ಜಗಳೂರು, ಅ.18- ತಾಲ್ಲೂಕಿನ ಹಿರೇಮಲ್ಲನಹೊಳೆ ಗ್ರಾಮದ ಕೆರೆ ಕೋಡಿ ಬಿದ್ದಿದ್ದು, ಕೆರೆಯಂಚಿನ ಮನೆಗಳಿಗೆ ನೀರು ನುಗ್ಗಿ ಕೆಲ ಕುಟುಂಬಗಳು ತಾತ್ಕಾಲಿಕವಾಗಿ ಕಾಳಜಿ ಕೇಂದ್ರದಲ್ಲಿ ಆಸರೆ ಪಡೆದಿವೆ. ಇತ್ತ ಕೆರೆ ಅಚ್ಚುಕಟ್ಟು ಪ್ರದೇಶದ ಹಿರೇಮಲ್ಲನಹೊಳೆ, ಗೊಲ್ಲರಹಟ್ಟಿ , ಹಾಲೇಹಳ್ಳಿ, ತಾಯಿಟೋಣಿ ಗ್ರಾಮದ ಮುಖಂಡರು ಸಂಭ್ರಮದಿಂದ ಮೆರವಣಿಗೆ ಮೂಲಕ ಸಾಗಿ ಗಂಗಾ ಮಾತೆಗೆ ಸರುಗ ಮಾಡುವ ಮೂಲಕ ಶಾಂತಿ ಕೋರಿದರು.
ಗೊಲ್ಲರಹಟ್ಟಿ ಗ್ರಾಮದವರು ಉರುಮೆ ತಾಳ ಮೇಳದೊಂದಿ ಹೆಜ್ಜೆ ಹಾಕುತ್ತಾ ಸಾಗಿದರೆ, ಹಿರೇಮಲ್ಲ ನಹೊಳೆ ಗ್ರಾಮದವರು ಸಹ ಗೌಡ್ರು ಮನೆತನದಿಂದ ಬಲೆ ಅನ್ನ ಪೂಜೆ ಮಾಡಿ ಮಜಾಲ್ಸಿಯೊಂದಿಗೆ ಹೆಜ್ಜೆ ಹಾಕುತ್ತಾ ಕೆರೆ ಏರಿಗೆ ಬಂದು ಮೊದಲ ಪೂಜೆ ಮಾಡಿ ಶಾಂತಿ ಕೋರಿ ಒಬ್ಬರಿಗೊಬ್ಬರು ನೀರು ಚಿಮ್ಮಿಸುವ ಮೂಲಕ ಸಂತಸದಿ ಕುಣಿದು ಕುಪ್ಪಳಿಸಿದರು.
ಹಿರೇಮಲ್ಲನಹೊಳೆ ಗ್ರಾಮದ ಹಿರಿಯ ಮುಖಂಡರಾದ ಚನ್ನಬಸವನಗೌಡ್ರು ಮಾತನಾಡಿ, ಹಲವು ದಶಕಗಳಿಂದ ಕೆರೆಗೆ ನೀರು ಬಂದಿರಲಿಲ್ಲ. ಕೆರೆ ಕೋಡಿ ಬೀಳುವುದು ಕನಸಿನ ಮಾತಾಗಿತ್ತು. ಈ ವರ್ಷ ವರುಣನ ಕೃಪೆಯಿಂದ ಕೆರೆ ಕೋಡಿ ಬಿದ್ದಿದೆ. ಗ್ರಾಮದ ಸಂಪ್ರದಾಯದಂತೆ ಕೆರೆ ಅಚ್ಚುಕಟ್ಟು ಪ್ರದೇಶದ ಎಲ್ಲಾ ಗ್ರಾಮಸ್ಥರು ಸೇರಿ ಪೂಜೆ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲನಗೌಡ್ರು, ಗ್ರಾ.ಪಂ.ಮಾಜಿ ಉಪಾಧ್ಯಕ್ಷ ಮಂಜಣ್ಣ, ಗ್ರಾ.ಪಂ. ಸದಸ್ಯರಾದ ರಜೀಯಾಬಿ, ಸುರೇಶ್, ಮಾಜಿ ಸದಸ್ಯ ಕೃಷ್ಣಾರೆಡ್ಡಿ, ವೆಂಕಟೇಶಪ್ಪ, ಗೋಣೆಪ್ಪರ ರಾಜಣ್ಣ,
ಕೆಂಚಪ್ಪ, ಬಂಡಿ ಹನುಮಣ್ಣ, ತಾಳಕೇರಿ ಮಂಜಣ್ಣ, ಬಾಣೇಶ್, ಧನ್ಯಕುಮಾರ್, ಹಾಲೇಹಳ್ಳಿ ಮಹಾಲಿಂಗಪ್ಪ, ಗೊಲ್ಲರಹಟ್ಟಿ ಜಿ.ಆರ್.ಇಂದ್ರೇಶ್, ಶಿವಣ್ಣ, ಮಂಡಜ್ಜರ ಶಿವಣ್ಣ, ಎ.ಎಸ್.ತಿಪ್ಪೇಸ್ವಾಮಿ, ಮಡಿವಾಳ ರಾಜಪ್ಪ, ತಳವಾರ ರಾಜಪ್ಪ, ಎಸ್.ರವಿ, ಕೃಷ್ಣಪ್ಪ, ಚನ್ನಯ್ಯ, ಜನಾರ್ದನ, ಅಶ್ವತ್ಥರೆಡ್ಡಿ, ಹೆಚ್.ಆರ್ ರೇವಣ್ಣ, ಇ.ಮಾಂತೇಶ್ ಸೇರಿದಂತೆ ವಿವಿಧ ಸಮಾಜದಗಳ ಮುಖಂಡರು ಮಹಿಳೆಯರು ಭಾಗವಹಿಸಿದ್ದರು.