ಕೈ ಸರ್ಕಾರದಿಂದ ಗಲಭೆಕೋರರಿಗೆ ರಕ್ಷಣೆ

ಕೈ ಸರ್ಕಾರದಿಂದ ಗಲಭೆಕೋರರಿಗೆ ರಕ್ಷಣೆ

ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದ ಸರ್ಕಾರಕ್ಕೆ ಕುಮಾರಸ್ವಾಮಿ ತರಾಟೆ

ದಾವಣಗೆರೆ, ಅ. 13 – ರಾಜ್ಯ ಕಾಂಗ್ರೆಸ್ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಹಾಗೂ ಗಲಭೆಕೋರರಿಗೆ ರಕ್ಷಣೆ ನೀಡುತ್ತಿದೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತ ನಾಡಿದ ಅವರು, ಹುಬ್ಬಳ್ಳಿಯಲ್ಲಿ ಕಾನೂನು ಬಾಹಿರ ಕೃತ್ಯ ಎಸಗಿದವರು, ಅಶಾಂತಿ ಮಾಡಿದವರು ಹಾಗೂ ಗಲಭೆ ಮಾಡಿದವರ ವಿರುದ್ಧದ ಪ್ರಕರಣವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿದೆ. ಆ ಮೂಲಕ ಗಲಭೆ ಕೋರರಿಗೆ ಸರ್ಕಾರದಿಂದ ರಕ್ಷಣೆ ದೊರೆತಿದೆ ಎಂದು ಟೀಕಿಸಿದರು.

ದಸರಾ ಹಬ್ಬದ ಸಂದರ್ಭದಲ್ಲಿ ಸರ್ಕಾರದಿಂದ ಪ್ರಕಟಿಸಲಾದ ಜಾಹೀರಾತಿ ನಲ್ಲೂ ಕೀಳು ಮಟ್ಟದ ರಾಜಕೀಯ ಮಾಡಲಾ ಗುತ್ತಿದೆ. ಇದನ್ನೆಲ್ಲ ನೋಡಿ ದಾಗ ಸರ್ಕಾರಕ್ಕೆ ಉತ್ತಮ ಮಾರ್ಗದಲ್ಲಿ ನಡೆಯುವುದು ಬೇಕಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಹೇಳಿದರು. ವಿಶೇಷ ತನಿಖಾ ತಂಡದ ಮುಖ್ಯಸ್ಥ ಚಂದ್ರಶೇಖರ್ ಅವರು ದಾಖಲಿಸಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ನನ್ನ ವಿರುದ್ಧ ದಾಖಲಿಸಿರುವ ದೂರಿಗೆ ನ್ಯಾಯಾಲಯದಲ್ಲಿ ವಕೀಲರ ಮೂಲಕ ಉತ್ತರ ಕೊಡುತ್ತೇನೆ ಎಂದರು.

ನಾನು ಅಧಿಕಾರ ದುರುಪಯೋಗ ಪಡಿಸಿಕೊಂಡು ಅಧಿಕಾರಿಗಳಿಗೆ ಬೆದರಿಕೆ ಹಾಕಿದ್ದೇನೆ ಎಂದು ದೂರಲಾಗಿದೆ. ನಾನು ನನ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿಯೇ ಇಲ್ಲ. ರಾಷ್ಟ್ರಪತಿಗಳ ಪ್ರತಿನಿಧಿಯಾದ ರಾಜ್ಯಪಾಲರ ಕಚೇರಿಯ ತನಿಖೆ ಮಾಡುವ ಹಾಗೂ ಆ ಮಾಹಿತಿಯನ್ನು ಪತ್ರಿಕೆಗಳಿಗೆ ಸೋರಿಕೆ ಮಾಡಿರುವುದರ ಬಗ್ಗೆ ಮಾತನಾಡಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿದರು.

ದಾವಣಗೆರೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಕುರಿತ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ನನ್ನ ಇಲಾಖೆಗಳ ಪರಿಮಿತಿಯಲ್ಲಿ ರಾಜ್ಯಕ್ಕೆ ಕಾರ್ಖಾನೆಗಳನ್ನು ತರುವ ಪ್ರಯತ್ನ ಮಾಡುತ್ತೇನೆ ಎಂದರು.

ತಮ್ಮ ವಿರುದ್ಧ ಶಾಸಕ ಹೆಚ್.ಸಿ. ಬಾಲಕೃಷ್ಣ ಮಾಡಿರುವ ಲಂಚ ಆರೋಪಕ್ಕೆ ತಿರುಗೇಟು ನೀಡಿದ ಕುಮಾರಸ್ವಾಮಿ, ಬಾಲಕೃಷ್ಣ ಹಿನ್ನೆಲೆ ಬಗ್ಗೆ ತಿಳಿದಿದೆ. ಅವರು ಕೆಲಸ ಮಾಡದೇ 600 ಕೋಟಿ ರೂ. ಬಿಲ್ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕರೇ ಆರೋಪಿಸಿದ್ದರು. ಈ ಬಗ್ಗೆ ಸದನ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ  ಅವರನ್ನೇ ಜೊತೆಗಿಟ್ಟುಕೊಂಡಿದ್ದಾರೆ ಎಂದರು.

ನಾನು ಏನಾದರೂ ಭ್ರಷ್ಟಾಚಾರ ನಡೆಸಿದ್ದರೆ, ಸರ್ಕಾರ ಅವರದ್ದೇ ಇದೆ. ಅವರೇ ತನಿಖೆ ಮಾಡಿಸಲಿ. ಬಾಯಿ ಚಪಲಕ್ಕೆ ಆಡುವ ಮಾತುಗಳಿಗೆ ಉತ್ತರಿಸುವುದಿಲ್ಲ ಎಂದರು.

error: Content is protected !!