ಹರಿಹರ ನಗರಸಭೆಯ ಇತಿಹಾಸದಲ್ಲೇ ನಡೆದ ಘಟನೆ
ಜಿಲ್ಲಾಧಿಕಾರಿಗಳು ದಾವಣಗೆರೆ ನಗರಕ್ಕೆ ಮಾತ್ರ ಜಿಲ್ಲಾಧಿಕಾರಿಗಳಾಗಿರುವ ಕಾರಣ, ಜಿಲ್ಲೆಯ ಇತರೆ ತಾಲ್ಲೂಕುಗಳ ಸಮಸ್ಯೆಗಳು ಉದ್ಭವಿಸುತ್ತಿವೆ.
– ದಾದಾ ಖಲಂದರ್, ನಗರಸಭೆ ಸದಸ್ಯ
ಹರಿಹರ, ಅ. 23 – ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರು ನಗರಸಭೆ ಅಧ್ಯಕ್ಷರು ಮತ್ತು ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಪಕ್ಷೀಯವಾಗಿ ನಡೆದುಕೊಳ್ಳುತ್ತಾರೆ. ಬೆಳಗ್ಗೆ ಕಚೇರಿಯಲ್ಲಿ ಕೆಲಸ ಮಾಡದೇ ಕತ್ತಲಿನಲ್ಲಿ ಕೆಲಸ ಮಾಡುತ್ತಿದ್ದು, ಸರ್ಕಾರ ಇವರನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ನಗರ ಸಭೆ ಅಧ್ಯಕ್ಷರಾದ ಕವಿತ ಮಾರುತಿ ಮತ್ತು ಸದಸ್ಯರಾದ ಆರ್.ಸಿ. ಜಾವೇದ್ ದಾದಾ ಖಲಂದರ್, ಬಿ. ಅಲ್ತಾಫ್ ಹಾಗೂ ಇತರೆ ಸದಸ್ಯರು ಪ್ರತಿಭಟನೆ ನಡೆಸಿದ ಘಟನೆ ನಗರಸಭೆ ಮುಂಭಾಗದಲ್ಲಿ ಇಂದು ನಡೆಯಿತು.
ಈ ವೇಳೆ ನಗರ ಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮಾತನಾಡಿ, ಪೌರಾಯುಕ್ತರು ಜನರ ಸಮಸ್ಯೆಗಳ ವಿಚಾರಕ್ಕೆ ನಮ್ಮ ಬಳಿ ಚರ್ಚೆ ಮಾಡುತ್ತಿಲ್ಲ. ನಾವೇ ಅವರ ಬಳಿ ಚರ್ಚೆ ಮಾಡುವುದಕ್ಕೆ ಬೆಳಿಗ್ಗೆಯಿಂದ ಸಂಜೆಯವರೆಗೆ ಕಚೇರಿಯಲ್ಲಿ ಕುಳಿತುಕೊಂಡು ಕಾದರೂ ಅವರು ನಾವು ಮನೆಗೆ ಹೋದ ನಂತರ ಕಚೇರಿಗೆ ಬಂದು ತಡ ರಾತ್ರಿಯವರೆಗೂ ಕೆಲಸ ಮಾಡುತ್ತಾರೆ. ಸಮಸ್ಯೆಗಳನ್ನು ಹೇಳಿಕೊಂಡು ಬರುವ ಸಾರ್ವಜನಿಕರಿಗೆ ಯಾವ ರೀತಿಯಲ್ಲಿ ಉತ್ತರ ಕೊಡಬೇಕು, ಇದನ್ನು ಅವರಿಗೆ ಹಲವಾರು ಬಾರಿ ಹೇಳಿದರೂ ಸಹ ಅವರು ದಿನದಿಂದ ದಿನಕ್ಕೆ ಇನ್ನಷ್ಟು ಉದ್ದಟತನದಿಂದ ವರ್ತಿಸುತ್ತಿದ್ದಾರೆ. ಇದರಿಂದ ಬೇಸತ್ತು ಅನಿವಾರ್ಯವಾಗಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತಿರುವುದಾಗಿ ತಿಳಿಸಿದರು.
ನಗರಸಭೆ ಸದಸ್ಯ ಆರ್.ಸಿ. ಜಾವೇದ್ ಮಾತನಾಡಿ, ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಅವರ ಅನುಚಿತ ನಡವಳಿಕೆಯ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುತ್ತದೆ ಎಂದು ಹೇಳಿದರು.
ನಗರಸಭೆ ಸದಸ್ಯ ದಾದಾ ಖಲಂದರ್ ಮಾತನಾಡಿ, ಜಿಲ್ಲಾಧಿಕಾರಿಗಳು ದಾವಣಗೆರೆ ನಗರಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಜಿಲ್ಲಾಧಿಕಾರಿಗಳು ಜಿಲ್ಲೆಯ ಇತರೆ ತಾಲ್ಲೂಕಿನ ಜನರಿಗೆ ಸ್ಪಂದಿಸದಿರುವುದರಿಂದ ಹರಿಹರದ ಸಮಸ್ಯೆಗಳು ಉಲ್ಬಣಗೊಳ್ಳುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹರಿಹರ ನಗರದಲ್ಲೇ ಪ್ರಥಮ ಬಾರಿಗೆ ನಗರಸಭೆ ಅಧ್ಯಕ್ಷರು, ಸದಸ್ಯರು ಪೌರಾಯುಕ್ತರ ವಿರುದ್ಧ ಪ್ರತಿಭಟನೆ ಮಾಡಿದ್ದು ಇತಿಹಾಸವಾಗಿದೆ. ಇವರನ್ನು ವರ್ಗಾವಣೆ ಮಾಡುವಲ್ಲಿ ತಡ ಮಾಡಿದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಪತ್ರಿಭಟನೆ ಮಾಡಬೇಕಾದೀತು ಎಂದು ಎಚ್ಚರಿಸಿದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ದಿನದ 24 ಗಂಟೆಯ ಸಮಯದಲ್ಲಿ ಕರ್ತವ್ಯ ನಿರ್ವಹಣೆ ಮಾಡಬೇಕೆಂದು ಸರ್ಕಾರದ ಆದೇಶ ಇದ್ದು, ಇದರಿಂದ ಬೆಳಿಗ್ಗೆ ನಗರದ ಹಲವಾರು ವಾರ್ಡಿಗೆ ಭೇಟಿ ಕೊಟ್ಟು, ರಾತ್ರಿ ಕಚೇರಿಯಲ್ಲಿ ಕುಳಿತುಕೊಂಡು ಮೂರು ವರ್ಷಗಳಿಂದ ಆಗದಿರುವ ಟೆಂಡರ್ ಸಂಬಂಧಿಸಿದ ಕೆಲಸವನ್ನು ಮಾಡುತ್ತಿದ್ದೇನೆ. ಜನರ ಬಗ್ಗೆ ಕಾಳಜಿ ಇರುವ ಕಾರಣ ಹಗಲು – ರಾತ್ರಿ ಎನ್ನದೆ ಶ್ರಮವಹಿಸಿ ಕೆಲಸ ಮಾಡುವುದನ್ನು ಸಹಿಸಿಕೊಳ್ಳದೆ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.
ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಬಿ.ಅಲ್ತಾಫ್, ಮುಜಾಮಿಲ್ ಬಿಲ್ಲು, ಕಾಂಗ್ರೆಸ್ ಪಕ್ಷದ ಮುಖಂಡ ಸನಾವುಲಾ ಸಾಬ್, ಜೆಡಿಸ್ ಪಕ್ಷದ ಮುಖಂಡರಾದ ಫೈನಾನ್ಸ್ ಮಂಜುನಾಥ್, ಜಾಕೀರ್, ಮನಸೂರು ಮದ್ದಿ, ಮಾರುತಿ ಬೇಡರ್ ಇತರರು ಹಾಜರಿದ್ದರು,