ಜಗಳೂರು ತಾ.ನಲ್ಲಿ ತುಂಬಿ ಹರಿಯುವ ಕೆರೆಗಳು

ಜಗಳೂರು ತಾ.ನಲ್ಲಿ ತುಂಬಿ ಹರಿಯುವ ಕೆರೆಗಳು

ಜಗಳೂರು, ತುಪ್ಪದಹಳ್ಳಿ, ಸಂಗೇನಹಳ್ಳಿ, ಗಡಿಮಾಕುಂಟೆ ಹತ್ತಕ್ಕೂ ಹೆಚ್ಚು ಕೆರೆಗಳು ಕೋಡಿ 

ಜಗಳೂರು, ಅ.21- ತಾಲ್ಲೂಕಿನಾದ್ಯಂತ ಸತತವಾಗಿ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಬಹುತೇಕ ಎಲ್ಲಾ ಕೆರೆ, ಗೋಕಟ್ಟೆ, ಚೆಕ್ ಡ್ಯಾಮ್ ಗಳು ನೀರಿನಿಂದ ಕಂಗೊಳಿಸುತ್ತಿವೆ.

ಚಿಕ್ಕಮಲ್ಲನ ಹೊಳೆ ಮತ್ತು ಕಾನನ ಕಟ್ಟೆ ಗ್ರಾಮಗಳ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ನೀರಿಲ್ಲದೆ ಬತ್ತಿ ಹೋಗಿದ್ದ ಹಲವಾರು ಕೊಳವೆ ಬಾವಿಗಳಲ್ಲಿ ಅಂತರ್ಜಲ ಹೆಚ್ಚಾಗಿ ನೀರು ಚಿಮ್ಮುತ್ತಿದ್ದು, ರೈತರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ.

ಬಹುನಿರೀಕ್ಷಿತ ಮಹತ್ವಕಾಂಕ್ಷಿ 57 ಕೆರೆ ತುಂಬಿಸುವ ಯೋಜನೆ ವ್ಯಾಪ್ತಿಯ ತಾಲ್ಲೂಕಿನ 46 ಹೆಚ್ಚು ಕೆರೆಗಳು ನೀರಿನಿಂದ ತುಂಬಿ ತುಳುಕುತ್ತಿವೆ.  ತಾಲ್ಲೂಕಿನನ ಅತಿ ದೊಡ್ಡ ಕೆರೆಗಳಾದ ಜಗಳೂರು, ತುಪ್ಪದಹಳ್ಳಿ, ಗಡಿಮಾಕುಂಟೆ ಮತ್ತು ಸಂಗೇನಹಳ್ಳಿ  ಸೇರಿದಂತೆ 10ಕ್ಕೂ ಹೆಚ್ಚು ಕೆರೆಗಳು ಕೋಡಿ ಬಿದ್ದಿವೆ. ಉಳಿದಂತೆ ಹಿರೇಮಲ್ಲನಹೊಳೆ, ಗುರು ಸಿದ್ದಾಪುರ, ಹೊಸಕೆರೆ, ಅಣಬೂರು ಸೇರಿದಂತೆ ಹತ್ತಕ್ಕೂ ಹೆಚ್ಚು ಕೆರೆಗಳೂ ಸಹ ಕೋಡಿ ಬಿದ್ದಿವೆ. ಉಳಿದಂತೆ ತಾಲ್ಲೂಕಿನ ಎಲ್ಲಾ ಸಣ್ಣ ಮತ್ತು ದೊಡ್ಡ ಕೆರೆಗಳು ನೀರಿನಿಂದ ಭರ್ತಿಯಾಗಿವೆ.

 ಬಹಳ ವರ್ಷಗಳಿಂದ ನೀರಿನ ಬರ ಅನುಭವಿಸುತ್ತಿದ್ದ ಭರಮಸಮುದ್ರ ಕೆರೆ ಸೇರಿದಂತೆ ತೊರೆ ಸಾಲು ಗ್ರಾಮದ ಎಲ್ಲ ಕೆರೆಗಳು ನೀರಿನಿಂದ ತುಂಬಿ ತುಳುಕುತ್ತೇವೆ. ಹಿರೇಮಲ್ಲನಹೊಳೆ ಗ್ರಾಮದ ಈ ಭಾಗದ ಅತಿ ದೊಡ್ಡ ಹಳೆಯ ಚೆಕ್ ಡ್ಯಾಮ್  ಮತ್ತು ಆಕನೂರು ಸಮೀಪದ ಚೆಕ್ ಡ್ಯಾಮ್ ಸತತ ಒಂದು ವಾರದಿಂದ ತುಂಬಿ ಹರಿಯುತ್ತಿದೆ ಮತ್ತು ನೂತನವಾಗಿ ನಿರ್ಮಿಸಿರುವ ಸಿದ್ದಿಹಳ್ಳಿ ಬ್ರಿಡ್ಜ್ ಕಮ್ ಬ್ಯಾರೇಜ್  ಮೂಲಕ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಹೋಗುತ್ತಿದೆ. 508 ಎಕರೆ ವಿಸ್ತೀರ್ಣದ ಜಗಳೂರು ಕೆರೆ 50 ವರ್ಷಗಳನಂತರ  ತುಂಬಿ ಕೋಡಿಬಿದ್ದಿದೆ.

ರೈತರಿಗೆ ಕೋಡಿ ಭದ್ರತೆ ಆತಂಕ: ನೀರಿನಿಂದ ತುಂಬಿ ತುಳುಕುತ್ತಿರುವ ಕೆರೆಗಳಿಗೆ ಕೊಡಿಗಳ ಭದ್ರತೆಯ ಆತಂಕ ಈ ಭಾಗದ ರೈತರನ್ನು ಕಾಡುತ್ತಿದೆ. ಬಹು ದಿನಗಳ ನಂತರ ಕೆರೆಗಳಿಗೆ ಸಮರ್ಪಕವಾದ ನೀರು ಹರಿದು ಬರುತ್ತಿದ್ದು, ಕೆರೆ ಏರಿಗಳು ಮತ್ತು ಕೆರೆ ಅಂಗಳ ಜಾಲಿ ಮತ್ತು ಇತರೆ ಪೊದೆಗಳಿಂದ ತುಂಬಿವೆ. ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಕೆರೆಯ ಸ್ವಚ್ಛತೆ ಮತ್ತು ಕೋಡಿಗಳ ಅಭಿವೃದ್ಧಿ ಬಗ್ಗೆ ಯಾವುದೇ ವಾರ್ಷಿಕ ದುರಸ್ತಿ ಕಾರ್ಯಗಳನ್ನು ಕೈಗೊಳ್ಳದ ಹಿನ್ನೆಲೆಯಲ್ಲಿ ಕೆರೆಗಳ ಏರಿ ಮೇಲೆ ಜಾಲಿ ಪೊದೆಗಳು ಬೆಳೆದು ಕೆರೆಯ ಅಂದ ಕೆಡಿಸಿವೆ.

ತಾಲ್ಲೂಕಿನ ಭರಮಸಮುದ್ರ ಕೆರೆ ಮತ್ತು ನಿಬಗೂರು ಕೆರೆ ತೋಬುಗಳಲ್ಲಿ ನೀರು ಸೋರಿಕೆ ಆರಂಭವಾಗಿದ್ದು ಆ ಭಾಗದ ರೈತರ ಆತಂಕ ವ್ಯಕ್ತಪಡಿಸಿದ್ದಾರೆ. ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಕೆರೆಯ ದುರಸ್ತಿ ಕಾರ್ಯಕ್ಕೆ ಮುಂದಾಗ ಬೇಕಿದೆ.

ಸಂತಸದ ಮಧ್ಯ ಸಂಕಷ್ಟ: ತಾಲ್ಲೂಕಿನಲ್ಲಿ ಸಮರ್ಪಕವಾದ ಮಳೆಯಿಂದಾಗಿ ಕೆರೆಕಟ್ಟೆಗಳು ಬೋರ್ವೆಲ್‌ಗಳು ತುಂಬಿದ ಸಂತೋಷ ಒಂದೆಡೆಯಾದರೆ ಪ್ರಸ್ತುತ ಬೆಳೆದಿರುವ ಬೆಳೆಯನ್ನು ಕಾಪಾಡಿಕೊಳ್ಳಲು ಕಷ್ಟ ಪಡಬೇಕಾಗಿದೆ.  ಸತತ ಮಳೆಯಿಂದಾಗಿ ಹೊಲದಲ್ಲಿ ನೀರು ನಿಂತಿದ್ದು ಕಟಾವಿಗೆ ಬಂದಿರುವ ಸಾವಿರಾರು ಎಕರೆ ಮೆಕ್ಕೆಜೋಳ, ಈರುಳ್ಳಿ, ಶೇಂಗಾ, ರಾಗಿ, ಹತ್ತಿ  ಮುಂತಾದ ಕೊಯ್ಲಿಗೆ ಬಂದಿರುವ  ಫಸಲನ್ನು ಕಟಾವು ಮಾಡಿಕೊಳ್ಳದ ಪರಿಸ್ಥಿತಿಯಿಂದಾಗಿ ತೀವ್ರ ಸಂಕಷ್ಟಕ್ಕಿಡಾಗಿದ್ದಾರೆ.

ಕಟಾವಿಗೆ ಬಂದಿರುವ ಫಸಲು ಹೊಲದಲ್ಲಿ ನೀರಲ್ಲಿ ನಿಂತು ಕೊಳೆಯುವ ಪರಿಸ್ಥಿತಿ ಉಂಟಾಗಿದ್ದು ರೈತರಿಗೆ “ಕೈಗೆ ಬಂದ ತುತ್ತು ಬಾಯಿಗೆ” ಬಾರದಂತಾಗಿದೆ.

error: Content is protected !!