ಜಿಲ್ಲಾದ್ಯಂತ ಆರ್ಭಟಿಸಿದ ಹಿಂಗಾರು

ಜಿಲ್ಲಾದ್ಯಂತ ಆರ್ಭಟಿಸಿದ ಹಿಂಗಾರು

ದಾವಣಗೆರೆ ತಾಲ್ಲೂಕಿನ ಮಂಡಲೂರು ಬಳಿ ಹಳ್ಳ ಉಕ್ಕಿ ಹರಿದಿದ್ದು ಸೇತುವೆ ಕೊಚ್ಚಿ ಹೋಗಿರುವುದು.

ವಾರದಲ್ಲಿ ವಾಡಿಕೆಗಿಂತ ಐದು ಪಟ್ಟು ಹೆಚ್ಚು ಮಳೆ !, ಇಂದೂ ಮುಂದುವರಿಕೆ

ದಾವಣಗೆರೆ, ಅ. 21 – ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದ್ದು, ಭಾನುವಾರ ರಾತ್ರಿ ಜಿಲ್ಲಾದ್ಯಂತ ವರುಣನ ಆರ್ಭಟವಾಗಿದೆ. ಜಿಲ್ಲೆಯಲ್ಲಿ 43.9 ಮಿ.ಮೀ.ಗಳ ಭಾರೀ ಮಳೆಯಾಗಿದೆ.

ನ್ಯಾಮತಿ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ 63.4 ಮಿ.ಮೀ. ಮಳೆಯಾಗಿದೆ. ಹೊನ್ನಾಳಿಯಲ್ಲಿ 52.6 ಮಿ.ಮೀ., ಚನ್ನಗಿರಿಯಲ್ಲಿ 50.1 ಮಿ.ಮೀ., ದಾವಣಗೆರೆಯಲ್ಲಿ 43.1 ಮಿ.ಮೀ., ಜಗಳೂರಿನಲ್ಲಿ 31.8 ಮಿ.ಮೀ. ಹಾಗೂ ಹರಿಹರದಲ್ಲಿ 30 ಮಿ.ಮೀ. ಮಳೆಯಾಗಿದೆ.

ಹಿಂಗಾರು ಆರ್ಭಟ ಜಿಲ್ಲಾದ್ಯಂತ ಜೋರಾಗಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 112.3. ಮಿ.ಮೀ. ಮಳೆಯಾಗಿದೆ. ಕಳೆದ ವಾರದಲ್ಲಿ ವಾಡಿಕೆ ಮಳೆ ಪ್ರಮಾಣ 19.1. ಮೀ.ಮೀ. ಆಗಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.488ರಷ್ಟು ಹೆಚ್ಚು ಮಳೆಯಾಗಿದೆ.

ಅಕ್ಟೋಬರ್ ತಿಂಗಳಲ್ಲಿ ಜಿಲ್ಲೆಯ ವಾಡಿಕೆ ಮಳೆ ಪ್ರಮಾಣ 84.5 ಮಿ.ಮೀ. ಆಗಿದೆ. ವಾಸ್ತವಿಕವಾಗಿ 241.4 ಮಿ.ಮೀ. ಮಳೆಯಾಗಿದೆ. ಜಿಲ್ಲೆಯಲ್ಲಿ ಇದುವರೆಗೂ ವಾಡಿಕೆಗಿಂತ ಶೇ.186ರಷ್ಟು ಹೆಚ್ಚು ಮಳೆಯಾಗಿದೆ.

ಧಾರಾಕಾರ ಮಳೆಯಿಂದಾಗಿ ಹಲವು ಮನೆಗಳು ಕುಸಿದಿದ್ದು, 39.30 ಲಕ್ಷ ರೂ.ಗಳ ನಷ್ಟವಾಗಿದೆ. ಜಿಲ್ಲೆಯಲ್ಲಿ 10 ಪಕ್ಕಾ ಮನೆಗಳಿಗೆ ತೀವ್ರ ಹಾಗೂ 25 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 5 ಕಚ್ಚಾ ಮನೆಗಳಿಗೆ ತೀವ್ರ ಹಾಗೂ 10 ಕಚ್ಚಾ ಮನಗಳಿಗೆ ಭಾಗಶಃ ಹಾನಿಯಾಗಿದೆ.

ದಾವಣಗೆರೆ ತಾಲ್ಲೂಕಿನ ಮಂಡಲೂರು ಬಳಿ ಹಳ್ಳ ಉಕ್ಕಿ ಹರಿದಿದ್ದು ಸೇತುವೆ ಕೊಚ್ಚಿ ಹೋಗಿದೆ. ಇದರಿಂದಾಗಿ ಮಂಡಲೂರು, ಗೊಲ್ಲರಹಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸಂಪರ್ಕ ಕಡಿತವಾಗಿತ್ತು. ಕುರ್ಕಿ ಬಳಿಯ ಅಂಡರ್‌ಪಾಸ್‌ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಶಾಲೆಗೆ ತೆರಳುತ್ತಿದ್ದ ಮಕ್ಕಳ ವಾಹನವೊಂದು ಸಿಲುಕಿತ್ತು. ಟ್ರ್ಯಾಕ್ಟರ್ ಮೂಲಕ ಈ ವಾಹನವನ್ನು ಎಳೆದು ಹೊರ ತರಲಾಯಿತು.

ಹೊನ್ನಾಳಿ – ಚೀಲೂರು – ಶಿವಮೊಗ್ಗ ರಸ್ತೆ ಮಳೆ ನೀರಿನಿಂದ ಜಲಾವೃತವಾಗಿತ್ತು. ನ್ಯಾಮತಿ ತಾಲ್ಲೂಕಿನ ಗೋವಿನಕೋವಿ ಗ್ರಾಮ ನೀರು ನುಗ್ಗಿದ ಸಮಸ್ಯೆ ಎದುರಿಸಬೇಕಾಯಿತು. ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿಯ ಹಲವು ಮನೆಗಳಿಗೆ ನೀರು ನುಗ್ಗಿದೆ.

error: Content is protected !!