ಕಾತ್ಯಾಯಿನಿ ದೇವಿ- ಒಂದು ಚಿಂತನೆ

ಕಾತ್ಯಾಯಿನಿ ದೇವಿ- ಒಂದು ಚಿಂತನೆ

ನವ ದುರ್ಗೆಯರ ಆರನೇ ರೂಪ

“ಚಂದ್ರಹಾಸೋಜ್ಜವಲಕರಾ ಶಾರ್ದೂಲವರವಾಹನಾ ಕಾತ್ಯಾಯಿನಿ
ಶುಭಂ ದಧ್ಯಾದೇವಿ ದಾನವಘಾತಿನಿ”

ಹೊಳೆಯುವ ಖಡ್ಗವನ್ನು ಹಿಡಿದಿರುವ ಸಿಂಹವನ್ನು ಏರಿರುವ ದಾನವರನ್ನು ಸಂಹಾರ ಮಾಡುವಂತಹ ಕಾತ್ಯಾಯಿನಿ ದೇವಿಯೇ ನಮಗೆ ಶುಭವನ್ನು ಮಾಡು ಎಂಬುದು ಈ ಶ್ಲೋಕದ ಅರ್ಥ.

ಕಾತ್ಯಾಯನ ಋಷಿಗಳು ದೇವಿಯನ್ನು ತಮ್ಮ ಮಗಳಾಗಿ ಪಡೆಯಬೇಕು ಎಂದು ತಪಸ್ಸನ್ನು ಆಚರಿಸಿದ್ದರು. ಅವರ ಭಕ್ತಿ, ಶ್ರದ್ಧೆಗಳಿಗೆ ಮೆಚ್ಚಿ ದೇವಿಯು ಅವರ ಮಗಳಾಗಿ ಬರುವೆನೆಂದು ವರದಾನ ಮಾಡಿದ್ದಳು. 

ಮಹಿಷಾಸುರನ ಉಪಟಳವು ಅತಿರೇಕಕ್ಕೆ ಏರಿದಾಗ, ದೇವತೆಗಳೆಲ್ಲ ಮಹಿಷಾಸುರನ ಸಂಹಾರಕ್ಕಾಗಿ ದೇವಿಯಲ್ಲಿ ಪ್ರಾರ್ಥನೆ ಮಾಡಿಕೊಂಡರು. ತಾನು ಕೇವಲ ಹೆಣ್ಣಿನಿಂದ ವಧ್ಯನಾಗಬಹುದು ಎಂಬ ವರವನ್ನು ಅವನು ಪಡೆದಿದ್ದನು.

ದೇವತೆಗಳೆಲ್ಲ ತಮ್ಮ ಕಣ್ಣಿನಿಂದ ತಮ್ಮ ಶಕ್ತಿಯ ಕಿರಣಗಳನ್ನು ಹೊರ ಹಾಕಿದಾಗ, ಆ ಶಕ್ತಿಗಳೆಲ್ಲಾ ಸೇರಿ ಆ ಕಿರಣಗಳು ಕಾತ್ಯಾಯನ ಋಷಿಯ ಆಶ್ರಮದ ಬಳಿ ಬಂದವು. ಅವುಗಳಿಗೆ ಋಷಿಯು ಸರಿಯಾದ ರೂಪ ಕೊಟ್ಟಾಗ, ಅದು ಕಾತ್ಯಾಯಿನಿ ಎಂಬ ರೂಪವನ್ನು ತಾಳಿತು. ಕಾತ್ಯಾಯನ ಮಹರ್ಷಿಗೆ ಕೊಟ್ಟ ವರದ ಪ್ರಕಾರ, ಆಕೆಯು ಅವನ ಆಶ್ರಮದಲ್ಲಿ ಆವಿರ್ಭವಿಸಿದಳು ಎಂಬುದು ವಾಮನ ಪುರಾಣದ ಕಥೆಯಾದರೆ, ಕಾತ್ಯಾಯನ ಋಷಿಯು ಅವಳನ್ನು ಮೊದಲು ಪೂಜಿಸಿದ್ದರಿಂದ ಅವಳು ಕಾತ್ಯಾಯಿನಿ ಎಂಬ ಇನ್ನೊಂದು ಕಥೆ ಕಾಳಿಕಾ ಪುರಾಣದಲ್ಲಿದೆ.

ವಾಮನ ಪುರಾಣದ ಪ್ರಕಾರ, ಮೂರು ಕಣ್ಣಿನ 16 ಕೈಗಳ ದೇವಿಗೆ ಎಲ್ಲಾ ದೇವತೆಗಳು ತಮ್ಮ ಆಯುಧಗಳನ್ನು ನೀಡುತ್ತಾರೆ. ವಿಷ್ಣುವಿನಿಂದ ಚಕ್ರ, ಶಿವನ ತ್ರಿಶೂಲ ಬ್ರಹ್ಮನ ಕಮಂಡಲ ಮತ್ತು ಜಪಮಾಲೆ, ಕಾಲನಿಂದ ಖಡ್ಗ ಮತ್ತು ಗುರಾಣಿ, ವರುಣನಿಂದ ಶಂಖ, ವಿಶ್ವಕರ್ಮ ನಿಂದ ಕೊಡಲಿ  ಇಂದ್ರನಿಂದ ವಜ್ರಾಯುಧ ಎಲ್ಲವನ್ನು ಪಡೆದು ಸಿಂಹದ ಮೇಲೆ ಕುಳಿತಿರುವ ದೇವಿಯು ದುಷ್ಟ ಸಂಹಾರಕ್ಕಾಗಿಯೇ ಹುಟ್ಟಿರುವಂತಹ ಅತ್ಯಂತ ಶಕ್ತಿಶಾಲಿಯಾದ ದೇವತೆ. ಇವಳನ್ನು ದುರ್ಗೆ ,ಕಾಳಿ ,ಆದಿ ಶಕ್ತಿ ಎಂದೆಲ್ಲಾ ಕರೆಯುತ್ತಾರೆ.

ದುರ್ಗಾಸಪ್ತಷತಿಯಲ್ಲಿ, ದುರ್ಗಾದೇವಿಯ ಎಲ್ಲಾ ರೂಪಗಳ ವರ್ಣನೆ ಮತ್ತು ಅವಳು ಕೊಂದಂತಹ ಮಹಿಷಾಸುರ ಮುಂತಾದ ರಾಕ್ಷಸರ ವಿವರಗಳಿವೆ. ಮೊದಲನೆಯದಾಗಿ ಅವಳು ಕೊಂದಂತಹ ಅಸುರನೇ ಮಹಿಷಾಸುರ. ಅವನ ಸಂಹಾರದ ನಂತರ ಅವಳು ಮಹಿಷಾಸರ ಮರ್ಧಿನಿ ಎನಿಸಿದಳು.

ದುರ್ಗಾದೇವಿಯು ಸಿಂಹವನ್ನು ಏರಿ ಮೈಸೂರಿನ ಪರ್ವತಗಳ  ಬಳಿ ಬಂದಾಗ, ಮಹಿಷಾಸುರನ ದೂತರು ಅವಳ ಸೌಂದರ್ಯಕ್ಕೆ ಮೋಹಿತರಾದರು. ತನ್ನನ್ನು ವರಿಸಬೇಕೆಂದು ಅವಳನ್ನು ಕೇಳಿದಾಗ ತನ್ನ ಜೊತೆ ಯುದ್ಧ ಮಾಡಿ ತನ್ನನ್ನು ಗೆದ್ದವರನ್ನು ಮಾತ್ರ ತಾನು ವರಿಸುವುದಾಗಿ ಹೇಳಿ ಯುದ್ಧ ಪ್ರಾರಂಭಿಸಿದಳು. 

ಮಾಯಾ ಯುದ್ಧದಲ್ಲಿ ಅನೇಕ ವೇಷಗಳನ್ನು ಧರಿಸಿದ ಮಹಿಷಾಸುರನನ್ನು ಕಡೆಗೆ ಮಹಿಷ ಎಂದರೆ ಕೋಣನ ರೂಪದಲ್ಲಿ ಬಂದಾಗ  ಅವನನ್ನು ದೇವಿ ಸಂಹಾರ ಮಾಡುತ್ತಾಳೆ.

ಈ ದೇವಿಯನ್ನು ಪೂಜೆ ಮಾಡುವುದರಿಂದ ಅವಿವಾಹಿತರಿಗೆ ವಿವಾಹವಾಗುತ್ತದೆ. ವೈವಾಹಿಕ ಸಮಸ್ಯೆಗಳು ದೂರವಾಗುತ್ತವೆ. ವೈರಿಗಳ ಮೇಲೆ ಜಯ ಸಿಗುತ್ತದೆ. ದೇವಿಯು ತನ್ನ ಭಕ್ತರಿಗೆ ಸೌಂದರ್ಯವನ್ನು ದಯಪಾಲಿಸುತ್ತಾಳೆ. 

ಭಾಗವತ ಪುರಾಣದಲ್ಲಿ ಕೃಷ್ಣನನ್ನು ಒಲಿಸಿಕೊಳ್ಳಲು ಗೋಪಿಯರು ಕಾತ್ಯಾಯಿನಿ ವ್ರತವನ್ನು ಆಚರಿಸಿದರು ಎಂದು ತಿಳಿಸಲಾಗಿದೆ. 

ಕಾತ್ಯಾಯಿನಿ ದೇವಿಯ ದೇವಸ್ಥಾನ ಗುಜರಾತಿನಲ್ಲಿದೆ. ಮಹಾರಾಷ್ಟ್ರದಲ್ಲಿ ತುಳಜಾ ಭವಾನಿ ಎಂದು ಕರೆದರೆ, ತಮಿಳುನಾಡಿನಲ್ಲಿ ಕನ್ಯಾಕುಮಾರಿ ಎಂದು ಇವಳು ಪೂಜಿಸಿಕೊಳ್ಳುತ್ತಾಳೆ. ದೇಶದಾದ್ಯಂತ ಅನೇಕ ನಾಮಗಳಿಂದ, ಅನೇಕ ರೂಪಗಳಿಂದ ಆದಿಶಕ್ತಿ ಆದ ಈ ದೇವಿಯನ್ನು ಪೂಜಿಸಲಾಗುತ್ತದೆ. 

ನವರಾತ್ರಿಯ ಆರನೇ ದಿನ ಈ ಶಕ್ತಿಶಾಲಿ ಕಾತ್ಯಾಯಿನಿ ಪೂಜೆಗೆ ಬಹಳ ಮಹತ್ವವಿದೆ.

ಕಾತ್ಯಾಯಿನಿ ದೇವಿಗೆ ಮೂರು ಕಣ್ಣುಗಳು ಮತ್ತು ನಾಲ್ಕು ಕೈಗಳಿವೆ. ಅವಳು ತನ್ನ ಎಡಗೈಗಳಲ್ಲಿ ಒಂದರಲ್ಲಿ ಕತ್ತಿಯನ್ನು ಮತ್ತು ಇನ್ನೊಂದರಲ್ಲಿ ಕಮಲವನ್ನು ಹಿಡಿದಿದ್ದಾಳೆ. ಅವಳ ಬಲಗೈಗಳಲ್ಲಿ ವರದ ಮುದ್ರೆ (ವರಗಳನ್ನು ಕೊಡುವುದು) ಮತ್ತು ಅಭಯ ಮುದ್ರೆ (ಭಯ ಕಳೆಯುವುದನ್ನು ಪ್ರತಿನಿಧಿಸುತ್ತದೆ) ಕಾಣಬಹುದು. ತನ್ನ ಹಣೆಯನ್ನು ಅಲಂಕರಿಸಿದ ಚಂದ್ರನೊಂದಿಗೆ, ಕಾತ್ಯಾಯಿನಿ ದೇವಿಯು ಸಿಂಹದ ಮೇಲೆ ಬರುತ್ತಾಳೆ..

ದುಷ್ಟರು ಹೆಚ್ಚಾದಾಗ, ದೇವಿ ತನ್ನ ಉಗ್ರ ರೂಪದಿಂದ ಪ್ರಕಟಗೊಳ್ಳುತ್ತಾಳೆ ಮತ್ತು ಅವರನ್ನು ಕಾಳಗದಲ್ಲಿ ಸಂಪೂರ್ಣವಾಗಿ ನಾಶಗೊಳಿಸುತ್ತಾಳೆ. ಈಗಿನ ಕಾಲದಲ್ಲಿ ಆಗುತ್ತಿರುವ ಅತ್ಯಾಚಾರಗಳನ್ನು , ಮುಖ್ಯವಾಗಿ ಪುಟ್ಟ ಪುಟ್ಟ ಹೆಣ್ಮಕ್ಕಳ ಮೇಲೆ ದೌರ್ಜನ್ಯಗಳನ್ನು ಮಾಡುತ್ತಿರುವ  ಮಾನವರ ಒಳಗೆ ಸೇರಿರುವ ದುಷ್ಟ ರಾಕ್ಷಸರನ್ನು  ಬೇಗ ದೇವಿಯು ಸಂಹರಿಸಲಿ. ಹೆಣ್ಣನ್ನು ತಾಯಿಯಂತೆ ಕಂಡು ಗೌರವಿಸುವಂತಹ ನಮ್ಮ ಸಮಾಜದಲ್ಲಿ, ಇಂತಹ ದುಷ್ಟ ಬುದ್ಧಿಗಳು ಮಕ್ಕಳಲ್ಲಿ ಹುಟ್ಟದಂತೆ ಆಕೆ ನೋಡಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. 

ವೈವಾಹಿಕ ಸಮಸ್ಯೆಗಳು ಇಲ್ಲದ ಮನೆಯೇ ಇಲ್ಲವೇನೋ ಎನ್ನುವಂತಹ ಪರಿಸ್ಥಿತಿ ಬಂದಿದೆ. ಇಂತಹ ಸಮಯದಲ್ಲಿ ದೇವಿಯು ತಾಳ್ಮೆ, ಸಹನೆ, ಪ್ರೀತಿ-ವಿಶ್ವಾಸ, ತ್ಯಾಗ ಮುಂತಾದ ಸದ್ಗುಣ ಗಳನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳಲ್ಲಿ ಹೆಚ್ಚಿಸಲಿ. ಈ ಸದ್ಗುಣಗಳಿಂದ ವೈವಾಹಿಕ ಜೀವ ನಗಳು ಸುಂದರವಾಗಲಿ, ವಿಚ್ಛೇದನದ ಪಿಡುಗು ತೊಲಗಲಿ. ಮಕ್ಕಳಿಗೆ ತಂದೆ-ತಾಯಿಯರ ಪ್ರೀತಿ ಸಿಗಲಿ ಎಂದು ದೇವಿಯನ್ನು ಪ್ರಾರ್ಥಿಸುತ್ತೇನೆ.

– ಡಾ. ರೂಪಶ್ರೀ ಶಶಿಕಾಂತ್, 

ದಾವಣಗೆರೆ.

error: Content is protected !!