ಗ್ರಾಮ ಪಂಚಾಯಿತಿ ಸೇವೆ ಸ್ಥಗಿತ

ಗ್ರಾಮ ಪಂಚಾಯಿತಿ ಸೇವೆ ಸ್ಥಗಿತ

ನೌಕರರಿಂದ ಅನಿರ್ದಿಷ್ಟಾವಧಿ ಧರಣಿ

ದಾವಣಗೆರೆ, ಅ.7- ಗ್ರಾಮ ಪಂಚಾಯಿತಿ ಕುಟುಂಬದ ಎಲ್ಲಾ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಗ್ರಾ.ಪಂನಲ್ಲಿ ಕೆಲಸ ಮಾಡುವ 11 ವೃಂದಗಳ ನೌಕರರು ಇಲ್ಲಿನ ಜಿಲ್ಲಾ ಪಂಚಾಯತ್‌ ಕಚೇರಿ ಆವರಣದಲ್ಲಿ  ಸೋಮವಾರ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದರು.

ಈ ವೇಳೆ ಪಿಡಿಒ ಜಿಲ್ಲಾ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಂಗಮೇಶ್‌ ಮಾತನಾಡಿ, ರಾಜ್ಯಾದ್ಯಂತ ಗ್ರಾ.ಪಂ ಸೇವೆ ಸ್ಥಗಿತಗೊಳಿಸಿ ಅ.4ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟ ಪ್ರಾರಂಭಿಸಿದ್ದೇವೆ. ಇದೀಗ ರಾಜ್ಯದ ಎಲ್ಲಾ ಜಿಲ್ಲೆಗಳ ಜಿ.ಪಂ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಿದ್ದು, ನಮ್ಮ ಮನವಿಗೆ ಸ್ಪಂದನೆ ಸಿಗುವವರೆಗೂ ಹೋರಾಟ ನಡೆಸುವುದಾಗಿ ಹೇಳಿದರು.

ಇಲ್ಲಿನ ನೌಕರರು ಎದುರಿಸುವ ಹಲವು ಸಮಸ್ಯೆಗಳನ್ನು ಪರಿಹರಿಸುವಂತೆ ಸುಮಾರು ವರ್ಷಗಳಿಂದ ಇಲಾಖೆ ಹಾಗೂ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದೇವೆ. ಆದರೂ ಯಾವುದಕ್ಕೂ ಸ್ಪಂದಿಸದೇ, ಎಲ್ಲಾ ಸಮಸ್ಯೆಗಳಿಗೂ ಪಿಡಿಒ ಹಾಗೂ ಸಿಬ್ಬಂದಿಗಳೇ ನೇರ ಹೊಣೆಗಾರ ಎಂದು ಹೇಳುವ ಸರ್ಕಾರ ಮತ್ತು ಇಲಾಖೆಯ ಧೋರಣೆ ಖಂಡನೀಯವಾಗಿದೆ ಎಂದು ದೂರಿದರು.

ರಾಜ್ಯದ ಎಲ್ಲಾ ಪಿಡಿಒ ಅಧಿಕಾರಿಗಳ ಹುದ್ದೆಯನ್ನು ಗೆಜೆಟೆಡ್‌ ಗ್ರೂಪ್‌ `ಬಿ’ ದರ್ಜೆಗೆ ಉನ್ನತೀಕರಿಸಬೇಕು. ಜೇಷ್ಠತಾ ಪಟ್ಟಿ ಹಾಗೂ ಬಡ್ತಿಯಲ್ಲಿನ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಬೇಕೆಂದು ಒತ್ತಾಯಿಸಿದರು.

ಒಂದೆಡೆ 7 ವರ್ಷಗಳಿಂದ ಕರ್ತವ್ಯ ಪೂರೈಸುತ್ತಿರುವ ಪಿಡಿಒಗಳನ್ನು ಬೇರೆ ತಾಲ್ಲೂಕಿಗೆ ವರ್ಗಾವಣೆ ಮಾಡುವ ನಿಯಮ ಕೈ ಬಿಡುವುದು ಮತ್ತು ವರ್ಗಾವಣೆ ನಿಯಮಗಳಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ಸಂಘದ ಸಲಹೆ ಪಡೆಯಬೇಕು ಎಂದರು.

ಗ್ರೇಡ್‌-1 ಕಾರ್ಯದರ್ಶಿಗಳಿಗೆ, ಪಿಡಿಒ ಪದೋನ್ನತಿ ಯನ್ನು ಜಿಲ್ಲಾ ಮಟ್ಟದಲ್ಲಿ ಕೊಡುವುದು ಮತ್ತು ಸುಮಾರು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು, ಪ್ರಥಮ ದರ್ಜೆ ಲೆಕ್ಕ ಸಹಾ ಯಕರ ಹುದ್ದೆಗೆ ಬಡ್ತಿ ನೀಡಬೇಕು ಎಂದು ಹೇಳಿದರು.

ಗ್ರಾ.ಪಂ.ಗಳು ಸ್ಥಳೀಯ ಸ್ವಯಂ ಸರ್ಕಾರಗಳಾಗಿ ಕಾರ್ಯ ನಿರ್ವಹಿಸುವಂತಾಗಲು ಗ್ರಾ.ಪಂ ಅಧ್ಯಕ್ಷರು, ಕಾರ್ಯವಾಹಕ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುವಂತಾಗಲು  ಹಾಗೂ ಪಿಡಿಒ ಮುಖ್ಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಲು ಗ್ರಾ.ಪಂ. ಕಚೇರಿ ನಿರ್ವಹಣಾ ಕೈಪಿಡಿ ರಚಿಸಬೇಕೆಂದರು.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿಲ್ಲಾ ಪಂಚಾಯತ್‌ ಹುದ್ದೆಗಳಲ್ಲಿ ಶೇ.33ರಷ್ಟು ಹುದ್ದೆಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಮೀಸಲಿಡುವುದು ಸೇರಿದಂತೆ ಗ್ರಾ.ಪಂ. ಕುಟುಂಬದ ಎಲ್ಲಾ ನೌಕರರ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.

ಈ ವೇಳೆ ಗ್ರಾ.ಪಂ. ಸದಸ್ಯರ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಚೇತನ್‌ ಅರೇಹಳ್ಳಿ, ಗಣೇಶ್‌, ಸಿದ್ದೇಶ್‌, ರಂಗಸ್ವಾಮಿ, ಚಿಕ್ಕಣ್ಣ, ಆನಂದ್, ಮರುಳಸಿದ್ದಪ್ಪ ಮತ್ತಿತರರಿದ್ದರು.

error: Content is protected !!