ಟ್ರೈನಿ ವೈದ್ಯೆಯ ಹಂತಕನಿಗೆ ಶಿಕ್ಷಿಸುವಂತೆ ಒತ್ತಾಯಿಸಿ ಕಿರಿಯ ವೈದ್ಯರ ಸತ್ಯಾಗ್ರಹ

ಟ್ರೈನಿ ವೈದ್ಯೆಯ ಹಂತಕನಿಗೆ ಶಿಕ್ಷಿಸುವಂತೆ ಒತ್ತಾಯಿಸಿ ಕಿರಿಯ ವೈದ್ಯರ ಸತ್ಯಾಗ್ರಹ

ದಾವಣಗೆರೆ, ಅ.15- ಕೊಲ್ಕೊತ್ತಾದಲ್ಲಿ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ನ್ಯಾಯ ಒದಗಿಸಬೇಕು ಹಾಗೂ ವೈದ್ಯರಿಗೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿ ನಗರದ ಐಎಂಎ ಹಾಲ್ ಮುಂಭಾಗದಲ್ಲಿ ಇಂಡಿಯಾ ಮೆಡಿಕಲ್ ಅಸೋಸಿಯೇಷನ್ ಸಹಯೋಗದಲ್ಲಿ ಕಿರಿಯ ವೈದ್ಯರು ಇಂದು ಉಪವಾಸ ಸತ್ಯಾಗ್ರಹ ನಡೆಸಿದರು.

ಐಎಂಎ ದಾವಣಗೆರೆ ಶಾಖೆಯ ಸದಸ್ಯರು, ಕಿರಿಯ ವೈದ್ಯರ ಒಕ್ಕೂಟ ಹಾಗೂ ಜೆ.ಜೆ.ಎಂ. ವೈದ್ಯಕೀಯ ಕಾಲೇಜಿನ ಮೆಡಿಕಲ್ ಸ್ಟೂಡೆಂಟ್ ನೆಟ್‌ವರ್ಕ್ ಸದಸ್ಯರು ಐ.ಎಂ.ಎ. ಆವರಣದಲ್ಲಿ ನಿರಶನದಲ್ಲಿ ಪಾಲ್ಗೊಂಡಿದ್ದರು.

ಈ ವೇಳೆ ಐಎಂಎ ಅಧ್ಯಕ್ಷ ಡಾ. ಹರ್ಷ ಮಾತನಾಡಿ, ಕೋಲ್ಕೊತ್ತದಲ್ಲಿ ಸುಮಾರು 25 ಜನ ಕಿರಿಯ ವೈದ್ಯರು 9 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಕೆಲವರು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ದರಿಂದ ಕೂಡಲೇ ಅಲ್ಲಿನ ಸರ್ಕಾರ ಕಿರಿಯ ವೈದ್ಯರ ಬೇಡಿಕೆಗೆ ಕೂಡಲೇ ಸ್ಪಂದಿಸಬೇಕು ಎಂದರು.

ಕಿರಿಯ ವೈದ್ಯ ನಿಶಾಂತ್ ವಿ. ಸಪ್ತಗಿರಿ ಮಾತನಾಡಿ, ಪಶ್ಚಿಮ ಬಂಗಾಳದ ಕರ್ತವ್ಯ ನಿರತ ಅರೆ ವೈದ್ಯೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ನಡೆದು ಬಹಳ  ದಿನ ಕಳೆದರೂ ಅಲ್ಲಿನ ಸರ್ಕಾರ ನ್ಯಾಯ ಒದಗಿಸಿಲ್ಲ ಎಂದು ದೂರಿದರು.

ಕೋಲ್ಕೊತ್ತದಲ್ಲಿ ಕಿರಿಯ ವೈದ್ಯರು ಕೈಗೊಂಡಿದ್ದ ಉಪವಾಸ ಸತ್ಯಾಗ್ರಹದಲ್ಲಿ 4 ಜನ ವೈದ್ಯರು ಐಸಿಯುಗೆ ದಾಖಲಾಗಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಅವರ ಬೇಡಿಕೆಗೆ ಸ್ಪಂದಿಸಿ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಡಾ. ಗಣೇಶ್, ಡಾ. ಮಹೇಶ್ ಸೇರಿದಂತೆ ಕಿರಿಯ ವೈದ್ಯರು ಮತ್ತು ವೈದ್ಯ ವಿದ್ಯಾರ್ಥಿಗಳಿದ್ದರು.

error: Content is protected !!