ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕಿನಿಂದ ವೀರೇಶ್ವರ ಪುಣ್ಯಾಶ್ರಮಕ್ಕೆ 5 ಲಕ್ಷ ರೂ. ದೇಣಿಗೆ

ದಾವಣಗೆರೆ – ಹರಿಹರ ಅರ್ಬನ್ ಬ್ಯಾಂಕಿನಿಂದ  ವೀರೇಶ್ವರ ಪುಣ್ಯಾಶ್ರಮಕ್ಕೆ 5 ಲಕ್ಷ ರೂ. ದೇಣಿಗೆ

ದಾವಣಗೆರೆ, ಅ.20- ಇಲ್ಲಿನ ಬಾಡಾ ಕ್ರಾಸ್‌ನಲ್ಲಿನ ಶ್ರೀ ಗುರು ಪುಟ್ಟರಾಜ ನಗರದಲ್ಲಿ ಲಿಂ. ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರು ಸ್ಥಾಪಿಸಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಐದು ಲಕ್ಷ ರೂ.ಗಳ ದೇಣಿಗೆ ನೀಡಿದೆ.

ಶ್ರೀ ವೀರೇಶ್ವರ ಪುಣ್ಯಾಶ್ರಮವು ವಿದ್ಯಾಭ್ಯಾಸ ಮತ್ತು ಊಟ – ವಸತಿ ನೀಡುವುದರ ಮೂಲಕ ಅಂಧ ಮಕ್ಕಳನ್ನು ಪೋಷಿಸುತ್ತಿದ್ದು, ಈ ಸೇವೆಯು ನಿರಂತರವಾಗಿ ನಡೆಯುತ್ತಿರಲಿ ಎಂಬ ಸದಾಶಯದ ಹಿನ್ನೆಲೆಯಲ್ಲಿ ದೇಣಿಗೆ ನೀಡಿರುವುದಾಗಿ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ತಿಳಿಸಿದೆ.

ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ತನ್ನ 50ನೇ ವರ್ಷಾಚರಣೆಯ ಸುವರ್ಣ ಮಹೋತ್ಸವ ಕಾರ್ಯಕ್ರಮವನ್ನು ಕಳೆದ ವಾರ ನಗರದ ತ್ರಿಶೂಲ್ ಕಲಾಭವನದಲ್ಲಿ ನಡೆಸಿದ ಸಂದರ್ಭದಲ್ಲಿ ಬ್ಯಾಂಕಿನ ಸುವರ್ಣ ಮಹೋತ್ಸವದ ಸವಿನೆನಪಿಗಾಗಿ ದೇಣಿಗೆ ಸಮರ್ಪಿಸಲಾಯಿತು.

ಶ್ರೀ ಉಜ್ಜಯಿನಿ ಜಗದ್ಗುರುಗಳ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಯೂ ಆಗಿರುವ ಕೇಂದ್ರ ಸರ್ಕಾರದ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಬ್ಯಾಂಕಿನ ಪರವಾಗಿ ಶ್ರೀ ವೀರೇಶ್ವರ ಪುಣ್ಯಾಶ್ರಮಕ್ಕೆ ದೇಣಿಗೆಯ ಚೆಕ್ ಅನ್ನು ಶ್ರೀ  ಗುರು ಪಂ. ಪಂಚಾಕ್ಷರ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ಲೆಕ್ಕ ಪರಿಶೋಧಕ ಅಥಣಿ ಎಸ್. ವೀರಣ್ಣ ಅವರಿಗೆ ಹಸ್ತಾಂತರಿಸಿದರು.

ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಆಡಳಿತ ಮಂಡಳಿ ಅಧ್ಯಕ್ಷ ಎನ್. ಎ. ಮುರುಗೇಶ್, ಶ್ರೀ  ಗುರು ಪಂ. ಪಂಚಾಕ್ಷರ ಗವಾಯಿಗಳವರ ಅಂಧರ ಶಿಕ್ಷಣ ಸಮಿತಿ ಕಾರ್ಯದರ್ಶಿ ಕರಿಬಸಪ್ಪ, ನಿರ್ದೇಶಕ ಎಸ್.ಕೆ. ವೀರಣ್ಣ, ಉಪಾಧ್ಯಕ್ಷ ಸಿದ್ದಲಿಂಗೇಶ್, ಹಿರಿಯ ಸಾಹಿತಿ ಬಾ. ಮ. ಬಸವರಾಜಯ್ಯ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಅಂಧ ಮಕ್ಕಳ ಕಲ್ಯಾಣಭಿವೃದ್ಧಿಗೆ 5 ಲಕ್ಷ ರೂ. ದೇಣಿಗೆ ನೀಡಿರುವ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಎನ್. ಎ. ಮುರುಗೇಶ್ ಮತ್ತು ಆಡಳಿತ ಮಂಡಳಿ ಸದಸ್ಯ ರಿಗೆ ಶ್ರೀ  ಗುರು ಪಂ. ಪಂಚಾಕ್ಷರ ಗವಾಯಿಗಳ ವರ ಅಂಧರ ಶಿಕ್ಷಣ ಸಮಿತಿ ಗೌರವಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ಅಧ್ಯಕ್ಷ ಅಥಣಿ ವೀರಣ್ಣ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.

error: Content is protected !!