ಪೊಲೀಸರಿಗೆ ಸಹಕರಿಸುವುದು ಸಮಾಜದ ಜವಾಬ್ದಾರಿ

ಪೊಲೀಸರಿಗೆ ಸಹಕರಿಸುವುದು ಸಮಾಜದ ಜವಾಬ್ದಾರಿ

ಪೊಲೀಸ್ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಸುರೇಶ್ ಬಿ. ಇಟ್ನಾಳ್

ದಾವಣಗೆರೆ, ಅ. 21 – ಸಮಾಜ ದಲ್ಲಿ ಶಾಂತಿ ಹಾಗೂ ನೆಮ್ಮದಿ ಯಷ್ಟೇ ಅಲ್ಲದೇ ಅಭಿವೃದ್ಧಿಗೂ ಪೊಲೀಸರು ಕೊಡುಗೆ ನೀಡುತ್ತಿದ್ದಾರೆ. ಪೊಲೀಸರಿಗೆ ಸಹಕಾರ ನೀಡುವುದು ಸಮಾಜದ ಜವಾಬ್ದಾರಿ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸುರೇಶ್ ಬಿ. ಇಟ್ನಾಳ್ ತಿಳಿಸಿದರು.

ನಗರದ ಜಿಲ್ಲಾ ಪೊಲೀಸ್ ಕವಾಯತು ಮೈದಾನದಲ್ಲಿ ಇಂದು ಆಯೋಜಿಸಲಾಗಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪೊಲೀಸರು ತಮ್ಮ ವೈಯಕ್ತಿಕ ಜೀವನವನ್ನು ಬದಿಗೊತ್ತಿ ಸಮಾಜ ದಲ್ಲಿ ಶಾಂತಿ ಹಾಗೂ ನೆಮ್ಮದಿ ನೆಲೆಗೊಳಿಸಲು ಕಾರ್ಯನಿರ್ವಹಿಸುತ್ತಿದ್ದಾರೆ. ಪೊಲೀಸರು ಸಮಾಜದಲ್ಲಿ ಶಾಂತಿ ನೆಲೆಗೊಳಿಸಿ ದಾಗ ಮಾತ್ರ ಆರ್ಥಿಕ ಬೆಳವಣಿಗೆ ಸಾಧ್ಯ ಎಂದರು. ಕರ್ನಾಟಕ ಹಾಗೂ ದಾವಣಗೆರೆಯಲ್ಲಿ ಪೊಲೀಸರಿಂದ ಉತ್ತಮ ವಾತಾವರಣ ನೆಲೆಗೊಳಿಸಲಾ ಅಗಿದೆ. ಇದರಿಂದ ಉದ್ಯಮಗಳು ಹಾಗೂ ಕೈಗಾರಿಕಗಳಿಗೆ ಉತ್ತೇಜನ ದೊರೆತಿದೆ ಹಾಗೂ ಉದ್ಯೋಗಾವಕಾಶಗಳಲ್ಲಿ ಹೆಚ್ಚಳವಾಗಿದೆ ಎಂದು ಇಟ್ನಾಳ್ ಹೇಳಿದರು.

ಚುನಾವಣೆ, ವಿಕೋಪ ಮುಂತಾದ ಸಮಯಗಳಲ್ಲಿ ಪೊಲೀಸರು ಜಿಲ್ಲಾಡಳಿತದ ಜೊತೆ ಸಮನ್ವಯ ಹಾಗೂ ಸಹಕಾರದಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಹಬ್ಬಗಳ ದಿನಗಳಲ್ಲಿ ಪೊಲೀಸರು ಬೀದಿಗಳಲ್ಲಿ ನಿಂತು ರಕ್ಷಣಾ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.

ಒಂದೆಡೆ ಪೊಲೀಸರು ಶಾಂತಿಗಾಗಿ ಪರಿಶ್ರಮಿಸುತ್ತಿ ದ್ದರೆ, ಮತ್ತೊಂದೆಡೆ ಕೆಲವರು ಸಾಮಾಜಿಕ ಮಾಧ್ಯಮ ಗಳಲ್ಲಿ ಪ್ರಚೋದನಕಾರಿ ವದಂತಿ ಹರಡಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ವಿಷಾದಿಸಿದರು.

ಪೊಲೀಸರಿಗೆ ಸಹಕಾರ ನೀಡು ವುದು ಸಮಾಜದ ಜವಾಬ್ದಾರಿಯಾ ಗಿದೆ. ಮಾದಕ ಪಿಡುಗು ನಿವಾರಣೆ ಹೋರಾಟದಲ್ಲಿ ಪೊಲೀಸರಿಗೆ ಸಮಾಜದ ಜನತೆ ಸಹಕರಿಸಬೇಕು ಎಂದವರು ಕರೆ ನೀಡಿದರು.

ಪೊಲೀಸ್ ಹುತಾತ್ಮರ ನಾಮಸ್ಮರಣೆ ಮಾಡಿ ಮಾತನಾಡಿದ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, 1959ರ ಅಕ್ಟೋಬರ್ 21ರಂದು ಚೀನಾ ವಿರುದ್ಧದ ಹೋರಾಟದಲ್ಲಿ ಸಿ.ಆರ್.ಪಿ.ಎಫ್.ನ ಜವಾನರು ತೋರಿದ ದಿಟ್ಟತನ ಹಾಗೂ ಬಲಿದಾನ ಸ್ಮರಿಸಿ ಪ್ರತಿ ವರ್ಷ ಪೊಲೀಸ್ ಹುತಾತ್ಮರ ದಿನ ಆಚರಿಸಲಾಗುತ್ತಿದೆ. ಈ ವರ್ಷ ದೇಶದಲ್ಲಿ ಕರ್ತವ್ಯ ಪಾಲನೆಯಲ್ಲಿ 216 ಪೊಲೀಸರು ವೀರ ಮರಣ ಹೊಂದಿದ್ದಾರೆ. ಇವರಲ್ಲಿ ಐವರು ರಾಜ್ಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯಾಗಿದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸುವ ಮೂಲಕ ಹುತಾತ್ಮರಿಗೆ ಗೌರವ ವಂದನೆ ನೆರವೇರಿಸಲಾಯಿತು. 

ಐ.ಜಿ.ಪಿ. ಬಿ. ರಮೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆ ಮೇಲೆ ಎಎಸ್‌ಪಿ ವಿಜಯ್ ಕುಮಾರ್ ಸಂತೋಷ್ ಉಪಸ್ಥಿತರಿದ್ದರು.

error: Content is protected !!