ದಿ ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ
ದಾವಣಗೆರೆ, ಅ. 13 – ಬಡವರು ಹಾಗೂ ಗ್ರಾಮೀಣ ಕುಟುಂಬಗಳಿಗೆ ನೆರವು ನೀಡುವ ಶಕ್ತಿ ಹಾಗೂ ಸಾಮರ್ಥ್ಯ ಸಹಕಾರಿ ಬ್ಯಾಂಕುಗಳಿಗೆ ಮಾತ್ರ ಇದೆ. ಅಂತಹ ಸಾಮರ್ಥ್ಯ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಇಲ್ಲ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.
ನಗರದ ತ್ರಿಶೂಲ್ ಕಲಾಭವನದಲ್ಲಿ ಆಯೋಜಿಸಲಾಗಿದ್ದ ದಿ ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ನ ಸುವರ್ಣ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಒಂದು ವರ್ಗದ ಜನರು ಮಾತ್ರ ಸಾಲ ಪಡೆಯಲು ಸಾಧ್ಯ. ಅಲ್ಲಿನ ನಿಬಂಧನೆಗಳು ಹಾಗೂ ವ್ಯವಸ್ಥೆಗಳೇ ಬೇರೆ. ಸಹಕಾರಿ ಬ್ಯಾಂಕುಗಳು ತಳ ಹಂತದಲ್ಲಿರುವ ಸಣ್ಣ ವ್ಯಾಪಾರಿಗಳಿಗೆ ಸಾಲ ನೀಡುವ ಮೂಲಕ ದೇಶದ ಬೆಳವಣಿಗೆಯಲ್ಲಿ ದೊಡ್ಡ ಪಾತ್ರ ವಹಿಸಿವೆ ಎಂದು ಕುಮಾರಸ್ವಾಮಿ ತಿಳಿಸಿದರು.
ಕೇಂದ್ರ ಸರ್ಕಾರ ಸಹ ಸಹಕಾರಿ ವಲಯಕ್ಕೆ ಪ್ರತ್ಯೇಕ ಸಚಿವಾಲಯ ರೂಪಿಸುವ ಮೂಲಕ ಸಹಕಾರಿ ವಲಯಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.
ಆದರೆ, ಸಹಕಾರಿ ವಲಯಗಳಲ್ಲಿ ರಾಜಕೀಯ ಪ್ರವೇಶಿಸಬಾರದು. ಈ ವಲಯದಲ್ಲಿ ರಾಜಕೀಯ ಪ್ರವೇಶಿಸಿದಾಗ ಆಗುವ ಪರಿಸ್ಥಿತಿಗಳನ್ನು ನಾನು ನೋಡಿದ್ದೇನೆ. ಸಹಕಾರಿ ವಲಯ ರಾಜಕೀಯ ಬಿಟ್ಟು ಜನರಿಗೆ ಒಳಿತು ಮಾಡುವ ಉದ್ದೇಶದಿಂದ ಕಾರ್ಯನಿರ್ವಹಿಸಬೇಕು ಎಂದರು.
ದಾವಣಗೆರೆ ಜಿಲ್ಲೆ ಈ ಹಿಂದೆ ಹತ್ತಿ ಗಿರಣಿ ಹಾಗೂ ಎಣ್ಣೆ ಕಾರ್ಖಾನೆಗಳಿಂದ ಹೆಸರಾಗಿತ್ತು. ವಾಣಿಜ್ಯ ಕೇಂದ್ರವಾಗಿ ಬೆಳೆದಿತ್ತು. ಇಂದು ದಾವಣಗೆರೆಯು ಶೈಕ್ಷಣಿಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದೆ. ಬೆಂಗಳೂರಿನಂತಹ ನಗರಗಳ ಹೊರತಾಗಿ ದಾವಣಗೆರೆಯಂತಹ ಜಿಲ್ಲೆಗಳೂ ದೇಶದ ಬೆಳವಣಿಗೆಯಲ್ಲಿ ತಮ್ಮದೇ ಆದ ಪಾಲು ಹೊಂದಿವೆ ಎಂದವರು ಹೇಳಿದರು.
ದಿವ್ಯಾಂಗ ಮಹಿಳೆಯನ್ನು ಕೆಲಸದಿಂದ ಕಿತ್ತು ಹಾಕಿರುವುದು ಅಮಾನವೀಯ
2018ರಲ್ಲಿ ನಾನು ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ದಾವಣಗೆರೆಯ ದಿವ್ಯಾಂಗ ಮಹಿಳೆಯೊಬ್ಬರಿಗೆ ದಾವಣಗೆರೆಯಲ್ಲೇ ಸರ್ಕಾರದಲ್ಲಿ ಉದ್ಯೋಗ ಕೊಡಿಸಿದ್ದೆ. ಆದರೆ, ಈಗ ಆ ಮಹಿಳೆಯನ್ನು ಉದ್ಯೋಗದಿಂದ ತೆಗೆದು ಹಾಕುವ ಅಮಾನವೀಯ ವರ್ತನೆ ತೋರಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ.
ಆ ಮಹಿಳೆ ಅಪಘಾತದಲ್ಲಿ ಬಲಗೈ ಕಳೆದುಕೊಂಡಿದ್ದರು. ಉದ್ಯೋಗದಿಂದಾಗಿ ಆರು ವರ್ಷಗಳಿಂದ ಅವರು ನೆಮ್ಮದಿಯಾಗಿದ್ದರು. ತಿಂಗಳ ಹಿಂದೆ ಅವರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಆ ಮಹಿಳೆ ಏನು ಅನ್ಯಾಯ ಮಾಡಿದ್ದಾರೆ? ಸಮಾಜದಲ್ಲಿ ಇಂತಹ ಅಮಾನವೀಯ ವರ್ತನೆ ಕಂಡುಬರುತ್ತಿದೆ ಎಂದು ಹೇಳಿದರು.
ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ 11 ಶಾಖೆಗಳನ್ನು ತೆರೆಯುವ ಮೂಲಕ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ವೃದ್ಧರು ಹಾಗೂ ದಿವ್ಯಾಂಗರ ನೆರವಿಗಾಗಿ ಬ್ಯಾಂಕ್ 15 ಲಕ್ಷ ರೂ.ಗಳ ನೆರವು ನೀಡಿದೆ. ಇದು ಶ್ಲ್ಯಾಘನೀಯ ಕೆಲಸ ಎಂದು ಕುಮಾರಸ್ವಾಮಿ ತಿಳಿಸಿದರು.
§ಹೊನ್ನ ಮುಕುಟ’ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಕೇಂದ್ರ ಸಚಿವ ಜಿ.ಎಂ. ಸಿದ್ದೇಶ್ವರ, 1972ರಲ್ಲಿ ಆರಂಭವಾದ ಮೊದಲ ವರ್ಷದಲ್ಲಿ 274 ರೂ. ಲಾಭ ಗಳಿಸಿದ್ದ ಬ್ಯಾಂಕ್ ಈಗ 5.86 ಕೋಟಿ ರೂ.ಗಳ ಲಾಭ ಗಳಿಸಿದೆ. ಬ್ಯಾಂಕ್ನ ಎನ್.ಪಿ.ಎ. ಪ್ರಮಾಣ ಕಡಿಮೆ ಇದ್ದು, ಸುಸ್ಥಿತಿಯಲ್ಲಿದೆ ಎಂದರು.
ಶಾಸಕ ಬಿ.ಪಿ. ಹರೀಶ್ ಮಾತನಾಡಿ, ದಾವಣಗೆರೆ ಜಿಲ್ಲೆಯು ಸಹಕಾರ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದೆ. ಮಧ್ಯ ಕರ್ನಾಟಕದಲ್ಲಿ ಸಹಕಾರಿ ಬ್ಯಾಂಕುಗಳು ಇನ್ನಷ್ಟು ಬೆಳೆಯಬೇಕಿದೆ ಎಂದರು.
ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಠೇವಣಿದಾರರು ಹಾಗೂ ಸಾಲ ಪಡೆಯುವವರು ಬ್ಯಾಂಕ್ ಬೆಳವಣಿಗೆಗೆ ಸಹಕಾರಿಯಾಗಿದ್ದಾರೆ. ಸಮಯಕ್ಕೆ ಸರಿಯಾಗಿ ಪ್ರಾಮಾಣಿಕವಾಗಿ ತೆರಿಗೆ ಮರು ಪಾವತಿ ಮಾಡುವ ಸಾಲಗಾರರೇ ಬ್ಯಾಂಕ್ ಅನ್ನು ಹೆಚ್ಚಾಗಿ ಬೆಳೆಸುತ್ತಾರೆ. ಅವರಿಗೇ ಹೆಚ್ಚು ಗೌರವ ಸಲ್ಲಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬ್ಯಾಂಕ್ ಅಧ್ಯಕ್ಷ ಎನ್.ಎ. ಮುರುಗೇಶ್, ದಾವಣಗೆರೆ – ಹರಿಹರ ಅರ್ಬನ್ ಸಹಕಾರ ಬ್ಯಾಂಕ್ನಲ್ಲಿ ಈಗ 11 ಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ಡಿಜಿಟಲ್ ವಹಿವಾಟಿನಲ್ಲೂ ಬ್ಯಾಂಕ್ ಮುಂಚೂಣಿಯಲ್ಲಿದೆ ಎಂದು ತಿಳಿಸಿದರು.
ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಉಜ್ಜಯಿನಿ ಪೀಠದ ಜಗದ್ಗುರು ಶ್ರೀ ಸಿದ್ದಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ, ಸಂಘಟನೆಯಿಂದ ಎಲ್ಲರಿಗೂ ಶಕ್ತಿ ದೊರೆಯುತ್ತದೆ. ಬಿಡಿ ಬಿಡಿಯಾಗಿದ್ದರೆ ದುರ್ಬಲರಾಗುತ್ತೇವೆ. ಒಗ್ಗಟ್ಟಿನಿಂದ ಹಾಗೂ ಸಮಸ್ತ ಸಮಾಜದ ಹಿತದೃಷ್ಟಿಯಿಂದ ಸಹಕಾರ ವಲಯ ಕಾರ್ಯನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ನಗರದ ಶ್ರೀ ಗುರು ಪಂಚಾಕ್ಷರಿ ಗವಾಯಿ ಅಂಧ ಮಕ್ಕಳ ಶಿಕ್ಷಣ ಸಂಸ್ಥೆ, ಆನಂದ ಧಾಮ ಹಾಗೂ ಸಿಕ್ಪಾರ್ ಶ್ರವಣ ವಿಮೋಚನಾ ಕೇಂದ್ರಗಳಿಗೆ ಸಹಕಾರ ಬ್ಯಾಂಕ್ ವತಿಯಿಂದ ತಲಾ 5 ಲಕ್ಷ ರೂ.ಗಳ ನೆರವು ನೀಡಲಾಯಿತು.
ವೇದಿಕೆಯ ಮೇಲೆ ಪರಿಷತ್ ಸದಸ್ಯ ಕೆ.ಎಸ್.ನವೀನ್, ಶಾಸಕರಾದ ನೇಮಿರಾಜ ನಾಯ್ಕ, ಸುರೇಶ್ ಬಾಬು, ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಅಲ್ಕೋಡ್ ಹನುಮಂತಪ್ಪ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ, ಹೊನ್ನ ಮುಕುಟ ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ ಬಾ.ಮ. ಬಸವರಾಜಯ್ಯ, ದಾವಣಗೆರೆ-ಹರಿಹರ ಅರ್ಬನ್ ಸಹಕಾರ ಬ್ಯಾಂಕ್ ಉಪಾಧ್ಯಕ್ಷೆ ಜಯಮ್ಮ ಪರಶುರಾಮಪ್ಪ, ಆಡಳಿತ ಮಂಡಳಿ ಸದಸ್ಯರು ಮತ್ತಿತರರು ವೇದಿಕೆ ಮೇಲೆ ಉಪಸ್ಥಿತರಿದ್ದರು. ಸಂಗೀತ ರಾಘವೇಂದ್ರ ಪ್ರಾರ್ಥಿಸಿದರೆ, ಹೆಚ್.ಬಿ. ಮಂಜುನಾಥ್ ನಿರೂಪಿಸಿದರು.