‘ಕೃಷಿಕರ ಸಮೃದ್ಧಿಗೆ ಸಸ್ಯ ಸಂತೆ-2024’ ಉದ್ಘಾಟಿಸಿದ ಡಾ. ವಿ. ವೆಂಕಟಸುಬ್ರಹ್ಮಣ್ಯನ್
ದಾವಣಗೆರೆ, ಅ.1- ಆಹಾರ ಭದ್ರತೆಗೆ ಕಾರಣರಾಗಿರುವ ಭಾರತೀಯ ಕೃಷಿಕರ ಸಬಲೀಕರಣಕ್ಕೆ ಒತ್ತು ನೀಡುವ ಅವಶ್ಯವಿದ್ದು, ಕೃಷಿ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಾಗಿದೆ ಎಂದು ಬೆಂಗಳೂರಿನ ಐಸಿಎಆರ್ – ಕೃಷಿ ತಂತ್ರಜ್ಞಾನ ಅಳವಡಿಕೆ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ. ವಿ. ವೆಂಕಟಸುಬ್ರಹ್ಮಣ್ಯನ್ ಹೇಳಿದರು.
ನಗರದ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಐಸಿಎಆರ್- ಕೃಷಿ ತಂತ್ರಜ್ಞಾನ ಅಳವಡಿಕೆ ಸಂಸ್ಥೆ ಬೆಂಗಳೂರು, ಐಸಿಎಆರ್ – ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ `ಕೃಷಿಕರ ಸಮೃದ್ಧಿಗೆ ಸಸ್ಯ ಸಂತೆ-2024′ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತದ ರೈತರು ನಮ್ಮ ದೇಶದ 140 ಕೋಟಿ ಜನರಿಗೆ ಆಹಾರ ಭದ್ರತೆ ಕಲ್ಪಿಸಿ, ಉಳಿದ ಆಹಾರ ಸಾಮಗ್ರಿಗಳನ್ನು ಹೊರ ದೇಶಗಳಿಗೆ ರಫ್ತು ಮಾಡುವಷ್ಟು, ನಮ್ಮ ದೇಶವನ್ನು ಸುಭೀಕ್ಷವಾಗಿ ಇಡಲು ಶ್ರಮ ವಹಿಸುತ್ತಿದ್ದಾರೆ. ಇಂತಹ ಕೃಷಿಕರಿಗೆ ಸರ್ಕಾರ ಸಕಲ ಸವಲತ್ತುಗಳನ್ನು ದೊರಕಿಸಿಕೊಡಬೇಕಾದ ಅಗತ್ಯವಿದೆ ಎಂದರು.
ಮಳೆ ಕೊರತೆ, ಜಲಾಶಯಗಳಿಂದ ಸರಾಗವಾಗಿ ಬೆಳೆಗಳಿಗೆ ನೀರು ಹರಿಯದಿರುವುದು ರೈತರ ಸಾಲಬಾಧೆ ಸೇರಿದಂತೆ ಅನೇಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಸಂಕಷ್ಟ ಕಾಲದಲ್ಲಿ ರೈತರಿಗೆ ಬ್ಯಾಂಕುಗಳಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲ-ಸೌಲಭ್ಯ, ನೀರಾವರಿ ಯೋಜನೆ, ರೈತ ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಿದರೆ ಮಾತ್ರ ರೈತರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.
ಇಂದಿನ ಯುವ ಸಮೂಹ ಫಿಜ್ಜಾ, ಬರ್ಗರ್ ನಂತಹ ಪಾಶ್ಚಿಮಾತ್ಯ ಆಹಾರ ಶೈಲಿಗೆ ಮಾರು ಹೋಗಿದ್ದು, ನಮ್ಮ ದೇಶದಲ್ಲಿನ ಸಿರಿಧಾನ್ಯಗಳು, ಹಣ್ಣು, ತರಕಾರಿ, ಹಾಲು ಉತ್ಪನ್ನಗಳನ್ನು ನಿತ್ಯ ಆಹಾರದಲ್ಲಿ ಬಳಕೆ ಮಾಡಿಕೊಂಡರೆ ಜನರ ಆರೋಗ್ಯದ ಜೊತೆಗೆ ದೇಶದ ಆರ್ಥಿಕತೆ ಕೂಡ ಹೆಚ್ಚಾಗಲಿದೆ ಎಂದರು.
ನಮ್ಮ ದೇಶದ ಆಯುರ್ವೇದ, ಯೋಗ, ಧ್ಯಾನ, ವಾಸ್ತು ಶಿಲ್ಪ, ಸನಾತನ ಸಂಸ್ಕೃತಿ ಎಲ್ಲದರಲ್ಲೂ ಉನ್ನತ ಮಟ್ಟದ್ದು ಎಂದು ಸಾಬೀತಾಗಿದೆ. ಆದರೂ ನಮ್ಮ ಜನ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿರುವುದು ಸರಿಯಾದುದು ಅಲ್ಲ ಎಂದು ಹೇಳಿದರು.
ನಮ್ಮ ದೇಶದಲ್ಲಿ ಯಾವುದು ಇಲ್ಲವೋ ಅದನ್ನು ಅಳವಡಿಸಿಕೊಳ್ಳುವ ಅಗತ್ಯವಿದ್ದು, ಭಾರತ ಅತ್ಯುತ್ತುಮ ದೇಶವಾಗಿ ಹೊರ ಹೊಮ್ಮುತ್ತಿರುವಾಗ ವಿದೇಶಿ ಪದ್ಧತಿ ಅನುಸರಣೆ ಸಲ್ಲದು ಎಂದರು.
ತರಳಬಾಳು ಗ್ರಾಮೀಣಾಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಡಾ. ಕೆ.ಪಿ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಜಿ.ಸಿ. ರಾಘವೇಂದ್ರ ಪ್ರಸಾದ್, ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ನಿರ್ದೇಶಕರಾದ ಹೆಚ್.ಡಿ.ಮಹೇಶ್ವರಪ್ಪ, ಹೆದ್ನೆ ಮುರಿಗೇಂದ್ರಪ್ಪ, ಇಟಗಿ ಶಿವಣ್ಣ, ಸಿ.ಟಿ. ಚಂದ್ರಪ್ಪ ಮತ್ತಿತರರು ಉಪಸ್ಥಿತರಿದ್ದರು.
ಹಿರಿಯ ವಿಜ್ಞಾನಿ ಡಾ.ಟಿ.ಎನ್. ದೇವರಾಜ್ ಸ್ವಾಗತಿಸಿದರು. ವಿಷಯ ತಜ್ಞ ಡಾ.ಟಿ.ಜಿ. ಅವಿನಾಶ್ ನಿರೂಪಿಸಿದರು. ವಿಷಯ ತಜ್ಞ ಎಂ.ಜಿ. ಬಸವನಗೌಡ ವಂದಿಸಿದರು.
ಗಮನ ಸೆಳೆದ ಸಸ್ಯ ಸಂತೆ: ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ದಾವಣಗೆರೆ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಆಯೋಜಿಸಿದ್ದ ವಿವಿಧ ತಳಿಯ ಸಸ್ಯಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳು ಗಮನ ಸೆಳೆದವು.
ವಿವಿಧ ತಳಿಯ ಸಸ್ಯ ಪ್ರಭೇದಗಳು ಸೇರಿದಂತೆ ಸಾವಯವ ಆಹಾರ ಪದಾರ್ಥಗಳು, ಧಾನ್ಯಗಳು ಮಾರಾಟ ಮಾಡಲ್ಪಟ್ಟವು.