ಸದಸ್ಯತ್ವ ನೋಂದಣಿ, ಬೂತ್ ಸಮಿತಿ ರಚನೆ ಅಭಿಯಾನದಲ್ಲಿ ಹೆಚ್.ಡಿ. ಕುಮಾರಸ್ವಾಮಿ
ದಾವಣಗೆರೆ, ಅ.13- ಜಿಲ್ಲೆಯಲ್ಲಿ ಪಕ್ಷದ ಸಂಘಟನೆ ಪ್ರತಿ ಬೂತ್ ಮಟ್ಟದಲ್ಲಿ ಜಾತ್ಯತೀತವಾಗಿ ಆಗಬೇಕು ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಸದಸ್ಯತ್ವ ನೋಂದಣಿ ಹಾಗೂ ಬೂತ್ ಸಮಿತಿ ರಚನೆ ಅಭಿಯಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಘಟಿತ ಮನೋಭಾವನೆ ಹಾಗೂ ಸಕ್ರಿಯವಾಗಿ ಪಕ್ಷದಲ್ಲಿ ಕೆಲಸ ಮಾಡುವ ಯಾವುದೇ ಸಮಾಜದ ಯುವಕರಾಗಲೀ ಅವರಿಗೆ ರಾಜಕೀಯವಾಗಿ ಶಕ್ತಿ ತುಂಬುವ ಕಾರ್ಯವನ್ನು ಪಕ್ಷ ಮಾಡಲಿದೆ. ಹಾಗಾಗಿ ಸದಸ್ಯತ್ವ ನೋಂದಣಿ ಪ್ರಾರಂಭಿಸಿದ್ದೇವೆ ಎಂದು ಹೇಳಿದರು.
ರಾಜ್ಯದ ಅಭಿವೃದ್ಧಿಗೆ ಜಾತಿಯ ಅವಶ್ಯಕತೆ ಇಲ್ಲ. ಪಕ್ಷವೂ ಸಹ ಜಾತಿ ರಾಜಕಾರಣ ಮಾಡಿಲ್ಲ. ಈ ನಿಟ್ಟಿನಲ್ಲಿ ನಾಡಿನ ಎಲ್ಲಾ ಬಡವರಿಗೆ ಒಳಿತಾಗಲು ಜನತಾದಳದ ಅನಿವಾರ್ಯವಿದೆ ಎಂದು ತಿಳಿಸಿದರು.
ಸಿಎಂ ಸಿದ್ದರಾಮಯ್ಯ ಮೊದಲು ಜೆಡಿಎಸ್ ಪಕ್ಷದಲ್ಲಿದ್ದವರು, ಜನತಾದಳದ ಕಾರ್ಯಕರ್ತರೇ ಅವರಿಗೆ ಶಕ್ತಿ ನೀಡಿದ್ದಾರೆ ಮತ್ತು ಅನೇಕ ರಾಜಕೀಯ ನಾಯಕರುಗಳನ್ನು ಪಕ್ಷವು ಬೆಳೆಸಿದೆ. ಹಾಗಾಗಿ ಜನತಾದಳವು ನಾಯಕರನ್ನು ಸೃಷ್ಟಿ ಮಾಡುವ ಪಕ್ಷವೆಂದು ಹೆಸರು ಪಡೆದಿದೆ ಎಂದರು.
ನಾನು ಮುಖ್ಯಮಂತ್ರಿ ಆಗಿದ್ದಾಗ ಬಡವರು ಮತ್ತು ರೈತರು ಸೇರಿದಂತೆ ರಾಜ್ಯದ ಎಲ್ಲಾ ವರ್ಗದವರಿಗೂ ಅನುಕೂಲವಾಗುವ ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುವ ಜತೆಗೆ ಸಾಲ ಮನ್ನಾವನ್ನೂ ಮಾಡಿದ್ದೇನೆ ಎಂದು ಹೇಳಿದರು.
ನಾನೂ ಕುರಿ ಸಾಕಿದ್ದೇನೆ..!
ಮಾತು ಎತ್ತಿದ್ರೆ `ಕುರಿ ಕಾಯೋನು ಮುಖ್ಯಮಂತ್ರಿ ಆಗಿರುವುದು ಕೆಲವರು ಸಹಿಸುತ್ತಿಲ್ಲ’ ಎನ್ನುವ ಸಿ.ಎಂ ಸಿದ್ದರಾಮಯ್ಯನವರು, ಎಷ್ಟು ಕುರಿಗಳನ್ನು ಸಾಕಿದ್ದಾರೋ ತಿಳಿಯುತ್ತಿಲ್ಲ. ನನ್ನ ತೋಟದಲ್ಲಿ ನಾನೂ 500 ಕುರಿ ಸಾಕಿದ್ದೇನೆ ಎಂದು ಹೆಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ವಾಣಿಜ್ಯ ಕ್ಷೇತ್ರದಲ್ಲಿ ಬೆಂಗಳೂರು ನಗರಕ್ಕೆ ಸರಿಸಾಟಿಯಾಗಿರುವ ಪರ್ಯಾಯ ಜಿಲ್ಲೆಯೇ ದಾವಣಗೆರೆ.
– ಹೆಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ.
ದಾವಣಗೆರೆ ಜಿಲ್ಲೆ ಸೋಲುವ ಕ್ಷೇತ್ರವೇ ಅಲ್ಲ. ಆದರೆ ಪಕ್ಷದಲ್ಲಿನ ಒಡಕಿನಿಂದ ಸೋಲುವಂತಾಯಿತು ಅಷ್ಟೇ. ನಮ್ಮ ಪಕ್ಷದ ಕಾರ್ಯಕರ್ತರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅದು ಎಲ್ಲರಿಗೂ ಗೊತ್ತಿದೆ ಎಂದು ಸಚಿವರು ಹೇಳಿದರು.
ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಎದುರಾದಾಗ ಮಾತ್ರ ಅಹಿಂದ ಮತ್ತು ಹಿಂದುಳಿದ ವರ್ಗ ಎಂದು ಮಾತನಾಡುತ್ತಾರೆ. ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಹಾಗೂ ಎಸ್ಸಿಪಿ-ಟಿಎಸ್ಪಿ ಹಣ ಗ್ಯಾರಂಟಿಗಳಿಗೆ ಬಳಸಿ ಆ ಸಮುದಾಯಗಳಿಗೆ ಮೋಸ ಮಾಡಿದ್ದಾರೆ ಎಂದು ದೂರಿದರು.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಕಾರ್ಯಕರ್ತರೇ ಪಕ್ಷಕ್ಕೆ ಜೀವಾಳ. ಪಕ್ಷವು ಬೇರು ಮಟ್ಟದಲ್ಲಿ ಸಂಘಟನೆ ಆಗಬೇಕಿದೆ ಎಂದು ಹೇಳಿದರು.
ಪಕ್ಷವು ಜಿಲ್ಲೆಯಲ್ಲಿ ತನ್ನದೇ ಆದ ಇತಿಹಾಸ ಹೊಂದಿದೆ. ಹಾಗಾಗಿ ಪ್ರತಿ ಕ್ಷೇತ್ರದಲ್ಲಿ ಬೂತ್ ಸಮಿತಿ ರಚನೆ ಹಾಗೂ ಸದಸ್ಯತ್ವ ನೋಂದಣಿ ಸಂಖ್ಯೆ ಹೆಚ್ಚಿಸಿಕೊಂಡರೆ ಪಕ್ಷಕ್ಕೆ ಬಲ ಬರಲಿದೆ ಎಂದರು.
ಮುಂದಿನ ದಿನಗಳಲ್ಲಿ ನಮ್ಮ ನಾಯಕರು ರಾಜ್ಯದ ಮುಖ್ಯಮಂತ್ರಿ ಆಗುವಂತೆ ಎಲ್ಲ ಕಾರ್ಯಕರ್ತರು ಶ್ರಮವಹಿಸಬೇಕು ಎಂದರು.
ಶಾಸಕ ಸಿ.ಬಿ. ಸುರೇಶ್ ಮಾತನಾಡಿ, ಪಕ್ಷವು ಸದೃಢವಾಗಿರಲು ಬೂತ್ ಕಮಿಟಿ ಬಹುಮುಖ್ಯ. ಆದ್ದರಿಂದ ಎಲ್ಲ ಕಾರ್ಯಕರ್ತರು ಕೆಳಹಂತದಲ್ಲಿ ಪಕ್ಷ ಕಟ್ಟುವ ಮೂಲಕ ಬರುವ ದಿನಗಳಲ್ಲಿ ಪೂರ್ಣ ಬಹುಮತದ ಸರ್ಕಾರ ರಚಿಸೋಣ ಎಂದರು.
ಈ ವೇಳೆ ಜೆಡಿಎಸ್ ನಾಯಕ ಸುರೇಶ್ ಬಾಬು, ಮಾಜಿ ಶಾಸಕ ತಿಮ್ಮರಾಯಪ್ಪ, ಮಾಜಿ ಸಚಿವ ಹನುಮಂತಪ್ಪ, ಚೌಡರೆಡ್ಡಿ, ಜಿಲ್ಲಾಧ್ಯಕ್ಷ ಬಿ.ಚಿದಾನಂದಪ್ಪ, ಕಾರ್ಯಾಧ್ಯಕ್ಷ ಗಣೇಶ್ ದಾಸಕರಿಯಪ್ಪ, ಗಾಯತ್ರಿ ಹಾಲೇಶ್, ಜಯಣ್ಣ ಸೇರಿದಂತೆ ಪಕ್ಷದ ಕಾರ್ಯಕರ್ತರು, ಮುಖಂಡರು ಇದ್ದರು.