ತಗ್ಗು ಪ್ರದೇಶದ ಮನೆಗಳಿಗೆ ನೀರು, ಒಂದೇ ದಿನ 33.7 ಮಿ.ಮೀ. ಮಳೆ
ದಾವಣಗೆರೆ, ಅ. 17 – ಜಿಲ್ಲೆಯಲ್ಲಿ ಗುರುವಾರ 33.7 ಮಿ.ಮೀ.ಗಳ ಧಾರಾಕಾರ ಮಳೆಯಾಗಿದ್ದು, ದಾವಣಗೆರೆ ತಾಲ್ಲೂಕಿನಲ್ಲಿ ಅತಿ ಹೆಚ್ಚಿನ 59 ಮಿ.ಮೀ. ಮಳೆಯಾಗಿದೆ.
ಹರಿಹರ ತಾಲ್ಲೂಕಿನಲ್ಲಿ 40.3 ಮಿ.ಮೀ., ಜಗಳೂರಿನಲ್ಲಿ 39.8 ಮಿ.ಮೀ., ಚನ್ನಗಿರಿಯಲ್ಲಿ 20.1 ಮಿ.ಮೀ., ನ್ಯಾಮತಿಯಲ್ಲಿ 15.5 ಮಿ.ಮೀ. ಹಾಗೂ ಹೊನ್ನಾಳಿಯಲ್ಲಿ 13.3 ಮಿ.ಮೀ. ಮಳೆಯಾಗಿದೆ.
ದಾವಣಗೆರೆ ಹಾಗೂ ಹರಿಹರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಲವೆಡೆ ಅವಾಂತರ ಸೃಷ್ಟಿಯಾಗಿತ್ತು. ತಗ್ಗು ಪ್ರದೇಶಗಳಲ್ಲಿನ ಬಡಾವಣೆಗಳಲ್ಲಿ ನೀರು ನುಗ್ಗಿತ್ತು. ಹರಿಹರ ನಗರದ ಬೆಂಕಿ ನಗರ ಹಾಗೂ ಕಾಳಿದಾಸ ನಗರಗಳಲ್ಲಿ ನೀರು ನುಗ್ಗಿದ ಕಾರಣ ಜನರು ಸಂಕಷ್ಟ ಎದುರಿಸಬೇಕಾಯಿತು.
ದಾವಣಗೆರೆ ನಗರದ ಪಿಸಾಳೆ ಕಾಂಪೌಂಡ್ನ ಹಲವು ಮನೆಗಳಿಗೆ ಬೆಳಗಿನ ಜಾವ ನೀರು ನುಗ್ಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ನೀರು ತೆರವುಗೊಳಿಸಿದರು. ಈರುಳ್ಳಿ ಮಾರುಕಟ್ಟೆ ಹಾಗೂ ಭಾರತ್ ಕಾಲೋನಿ ಸೇರಿದಂತೆ ಹಲವೆಡೆ ಮಳೆ ನೀರಿನಿಂದ ಅವಾಂತರ ಸೃಷ್ಟಿಯಾಗಿತ್ತು. ಹಳೆ ಕುಂದುವಾಡ ಹಾಗೂ ದಾವಣಗೆರೆ ಸಂಪರ್ಕಿಸುವ ರಸ್ತೆ ಜಲಾವೃತವಾಗಿತ್ತು. ಮಾಗಾನಹಳ್ಳಿ ಬಳಿ ಹಳ್ಳ ತುಂಬಿ ಹರಿದು ಸಂಚಾರಕ್ಕೆ ಸಮಸ್ಯೆಯಾಗಿತ್ತು.
ಹರಿಹರದಲ್ಲಿ ಗೋಡೆ ಕುಸಿದು ಮಗುವಿಗೆ ಗಾಯ
ಹರಿಹರದಲ್ಲಿ ಮನೆ ಗೋಡೆ ಕುಸಿದ ಪರಿಣಾಮ ತೀವ್ರವಾಗಿ ಗಾಯಗೊಂಡು ಹೈಟೆಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐದು ವರ್ಷದ ಬಾಲಕಿ ಆಯೇಷಾಳನ್ನು ಭೇಟಿ ಮಾಡಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಯೋಗಕ್ಷೇಮ ವಿಚಾರಿಸಿ, ಕುಟುಂಬದವರಿಗೆ ಧೈರ್ಯ ತುಂಬಿ, ಉತ್ತಮ ಚಿಕಿತ್ಸೆಯ ಭರವಸೆ ನೀಡಿದರು.
ಹರಿಹರ, ಅ.17- ನಿನ್ನೆ ರಾತ್ರಿ ಧಾರಾಕಾರ ವಾಗಿ ಸುರಿದ ಮಳೆಯಿಂದಾಗಿ ನಗರದ ಆಶ್ರಯ ಬಡಾವಣೆ, ಬೆಂಕಿನಗರ, ಕಾಳಿದಾಸನಗರ, ಇಂದ್ರಾನಗರ, ಭೀಮನಗರ ಸೇರಿದಂತೆ ಇತರೆ ಬಡಾವಣೆಯ ಸುಮಾರು 100 ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.
ಭೀಮ ನಗರದ ಮನೆಯೊಂದರ ಗೋಡೆ ಕುಸಿದು ಗುಲಾಬ್ಜಾನ್ ಎಂಬುವರ ಐದು ವರ್ಷದ ಮಗು ಆಯಿಶಾಗೆ ಪೆಟ್ಟು ಬಿದ್ದಿದ್ದು, ಚಿಕಿತ್ಸೆಗಾಗಿ ಮಗುವನ್ನು ದಾವಣಗೆರೆ ಐಟೆಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಮಗು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದೆ ಎಂದು ವರದಿಯಾಗಿದೆ.
ಬೆಂಕಿನಗರ ಬಡಾವಣೆಯ ಪಕ್ಕದಲ್ಲಿ ಹಾದು ಹೋಗಿರುವ ಚಾನಲ್ ಮತ್ತು ರಾಜ ಕಾಲುವೆಯಲ್ಲಿ ಕಸ ಕಡ್ಡಿ ಕಟ್ಟಿಕೊಂಡು ನೀರು ಸರಾಗವಾಗಿ ಮುಂದೆ ಸಾಗದೇ ಇರುವುದರಿಂದ ಬೆಂಕಿನಗರ, ಕಾಳಿದಾಸ ನಗರ, ಇಂದ್ರಾನಗರ, ಆಶ್ರಯ ಬಡಾವಣೆ ಸೇರಿದಂತೆ, ಹಲವು ಬಡಾವಣೆಯ ಮನೆಗಳಿಗೆ ನೀರು ನುಗ್ಗಿದ್ದು, ಸ್ಥಳೀಯ ನಿವಾಸಿಗಳು ನೀರನ್ನು ಹೊರ ಹಾಕಲು ಹರ ಸಾಹಸ ಮಾಡಿದ್ದಾರೆ.
ಅಧಿಕಾರಿಗಳ ಸಹಿತ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ನಗರದಲ್ಲಿ ತಡ ರಾತ್ರಿ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅನಾಹುತಗಳು ಸಂಭವಿಸಿವೆ. ಇಲ್ಲಿನ ಚಾನೆಲ್ ಮೂಲಕ ಹಾದು ಹೋಗುವ ನೀರು ಕಟ್ಟಿಕೊಂಡು ಮನೆಗಳಿಗೆ ನುಗ್ಗಿದೆ. ಅದನ್ನು ತಡೆಯಲು ತಡೆಗೋಡೆ ನಿರ್ಮಿಸಲು ಸರ್ಕಾರ 1.5 ಕೋಟಿ ರೂ. ಹಣ ಮಂಜೂರು ಮಾಡಿದೆ. ಆದರೆ ಇದುವರೆಗೂ ಕಾಮಗಾರಿ ಮಾಡದೇ ಇರುವುದಕ್ಕೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ. ಆದಷ್ಟು ಬೇಗ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಬೇಕು, ಜೊತೆಗೆ ಗೋಡೆ ಕುಸಿದು ಗಾಯಗೊಂಡಿರುವ ಮಗುವಿಗೆ ಚಿಕಿತ್ಸೆ ವೆಚ್ಚ ಭರಿಸಬೇಕು ಮತ್ತು ತಾತ್ಕಾಲಿಕವಾಗಿ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿ ನಿರಾಶ್ರಿತ ಕುಟುಂಬದವರಿಗೆ ಊಟ ವಸತಿ ಸೌಕರ್ಯ ಒದಗಿಸಲು ತಹಶೀಲ್ದಾರ್ ಮತ್ತು ಪೌರಾಯುಕ್ತರಿಗೆ ಸೂಚಿಸಿರುವುದಾಗಿ ಶಾಸಕರು ಹೇಳಿದರು.
ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಕಳೆದ 20 ತಿಂಗಳ ಕೆಳಗೆ ನಗರಸಭೆ ವಿಶೇಷ ಅನುದಾನದಲ್ಲಿ 1.5 ಕೋಟಿ ರೂಪಾಯಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣದ ಗುತ್ತಿಗೆ ಟೆಂಡರ್ ಆಗಿದೆ. ಆದರೆ ಹಿಂದೆ ಇದ್ದಂತಹ ಅಧಿಕಾರಿಗಳ ನಿರ್ಲಕ್ಷ್ಯವೋ ಅಥವಾ ಗುತ್ತಿಗೆದಾರರ ನಿರ್ಲಕ್ಷ್ಯವೋ ಕಾಮಗಾರಿ ಆಗಿಲ್ಲ. ನಗರಸಭೆ ಸದಸ್ಯರೂ ಸಹ ಈ ಕೆಲಸವನ್ನು ಮಾಡುವುದಕ್ಕೆ ಅಧಿಕಾರಿಗಳ ಮೇಲೆ ಒತ್ತಡ ಹಾಕಿಲ್ಲ. ಈಗ ಮಳೆ ಬಂದು ಮನೆಗಳಿಗೆ ನೀರು ನುಗ್ಗಿದಾಗ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ ಎಂದು ಹೇಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರು ಬಸವರಾಜ್, ನಗರಸಭೆ ಸದಸ್ಯರಾದ ಹನುಮಂತಪ್ಪ, ಬಿ.ಅಲ್ತಾಫ್, ಆರ್.ಸಿ. ಜಾವೇದ್, ಶಾಯಿನಾ ದಾದಾಪೀರ್, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಇತರರು ಹಾಜರಿದ್ದರು.
ಹರಿಹರದಲ್ಲಿ ಧಾರಾಕಾರ ಮಳೆ; ನೂರಾರು ಮನೆಗಳಿಗೆ ನುಗ್ಗಿದ ನೀರು
ಸ್ಥಳಕ್ಕೆ ಶಾಸಕರು, ಅಧಿಕಾರಿಗಳ ಭೇಟಿ
ಮಳೆಯಿಂದ ನದಿಯಂತಾದ ರಸ್ತೆ: ನೀರಿನಲ್ಲಿ ಸಿಲುಕಿದ ಬೈಕ್ ಸವಾರ
ದಾವಣಗೆರೆ, ಅ. 17- ಭಾರೀ ಮಳೆ ನೀರಿನಿಂದ ನದಿಯಂತಾದ ರಸ್ತೆಯನ್ನು ದಾಟುತ್ತಿದ್ದ ವ್ಯಕ್ತಿ ಬೈಕ್ ಸಮೇತ ಬಿದ್ದಿರುವ ಘಟನೆ ಸಮೀಪದ ಹಳೇ ಕುಂದುವಾಡ ರಸ್ತೆಯಲ್ಲಿ ನಡೆದಿದೆ.
ಕೊಚ್ಚಿಕೊಂಡು ಚರಂಡಿ ಪಾಲಾಗುತ್ತಿದ್ದ ವ್ಯಕ್ತಿಯನ್ನು ಅಲ್ಲಿನ ಜನರು ರಕ್ಷಿಸಿದ್ದಾರೆ. ಜೀವ ಭಯದಿಂದ ವಾಹನ ಸವಾರರು ರಸ್ತೆ ದಾಟುತ್ತಿದ್ದುದು ಕಂಡು ಬಂದಿದೆ.
ಜಾಗದ ಸಮಸ್ಯೆ ಹಿನ್ನೆಲೆ ಅರ್ಧಕ್ಕೆ ನಿಂತ ಕಾಮಗಾರಿಯಿಂದಾಗಿ ಈ ರೀತಿ ಅವಘಡಗಳು ಸಂಭವಿಸುತ್ತಿವೆ ಎಂಬುದು ಜನರ ದೂರಾಗಿದೆ. ಮಹಾನಗರ ಪಾಲಿಕೆ ಈ ಬಗ್ಗೆ ಕ್ರಮ ಕೈಗೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ದಾವಣಗೆರೆ ಸಮೀಪ ಬಿ.ಕಲಪನಹಳ್ಳಿ ಬಳಿ ಹಳ್ಳ ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿರುವುದು
ಜಿಲ್ಲೆಯಲ್ಲಿ ಮಳೆಯಿಂದಾಗಿ ಮೂರು ಪಕ್ಕಾ ಮನೆಗಳಿಗೆ ತೀವ್ರ ಹಾನಿಯಾಗಿದೆ. 8 ಪಕ್ಕಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1 ಕಚ್ಚಾ ಮನೆಗೆ ತೀವ್ರ ಹಾಗೂ 12 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 1.13 ಎಕರೆ ಈರುಳ್ಳಿ ನಾಶವಾಗಿದೆ. ಒಟ್ಟಾರೆ 11.53 ಲಕ್ಷ ರೂ.ಗಳ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಜಿಲ್ಲೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಮಳೆ ಬಿರುಸು ಜೋರಾಗಿದೆ. ಜಿಲ್ಲೆಯಲ್ಲಿ ಅಕ್ಟೋಬರ್ 1ರಿಂದ 17ರವರೆಗೆ 180.3 ಮಿ.ಮೀ. ಮಳೆ ಸುರಿದಿದೆ. ವಾಡಿಕೆ ಮಳೆ ಪ್ರಮಾಣ 73.2 ಮಿ.ಮೀ. ಆಗಿದೆ. ಇದುವರೆಗೂ ವಾಡಿಕೆಗಿಂತ ಶೇ.146ರಷ್ಟು ಹೆಚ್ಚು ಮಳೆಯಾಗಿದೆ.
ಬರದ ನಾಡು ಎಂದೇ ಕರೆಯಲಾಗುವ ಜಗಳೂರು ತಾಲ್ಲೂಕಿನಲ್ಲಿ ವಾಡಿಕೆಗಿಂತ ಶೇ.251 ಪಟ್ಟು ಹೆಚ್ಚು ಮಳೆಯಾಗಿದೆ. ತಾಲ್ಲೂಕಿನಲ್ಲಿ ವಾಡಿಕೆ ಮಳೆ ಪ್ರಮಾಣ 62.2 ಮಿ.ಮೀ. ಆಗಿದ್ದರೆ, ಇದುವರೆಗೂ 218.3 ಮಿ.ಮೀ. ಮಳೆಯಾಗಿದೆ.
ಅಕ್ಟೋಬರ್ 22ರವರೆಗೂ ರಾಜ್ಯದ ಉತ್ತರ ಒಳನಾಡಿನಲ್ಲಿ ಮಳೆ ಮುಂದುವರೆಯಲಿದೆ. ನಂತರದಲ್ಲಿ ಮಳೆ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.