ಅಚ್ಚುಕಟ್ಟಾಗಿ ಸಿದ್ಧತೆ ಮಾಡಿಕೊಳ್ಳಲು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಸೂಚನೆ
ದಾವಣಗೆರೆ, ಅ.22- ನ. 1ರಂದು ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ 69 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಧ್ವಜಾರೋಹಣ ನೆರವೇರಿಸುವರು ಎಂದು ಜಿಲ್ಲಾಧಿ ಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ರಾಜ್ಯೋತ್ಸವ ಆಚರಣೆ ಪೂರ್ವಭಾವಿ ಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯೋತ್ಸವ ವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ಹೈಸ್ಕೂಲ್ ಮೈದಾನದಿಂದ ವಿವಿಧ ಕಲಾ ತಂಡಗಳೊಂದಿಗೆ ಭುವನೇಶ್ವರಿ ದೇವಿ ಭಾವಚಿತ್ರದ ಮೆರವಣಿಗೆ ನಡೆಯಲಿದೆ.
ರಾಜ್ಯೋತ್ಸವ ಅಂದರೆ ನವೆಂಬರ್ ತಿಂಗಳಿಗೆ ಮಾತ್ರ ಕನ್ನಡ ಬಳಕೆ ಸೀಮಿತವಾಗದೇ ಆಡಳಿತ ದಲ್ಲಿ ಕನ್ನಡ, ನಿತ್ಯ ಬಳಕೆಯಲ್ಲಿ ಕನ್ನಡ, ಕಡತದಲ್ಲಿ ಕನ್ನಡ ಬಳಕೆ ಮಾಡುವ ಮೂಲಕ ವರ್ಷಪೂರ್ತಿ ರಾಜ್ಯೋ ತ್ಸವ ಆಚರಣೆ ಮಾಡಲಾಗುತ್ತಿದೆ. ಎಲ್ಲಾ ಇಲಾಖೆಯಲ್ಲಿಯೂ ಕನ್ನಡ ಬಳಕೆ ಕಡ್ಡಾಯ ಮಾಡ ಲಾಗಿದೆ. ಕೆಲವು ಖಾಸಗಿ ಹೆದ್ದಾರಿ ಫಲಕಗಳಲ್ಲಿ ಇಂಗ್ಲಿಷ್ ಬಳಕೆ ಮಾಡಲಾಗುತ್ತಿದೆ ಮತ್ತು ಶಾಲೆ ಗಳಲ್ಲಿ ಮಕ್ಕಳು ಇಂಗ್ಲೀಷ್ನಲ್ಲಿಯೇ ಮಾತನಾಡಬೇ ಕೆಂದು ಕಡ್ಡಾಯಗೊಳಿಸಿರುವ ಬಗ್ಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಮೂಲಕ ಅಂತಹ ಶಾಲೆಗಳಿಗೆ ನೋಟಿಸ್ ನೀಡಲಾಗುತ್ತದೆ ಎಂದರು.
ಜಿಲ್ಲಾ ಕ್ರೀಡಾಂಗಣದಲ್ಲಿ ನಡೆ ಯುವ ಸಾಂಸ್ಕೃತಿಕ ಕಾರ್ಯಕ್ರಮ ದಲ್ಲಿ ನಾಡು, ನುಡಿಯ ಕುರಿತಂತೆ ಗುಣಮಟ್ಟದ ನೃತ್ಯ ಕಾರ್ಯಕ್ರಮ ಏರ್ಪಾಡು ಮಾಡಲಾಗುತ್ತದೆ. ಸಂಜೆಯ ಸಾಂಸ್ಕೃತಿಕ ಕಾರ್ಯ ಕ್ರಮಗಳನ್ನು ಗ್ಲಾಸ್ಹೌ ಸ್ನಲ್ಲಿ ಏರ್ಪಡಿಸಲಾಗುತ್ತದೆ. ಈ ಕಾರ್ಯಕ್ರಮಗಳನ್ನು ತುಂಬಾ ಅಚ್ಚುಕಟ್ಟಾಗಿ ಏರ್ಪಡಿಸಲು ಸೂಚನೆ ನೀಡಿದರು.
ರಾಜ್ಯೋತ್ಸವ ಆಚರಣೆಗೆ ಅಗತ್ಯವಿರುವ ಸಿದ್ದತೆ ಕೈಗೊಳ್ಳಲು ವಿವಿಧ ಉಪಸಮಿತಿಗಳನ್ನು ರಚಿಸಲಾಗಿದ್ದು, ಆಯಾ ಇಲಾಖೆ ಅಧಿಕಾರಿಗಳು ಸಿದ್ದತೆ ಕೈಗೊಳ್ಳಲು ಸೂಚನೆ ನೀಡಿ, ಎಲ್ಲಾ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಕಾರ್ಯಕ್ರಮ ದಲ್ಲಿರಬೇಕೆಂದು ಸೂಚಿಸಿದರು.
ಈ ವೇಳೆ ವಿವಿಧ ಕನ್ನಡ ಪರ ಸಂಘಟನೆಗಳ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ತಮ್ಮ ಸಲಹೆಗಳನ್ನು ನೀಡಿದರು.
ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕೃಷ್ಣನಾಯ್ಕ್, ಪಾಲಿಕೆ ಆಯುಕ್ತರಾದ ರೇಣುಕಾ, ಕ.ಸಾ.ಪ ಅಧ್ಯಕ್ಷ ಬಿ.ವಾಮದೇವಪ್ಪ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಡಾ. ರಾಮಚಂದ್ರಪ್ಪ ಹಾಗೂ ಇತರರು ಇದ್ದರು.