ಎಡಿಜಿಪಿ ಚಂದ್ರಶೇಖರ್ ವಿರುದ್ಧ ನಗರದಲ್ಲಿ ಜೆಡಿಎಸ್‌ ಪ್ರತಿಭಟನೆ

ಎಡಿಜಿಪಿ ಚಂದ್ರಶೇಖರ್ ವಿರುದ್ಧ ನಗರದಲ್ಲಿ ಜೆಡಿಎಸ್‌ ಪ್ರತಿಭಟನೆ

ದಾವಣಗೆರೆ, ಅ.3- ಕೇಂದ್ರ ಸಚಿವ ಹೆಚ್.ಡಿ. ಕುಮಾರ ಸ್ವಾಮಿ ಅವರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿ ಅವಮಾನಿಸಿದ ಎಡಿಜಿಪಿ ಚಂದ್ರಶೇಖರ್ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜೆಡಿಎಸ್‌ ಜಿಲ್ಲಾ ಘಟಕವು ಗುರುವಾರ ಪ್ರತಿಭಟನೆ ನಡೆಸಿತು.

ಇಲ್ಲಿನ ಪಿ.ಬಿ ರಸ್ತೆಯ ಬೀರಲಿಂಗೇಶ್ವರ ದೇವಸ್ಥಾನ ಬಳಿ ಜಮಾಯಿಸಿದ ಜೆಡಿಎಸ್ ಕಾರ್ಯ ಕರ್ತರು, ಪ್ರತಿಭಟನಾ ಮೆರವಣಿಗೆ ಮೂಲಕ ಎಸಿ ಕಚೇರಿಗೆ ತೆರಳಿ ಉಪ ವಿಭಾಗಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು, ಎಡಿಜಿಪಿ ಚಂದ್ರಶೇಖರ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಈ ವೇಳೆ ಮಾಜಿ ಶಾಸಕ ಹೆಚ್.ಎಸ್. ಶಿವಶಂಕರ್ ಮಾತನಾಡಿ, ಐಎಎಸ್‌, ಐಪಿಎಸ್ ಹಾಗೂ ರಾಜ್ಯದ ಯಾವುದೇ ಅಧಿಕಾರಿಗಳಾಗಲೀ ರಾಜಕೀಯ ವ್ಯಕ್ತಿ ಮತ್ತು ಜನಸಾಮಾನ್ಯರಂತೆ ಮಾತನಾಡುವ ಹಕ್ಕು ಅವರಿಗಿಲ್ಲ. ಅವರಿಗೇ ಆದಂತಹ ನೀತಿ ಮತ್ತು ಚೌಕಟ್ಟು ಇದ್ದು, ಅದನ್ನ ಮೀರಿ ಕೆಲಸ ಮಾಡಿದರೇ ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. 

ಚುನಾಯಿತ ಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಕೇಡರ್‌ ಪ್ರಾಧಿಕಾರದ ಅನುಮತಿ ಪಡೆಯಬೇಕು. ಆದರೆ ಎಡಿಜಿಪಿ ಚಂದ್ರಶೇಖರ್‌ ಅವರು, ಹೆಚ್.ಡಿ. ಕುಮಾರ ಸ್ವಾಮಿ ಅವರ ವಿರುದ್ಧ ಅವಹೇಳನಕಾರಿಯಾಗಿ ಪದ ಬಳಕೆ ಮಾಡಿದ್ದಲ್ಲದೇ, ಪತ್ರ ಕಳುಹಿಸಿ ರುವುದನ್ನು ಗಮನಿಸಿದರೆ ಅವರು ಅಧಿಕಾರಿ ಆಗುವುದಕ್ಕೆ ಲಾಯಕ್ಕಿಲ್ಲ ಎಂದು ಟೀಕಿಸಿದರು.

ಎಡಿಜಿಪಿ ಚಂದ್ರಶೇಖರ್‌ ಅನ್ಯ ರಾಜ್ಯ ದವರು, ಇಲ್ಲಿ ಅಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವ ಮೂಲಕ ರಾಜ್ಯದ ಜನರ ಕೆಂಗ ಣ್ಣಿಗೆ ತುತ್ತಾಗಿದ್ದಾರೆ ಎಂದು ಆರೋಪಿಸಿದರು.

ರಾಜ್ಯಪಾಲರು ಕೂಡಲೇ ನಮ್ಮ ಮನವಿಗೆ ಸ್ಪಂದಿಸಿ, ಎಡಿಜಿಪಿ ಚಂದ್ರಶೇಖರ್‌ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜತೆಗೆ ಅವರನ್ನು ಅವರ ತವರು ರಾಜ್ಯವಾದ ಹಿಮಾಚಲ ಪ್ರದೇಶಕ್ಕೆ ಸ್ಥಳಾಂತರಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜಿಲ್ಲಾಧ್ಯಕ್ಷ ಚಿದಾನಂದ, ಹರಿಹರ ನಗರಸಭಾ ಅಧ್ಯಕ್ಷರಾದ ಕವಿತಾ ಮಾರುತಿ ಬೇಡರ್‌, ಜಂಬಣ್ಣ, ಅಡಕಿ ಕುಮಾರ್‌, ಲತಾ ಕೊಟ್ರೇಶ್‌, ಮಮತಾ, ಜೆ. ಅಮಾನುಲ್ಲಾ, ದುಗ್ಗೇಶ್‌, ಧನ್ಯ ಕುಮಾರ್‌, ಬಂಡೇರ್‌ ತಿಮ್ಮಣ್ಣ, ಬಾಬಣ್ಣ ಮತ್ತಿತರರಿದ್ದರು.

error: Content is protected !!