ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಇಟಿ-ನೀಟ್ ಪ್ರವೇಶ ತರಬೇತಿಗೆ ಚಾಲನೆ
ದಾವಣಗೆರೆ, ಅ. 4 – ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಕಾಲೇಜು ಮಕ್ಕಳಿಗೆ ಕೆಸಿಇಟಿ ಹಾಗೂ ನೀಟ್ ಪ್ರವೇಶಕ್ಕೆ ತರಬೇತಿ ನೀಡುವ ವಿನೂತನವಾದ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ತಿಳಿಸಿದ್ದಾರೆ.
ಜಿಲ್ಲಾ ಪಂಚಾಯ್ತಿ, ಸಾರ್ವಜನಿಕ ಶಿಕ್ಷಣ ಇಲಾಖೆ (ಪಿ.ಯು.) ಹಾಗೂ ಖಾಸಗಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ‘ಸಕ್ಷಮ’ ಸಿಇಟಿ ಮತ್ತು ನೀಟ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದುವರೆಗೂ ಸರ್ಕಾರಿ ಶಾಲಾ ಮಕ್ಕಳನ್ನು ಮಂಡಳಿ ಪರೀಕ್ಷೆಗೆ ಮಾತ್ರ ಸಜ್ಜುಗೊಳಿಸಲಾಗುತ್ತಿತ್ತು. ಈಗ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ ನೀಡಲು ನಿರ್ಧರಿಸಲಾಗಿದೆ. ಆನ್ಲೈನ್ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡುವಲ್ಲಿ ಖಾಸಗಿ ಶಾಲೆಗಳೂ ಕೈ ಜೋಡಿಸಿವೆ. ಎ.ಎಂ.ಡಿ. ಕಂಪನಿ ಸಹ ಭಾಗಿಯಾಗಿದೆ ಎಂದು ತಿಳಿಸಿದರು.
ಪ್ರತಿ ದಿನ 2 ಗಂಟೆಯಂತೆ 90 ದಿನಗಳ ಕಾಲ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಬೇತಿ ನೀಡಲಾಗುವುದು. ಇದಕ್ಕಾಗಿ 1,120 ವಿದ್ಯಾರ್ಥಿಗಳು ನೋಂದಣಿಯಾಗಿದ್ದಾರೆ ಎಂದವರು ಹೇಳಿದರು.
ಅಲ್ಲದೇ, ವಿದ್ಯಾರ್ಥಿಗಳಿಗೆ 17 ವರ್ಷಗಳ ಪ್ರಶ್ನೆಪತ್ರಿಕೆಯನ್ನೂ ನೀಡಲಾಗುವುದು. ಪ್ರತಿ ವಾರ ಪರೀಕ್ಷೆ ನಡೆಸಲಾಗುವುದು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಲಾಗುವುದು ಎಂದು ಸಂಸದೆ ಹೇಳಿದರು.
ಈ ತರಬೇತಿ ಪೂರ್ಣಗೊಳಿಸಿದ ನಂತರ, ವಿದ್ಯಾರ್ಥಿಗಳಿಗೆ ಕ್ರ್ಯಾಶ್ ಕೋರ್ಸ್ ನೀಡುವ ಉದ್ದೇಶವೂ ಇದೆ. ಇದರ ಜೊತೆಗೆ ಎಸ್.ಎಸ್. ಜನಕಲ್ಯಾಣ ಟ್ರಸ್ಟ್ ಮೂಲಕ ವಿದ್ಯಾರ್ಥಿ ವೇತನದ ನೆರವು ನೀಡಲಾಗುವುದು ಎಂದವರು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಯ್ಯ, ತಂದೆ, ತಾಯಿಗಳು ಕಷ್ಟಪಟ್ಟು ದುಡಿದು ನಿಮಗೆ ವಿದ್ಯಾಭ್ಯಾಸಕ್ಕೆ ಕಳುಹಿಸುತ್ತಿರುತ್ತಾರೆ. ನೀವು ಅವರಿಗೆ ನಿಮ್ಮ ಸಾಧನೆಯ ಮೂಲಕ ಗೌರವ ತರಬೇಕು ಎಂದು ತಿಳಿಸಿದರು.
ಜಿ.ಪಂ. ಸಿಇಒ ಸುರೇಶ್ ಇಟ್ನಾಳ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ಮಂಡಳಿ ಪರೀಕ್ಷೆಗೆ ಒತ್ತು ನೀಡಲಾಗುತ್ತದೆ. ಖಾಸಗಿ ಶಾಲೆಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಒತ್ತು ನೀಡಲಾಗುತ್ತದೆ. ಈ ಬಾರಿ, ಖಾಸಗಿ ಹಾಗೂ ಸರ್ಕಾರಿ ಸಹಭಾಗಿತ್ವದಲ್ಲಿ ತರಬೇತಿ ನೀಡುವ ಮೂಲಕ ಮಂಡಳಿ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳೆರಡಕ್ಕೂ ನೆರವು ನೀಡಲಾಗುತ್ತಿದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಮಾತನಾಡಿ, ವಿದ್ಯಾರ್ಥಿಗಳು ಈ ಕಾರ್ಯಕ್ರಮ ಎಷ್ಟು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದರ ಮೇಲೆ ಯಶಸ್ಸು ನಿರ್ಧಾರವಾಗುತ್ತದೆ. ಇಡೀ ಜಿಲ್ಲಾ ವ್ಯವಸ್ಥೆ ವಿದ್ಯಾರ್ಥಿಗಳ ಪರವಾಗಿದೆ. ವಿದ್ಯಾರ್ಥಿಗಳು ಈ ಸೌಲಭ್ಯದ ಪ್ರಯೋಜನ ಪಡೆಯಬೇಕು ಎಂದರು.
ಇದೆ ವೇಳೆ ಯೂಟ್ಯೂಬ್ ಚಾನೆಲ್ಗೆ ಚಾಲನೆ ನೀಡಲಾಯಿತು. ವಿದ್ಯಾರ್ಥಿಗಳಿಗೆ ಸಿಇಟಿ – ನೀಟ್ ಪುಸ್ತಕ ವಿತರಿಸಲಾಯಿತು
ವೇದಿಕೆಯ ಮೇಲೆ ಮೇಯರ್ ಚಮನ್ ಸಾಬ್, ಡಿಡಿಪಿಯು ಎಸ್.ಜಿ. ಕರಿಸಿದ್ದಪ್ಪ, ಖಾಸಗಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿ ಸಂಘದ ಅಧ್ಯಕ್ಷ ಎಸ್.ಜೆ. ಶ್ರೀಧರ್, ಕಾರ್ಯದರ್ಶಿ ಜಯಂತ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಾಯತ್ರಿ ಮತ್ತಿತರರು ಉಪಸ್ಥಿತರಿದ್ದರು.