ಶಿಕ್ಷಣವು ಉದ್ಯೋಗಕ್ಕೆ ನೆರವಾಗಲಿ

ಶಿಕ್ಷಣವು ಉದ್ಯೋಗಕ್ಕೆ ನೆರವಾಗಲಿ

ನಮಗೆಲ್ಲರಿಗೂ ತಿಳಿದಿರುವ ಹಾಗೆ ಎಲ್ಲರ ಬದುಕಿನಲ್ಲಿ ಶಿಕ್ಷಣವು ಬಹುದೊಡ್ಡ ಪಾತ್ರ ವಹಿಸುತ್ತದೆ. ನಾವು ಯಾವುದೇ ನೌಕರಿ, ಉದ್ಯೋಗ ಅಥವಾ ವ್ಯಾಪಾರ ವ್ಯವಹಾರವನ್ನು ಪ್ರಾರಂಭಿಸಬೇಕೆಂದರೆ ನಮಗೆ ಕನಿಷ್ಠ ಜ್ಞಾನದ ಜೊತೆಗೆ ಶಿಕ್ಷಣದ ಅರಿವಿರಬೇಕು. 

ಆದರೆ ಇತ್ತೀಚಿನ ದಿನಗಳಲ್ಲಿ ಪದವೀಧರರ ಸಂಖ್ಯೆ ಹೆಚ್ಚಾಗುತ್ತಿದೆ. ಜೊತೆಗೆ ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಏಕೆಂದರೆ ನಾವು ಓದಿದ ಶಿಕ್ಷಣಕ್ಕೂ ಮತ್ತು ಉದ್ಯೋಗ ಸಂಸ್ಥೆಗಳು ಕೇಳುತ್ತಿರುವ ಕೌಶಲ್ಯಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ರಾಜಕೀಯ ಪಕ್ಷಗಳು ಮತ್ತು ಸರ್ಕಾರಗಳು ತಮಗೆ ಮನಬಂದಂತೆ ಶಿಕ್ಷಣ ಪದ್ಧತಿಯನ್ನು ಬದಲಾಯಿಸುವುದು ಅವರ ಅನುಕೂಲಕ್ಕೆ ತಕ್ಕಂತೆ ಪಿಯುಸಿ ಮತ್ತು ಪದವಿ ಅಥವಾ ಸ್ನಾತಕೋತ್ತರ ಸಿಲೆಬಸ್‌ಗಳನ್ನು ಮತ್ತು ಎನ್‌ಇಪಿ, ಎಸ್‌ಇಪಿ ಇಂತಹ ಹಲವಾರು ಶಿಕ್ಷಣದಲ್ಲಿನ ಬದಲಾವಣೆಯು ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಬಹಳಷ್ಟು ತೊಂದರೆಗೆ ಸಿಲುಕಿಸಲು ದಾರಿ ಮಾಡಿಕೊಟ್ಟಿದೆ.

ಪ್ರಸ್ತುತ ದಿನಮಾನಗಳಲ್ಲಿ ಶಿಕ್ಷಣ ಪದ್ಧತಿ ಎಷ್ಟರ ಮಟ್ಟಿಗೆ ಹಳ್ಳ ಹಿಡಿಯುತ್ತಿದೆ ಎಂದರೆ ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಶಿಕ್ಷಣ ವ್ಯವಸ್ಥೆಯು ಕೇವಲ ಮಾರ್ಕ್ಸ್ ಕಾರ್ಡ್ ಆಧರಿತವಾಗಿವೆಯೇ ಹೊರತು ವಿದ್ಯಾರ್ಥಿಗಳಲ್ಲಿ ಕೆಲಸ ಗಿಟ್ಟಿಸಿಕೊಳ್ಳುವ ಕೌಶಲ್ಯಗಳು ನಶಿಸಿ ಹೋಗುತ್ತಿವೆ. 

ಬಹುತೇಕ ಹಿಂದಿನ ಶಿಕ್ಷಣ ವ್ಯವಸ್ಥೆಯು ಮಾರ್ಕ್ಸ್‌ಕಾರ್ಡ್‌ ವಾದಿ ದೃಷ್ಟಿಕೋನದ ಸ್ವರೂಪದ್ದಾಗಿದೆ. ಹೊರತು ಉದ್ಯೋಗಕ್ಕೆ ಬೇಕಾದಂತಹ ಕೌಶಲ್ಯವನ್ನು ಯುವ ಪೀಳಿಗೆಯಲ್ಲಿ ಭರಿಸುವ ಕಾರ್ಯಗಳು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮರೆಮಾಚಿ ಹೋಗುತ್ತಿದೆ. ಇದೇ ಬಹಳಷ್ಟು ವಿಪರ್ಯಾಸ ಸಂಗತಿ. 

ಎಷ್ಟೋ ಕೋಟ್ಯಾಂತರ ಪದವೀಧರರು ನಿರಂತರ ಕೆಲಸ ಹುಡುಕುವ ಕಾರ್ಯದಲ್ಲಿ ತೊಡಗಿ ಕಂಗೆಟ್ಟು ಹೋಗಿದ್ದಾರೆ. ಶಿಕ್ಷಣ ಪದ್ಧತಿ ಪರಿಪೂರ್ಣವಾಗಿರಬೇಕೆಂದರೆ ಪದವಿ ವಿಷಯವಾರು ಅಭ್ಯಾಸದ ಜೊತೆಗೆ ವಿದ್ಯಾರ್ಥಿಗಳಲ್ಲಿ ಉತ್ತಮ ಕೌಶಲ್ಯವನ್ನು ನೀಡುವ ಪ್ರಾಯೋಗಿಕ ಮತ್ತು ವೈಜ್ಞಾನಿಕ ಪರಿಕಲ್ಪನೆ ಬರುವಂತೆ ಪ್ರಚೋದಿಸಬೇಕು. ಅವರು ಓದುವ ಕಲಾ, ವಾಣಿಜ್ಯ ಮತ್ತು ಸೈನ್ಸ್ ಇನ್ನಿತರೆ ತಾಂತ್ರಿಕ ವಿಷಯಗಳಲ್ಲಿ ಪ್ರಾಯೋಗಿಕವಾದ ಕಲಿಕೆ ಬಹಳಷ್ಟು ಮುಖ್ಯವಾಗುತ್ತದೆ. ವಿದ್ಯಾರ್ಥಿಗಳು ಬಹುಶಃ ಕಲಿಕೆಯ ಜೊತೆಗೆ ಒಂದಿಷ್ಟು ಕಂಪ್ಯೂಟರ್ ಜ್ಞಾನ,  ಸಂವಹನ ಕಲೆ ಮತ್ತು ಕೆಲ ಕೌಶಲ್ಯಗಳನ್ನು ರೂಢಿಸಿಕೊಂಡರೆ ಶಿಕ್ಷಣದ ನಂತರ ಉದ್ಯೋಗ ಗಿಟ್ಟಿಸಿಕೊಳ್ಳುವುದು ಬಹಳಷ್ಟು ಸುಲಭವಾಗುತ್ತದೆ. 

ಜೊತೆಗೆ ಸರ್ಕಾರಗಳು ಕೇವಲ ಜಾತಿ ಧರ್ಮ ದೇವರ ಹೆಸರಲ್ಲಿ ದೇಶ ನಡೆಸುವುದನ್ನು ಬಿಟ್ಟು ಕೋಟ್ಯಾಂತರ ಪದವಿದರರಿಗೆ ಉದ್ಯೋಗವನ್ನು ಸೃಷ್ಟಿಸುವ ಕೆಲಸ ಮಾಡಬೇಕು. ನಮ್ಮಲ್ಲಿರುವ ಹೆಚ್ಚಿನ ಮಾನವ ಸಂಪನ್ಮೂಲವನ್ನು ನಾವು ಸುಸಜ್ಜಿತವಾಗಿ ಉಪಯೋಗಿಸಿಕೊಂಡರೆ ಉತ್ಪಾದನಾ ಕಾರ್ಯದಲ್ಲಿ ಅಥವಾ ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರೀಸ್‌ಗಳಲ್ಲಿ ಉಪಯೋಗಿಸಿಕೊಂಡು ಉತ್ಪಾದನೆಯನ್ನು ಹೆಚ್ಚಿಸಿದರೆ ಯುವಕರಿಗೆ ಉದ್ಯೋಗದ ಜೊತೆಗೆ ದೇಶದ ಜಿಡಿಪಿಯು ಕೂಡ ಹೆಚ್ಚಾಗುತ್ತದೆ. ಅಂತಹ ಸಂದರ್ಭದಲ್ಲಿ ನಾವು ವಿದೇಶಗಳನ್ನು ಆಮದಿಗೆ ಅವಲಂಬಿತವಾಗುವುದನ್ನು ನಿಲ್ಲಿಸಬಹುದು. ನಮ್ಮಲ್ಲಿರುವ ಮಾನವ ಸಂಪನ್ಮೂಲಗಳಿಗೆ ಕೃಷಿ, ಕೈಗಾರಿಕೆ ಮತ್ತು ಸೇವಾ ವಲಯಕ್ಕೆ ಸೂಕ್ತವಾಗಿ ಬಳಸಿಕೊಂಡರೆ ದೇಶದ ಅಭಿವೃದ್ಧಿ ಆಗುವುದರಲ್ಲಿ ಯಾವುದೇ ಅನುಮಾನವಿರುವುದಿಲ್ಲ. 

ಕಳೆದ ಐದರಿಂದ ಆರು ವರ್ಷಗಳಲ್ಲಿ ಉದ್ಯೋಗ ಸೃಷ್ಟಿಯಲ್ಲಿ ಬಹಳಷ್ಟು ಕುಂಟಿತಗೊಂ ಡಿದೆ. ಇದರ ಪರಿಣಾಮವಾಗಿ ವಿದ್ಯಾಭ್ಯಾಸ ಮಾಡಿದ್ದ ಯುವಕರು ಅಲ್ಲಿ ಇಲ್ಲಿ ಸಣ್ಣಪುಟ್ಟ ಉದ್ಯೋಗವನ್ನು ಪಡೆಯಲು ಪರದಾಡುತ್ತಿದ್ದಾರೆ. ಕೇವಲ 15 ಸಾವಿರ ತಿಂಗಳಿಗೆ ಪಡೆಯಲು ಪರದಾಡುತ್ತಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಬಹಳಷ್ಟು ಹೆಚ್ಚಾಗಿದ್ದು, ಪದವಿ ಮತ್ತು ಸ್ನಾತಕೋತ್ತರ ಪದವೀಧರರಿಗೂ ಮತ್ತು ಸಾಮಾನ್ಯ ವ್ಯಕ್ತಿಗಳಿಗೂ ವ್ಯತ್ಯಾಸವಿಲ್ಲದಂತಾಗಿದೆ. 

ಇತ್ತೀಚಿನ ದಿನಗಳ ಶಿಕ್ಷಣ ಪದ್ಧತಿಯು ಬಹಳಷ್ಟು ವ್ಯಾಪಾರವಾಗಿ ಪರಿಣಮಿಸಿಬಿಟ್ಟಿದೆ ಯಾವುದೇ ನೈತಿಕ ಮತ್ತು ಸಾಮಾಜಿಕ ಕಾಳಜಿ ಇಲ್ಲದೇ ಕೇವಲ ಕಮರ್ಷಿಯಲ್ ಮತ್ತು ಕಾರ್ಪೊರೇಟ್ ರೂಪವೂ ಶಿಕ್ಷಣದಲ್ಲಿ ಬಂದಿದೆ.

 ನಿರುದ್ಯೋಗದಿಂದ ಕಂಗೆಟ್ಟ ಯುವ ಜನತೆಗೆ ಉದ್ಯೋಗ ದೊರಕಲಿ ಮತ್ತು ಶಿಕ್ಷಣ ಪದ್ಧತಿಯಲ್ಲಿ ಬದಲಾವಣೆ ಆಗಲಿ. ಕೇವಲ ಮಾರ್ಕ್ಸ್ ಕಾರ್ಡ್ ಆಧಾರಿತ ಶಿಕ್ಷಣ ವ್ಯಾಪಾರವಾಗದಿರಲಿ ಎಂಬುದೇ ಈ ಲೇಖನದ ಆಶಯ.

– ಮಲ್ಲೇಶ್ ಎಂ. ನಾಯ್ಕ 

ಉಪನ್ಯಾಸಕರು, ದಾವಣಗೆರೆ.

error: Content is protected !!