ಮಹಾತ್ಮರ, ಸಂತರ, ಮಹರ್ಷಿಗಳ ಜೀವನ ಚರಿತ್ರೆ ಬಹಳ ಆಶ್ಚರ್ಯಕರವಾಗಿರುವಂತೆ ಆದಿಕವಿ ಮಹರ್ಷಿ ವಾಲ್ಮೀಕಿ ಜೀವನಗಾಥೆ ಇದೆ. ಈ ಕುರಿತು ಅಧ್ಯಯನ, ಸಂಶೋಧನೆಗಳು ನಡೆಯಬೇಕಾದುದು ಅಗತ್ಯವಾಗಿದೆ. ಅವರ ಬಗ್ಗೆ ಇರುವ ಕಟ್ಟು ಕಥೆಗಳು ವೈಜ್ಞಾನಿಕವಾಗಿ ಸಮರ್ಪಕ ಮಾಹಿತಿ ನೀಡಲಾರವು. ವಾಲ್ಮೀಕಿ ಮಹರ್ಷಿಯ ಜೀವನದಲ್ಲಾದ ಪರಿವರ್ತನೆಗಳು, ‘ಮಹಾಕಾವ್ಯ’ ರಚನೆಗೆ ಪ್ರೇರಕ ಶಕ್ತಿಗಳಾದವು. ವಾಲ್ಮೀಕಿ ಎಲ್ಲಾ ಸಮುದಾಯಕ್ಕೆ ಪ್ರಿಯವಾಗುವ ಆದಿಕವಿ, ಮರೆಯದ ಮಾಣಿಕ್ಯ. ಮಹರ್ಷಿ ಯಾವುದೇ ರಾಜಾಶ್ರಯವನ್ನು ಬಯಸದೇ, ತನ್ನ ಆಶ್ರಮದಲ್ಲಿಯೇ ಅನೇಕ ಋಷಿಗಳಿಗೆ ಆಶ್ರಯ ನೀಡಿದ್ದುಂಟು. ದೇಶಾದ್ಯಂತ ಪರ್ಯಟನೆ ಮಾಡಿದ ಮಹಾನ್ ಪುರುಷ. ಅವರ ಭಕ್ತಿ ಕಾವ್ಯಕ್ಕೆ ಶಕ್ತಿಯಾಗಿದೆ.
ಮಹರ್ಷಿ ವಾಲ್ಮೀಕಿಯ ಹಿನ್ನೆಲೆ : ಕ್ಷತ್ರಿಯ ಕುಲಸ್ಥರು ನಾಡನ್ನು ತೊರೆದು ಕಾಡನ್ನು ಸೇರಿದ ಕಥೆಗಳು ಹಲವು. ಕಾಡು ಸೇರಿದವರು ಬೇಡರಾದರು. ಅವರಲ್ಲಿ ನಾಯಕತ್ವ ಗುಣಹೊಂದಿದ್ದ ‘ಪ್ರಾಚೇತಸ’ ಪತ್ನಿ ಮಾನಿಷ ಈ ದಂಪತಿಗೆ ಜನಿಸಿದ ಮಗು ರತ್ನಾಕರ. ಈತನೇ ಮುಂದೆ ಜಗದ್ವಿಖ್ಯಾತಿ ಪಡೆದ ಕವಿಯಾದ. ವಾಲ್ಮೀಕಿ ಮಹರ್ಷಿಯಾದ. ಈತನಿಗೆ ‘ಸನಾತನೆ’ ಎಂಬ ಪತ್ನಿ, ಮಕ್ಕಳು ಇದ್ದರು. ‘ರಾಮಾಯಣ’ ಮಹಾಕಾವ್ಯವನ್ನು ರಚಿಸಿ 2000 ವರ್ಷಗಳ ನಂತರವೂ ರಾಮ, ಸೀತೆ, ಲಕ್ಷ್ಮಣ, ಆಂಜನೇಯ, ಜನರ ಮನಸ್ಸಿನಲ್ಲಿ ಉಳಿಯುವ ಶಾಶ್ವತ ಕಾರ್ಯ ಮಾಡಿದ ಕೀರ್ತಿ ವಾಲ್ಮೀಕಿಯದ್ದು. ‘ರಾಮಾಯಣ ಮಹಾಕಾವ್ಯ’ ಬರೆಯದೇ ಹೋಗಿದ್ದರೆ ಹೇಗಿದ್ದಿತು? ವಾಲ್ಮೀಕಿ ರಾಮಾಯಣ ಆಧಾರವಾಗಿಟ್ಟುಕೊಂಡು ನೂರಾರು ರಾಮಾಯಣಗಳು ರಚನೆಯಾದವು. ಕುವೆಂಪು ಬರೆದದ್ದು ವಾಲ್ಮೀಕಿ ರಾಮಾಯಣ ದರ್ಶನಂ ಆಗಿದೆ.
ರಾಮಾಯಣ ಮಹಾಕಾವ್ಯ ರಚಿಸಿದ್ದು ವಾಲ್ಮೀಕಿ : ಆದಿ ಕವಿ ಮಹರ್ಷಿ ವಾಲ್ಮೀಕಿ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಲ್ಲಿ ಐದು ನೂರು ಸರ್ಗಗಳಿಂದಲೂ, ಆರು ಕಾಂಡಗಳಿಂದಲೂ ಶ್ರೀರಾಮಾಯಣ ಮಹಾಕಾವ್ಯವನ್ನು ರಚಿಸಿದ್ದು ಭಾರತೀಯರು ಹೆಮ್ಮೆ ಪಡುವ ಸಂಗತಿ. ಒಬ್ಬ ಸಾಮಾನ್ಯ ‘ವ್ಯಾಧ’ ಜೀವನದಲ್ಲಿ ಋಷಿ ಮಹಾತ್ಮ ರಿಂದ, ಧ್ಯಾನ, ತಪಸ್ಸಿನಿಂದ ಪರಿವರ್ತನೆಗೊಂಡು ‘ಮಹಾಕಾವ್ಯ ರಚನೆ’ ಒಂದೆಡೆಯಾದರೆ, ವಾಲ್ಮೀಕಿಯ ವ್ಯಕ್ತಿಗತ ಬದುಕು, ಸಾತ್ವಿಕತೆ, ಜ್ಞಾನ, ತಪಸ್ಸು ಕುರಿತಾದ ಸಂಗತಿಗಳು ಹಲವು. ವಾಲ್ಮೀಕಿ ಕಾಲದ ಬಗ್ಗೆ ಭಿನ್ನತೆಗಳಿವೆ. ಕ್ರಿ.ಪೂ 3 ರಿಂದ 5ನೇ ಶತಮಾನದಲ್ಲಿ ವಾಲ್ಮೀಕಿ ರಾಮಾಯಣ ರಚಿಸಿರಬೇ ಕೆಂಬುದು ತಜ್ಞರ ಅಭಿಪ್ರಾಯ. ರಾಮಾಯಣಕ್ಕೆ ಒಂದು ಪ್ರತ್ಯೇಕತೆ ಇದೆ. ಇದು ರಾಜರ, ರಾಜ್ಯಭಾರದ ಕಥೆಯೂ ಆಗಿರುವುದರಿಂದ ರಾಜಸತ್ತೆಯ ಏಳು-ಬೀಳುಗಳನ್ನು ಚರ್ಚೆಗಿಡುವ ಮಹತ್ವದ ಕಥನವೂ ಆಗಿದೆ.
ಮಹಾಕಾವ್ಯದಲ್ಲಿ ಸಾಹಿತ್ಯದ ಚೆಲುವು : ಮನುಷ್ಯ ಸ್ವಭಾವದ ಸಹಜ ಚಿತ್ರಣವಿದೆ. ವಿವೇಕದಿಂದ ಉತ್ತಮ ಚಾರಿತ್ರ್ಯ ನಿರ್ಮಾಣ ಹೇಗೆಂಬ ಪ್ರತಿಪಾದನೆ ಇದೆ. ಕಾವ್ಯಾಲಂಕಾರ ಒಂದು ಶಾಸ್ತ್ರವಾಗಿ ಬೆಳೆಯದಿದ್ದ ಕಾಲದಲ್ಲಿ ಕಾವ್ಯದ ಲಕ್ಷಣ ಕಾಣಲು ರಾಮಾಯಣದಲ್ಲಿ ಸಾಧ್ಯವಾಗಿದೆ. ಗಾಯನದ ಸೌಂದರ್ಯ, ಸಾಹಿತ್ಯದ ಚೆಲುವು, ಪ್ರಶಂಸೆಗೊಂಡಿದೆ. ಶ್ಲೋಕಗಳೆಲ್ಲ ಕಿರಿದಾಗಿದ್ದು ಸರಳ ರೀತಿಯಲ್ಲಿ ವಾಕ್ಯಗಳ ರಚನೆ, ಶಬ್ದ ರಚನೆ ರಮಣೀಯ. ವಾಚ್ಯಕ್ಕೆ ಮೀರಿದ ಅರ್ಥ ಸ್ವಾರಸ್ಯ, ವಾಲ್ಮೀಕಿಯ ಕಾವ್ಯ ಶಕ್ತಿಯು ಮನೋಹರವಾದದ್ದು. ‘ರಾಮಾಯಣವು’ ಶೃಂಗಾರ, ಕರುಣ, ಹಾಸ್ಯ, ರೌದ್ರ, ಭಯಾನಕ, ವೀರ, ಮೊದಲಾದ ರಸಗಳು ಇರುವಂತೆ ರಚನೆಗೊಂಡಿದೆ. ಬಾಲಕಾಂಡ, ಅಯೋದ್ಯಕಾಂಡ, ಅರಣ್ಯಕಾಂಡ, ಕಿಷ್ಕಿಂದ ಕಾಂಡ, ಸುಂದರಕಾಂಡ, ಮತ್ತು ಯುದ್ಧಕಾಂಡಗಳೆಂಬ ಆರು ಕಾಂಡಗಳನ್ನು ‘ಮಹಾಕಾವ್ಯ’ ಒಳಗೊಂಡಿದೆ.
ಸೀತಾದೇವಿಗೆ ಉಪಚಾರಗೈದ ವಾಲ್ಮೀಕಿ : ಶ್ರೀರಾಮನ ಆಜ್ಞೆಯಂತೆ ಸೀತೆ ಅಗ್ನಿ ಪ್ರವೇಶ ಮಾಡಿ, ತನ್ನ ಪಾತಿವ್ರತ್ಯವನ್ನು ರುಜುವಾತುಪಡಿಸಿದ್ದರೂ, ದಂಪತಿಗಳು ಬಹುಕಾಲ ಸುಖದಿಂದ ಇರಲಾಗಲಿಲ್ಲ. ಭದ್ರ ಎಂಬ ಅಗಸನೊಬ್ಬನ ಚಾಡಿ ಮಾತಿನಿಂದ ನೊಂದ ಶ್ರೀರಾಮ ಗರ್ಭವತಿಯಾದ ಸೀತೆಯನ್ನು ಮತ್ತೆ ಕಾಡಿಗೆ ಕಳುಹಿಸಿಬಿಟ್ಟನು. ಅರಣ್ಯದಲ್ಲಿ ಗೋಳಾಡುತ್ತಾ ಕುಳಿತ ಸೀತೆಯನ್ನು ವಾಲ್ಮೀಕಿ ಸಂತೈಸಿ, ತನ್ನ ಆಶ್ರಮಕ್ಕೆ ಕರೆತಂದು, ಋಷಿ ಪತ್ನಿಯರ ಆರೈಕೆಗೆ ಒಪ್ಪಿಸಿದನು. ಕಾಲಾನಂತರ ಸೀತೆಯು ಅವಳಿ ಪುತ್ರರಿಗೆ ಜನ್ಮವಿತ್ತಳು. ಅವರಿಗೆ ಲವ-ಕುಶರೆಂದು ವಾಲ್ಮೀಕಿ ನಾಮಕರಣ ಮಾಡಿದರು. ಶ್ರೀರಾಮನ ಧರ್ಮಪತ್ನಿ, ದಶರಥ ರಾಜನ ಸೊಸೆ, ಜನಕರಾಜನ ಮಗಳು, ನಿರ್ದೋಷಿ, ಸಾಧ್ವಿ, ಪತಿವ್ರತೆಯಾದ ಸೀತೆ ಕಾಡಿನಲ್ಲಿ ಅನುಭವಿಸಿದ ಸಂಕಷ್ಟಗಳು ಅಪಾರ. ಮಹರ್ಷಿ ವಾಲ್ಮೀಕಿಯ ಸಾಂತ್ವನ, ಆಶ್ರಮದ ಆಶ್ರಯದಿಂದ ‘ಸೀತೆ’ ಮನೋಬಲ ಪಡೆದು ಶಾಂತಳಾಗಿ ಜೀವನ ಕಳೆದಳು.
ಲವ-ಕುಶರಿಗೆ ವಿದ್ಯಾಗುರು ವಾಲ್ಮೀಕಿ : ಪರಮ ನಿರ್ಲಿಪ್ತ ಯೋಗಿ ಮಹರ್ಷಿ ವಾಲ್ಮೀಕಿ ಸೀತಾ ಮಾತೆಗೆ ಜನಿಸಿದ ಅವಳಿ ಮಕ್ಕಳಿಗೆ ಲವಕುಶ ಎಂದು ನಾಮಕರಣ ಮಾಡಿ ಅಕ್ಷರಭ್ಯಾಸ, ಉಪನಯಾನಾದಿ ಸಂಸ್ಕಾರಗಳನ್ನು ಕೊಟ್ಟು, ವೇದ ಸ್ಮೃತಿಗಳನ್ನು ಬೋಧಿಸಿ, ಧನುರ್ವಿದ್ಯೆಯಲ್ಲಿ ಪಾರಂಗತರನ್ನಾಗಿ ಮಾಡಿದನು. ರಾಮಾಯಣ ಮಹಾಕಾವ್ಯವನ್ನು ಲವ-ಕುಶರಿಂದಲೇ ಓದಿಸಿ, ಹಾಡಿಸುವ ಸುದಿನವೂ ಬಂದಿತು.
ಶ್ರೀರಾಮನಿಗೆ ಬಹುಕಾಲದ ನಂತರ ಲವ-ಕುಶರು ನಿನ್ನ ಮಕ್ಕಳೇ ಎಂದು ಪರಿಚಯಿಸಿದವರು ವಾಲ್ಮೀಕಿ. ಸೀತಾ ದೇವಿಯನ್ನು ಸುದೀರ್ಘಕಾಲ ಆರೈಕೆ ಮಾಡಿದ ತಂದೆ ಸ್ವರೂಪಿ ವಾಲ್ಮೀಕಿ. ಲವ-ಕುಶರಿಗೆ ವಿದ್ಯೆ ಕಲಿಸಿದ ಗುರು ವಾಲ್ಮೀಕಿ. ಸೀತೆಯನ್ನು ‘ವಜ್ರಾದಪಿ ಕಡೋರಾನಿ ವೃದೊನಿ ಕುಸುಮಾದಪಿ’ ಎಂಬಂತೆ ಚಿತ್ರಿಸಿ ರಾಮ-ಸೀತೆ ಮತ್ತು ಮಕ್ಕಳನ್ನು ಒಂದು ಮಾಡಿ ಪುನಃ ಅಯೋಧ್ಯೆಗೆ ಹೋಗಿ ಸುಖದಿಂದ ಬಾಳಿ ಎಂದು ಹಾರೈಸಿದವರು ಮಹರ್ಷಿ ವಾಲ್ಮೀಕಿ.
ವಾಲ್ಮೀಕಿಯ ವ್ಯಕ್ತಿತ್ವ ಅನನ್ಯವಾದುದು : ಪರಿಶುದ್ದ ಭಕ್ತಿ, ಶ್ರದ್ಧೆ, ಮನುಷ್ಯನನ್ನು ಎಷ್ಟು ಉತ್ಕಟರಾಗಿ ಸಂಸ್ಕರಿಸಬಲ್ಲದು. ಪ್ರಯತ್ನ, ಚಿಂತನೆ ಎಂಬ ಕಿರು ಹಣತೆಯನ್ನು ಬೆಳಗಿಸಿಕೊಂಡು ಆದಿಕವಿ ವಾಲ್ಮೀಕಿ ರಾಮಾಯಣವೆಂಬ ಮಹಾಕಾವ್ಯವನ್ನು ರಚಿಸಿ, ರಾಮ-ಸೀತೆಯರಷ್ಟೇ ಪೂಜ್ಯರಾಗಿ ಹೋದರು. ಮಹರ್ಷಿಯ ವಿಶ್ಲೇಷಣಾ ಸಾಮರ್ಥ್ಯ, ನಿರೂಪಣೆಯಲ್ಲಿ, ಆಯಾ ಪಾತ್ರದೊಂದಿಗೆ ಅವರ ತಾದಾತ್ಮ್ಯ, ಗುಣಪಕ್ಷಪಾತ ಇವು ಅನನ್ಯವಾದವು. ಅಡವಿಯಲ್ಲಿ ಅಧ್ಯಾತ್ಮ ಮತ್ತು ಪ್ರಕೃತಿಗಳ ಮಿಲನ, ದುಷ್ಟರ ಮೇಲೆ ಶಿಷ್ಟರ ದಿಗ್ವಿಜಯಗಳು, ಸತ್ಯದ ಸಂಗತಿಗಳು ಆಶ್ಚರ್ಯ ಮೂಡಿಸುತ್ತವೆ. ಆದಿಕವಿ ಜಗತ್ತಿಗೆ ಒಳಿತನ್ನಲ್ಲದೇ ಬೇರೆ ಏನನ್ನೂ ಬಯಸಿಲ್ಲವೆಂಬುದು ಸತ್ಯ ಸಂಗತಿಯಾಗಿದೆ. ಜಗತ್ತಿನಲ್ಲಿ ಕಷ್ಟ-ಸುಖಗಳು, ಸಂಬಂಧಗಳು, ವಿಯೋಗಗಳು ಶಾಶ್ವತವಲ್ಲ. ಸಾವು ಮತ್ತು ವಿಯೋಗ ವ್ಯಥೆಗಳೇ ಎಲ್ಲಾ ಸೌಭಾಗ್ಯಗಳ ಅಂತ್ಯ ಎಂಬ ಸಂದೇಶವನ್ನು ರಾಮಾಯಣವೆಂಬ ಮಹಾಕಾವ್ಯದ ಮೂಲಕ ವಾಲ್ಮೀಕಿ ವ್ಯಕ್ತಪಡಿಸಿರುವುದು ಅವರ ವ್ಯಕ್ತಿತ್ವಕ್ಕೆ ಮೆರಗು ನೀಡುವಂತಿದೆ. ಎಲ್ಲಿ ‘ರಾಮನೋ’, ಅಲ್ಲಿ ‘ಹನುಮನು’ ಎಂಬಂತೆ ಎಲ್ಲಿ ‘ರಾಮನೋ’ ಅಲ್ಲಿ ‘ವಾಲ್ಮೀಕಿ’ಯೂ ಇರುತ್ತಾರೆ.
ಲೋಕ ಸಂಚಾರಿಯಾದ ವಾಲ್ಮೀಕಿ ಮಹರ್ಷಿ : ಆದಿ ಕವಿ ಮಹರ್ಷಿ ವಾಲ್ಮೀಕಿ ದೇಶಾದ್ಯಂತ ಸಂಚರಿಸಿದ್ದರೆಂಬ ಮಾಹಿತಿಗಳಿವೆ. ಅವರು ತಮ್ಮ ಪತ್ನಿ ‘ಸನಾತನಿ’ ಹಾಗೂ ಶಿಷ್ಯಗಣದೊಂದಿಗೆ ಪರ್ಯಟಿಸುತ್ತಾ, ಕಾಶಿಯ ಗಂಗಾ ತೀರದಲ್ಲಿ ಅವರು ಪರ್ಣಕುಟೀರವೊಂದನ್ನು ನಿರ್ಮಿಸಿಕೊಂಡು ಅನೇಕ ದಿನಗಳು ಕಳೆದದ್ದುಂಟು. ‘ರಾಮಾಯಣ ಮಹಾಕಾವ್ಯ’ ವನ್ನು ‘ಗಾನ ಸುಧಾಮೃತವಾಗಿಸಿ’ ಜನರಿಗೆ ತಿಳಿಸುತ್ತಾ ಉಜ್ಜಯನಿಯಲ್ಲೂ ತಂಗಿದ್ದರು ಎಂಬುದಕ್ಕೆ ಪುರಾವೆಗಳಿವೆ. ರಾಮೇಶ್ವರ, ಕರ್ನಾಟಕದ ಚಿತ್ರದುರ್ಗ ಪರಿಸರದಲ್ಲಿ ಹೀಗೆ ಹಿಮಾಲಯದಿಂದ ಕನ್ಯಾಕುಮಾರಿಯವರೆಗೆ ಹಾಗೂ ದೇಶಾದ್ಯಂತ ಕೆಲವು ಸ್ಥಳಗಳಿಗೆ ಮಹರ್ಷಿ ವಾಲ್ಮೀಕಿ ತನ್ನ ಅಕ್ಷಯ ಭಕ್ತಿ ಕಾವ್ಯ ಭಂಡಾರವನ್ನು ಹಂಚುತ್ತಾ ದೇಶ ಪರ್ಯಟನೆ ಮಾಡಿದ ಕೀರ್ತಿ ವಾಲ್ಮೀಕಿಯದು.
ವಾಲ್ಮೀಕಿಯ ಐಕ್ಯ ವಲ್ಮೀಕದಲ್ಲಿ : ಋಷಿ ಮುನಿಗಳ ಸಂಸ್ಕಾರಯುತ ಮಾತುಗಳಿಂದ ಪ್ರೇರಣೆ ಪಡೆದು ಬದುಕಿನ ಕೆಟ್ಟ ಕಾರ್ಯಗಳಿಗೆ ಜಂಜಾಟಗಳಿಗೆ ವಿದಾಯ ಹೇಳಿ ಏಕಾಗ್ರತೆ, ಸಾಧನೆಗಾಗಿ ತಪಸ್ಸಿನಲ್ಲಿ ಕುಳಿತ ವಾಲ್ಮೀಕಿಯ ಸುತ್ತ ಹುತ್ತವೇ ಬೆಳೆದಿತ್ತು. ಈ ಹುತ್ತದಿಂದ ಹೊರಗೆ ಬಂದ ದಿನವೇ ಸೀಗೆ ಹುಣ್ಣಿಮೆ ಎಂಬ ಮಾಹಿತಿ ತಮಗೆಲ್ಲಾ ತಿಳಿದಿದ್ದರೂ, ವಾಲ್ಮೀಕಿಯ ಕೊನೆ ದಿನಗಳು, ದೇಶ ಪರ್ಯಟನೆ, ನಂತರ ಐದು ವರ್ಷಗಳು ತಪಸ್ಸನ್ನಾಚರಿಸಿದ ಮಾಹಿತಿಗಳಿವೆ. ತಮ್ಮ ಗ್ರಂಥ ಸಂಪತ್ತನ್ನು ‘ಭಾರದ್ವಾಜ್’ ಮುನಿಗಳಿಗೆ ಒಪ್ಪಿಸಿ, ಸೀತಾ ವನದಲ್ಲಿ ಏಕಾಂಗಿಯಾಗಲು ನಿರ್ಧರಿಸಿದರು. ಸುದೀರ್ಘ ಕಾಲ ತಪಸ್ಸು ಮಾಡಿ ಪುನಃ ವಲ್ಮೀಕದಲ್ಲಿಯೇ ಐಕ್ಯಗೊಂಡಿದ್ದು ಒಂದು ವಿಶೇಷವಾಗಿದೆ.
ವಾಲ್ಮೀಕಿ ಸಮಾಜ ಹಾಗೂ ಗುರುಗಳು : ವಾಲ್ಮೀಕಿ ಸಮಾಜವನ್ನು ನಾಯಕ, ಬೋಯ, ರಾಯ, ಪಾಳೇಗಾರ, ಬೇಡರು ಎಂದು ಕರೆಯುತ್ತಾರೆ. ಈ ಸಮಾಜದಲ್ಲಿ ಮೂರು ವಂಶಗಳಿವೆ. ಸೂರ್ಯವಂಶ ಇದರಲ್ಲಿ 13 ಗೋತ್ರಗಳು, ಚಂದ್ರವಂಶದಲ್ಲಿ 9 ಗೋತ್ರಗಳು, ನಕ್ಷತ್ರ ವಂಶದಲ್ಲಿ ವಾಲ್ಮೀಕಿ ಗೋತ್ರ ಮಾತ್ರ ಇದೆ. ಗೋತ್ರಗಳು ತಮ್ಮ ಪೂರ್ವಜರ ನಂಟು, ಸಂಬಂಧ, ಆಚಾರ-ವಿಚಾರ ತಿಳಿಸುತ್ತವೆ. 1938ರಲ್ಲಿ ಪಾವಗಡದ ರಂಗನಾಯಕರು ‘ವಾಲ್ಮೀಕಿ ವಂಶ ಪಾವನಿ’ ಎಂಬ ಕೃತಿ ರಚಿಸಿ, ಜನಾಂಗದ ಗೋತ್ರಗಳನ್ನು ದಾಖಲಿಸಿದ್ದಾರೆ. ಡಾ. ಕೃಷ್ಣಮೂರ್ತಿ ಹನೂರ್ರವರು ‘ಮ್ಯಾಸಬೇಡರ ಸಂಸ್ಕೃತಿ’ ಎಂಬ ಕೃತಿಯಲ್ಲಿ ನಾಯಕ ಜನಾಂಗದ ಸಂಬಂಧಗಳನ್ನು ವಿವರಿಸಿದ್ದಾರೆ.
ಈ ಜನಾಂಗಕ್ಕೆ ಬಳ್ಳಾರಿ ಜಿಲ್ಲೆಯ ಅಲ್ಲಿಪುರದಲ್ಲಿ ವಾಲ್ಮೀಕಿ ಗುರುಕುಲಾಶ್ರಮದ ಶ್ರೀ ಸಿದ್ದಾರ್ಥಾನಂದ ಸ್ವಾಮೀಜಿ ಪ್ರಥಮ ಗುರುಗಳಾದರು. ರೋಣ ತಾಲ್ಲೂಕಿನ ಸೂಡಿ ಗ್ರಾಮದ ಯತಿರಾಜ ಪರಮ ಹಂಸರು ಮಠ ಕಟ್ಟಿದರು. ಚಳ್ಳಕೆರೆಯ ಹಾರುವನಹಳ್ಳಿಯಲ್ಲಿ ಮಠದ ಶಾಖೆ ಆರಂಭಿಸಿದರು. 1997ರಲ್ಲಿ ಬೆಂಗಳೂರಿನಲ್ಲಿ ಕಣ್ಣಪ್ಪ ಟ್ರಸ್ಟ್ನಿಂದ ಗುರುಪೀಠ ಆರಂಭಿಸಿ, ಸತ್ಯಾನಂದ ಪುರಿ ಸ್ವಾಮಿಗಳನ್ನು ಗುರುಗಳಾಗಿ ಆಯ್ಕೆ ಮಾಡಿದರು. 1998 ರಲ್ಲಿ ಹರಿಹರ ತಾಲ್ಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಮಠ ಸ್ಥಾಪನೆಯಾಗಿ ಶ್ರೀ ಪುಣ್ಯಾನಂದ ಪುರಿ ಸ್ವಾಮಿಗಳು ನೇಮಕವಾದರು. ಅವರ ನಂತರ ಈಗ ಶ್ರೀ ಜಗದ್ಗುರು ಪ್ರಸನ್ನಾನಂದ ಸ್ವಾಮೀಜಿ ಗುರುಪೀಠದಲ್ಲಿದ್ದಾರೆ. ರಾಜ್ಯದಲ್ಲಿ ಈ ಜನಾಂಗ 60 ಲಕ್ಷಕ್ಕೂ ಅಧಿಕ ಸಂಖೆಯಲ್ಲಿದ್ದಾರೆ. ಈ ಜನಾಂಗ ಸದಾ ಸ್ಮರಿಸುವ ಮಹಾನ್ ವ್ಯಕ್ತಿಗಳೆಂದರೆ ವಾಲ್ಮೀಕಿ, ಏಕಲವ್ಯ, ಬೇಡರಕಣ್ಣಪ್ಪ, ಶಬರಿ, ಕುಮಾರರಾಮ, ಹರಿಹರ-ಬುಕ್ಕರಾಯ, ಮದಕರಿ ನಾಯಕರು, ಶಿವಪ್ಪನಾಯಕ, ಸಿಂಧೂರಲಕ್ಷ್ಮಣ, ಕೆಳದಿ ಚನ್ನಮ್ಮ, ವೆಂಕಟಪ್ಪ ನಾಯಕ, ಇಮ್ಮಡಿ ಪುಲಕೇಶಿ, ಕಂಪಿಲರಾಯರು ಮುಂತಾದವರು.
ಮಹರ್ಷಿ ವಾಲ್ಮೀಕಿ ಕುರಿತು ಸಂಶೋಧನೆ : ಒಟ್ಟಾರೆ ಆದಿಕವಿ ಮಹರ್ಷಿ ವಾಲ್ಮೀಕಿಯ ಕುರಿತಾಗಿ ನಮ್ಮ ವಿಶ್ವವಿದ್ಯಾನಿಲಯಗಳು ಅಧ್ಯಯನ ಮತ್ತು ಸಂಶೋಧನೆಗಳಿಗೆ ಮಹತ್ವ ನೀಡಿ, ವಾಲ್ಮೀಕಿಯ ನಿಜ ಜೀವನದ ಸ್ವರೂಪ, ಕಾಳಜಿಯನ್ನರಿತು ವಾಲ್ಮೀಕಿಯನ್ನು ದಂತ ಕಥೆಗಳಿಂದ ಮುಕ್ತಗೊಳಿಸಬೇಕಾಗಿದೆ. ವಾಲ್ಮೀಕಿ ಮಹರ್ಷಿಯ ವ್ಯಕ್ತಿತ್ವದ ಪರಿಚಯ ಮುಂದಿನ ಜನಾಂಗಕ್ಕೆ ವೈಜ್ಞಾನಿಕವಾಗಿ ಲಭ್ಯವಾಗಬೇಕಾಗಿದೆ. ಈ ದಿಶೆಯಲ್ಲಿ ನಾವೆಲ್ಲ ಚಿಂತನ-ಮಂಥನ ಮಾಡುವ ಸಂದರ್ಭ ಸಮಯೋಚಿತವಾಗಿದೆ ಎಂಬುದು ನನ್ನ ಆಶಯವಾಗಿದೆ.
– ಡಾ. ಗಂಗಾಧರಯ್ಯ ಹಿರೇಮಠ, ವಿಶ್ರಾಂತ ಪ್ರಾಧ್ಯಾಪಕರು, ದಾವಣಗೆರೆ. ಮೊ: 98800 93613