ಹೊಳೆಸಿರಿಗೆರೆ : ಮಂಡಲೋತ್ಸವ, ಗಾಂಧಿ ಜಯಂತಿ, ಜನಜಾಗೃತಿ ಕಾರ್ಯಕ್ರಮದಲ್ಲಿ ಕಣ್ವಕುಪ್ಪಿ ಶ್ರೀಗಳ ಶ್ಲ್ಯಾಘನೆ
ಮಲೇಬೆನ್ನೂರು, ಅ.6- ಶ್ರೀ ವೀರೇಂದ್ರ ಹೆಗ್ಗಡೆ ಅವರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಹಿಳೆಯರಿಗೆ ಅಷ್ಟೇ ಅಲ್ಲ, ಇಡೀ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ ಎಂದು ಕಣ್ವಕುಪ್ಪಿ ಗವಿಮಠದ ಶ್ರೀ ಡಾ.ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಹೊಳೆಸಿರಿಗೆರೆ ಗ್ರಾಮದಲ್ಲಿ ಶ್ರೀ ಬನಶಂಕರಿ ಅಮ್ಮನವರ ದೇವಸ್ಥಾನ ಮಂಡಲೋತ್ಸವ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ಗಾಂಧೀಜಿ ಜಯಂತಿ, ವ್ಯಸನ ಮುಕ್ತ ಸಾಧಕರ ಸಮಾವೇಶವನ್ನು ಉದ್ಘಾಟಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಗಾಂಧೀಜಿ ಕಂಡ ರಾಮರಾಜ್ಯದ ಕನಸನ್ನು ನನಸು ಮಾಡುವ ವೀರೇಂದ್ರ ಹೆಗ್ಗಡೆ ಅವರ ಪ್ರಯತ್ನಕ್ಕೆ ಇಡೀ ರಾಜ್ಯವೇ ಕೈ ಜೋಡಿಸಿದೆ ಎಂದ ಶ್ರೀಗಳು, ಜೀವನದಲ್ಲಿ ಒಮ್ಮೆ ಬಂದರೆ ಎಂದೂ ನಮ್ಮನ್ನು ಬಿಟ್ಟು ಹೋಗದ ವಿದ್ಯೆ ಮತ್ತು ಕಲೆಯನ್ನು ಪ್ರತಿಯೊಬ್ಬರೂ ಕಲಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಜೀವನದಲ್ಲಿ ಪರಿಪೂರ್ಣವಾಗಿ ಸುಖವಾಗಿರುವ ವ್ಯಕ್ತಿ ಸಿಗುವುದು ತುಂಬಾ ವಿರಳವಾಗಿದ್ದು, ಈ ನಿಟ್ಟಿನಲ್ಲಿ ನಾವು ಸುಖ – ದುಃಖಗಳನ್ನು ಸಮಾನವಾಗಿ ಸ್ವೀಕರಿಸಿ, ಅಪಕೀರ್ತಿ ಬರದಂತೆ ನೋಡಿಕೊಳ್ಳಿ. ಶ್ರೇಷ್ಠ ಕಾರ್ಯಗಳು ಮತ್ತು ಪುಣ್ಯ, ಧರ್ಮಗಳಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ದಿವ್ಯ ಸಾನ್ನಿಧ್ಯ ವಹಿಸಿದ್ದ ರಟ್ಟಿಹಳ್ಳಿ ಕಬ್ಬಿಣಕಂಥಿ ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿ, ಧಾರ್ಮಿಕ ಮತ್ತು ಜನಜಾಗೃತಿ ಕಾರ್ಯಕ್ರಮಗಳು ಗಾಂಧಿ ಜಯಂತಿ ಹೆಸರಿನಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ.
ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ದಾವಣಗೆರೆ ಕೇಂದ್ರದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ಮಾತನಾಡಿ, ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಧರ್ಮಸ್ಥಳದ ಮಂಜುನಾಥನ ಹೆಸರಿನಲ್ಲಿ ವೀರೇಂದ್ರ ಹೆಗ್ಗಡೆ ಅವರು ಮಾಡುತ್ತಿರುವ ಉತ್ತಮ ಕೆಲಸಗಳು ಭಗವಂತನ ಹೃದಯ ಗೆದ್ದಿವೆ ಎಂದು ಪ್ರಶಂಸಿಸಿದರು.
ಗಾಂಧೀಜಿ ಅವರ ಕನಸಿನಂತೆ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು. ವ್ಯಸನ ಮುಕ್ತರಾದವರು ಈಶ್ವರೀಯ ವಿಶ್ವವಿದ್ಯಾಲಯಕ್ಕೆ ಬಂದು ಸಹಜ ಶಿವಯೋಗದಲ್ಲಿ ಭಾಗಿಯಾಗಿ ಬದುಕನ್ನು ಸುಂದರಗೊಳಿಸಿಕೊಳ್ಳಿ ಎಂದು ಲೀಲಾಜಿ ಕರೆ ನೀಡಿದರು.
ವಿಶೇಷ ಉಪನ್ಯಾಸ ನೀಡಿದ ಜಿಲ್ಲಾ ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷರೂ ಆದ ಶಿಕ್ಷಕ ಕಾಕನೂರು ನಾಗರಾಜ್ ಅವರು, ಧರ್ಮಸ್ಥಳ ಎಂದರೆ ನ್ಯಾಯ, ನೀತಿ, ಧರ್ಮದಿಂದ ಕೂಡಿದೆ. ಧರ್ಮಸ್ಥಳ ಯೋಜನೆ ಕೇವಲ ಮಹಿಳೆಯರಿಗೆ ಸಾಲ ಕೊಡಿಸುವುದು ಅಷ್ಟೇ ಅಲ್ಲದೇ, ಮಹಿಳೆಯರು ತಮ್ಮ ಉಳಿತಾಯದ ಹಣವನ್ನು ಬೆಳೆಸುವುದರ ಜೊತೆಗೆ ಸಮಾಜದಲ್ಲಿ ಸೌಹಾರ್ದ ಸಂಬಂಧ ಬೆಸೆಯುವ ಕೆಲಸ ಮಾಡುತ್ತಿದೆ ಎಂದು ಶ್ಲ್ಯಾಘಿಸಿದರು.
ಧರ್ಮಸ್ಥಳ ಯೋಜನೆಯ ಜಿಲ್ಲಾ ನಿರ್ದೇಶಕ ಎಂ.ಲಕ್ಷ್ಮಣ ಮಾತನಾಡಿದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷರಾದ ಹೊನ್ನಾಳಿ ಬಾಬಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಲೇಬೆನ್ನೂರು ಹಾಗೂ ಹೊಳೆಸಿರಿಗೆರೆ ಈಶ್ವರೀಯ ವಿವಿ ಕೇಂದ್ರಗಳ ಸಂಚಾಲಕರಾದ ರಾಜಯೋಗಿನಿ ಬಿಕೆ ಶಾಂತಾಜಿ, ಗ್ರಾ.ಪಂ. ಅಧ್ಯಕ್ಷ ಮಂಜನಗೌಡ, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಎನ್.ಜಿ.ನಾಗನಗೌಡ್ರು, ಸದಸ್ಯರಾದ ಜಿ.ಮಂಜುನಾಥ್ ಪಟೇಲ್, ಜಿಗಳಿ ಪ್ರಕಾಶ್, ಅಣಬೇರು ಮಂಜುನಾಥ್, ಹನುಮಂತರಾಯ, ರಾಜಶೇಖರ್ ಕೊಂಡಜ್ಜಿ, ಪದ್ಮರಾಜ್ ಜೈನ್, ಶ್ರೀಮತಿ ಶೋಭಾ, ಹಿರಿಯರಾದ ಬಿ.ಪಂಚಪ್ಪ, ಬನಶಂಕರಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ.ಜಿ.ಕೊಟ್ರಪ್ಪಗೌಡ, ಉಪಾಧ್ಯಕ್ಷ ಕೆ.ಜಿ.ಮಲ್ಲಿಕಾ ರ್ಜುನಪ್ಪ, ಕಾರ್ಯದರ್ಶಿ ಕೆ.ಜಿ.ಸದಾಶಿವಪ್ಪ, ಖಜಾಂಚಿ ಕೆ.ಜಿ.ನಾಗರಾಜಪ್ಪ, ಧರ್ಮಸ್ಥಳ ಯೋಜನೆಯ ಯೋಜನಾಧಿಕಾರಿಗಳಾದ ವಸಂತ್ ದೇವಾಡಿಗ, ನಂದಿನಿ, ವಲಯ ಮೇಲ್ವಿಚಾರಕರಾದ ರಂಗನಸ್ವಾಮಿ, ಹರೀಶ್, ಮಾರುತಿ, ಚಂದ್ರಪ್ಪ, ರಕ್ಷಿತಾ, ಸಂಪತ್ಲಕ್ಷ್ಮಿ, ಸಂತೋಷಿನಿ, ಗ್ರಾಮದ ನಿವೃತ್ತ ಯೋಧ ಪರಶುರಾಮ್, ಪ್ರವಚನಕಾರ ಸಿದ್ದೇಶ್, ಪ್ರಗತಿಪರ ಚಿಂತಕ ಕುಂದೂರು ಮಂಜಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.
ಗ್ರಾಮದ ಮುಖಂಡ ಎಂ.ಜಿ.ಪರಮೇಶ್ವರಗೌಡ ಮತ್ತು ಹೊಸಳ್ಳಿ ನಾಗರಾಜಪ್ಪ ದಾಸೋಹ ದಾನಿಗಳಾಗಿದ್ದರು.