ಸೂಳೆಕೆರೆ ಸಾಂಸ್ಕೃತಿಕ ಪ್ರತಿಷ್ಠೆಯೂ ಹೌದು : ಡಾ.ಪ್ರಭಾ

ಸೂಳೆಕೆರೆ ಸಾಂಸ್ಕೃತಿಕ ಪ್ರತಿಷ್ಠೆಯೂ ಹೌದು : ಡಾ.ಪ್ರಭಾ

ದಾವಣಗೆರೆ, ಅ.28- ಸೂಳೆಕೆರೆ ನಮ್ಮ ಜಿಲ್ಲೆಯ ಐತಿಹಾಸಿಕ ಹೆಮ್ಮೆಯಾಗಿದೆ ಮತ್ತು ಈ ಭಾಗದ ರೈತರಿಗೆ ಆಸರೆಯ ಜತೆಗೆ, ನಮ್ಮೆಲ್ಲರ ಸಾಂಸ್ಕೃತಿಕ ಪ್ರತಿಷ್ಠೆಯೂ ಆಗಿದೆ ಎಂದು ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್‌ ಹೇಳಿದರು.

ಯುವ ಸಾಹಿತಿ ಪಾಪು ಗುರು ರಚನೆಯ ಉಷಾ ಪ್ರಕಾಶನದಿಂದ ಹೊರ ಬರುತ್ತಿರುವ ಸೂಳೆಕೆರೆಯ ಐತಿಹಾಸಿಕ ಕಾದಂಬರಿ ಶಾಂತಾದೇವಿ ಮುಖಪುಟ ಅನಾವರಣಗೊಳಿಸಿ ಅವರು ಮಾತನಾಡಿದರು.

ಸೂಳೆ ಕೆರೆಯ ಬಗ್ಗೆ ಅನೇಕ ಐತಿಹ್ಯ ಕಥೆಗಳಿವೆ. ಆದರೆ ಈ ಕೆರೆಯ ಕುರಿತು ಒಂದು ಸಂಶೋಧ ನಾತ್ಮಕ ಕೃತಿ ಬರಬೇಕಿದ್ದು, ಇಲ್ಲಿಯವರೆಗೂ ಇಂತಹ ಪ್ರಯತ್ನ ನಡೆದಿಲ್ಲ ಎಂದರು. ಇದೀಗ ದಾವಣ ಗೆರೆಯ ಪ್ರತಿಭಾನ್ವಿತ ಸಾಹಿತಿ ಪಾಪು ಗುರು, ಶಾಂತಾದೇವಿ ಕಾದಂಬರಿಯನ್ನು ಪರಿಪೂರ್ಣವಾಗಿ ಕಟ್ಟಿಕೊಡಲಿದ್ದು ಮತ್ತು ಐತಿಹಾಸಿಕ ಮಹತ್ವ ಪಡೆಯಲಿದೆ. ಜತೆಗೆ ಒಂದು ಆಕರ ಗ್ರಂಥ ವಾಗಿಯೂ ಉಳಿಯಲಿದೆ ಎಂದು ತಿಳಿಸಿದರು.

ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ, ಸಾಹಿತ್ಯದ ಪ್ರಕಾರದಲ್ಲಿ ಕಾದಂಬರಿಯ ರಚನೆಯೂ ಸುದೀರ್ಘ ಕೆಲಸವಾಗಿದ್ದು ಅದರಲ್ಲೂ ಐತಿಹಾಸಿಕ ಕಾದಂಬರಿಗಳು ಆ ಪ್ರದೇಶದ ನೆಲ ಜಲ, ಆರ್ಥಿಕತೆ, ಆಮದು, ರಫ್ತು, ಉತ್ಪಾದನೆ ಈ ಎಲ್ಲಾ ಮೂಲಗಳನ್ನು ಕಟ್ಟಿಕೊಡುವ ಮೂಲಕ ಆ ಪ್ರದೇಶದ ಸಂಸ್ಕೃತಿಯನ್ನು  ಗಟ್ಟಿಗೊಳಿಸುವ ಕೆಲಸಗಳನ್ನು ಮಾಡುತ್ತವೆ ಎಂದರು. 

ಕೃತಿಯ ಕರ್ತೃ ಪಾಪು ಗುರು ಮಾತನಾಡಿ, ಈ ಕಾದಂಬರಿಯ ನಿರ್ಮಾಣಕ್ಕೆ ಸ್ಥಳ ಪುರಾಣ, ಜಾಗಾನ್ವೇಷಣೆ, ಜನಸಂಪರ್ಕ ಮಾಡಿ ಸುದೀರ್ಘ ಸಮಯ ವ್ಯಯಿಸಿ ಕೃತಿ ರಚನೆಗೆ ಕೈ ಹಾಕಿದ್ದೇನೆ ಎಂದು ಹೇಳಿದರು.

ಸಾಕಷ್ಟು ಅಧ್ಯಯನದ ನಂತರ ಹೊರ ಬರುತ್ತಿರುವ ಈ ಕಾದಂಬರಿ ಸೂಳೆಕೆರೆ ನಿರ್ಮಾಣದ ಬಗ್ಗೆ ಒಂದು ಸಂಪೂರ್ಣ ಚಿತ್ರಣವನ್ನು ಓದುಗರಿಗೆ ಕಟ್ಟಿಕೊಡಲಿದೆ ಎಂದರು.

ಈ ವೇಳೆ ವರದಿಗಾರರ ಕೂಟದ ಅಧ್ಯಕ್ಷ ನಾಗರಾಜ್ ಬಡದಾಳ, ಸಾಹಿತಿಗಳಾದ ಸಂತೇಬೆನ್ನೂರು ಫೈಜ್ನಟ್ರಾಜ್‌, ಸುಬ್ರಹ್ಮಣ್ಯ ಭದ್ರಾವತಿ, ಸನಾವುಲ್ಲಾ ನವಿಲೇಹಾಳ್, ಫಕ್ಕೀರೇಶ ಆದಾಪುರ ಹಾಗೂ ಮೊಹಮ್ಮದ್ ರಫಿ ಇದ್ದರು.

error: Content is protected !!