಿಹ್ನೆ ಬದಲಾವಣೆ

ನ್ಯಾಯದೇವತೆ ಚಿಹ್ನೆ ಬದಲಾವಣೆ

ಕೋರ್ಟುಗಳಲ್ಲಿ ಈ ಹಿಂದೆ ಇದ್ದ ನ್ಯಾಯದೇವತೆ ಚಿಹ್ನೆಯನ್ನು ಯಥಾವತ್ತಾಗಿ ಉಳಿಸಿಕೊಳ್ಳಬೇಕೆಂಬುದೇ ನನ್ನ ಆಶಯವಾಗಿದೆ. ಕಾರಣ  ಕೋರ್ಟ್‌ ಹಾಲ್‌ನಲ್ಲಿ ನೀಡುವ ತೀರ್ಪು ಏಕಪಕ್ಷೀಯ ಹಾಗೂ ಸೃಜನ ಪಕ್ಷಪಾತಿಯಾಗಿರಬೇಕೆಂಬ ಕಾರಣದಿಂದ ನ್ಯಾಯದೇವತೆಯ ಮುಖಕ್ಕೆ (ಕಣ್ಣಿಗೆ) ಬಟ್ಟೆ ಕಟ್ಟಿರುತ್ತಾರೆ.

ಅಂದರೆ ವಕೀಲರ ವಾದ-ವಿವಾದದ ನಂತರ ಜಡ್ಜ್‌ಗಳು ತಮ್ಮ ವಿವೇಚನಾ ಶಕ್ತಿ ಮತ್ತು ಕಾನೂನಾತ್ಮಕವಾಗಿ ತೀರ್ಪು ಕೊಡಬೇಕು ಮತ್ತು ತಪ್ಪು ಮಾಡಿದ, ಅನ್ಯಾಯ ಮಾಡಿದ, ಕೊಲೆ-ಸುಲಿಗೆ ಮಾಡಿದ ವ್ಯಕ್ತಿಗಳಿಗೆ ಕಾನೂನಾತ್ಮ ಕವಾಗಿ ಶಿಕ್ಷೆ ಕೊಡಬೇಕೆಂಬ ಸಂಕೇತವೇ ನ್ಯಾಯ ದೇವತೆಯ ಎಡಗೈನಲ್ಲಿದ್ದ ಕತ್ತಿಯ ಸೂಚನೆಯಾಗಿರುತ್ತದೆ.

ಈ ಅಂತಾರ್ಥವನ್ನು ಅರಿಯದೇ ಕಾನೂನು ಕುರುಡು ಅದು ಅಮಾಯಕರಿಗೆ ಶಿಕ್ಷೆ ಕೊಡುತ್ತದೆ. ಆದ್ದರಿಂದ ನ್ಯಾಯದೇವತೆಯ ಕಣ್ಣಿಗೆ ಕಟ್ಟಿರುವ ಬಟ್ಟೆ ತೆಗೆಯಲಾಗಿದೆಯೇ? ಮತ್ತು ಈಗಿನ ಸರ್ಕಾರಗಳು ಸಂವಿಧಾನವನ್ನು ಉಲ್ಲಂಘಿಸುತ್ತಿವೆ. ಅದರ ನೆನಪನ್ನು ಮಾಡುವ ಉದ್ದೇಶದಿಂದ ಆಕೆಯ ಕೈಯಲ್ಲಿ ಸಂವಿಧಾನ ಪುಸ್ತಕವನ್ನು ಇಟ್ಟಿರುವರೆ? ಎಂಬ ಸಂಶಯ ಕಾಡುತ್ತಿದೆ.

ಈ ಹಿಂದೆ ಕೋರ್ಟ್‌ನಲ್ಲಿ `ಭಗವದ್ಗೀತೆ’ಯ ಪುಸ್ತಕವನ್ನು ಮುಟ್ಟಿ ಪ್ರಮಾಣ ಮಾಡಬೇಕಿತ್ತು. ಆದರೆ ಓಟು ಬ್ಯಾಂಕಿನ ಭಯದಿಂದ ಇಂದು ಭಗವದ್ಗೀತೆಯ ಪುಸ್ತಕದ ಮೇಲೆ ಕೈಇಟ್ತು ಪ್ರಮಾಣ ಮಾಡುವ ಪದ್ದತಿ ನಿಂತು ಹೋಗಿದೆ.

ನ್ಯಾಯದೇವತೆಯ ಕಣ್ಣಿಗೆ ಕಟ್ಟುವುದು ಮತ್ತು ಆಕೆಯ ಎಡಗೈನಲ್ಲಿ ಖಡ್ಗ ಹಿಡಿದಿರುವಂತೆಯ ಮುಂದುವರೆಸ ಬೇಕೆಂಬ ವಿಚಾರವಾಗಿ ನಾನು ಈ ಕೆಳಕಂಡ ಕಥೆಯನ್ನು ಬರೆಯುತ್ತಿರುವೆ.

ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಆತನು ಧರ್ಮದಿಂದ, ನ್ಯಾಯಪರತೆಯಿಂದ ರಾಜ್ಯವನ್ನು ಆಳುತ್ತಿದ್ದ. ಕಾಲಕಾಲಕ್ಕೆ ತನ್ನ ಪ್ರಜೆಗಳಿಗೆ ಆಗುತ್ತಿದ್ದ ತೊಂದರೆ / ಸಮಸ್ಯೆಗಳಿಗೆ ಶೀಘ್ರವೇ ಸ್ಪಂದಿಸಿ, ಶೀಘ್ರವೇ ಪ್ರಜೆಗಳಿಗೆ ನ್ಯಾಯವನ್ನು ದೊರಕಿಸಿ ಕೊಡುತ್ತಿದ್ದ. ಹೀಗಿರಲಾಗಿ ಒಮ್ಮೆ ಅವರ ರಾಜ್ಯಕ್ಕೆ ಪ್ರಖ್ಯಾತ ದರೋಡೆಕಾರರು ಆಗಮಿಸಿದರು. ಒಂದು ಹಂತದಲ್ಲಿ ರಾಜನ ಮಗನ ಸಖ್ಯವನ್ನು ಬೆಳೆಸಿದ ದರೋಡೆಕೋರರು ರಾಜನ ಮಗನಿಂದ ಗ್ರಾಮದ ವಿಚಾರಗಳನ್ನು ತಿಳಿದುಕೊಂದು, ಆ ಗ್ರಾಮದ ಜನರಿಗೆ ಪೀಡಿಸಿ-ಕಾಡಿಸಿ ಅವರಲ್ಲಿ ಇದ್ದುದೆಲ್ಲವನ್ನು ಚಾಣಾಕ್ಷತನದಿಂದ ದೋಚುತ್ತಿದ್ದರು. ಇವರ ಉಪಟಳವನ್ನು ರಾಜರಿಗೆ ತಿಳಿಸಬೇಕೆಂದುಕೊಂಡರು.

ರಾಜನ ಮಗನೆ ದರೋಡೆಕೋರರಿಗೆ ಸಹಾಯಕನಾಗಿರುವ ವಿಷಯ ತಿಳಿದು ಸುಮ್ಮನಾದರು. ಆದರೆ ದಿನೇ ದಿನೇ ಅವರ ಉಪಟಳ ಜಾಸ್ತಿಯಾದಾಗ ನಿರ್ವಾಹವಿಲ್ಲದೆ ರಾಜನ ಬಳಿ ಬಂದು ನಿಯೋಗ ಹೊರಟು ಇದ್ದ ವಿಷಯವನ್ನು ತಿಳಿಸಿದರು. ಆ ದರೋಡೆಕೋರರಿಗೆ ತನ್ನ ಮಗ ಸಹಾಯಕನಾಗಿರುವ ವಿಷಯ ತಿಳಿದು ಚಿಂತಿತನಾದ, ಪುತ್ರವಾತ್ಸಲ್ಯಕ್ಕಿಂತ ಪ್ರಜೆಗಳ ಹಿತವೇ ಕ್ಷೇಮ ಎಂದು ಭಾವಿಸಿ, ಒಂದು ರಾತ್ರಿ ಮಾರು ವೇಷದಲ್ಲಿ ದರೋಡೆಕೋರರು ಆಗಮಿಸುವ ಸ್ಥಳದಲ್ಲಿ ತನ್ನ ರಾಜಭಟರೊಂದಿಗೆ ಕಾಯುತ್ತಿದ್ದ.

ಇದನ್ನು ಅರಿಯದ ದರೋಡೆ ಕೋರರು ರಾಜಭಟರ ಕೈಗೆ ಸಿಲುಕಿ ಕೊಂಡರು. ಅವರೆಲ್ಲರನ್ನು ಗೋಣಿ ಚೀಲ ದಲ್ಲಿ ಪ್ರತ್ಯೇಕ, ಪ್ರತ್ಯೇಕವಾಗಿ ಬಂದಿಸಿ, ಮಾರನೇ ದಿನ ರಾಜನ ಆಸ್ಥಾನದಲ್ಲಿ ಅವರನ್ನು ಹಾಜರುಪಡಿಸಲಾಗಿತ್ತು. ಆಗ ಸ್ವತಃ ರಾಜನೇ ತನ್ನ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಗೋಣಿಚೀಲದಲ್ಲಿರುವ ಡಕಾಯಿತರುಗಳಿಗೆ ಛಡಿ ಏಟನ್ನು ನೀಡಲಾರಂಭಿಸಿದ.

ಇದನ್ನೆಲ್ಲವನ್ನು ಮೂಕ ಪ್ರೇಕ್ಷಕರಂತೆ ನೋಡು ತ್ತಿದ್ದ ಸಭಾ ಸದಸ್ಯರು, ಕುತೂಹಲ ತಾಳಲಾರದೆ ರಾಜನನ್ನು ಪ್ರಶ್ನಿಸಿದರು. ಹೇ ರಾಜನ್‌ ತಾವು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಏಕೆ ಛಡಿಏಟು ನೀಡಿದಿರಿ ಎಂದು ಪ್ರಶ್ನಿಸಿದರು. ಆಗ ರಾಜನ ಮಾತು ಮಾರ್ಮಿಕವಾಗಿತ್ತು ಮತ್ತು ಗಂಭೀರವಾಗಿತ್ತು.

ಒಂದು ವೇಳೆ ಈ ಮೂಟೆಗಳಲ್ಲಿ ನನ್ನ ಮಗ ಇದ್ದರೆ ನಾನು ಅವನನ್ನು ದಂಡಿಸಲು ಆಗುತ್ತಿರಲಿಲ್ಲ. ಪುತ್ರವಾತ್ಸಲ್ಯವು ಅವನಿಗೆ ಶಿಕ್ಷೆ ಕೊಡಲು ಹಿಂಜರಿಯುತ್ತಿತ್ತು. ಹಾಗಾಗಿ ನಾನು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಶಿಕ್ಷಿಸಿದೆನು ಎಂದನು. ಆತನ ನ್ಯಾಯನಿಷ್ಠುರತೆ ಕಂಡ ಪುರಜನರು ರಾಜನಿಗೆ ಜೈಕಾರ ಹಾಕಿದರು.

ಆದ್ದರಿಂದ ಕೋರ್ಟ್‌ ಹಾಲ್‌ಗಳಲ್ಲಿ ಈ ಮುಂಚೆಯೇ ಇದ್ದಂತೆ ನ್ಯಾಯದೇವತೆಯನ್ನು ಅಲಂಕರಿಸಬೇಕು ಎಂಬುದು ನನ್ನ ಆಶಯವಾಗಿದೆ.

ಸಿ. ಕೆ. ಆನಂದತೀರ್ಥಾಚಾರ್‌, ದಾವಣಗೆರೆ.

error: Content is protected !!