ದಾವಣಗೆರೆ-ಚಿತ್ರದುರ್ಗ ಸಮಿತಿಗಳ ರಚನಾ ಸಭೆಯಲ್ಲಿ ದೇವಸ್ಥಾನ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ
ದಾವಣಗೆರೆ, ಅ. 1- ಉಡುಪಿ ಜಿಲ್ಲೆಯ ಕಾಪು ಕ್ಷೇತ್ರದ ಹೊಸ ಮಾರಿಗುಡಿ ದೇವಸ್ಥಾನದ ಸರ್ವಾಂಗೀಣ ಅಭಿವೃದ್ಧಿಗೆ ಸರ್ವ ಭಕ್ತಾದಿಗಳು ಕೈಜೋಡಿಸಬೇಕು ಎಂದು ದೇವಸ್ಥಾನ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ ಮನವಿ ಮಾಡಿದರು.
ನಗರದ ಭಂಟರ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಅಭಿವೃದ್ಧಿ, ದಾವಣಗೆರೆ-ಚಿತ್ರದುರ್ಗ ಸಮಿತಿಗಳ ರಚನಾ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸುಮಾರು 99 ಕೋಟಿ ರೂ. ವೆಚ್ಚದಲ್ಲಿ ಮಾರಿಗುಡಿ ಅಭಿವೃದ್ಧಿಪಡಿಸಲು ಜೀರ್ಣೋ ದ್ಧಾರ ಸಮಿತಿ ಸಭೆ ತೀರ್ಮಾನಿಸಿದೆ. ವಿಶ್ವದ ಒಂಭತ್ತು ದೇಶಗಳಲ್ಲಿ ದೇವಸ್ಥಾನ ಅಭಿವೃದ್ಧಿ ಸಮಿತಿ ರಚಿಸಲಾಗಿದೆ. ಮಸ್ಕತ್‌ನಲ್ಲಿ ಮೊದಲ ವಿದೇಶಿ ಸಮಿತಿ ಉದ್ಘಾಟನೆ ಜೊತೆಗೆ ಯುಎಸ್‌ಎ, ಆಸ್ಟ್ರೇಲಿಯಾ, ಆಫ್ರಿಕಾ, ಕತಾರ್ ಸೇರಿದಂತೆ ಎಲ್ಲಾ ಒಂಭತ್ತು ದೇಶಗಳ ಸಮಿತಿಗಳನ್ನು ಉದ್ಘಾಟಿಸಲಾಗಿದೆ ಎಂದು ಹೇಳಿದರು.
ಅದೇ ರೀತಿ ಮುಂಬಯಿ, ಬೆಂಗಳೂರುಗಳಲ್ಲಿ ಸಮಿತಿಗಳಿದ್ದು, ಹುಬ್ಬಳ್ಳಿಯಲ್ಲಿ ಪ್ರಕ್ರಿಯೆ ಮುಗಿಸಿ, ಶಿವಮೊಗ್ಗಕ್ಕೆ ತೆರಳಿ ಅಲ್ಲಿನ ಭಕ್ತರಿಗೆ ಮಾಹಿತಿ ನೀಡುವುದಾಗಿ ತಿಳಿಸಿದರು.
ಕಾಪುವಿನಲ್ಲಿ ವರ್ಷದಲ್ಲಿ ಮೂರು ಬಾರಿ ದೊಡ್ಡಮಟ್ಟದಲ್ಲಿ ಮಾರಿ ಪೂಜೆ ನಡೆಯ ಲಿದ್ದು, ಸುಗ್ಗಿ ಪೂಜೆ ಎಂದೇ ಖ್ಯಾತಿಯಾಗಿದೆ. ರಾಜ್ಯದ ನಾನಾ ಭಾಗಗಳಿಂದ ಮತ್ತು ಪ್ರಪಂಚದಾದ್ಯಂತ ಇರುವ ಅಮ್ಮನವರ ಲಕ್ಷಾಂತರ ಭಕ್ತರು ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ಹೀಗಾಗಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಂದಾಗಿರುವುದಾಗಿ ಹೇಳಿದರು.
ಅಮ್ಮನವರ ಗರ್ಭಗುಡಿಯನ್ನು ಮೂವತ್ತು ಕೋಟಿ ರೂ. ವೆಚ್ಚದಲ್ಲಿ ನಿರ್ಮಿ ಸಲು ಉದ್ದೇಶಿಸಲಾಗಿದ್ದು, ಬಾಗಲಕೋಟೆ ಜಿಲ್ಲೆಯ ಇಳಕಲ್‌ನಲ್ಲಿನ ಕೆಂಪು ಶಿಲೆಯನ್ನು ಆಯ್ಕೆ ಮಾಡಲಾಗಿದೆ ಎಂದರು.
ನವದುರ್ಗ ಲೇಖನ ಯಜ್ಞ ಕ್ಷೇತ್ರದ ಸಾನಿಧ್ಯ ವೃದ್ಧಿಗಾಗಿ ನವ ವಿಧದ ಧಾರ್ಮಿಕ ವಿಧಿ ವಿಧಾನಗಳು ನೆರವೇರಲಿವೆ. ನವದುರ್ಗಾ ಲೇಖನ ಯಜ್ಞ ಮತ್ತು ನವಚಂಡಿ ಯಾಗವನ್ನು ಒಳಗೊಂಡಿದೆ. ನವರಾತ್ರಿಯ ನವದುರ್ಗೆಯರ ಹೆಸರನ್ನು ಒಳಗೊಂಡ ಲೇಖನ ಯಜ್ಞದಲ್ಲಿ ಭಾಗವಹಿಸುವವರು ಸಮಿತಿಯಿಂದ ಪುಸ್ತಕ ಪಡೆದುಕೊಂಡು ಅಕ್ಟೋಬರ್ 29 ರಿಂದ 45 ದಿನಗಳಲ್ಲಿ ಲೇಖನವನ್ನು ಬರೆದು ತಲುಪಿಸಬೇಕು ಎಂದು ಮಾಹಿತಿ ನೀಡಿದರು.
ಭಕ್ತಾದಿಗಳು ಬರೆದ ಲೇಖನ ಪುಸ್ತಕವನ್ನು ದೇವಸ್ಥಾನ ಸಮಿತಿಯವರು ಭವಿಷ್ಯದಲ್ಲಿ ಒಂದು ಖಜಾನೆ ರೀತಿಯಲ್ಲಿ ಸಂಗ್ರಹಿಸಿ ವಾಗೀಶ್ವರೀ ಅಥವಾ ಪುಸ್ತಕ ದೇವತೆಯಾಗಿ ಪೂರ್ಣಗೊಳಿಸುವ ಸಂಕಲ್ಪ ಇದೆ. ಪುಸ್ತಕದ ಜೊತೆ ಕೊಡುವ ಚೀಲದಲ್ಲಿ ಪ್ರತಿ ಮಂತ್ರಕ್ಕೆ ಒಂದು ಮುಷ್ಠಿಯಂತೆ ಅಕ್ಕಿಯನ್ನು ತೆಗೆದಿರಿಸಬೇಕು. ಅಕ್ಕಿಯನ್ನು ದೇವಸ್ಥಾನದಲ್ಲಿ 2025 ರ ಫೆಬ್ರವರಿ 4 ರಂದು ನಡೆಯುವ ನವಚಂಡಿ ಹವನ ಸಂದರ್ಭ ಪ್ರಸಾದವಾಗಿ ನೈವೇದ್ಯೆ ತಯಾರಿಸಿ, ಭಕ್ತರನ್ನು ಒಳಪಡಿಸುವ ಯೋಜನೆ ಇದೆ ಎಂದು ಹೇಳಿದರು.
ಲೇಖನ ಯಜ್ಞದಲ್ಲಿ ಭಾಗವಹಿಸುವವರು 199 ರೂ. ನೀಡಿ ಶ್ರೀ ಹೊಸ ಮಾರಿಗುಡಿ ಕಾಪು ಎಂಬ ವೆಬ್‌ಸೈಟ್ ಅಥವಾ 9844749993 ಗೆ ಸಂಪರ್ಕಿಸಿ ಹೆಸರು ನೋಂದಾಯಿಸಲು ಕೋರಿದರು.
ಕಾಪು ಶಾಸಕ ಗುರ್ಮೆ ಸುರೇಶ್, ಮಾಜಿ ಶಾಸಕ ರಘುನಾಥ್ ಭಟ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜೆಜೆಎಂ ಮೆಡಿಕಲ್ ಕಾಲೇಜಿನ ಪ್ರಾಚಾರ್ಯರಾದ ಶುಕ್ಲ ಶೆಟ್ಟಿ, ಮಲ್ಲಾಡಿ ಪ್ರಭಾಕರ್ ಶೆಟ್ಟಿ, ಯೋಗೀಶ್ ಬಿ. ಶೆಟ್ಟಿ, ಸಿಎ ಉಮೇಶ್ ಶೆಟ್ಟಿ, ಮೋತಿ ಸುಬ್ರಹ್ಮಣ್ಯ, ಅರುಣ್ ಶೆಟ್ಟಿ, ಉದಯ ಕುಮಾರ್, ಮೇಯರ್ ಕೆ. ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತಕುಮಾರ್, ಲತಿಕಾ ದಿನೇಶ್ ಕೆ. ಶೆಟ್ಟಿ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.