ದಾವಣಗೆರೆ, ಅ.7- ಪೋಕ್ಸೋ ಪ್ರಕರಣದಲ್ಲಿ ಜೈಲು ಸೇರಿದ್ದ ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರಿಗೆ ಜಾಮೀನು ಸಿಕ್ಕ ಹಿನ್ನೆಲೆಯಲ್ಲಿ ಸೋಮವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
2023ರ ನ.11ರಂದು ಹೈಕೋರ್ಟ್, ಸ್ವಾಮೀಜಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ಆದರೆ ಸುಪ್ರೀಂಕೋರ್ಟ್, ಇದಕ್ಕೆ ತಡೆ ನೀಡಿ ಸಾಕ್ಷ್ಯಗಳ ವಿಚಾರಣೆ ಮುಗಿ ಯುವವರೆಗೂ ಜೈಲಿನಲ್ಲಿ ಇರಿಸುವಂತೆ ತಿಳಿಸಿತ್ತು.
ಇದೀಗ ಪೋಕ್ಸೋ ಪ್ರಕರಣದ ಪ್ರಮುಖ ಸಾಕ್ಷ್ಯಗಳ ವಿಚಾರಣಾ ಪ್ರಕ್ರಿಯೆ ಪೂರ್ಣಗೊಂಡಿರುವುದರಿಂದ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿಯ ಬಿಡುಗಡೆಗೆ 2ನೇ ಜಿಲ್ಲಾ ಹೆಚ್ಚುವರಿ ಮತ್ತು ಸಿವಿಲ್ ನ್ಯಾಯಾಲಯ ಸೋಮವಾರ ಆದೇಶಿಸಿದೆ.
ಸತ್ಯಕ್ಕೆ ಜಯ ಸಿಗುವ ನೀರಿಕ್ಷೆ ಇದೆ: ಶರಣರು
ದಾವಣಗೆರೆ, ಅ.7- ಸತ್ಯಕ್ಕೆ ಜಯ ಸಿಗುವ ನೀರಿಕ್ಷೆ ಇದೆ. ಸಾಧು-ಸಂತರ ಬಹುದೊಡ್ಡ ಅಸ್ತ್ರವೇ ಸಹನೆ, ಅಖಂಡವಾದ ಸಹನೆಯಿಂದ ಯಾವುದನ್ನಾದರೂ ಗೆಲ್ಲಬಹುದು ಎಂದು ಮುರುಘಾ ಶರಣರು ಹೇಳಿದರು.
ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜೈಲಿನಲ್ಲಿದ್ದಾಗ ಜ್ಞಾನ ಸಂಪಾದನೆಗೆ ಹೆಚ್ಚು ಒತ್ತು ಕೊಟ್ಟು ಸಮಯದ ಸದುಪಯೋಗ ಮಾಡಿಕೊಂಡು ನಾಲ್ಕೈದು ಪುಸ್ತಕಗಳನ್ನು ಬರೆದಿದ್ದೇನೆ. ಐದೂ ಪುಸ್ತಕಗಳನ್ನು ಒಮ್ಮೆಲೇ ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಮೊದಲನೇ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದಾಗ 250 ಪುಸ್ತಕಗಳನ್ನು ಓದಿದ್ದೆ. ಈ ಬಾರಿ 150 ಪುಸ್ತಕಗಳನ್ನು ಓದಿದ್ದೇನೆ ಎಂದವರು ಹೇಳಿದರು.
ನೀವಿಲ್ಲದೇ ಮುರುಘಾ ಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ನಡೆಯುತ್ತಿದೆ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ `ಯಾವ-ಯಾವ ಕಾಲಕ್ಕೆ ಏನೇನು ಆಗಬೇಕು, ಅದಾಗಬೇಕು’ ಎಂದು ಉತ್ತರಿಸಿದರು.
ಈ ವೇಳೆ ವಿರಕ್ತ ಮಠದ ಡಾ. ಬಸವಪ್ರಭು ಸ್ವಾಮೀಜಿ, ಬಾಡದ ಆನಂದರಾಜ್, ಓಂಕಾರಪ್ಪ, ಶಿವನಗೌಡ ಪಾಟೀಲ್, ಅಂದನೂರು ಮುಪ್ಪಣ್ಣ ಸೇರಿದಂತೆ ಮತ್ತಿತರರಿದ್ದರು.
ಮುರುಘಾಶ್ರೀ ಚಿತ್ರದುರ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಇರಬಾರದೆಂದು ನ್ಯಾಯಾಲಯ ಷರತ್ತು ವಿಧಿಸಿ ಜಾಮೀನು ಆದೇಶಿಸಿದ್ದರಿಂದ ದಾವಣಗೆರೆಯ ಜಯದೇವ ವೃತ್ತದಲ್ಲಿನ ಶಿವಯೋಗ ಮಂದಿರದಲ್ಲಿ ವಾಸ್ತವ್ಯ ಹೂಡಿದರು.
ಇದಕ್ಕೂ ಮುನ್ನ ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಮುರುಘಾ ಶ್ರೀಗಳ ಸಾಕ್ಷ್ಯ ವಿಚಾರಣೆ ಮುಗಿಸಿ, ಜಾಮೀನಿನ ಮೇಲೆ ಬಿಡುಗಡೆಗೆ ಜಿಲ್ಲಾ ಕಾರಾಗೃಹಕ್ಕೆ ಹಸ್ತಾಂತರ ಮಾಡಿದ ಬಳಿಕ ಜಿಲ್ಲಾ ಕಾರಾಗೃಹದಲ್ಲಿ ಎಲ್ಲಾ ನಿಯಮಾನುಸಾರ ಪರಿಶೀಲನೆ ನಡೆಸಿ, ಸೋಮವಾರ ಸಂಜೆ 4.30ಕ್ಕೆ ಶ್ರೀಗಳನ್ನು ಬಿಡುಗಡೆ ಮಾಡಿದರು.
ಸಂಜೆ 5.30ರ ವೇಳೆಗೆ ದಾವಣಗೆರೆಯ ಶಿವಯೋಗ ಮಂದಿರಕ್ಕೆ ಮುರುಘಾ ಶರಣರು ಆಗಮಿಸುತ್ತಿದ್ದಂತೆ, ಭಕ್ತರು ಮಾಲಾರ್ಪಣೆ ಹಾಗೂ ಪುಷ್ಪವೃಷ್ಠಿ ಮಾಡಿ ಸಿಹಿ ಹಂಚುವ ಮೂಲಕ ಜೈಕಾರ ಹಾಕಿ ಸ್ವಾಗತಿಸಿದರು. ಈ ವೇಳೆ ಮುರುಘಾ ಶ್ರೀಗಳು, ಲಿಂಗೈಕ್ಯ ಜಯದೇವ ಸ್ವಾಮೀಜಿಯ ಗದ್ದುಗೆಯ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿದರು.