ಜಗಳೂರು, ಆ. 24- ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ಸ್ತಬ್ಧಚಿತ್ರ ರಥಯಾತ್ರೆಯನ್ನು ಸ್ವಾಗತಿಸಲಾಯಿತು.
ಪಟ್ಟಣದ ಪ್ರವಾಸಿ ಮಂದಿರದಿಂದ ಮಹಾತ್ಮಗಾಂಧಿ ವೃತ್ತದ ಮೂಲಕ ಅಂಬೇಡ್ಕರ್ ವೃತ್ತದವರೆಗೆ ಮೆರವಣಿಗೆ ಮೂಲಕ ಸಾಗಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ನಂತರ ಬೀಳ್ಕೊಡಲಾಯಿತು.
ತಹಶೀಲ್ದಾರ್ ಸೈಯ್ಯದ್ ಕಲೀಂ ಉಲ್ಲಾ ಮಾತನಾಡಿ, ‘ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಶ್ರೀಮಂತವಾಗಿದ್ದು, ರಾಜ್ಯವ್ಯಾಪಿ ಜನಜಾಗೃತಿ ಮೂಲಕ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಬೇಕಿದೆ. ಕನ್ನಡ ರಥಯಾ ತ್ರೆಯು ನಮ್ಮ ನಾಡು, ನುಡಿ, ಸಂಸ್ಕೃತಿಯ ಪ್ರತೀಕವಾಗಿದೆ. ವಿವಿಧ ಜಿಲ್ಲೆಗಳಲ್ಲಿ ರಥ ಸಂಚರಿಸಲಿದೆ ಎಂದು ತಿಳಿಸಿದರು.
ರಥಯಾತ್ರೆಗೆ ತಾತ್ಸಾರ ; ಅಧಿಕಾರಿಗಳು ಗೈರು : ಕನ್ನಡ ಜ್ಯೋತಿ ರಥಕ್ಕೆ ಸ್ವಾಗತಿಸಲು ಎರಡು ಮೂರು ಇಲಾಖೆಯವರು, ಶಾಲಾ ಶಿಕ್ಷಕರು ಮಾತ್ರ ಭಾಗವಹಿಸಿದ್ದರು. ಕನ್ನಡ ಅಭಿಮಾನದ ಕೊರತೆ ಎದ್ದು ಕಾಣುತ್ತಿತ್ತು. ಅಲ್ಲದೆ ತಹಶೀಲ್ದಾರ್ ಕಛೇರಿ ಮುಂಭಾಗದ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡದ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಅಧಿಕಾರಿಗಳ ತಾತ್ಸಾರಕ್ಕೆ ಸಾರ್ವಜನಿಕರಿಂದ ಆಕ್ಷೇ ಪವ್ಯಕ್ತವಾಯಿತು.
ತಾ.ಪಂ.ಇಓ ಕೆಂಚಪ್ಪ, ಪಿಐ ಶ್ರೀನಿವಾಸ್ ರಾವ್, ಪ.ಪಂ.ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಜಿ.ಪಂ ಎಇಇ ಶಿವಮೂರ್ತಿ, ಬಿಇಓ ಹಾಲಮೂರ್ತಿ, ಬಿಆರ್ಸಿ ಡಿಡಿ ಹಾಲಪ್ಪ, ಕಸಾಪ ಅಧ್ಯಕ್ಷೆ ಸುಜಾತಮ್ಮ, ಕಾರ್ಯದರ್ಶಿ ಗೀತಾಮಂಜು, ಮಾರಪ್ಪ, ಸಾಹಿತಿ ಎನ್.ಟಿ.ಎರ್ರಿಸ್ವಾಮಿ, ಎಂ.ರಾಜಪ್ಪ, ಓಬಣ್ಣ, ನಾಗಲಿಂಗಪ್ಪ, ವಕೀಲ ಓಬಳೇಶ್ ಸೇರಿದಂತೆ ಇತರರು ಈ ಸಂದರ್ಭದಲ್ಲಿದ್ದರು.