ಪ್ರಗತಿಪರ ಬರಹಗಾರರ ಒಕ್ಕೂಟ ಮತ್ತು ಚಿಂತನ ಪ್ರತಿಷ್ಠಾನದ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಬಾ.ಮ. ಬಸವರಾಜಯ್ಯ
ಹರಿಹರ, ಅ.21- ಹಿರಿಯ ಸಾಹಿತಿ ಶ್ರೀಮತಿ ಲಲಿತಮ್ಮ ಡಾ. ಚಂದ್ರಶೇಖರ್ ಅವರ ಜೀವನ ಸಾಹಿತ್ಯ ಕ್ಷೇತ್ರಕ್ಕೆ ಮಾರ್ಗದರ್ಶನ ಎಂದು ಹಿರಿಯ ಸಾಹಿತಿ ಬಾ.ಮ.ಬಸವರಾಜಯ್ಯ ಹೇಳಿದರು.
ಇಲ್ಲಿನ ಶ್ರೀ ಹರಿಹರೇಶ್ವರ ಸಭಾಭವನದಲ್ಲಿ ಪ್ರಗತಿಪರ ಬರಹಗಾರರ ಒಕ್ಕೂಟ ಮತ್ತು ಚಿಂತನ ಪ್ರತಿಷ್ಠಾನ ಭಾನುವಾರ ಹಮ್ಮಿಕೊಂಡಿದ್ದ ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್ ಅವರ 93ನೇ ಜನ್ಮ ದಿನಾಚರಣೆ ಪ್ರಯುಕ್ತ ನೀಡಲಾದ ಶ್ರೀಮತಿ ಲಲಿತಮ್ಮ ಡಾ.ಚಂದ್ರಶೇಖರ್ ಜೀವಮಾನ ಸಾಧನೆ 2024 ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು.
ಲಲಿತಮ್ಮ ಅವರು ಕಳೆದ 7ದಶಕಗಳಿಂದ ದಾವಣಗೆರೆ ಜಿಲ್ಲೆಯ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಓರ್ವ ಗೃಹಿಣಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ಇಷ್ಟೊಂದು ದೀರ್ಘಕಾಲ ಸೇವೆ ಮಾಡಿರುವುದು ನಿಜಕ್ಕೂ ಅಪರೂಪದ ಸಂಗತಿ. ಇವರ ಜೀವನವೇ ಇಂದಿನ ಉದಯೋನ್ಮುಖ ಬರಹಗಾರರಿಗೆ ಸ್ಫೂರ್ತಿ ಎಂದು ತಿಳಿಸಿದರು.
ಲಲಿತಮ್ಮ ಅವರು ನನಗೆ ಸಾಹಿತ್ಯ, ರಂಗಭೂಮಿ ಹಾಗೂ ಇನ್ನಿತರೆ ಕ್ಷೇತ್ರಗಳಲ್ಲಿ ಸೇವೆ ಮಾಡಲು ಸದಾ ಮಾರ್ಗದರ್ಶನ ಮಾಡಿದ್ದಾರೆ. ಈ ಕಾರಣದಿಂದಲೇ ಮೊಟ್ಟಮೊದಲ ಬಾರಿಗೆ ದಾವಣಗೆರೆ ಜಿಲ್ಲೆಯ ಸಾಹಿತ್ಯ ಕ್ಷೇತ್ರದ ಮೇರು ವ್ಯಕ್ತಿತ್ವದ ಲಲಿತಮ್ಮನವರನ್ನು ದೊಡ್ಡವ್ವ ಎಂದೂ, ಟಿ.ಗಿರಿಜಾ ಅವರನ್ನು ಸಣ್ಣವ್ವ ಎಂದು ಸಂಬೋ ಧಿಸುವ ಸೌಭಾಗ್ಯ ನನ್ನದಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದ ಹರಿಹರದ ಸ್ವಾಮಿ ವಿವೇಕಾನಂದ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಶ್ರೀ ಶಾರದೇಶಾನಂದಜೀ ಮಹಾರಾಜ್ ಮಾತನಾಡಿ, ಒಂದು ಊರಿನ ಸಂಪತ್ತು ಕೇವಲ ಅಲ್ಲಿರುವ ಭೌತಿಕ ವಸ್ತುಗಳಿಂದ ಅಳೆಯುವುದಕ್ಕೆ ಸಾಧ್ಯವಿಲ್ಲ. ಅಳೆಯುವುದಾದರೆ ಬೌದ್ಧಿಕ ಸಂಪತ್ತಿನಿಂದ ಮಾತ್ರ ಸಾಧ್ಯ. ಇದನ್ನು ನಮಗೆ ತಿಳಿಸಿಕೊಟ್ಟ ಸ್ವಾಮಿ ವಿವೇಕಾನಂದರು ಆದರ್ಶಪ್ರಾಯ. ಇವರ ಹೆಜ್ಜೆಯ ಜಾಡಿನಲ್ಲಿಯೇ ತಮ್ಮ ಜೀವನವನ್ನು ಸಾರ್ಥಕವಾಗಿಸಿಕೊಂಡು ಈಗ ತಮ್ಮ 93ನೇ ಜನ್ಮದಿನವನ್ನು ಈ ಸಾಹಿತ್ಯ ಪರಿಸರದಲ್ಲಿ ಆಚರಿಸಿಕೊಳ್ಳುತ್ತಿರುವ ಲಲಿತಮ್ಮ. ಡಾ.ಚಂದ್ರಶೇಖರ್ ಇವರ ಜೀವನ ಅನನ್ಯ ಎಂದು ತಿಳಿಸಿ ಶುಭ ಕೋರಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಪ್ರೊ.ಸಿ.ವಿ.ಪಾಟೀಲ್ ಮಾತನಾಡಿ, ಲಲಿತಮ್ಮ ಅವರು ತಮ್ಮ ಜೀವನದುದ್ದಕ್ಕೂ ಬರಹಗಾರರು, ಕವಿಗಳಿಗೆ ಪ್ರೋತ್ಸಾಹ ಮಾಡುತ್ತಾ ಬಂದಿದ್ದಾರೆ ಎಂದು ಶ್ಲ್ಯಾಘಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ಬಿ.ವಾಮದೇವಪ್ಪ ಅವರು ಲಲಿತಮ್ಮ ಅವರು ಜಿಲ್ಲೆಯ ಸಾರಸ್ವತ ಲೋಕಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಇವರ ಸಾಧನೆಯೇ ನಮ್ಮೆಲ್ಲರಿಗೆ ಆದರ್ಶವಾಗಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದ ಹಿರಿಯ ಪತ್ರಕರ್ತ ಬಿ.ಎನ್.ಮಲ್ಲೇಶ್, ಕವಿಯಾದವನಿಗೆ ಸದಾ ಅಂತಃಕರಣ ಮಿಡಿಯುತ್ತಿರಬೇಕು. ತನ್ನ ಸುತ್ತಮುತ್ತಲೂ ಏನಾಗುತ್ತಿದೆ ಎನ್ನುವಂತಹ ಅರಿವಿರಬೇಕು. ನೋವು, ದುಃಖ, ಕಷ್ಟ, ಸಾಮಾಜಿಕ ಕಳಕಳಿ ಜಾಗೃತವಾಗಿ ತಮ್ಮ ಬರಹಗಳಲ್ಲಿ ವ್ಯಕ್ತವಾಗಬೇಕು. ಆಗ ಮಾತ್ರ ಒಬ್ಬ ಯಶಸ್ವಿ ಕವಿಯಾ ಗಬಲ್ಲ. ಪಕ್ಕದಲ್ಲಿ ಒಬ್ಬನು ಸಂಕಷ್ಟ ದಲ್ಲಿದ್ದರೂ ಅದನ್ನು ನೋಡಿಯೂ ನೋಡದಂತೆ ಇರುವುದು ಒಬ್ಬ ಕವಿಯ ಲಕ್ಷಣವಲ್ಲ. ಪ್ರಕೃತಿಯಲ್ಲಿ ಆಗುತ್ತಿರುವ ವಿಕೋಪಗಳೂ ಕೂಡಾ ಒಬ್ಬ ಸ್ಪಂದನಾಶೀಲ ಕವಿಗೆ ವಸ್ತುವಾಗಬೇಕು ಎಂದು ತಿಳಿಸಿ ಈ ನಿಟ್ಟಿನಲ್ಲಿ ಉದಯೋನ್ಮುಖ ಕವಿಗಳು ಸಾಗಬೇಕಿದೆ ಎಂದು ಕಿವಿಮಾತು ಹೇಳಿದರು.
ಒಕ್ಕೂಟದ ಗೌರವಾಧ್ಯಕ್ಷ ಹೆಚ್.ಕೆ.ಕೊಟ್ರಪ್ಪನವರು ಹೊಸ ಸಮಿತಿ ಸದಸ್ಯರನ್ನು ಸಭೆಗೆ ಪರಿಚಯಿಸಿದರು.
ಕಾರ್ಯಕ್ರಮದಲ್ಲಿ ಸಮಾಜಸೇವಕ ಗೋವಿಂದರೆಡ್ಡಿ, ಪ್ರಶಸ್ತಿ ಪ್ರಾಯೋಜಕರಾದ ಶ್ರೀಮತಿ ವಸಂತಿ ಫ್ರಾನ್ಸಿಸ್, ಒಕ್ಕೂಟದ ಅಧ್ಯಕ್ಷ ಸುಬ್ರಹ್ಮಣ್ಯ ನಾಡಿಗೇರ್ ಉಪಸ್ಥಿತರಿದ್ದರು.
ಒಕ್ಕೂಟದ ಕಾರ್ಯದರ್ಶಿ ಡಾ.ಡಿ.ಫ್ರಾನ್ಸಿಸ್ ಪ್ರಾಸ್ತಾವಿಕವಾಗಿ ನುಡಿದರು. ಸ್ವಾಗತ ಶ್ರೀಮತಿ ಗಾಯತ್ರಿ, ಶ್ರೀಮತಿ ನಾಗರತ್ನ ಮತ್ತು ಸೌಮ್ಯ ಪ್ರಾರ್ಥಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ ಉಷಾ ನೆರವೇರಿಸಿದರು. ಮಂಜುನಾಥ ಅಗಡಿ ವಂದಿಸಿದರು.