ಜಿಲ್ಲಾ ಕಾಂಗ್ರೆಸ್‍ನಿಂದ ಗಾಂಧಿ ನಡಿಗೆ

ಜಿಲ್ಲಾ ಕಾಂಗ್ರೆಸ್‍ನಿಂದ ಗಾಂಧಿ ನಡಿಗೆ

ದಾವಣಗೆರೆ, ಅ. 2 – ಭಾರತ ಬ್ರಿಟಿಷರ ಆಳ್ವಿಕೆಯಿಂದ ಸ್ವತಂತ್ರ ಪಡೆದುಕೊಂಡ ದಿನದಿಂದಲೂ ಸಹ ನಿರಂತರವಾಗಿ ಪ್ರತಿ ವರ್ಷ ನೆನೆದುಕೊಳ್ಳುವ ವ್ಯಕ್ತಿ ಎಂದರೆ ಅದುವೇ ರಾಷ್ಟ್ರಪಿತ ಮಹಾತ್ಮ ಗಾಂಧಿಜಿ ಎಂದು ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಓಬೇದುಲ್ಲಾ ಷರೀಫ್ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಗಾಂಧಿ ನಡಿಗೆ ಮತ್ತು ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿ ಆಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಭಾರತೀಯ ಪ್ರಜೆಗಳು ಅದರಲ್ಲೂ ವಿದ್ಯಾರ್ಥಿಗಳು ಗಾಂಧಿ ತಾತ ಎಂದೇ ಪ್ರತಿವರ್ಷ ಅವರ ಜಯಂತ್ಯೋತ್ಸವ ದಿನವನ್ನು ಸ್ಮರಿಸುತ್ತಾರೆ. ಅವರ ವೇಷ ಭೂಷಣವನ್ನು ಹಾಕಿಕೊಳ್ಳುವುದು, ಅವರ ಕೊಡುಗೆಗಳನ್ನು ನೆನೆಯುವುದು, ನಮ್ಮೆಲ್ಲರ ಕರ್ತವ್ಯ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧೀಜಿಯವರ ಕೊಡುಗೆ ಬಹಳಷ್ಟಿದೆ. ಅದೇ ರೀತಿ ದೇಶವನ್ನು ಬ್ರಿಟಿಷರ ಚುಕ್ಕಾಣಿಯಿಂದ ಬಿಡಿಸಲು ಮಹಾತ್ಮ ಅವರ ಶ್ರಮ ಅಪಾರ. ಅವರ ಜೀವನ ಆದರ್ಶವಾಗಿದ್ದು, ಅದನ್ನು ಪ್ರತಿಯೊಬ್ಬರೂ ಅಳವಡಿಸಿಕೊಳ್ಳ ಬೇಕು. ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಇಂದು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದರು.

ಅದೇ ರೀತಿ ಲಾಲ್ ಬಹದ್ದೂರ್ ಶಾಸ್ತ್ರೀಯವರೂ ಸಹ ಗಾಂಧೀಜಿ ಯವರ ಅನುಯಾಯಿಯಾಗಿ ಅವರ ಸಿದ್ಧಾಂತದಲ್ಲೇ ರಾಜಕೀಯ ಮತ್ತು ವೈಯಕ್ತಿಕ ಜೀವನವನ್ನು ನಡೆಸಿದರು. ರಾಜಕೀಯ ಜೀವನದಲ್ಲಿ ಪ್ರಮುಖ ಖಾತೆಗಳನ್ನು ಹೊಂದಿದ್ದ ಅವರು, 1964ರ ಜೂನ್ ನಿಂದ 1966 ಜನವರಿ ವರೆಗೆ ದೇಶದ 2ನೇ ಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಭಾರತದ ರಾಜಕೀಯ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಶಾಸ್ತ್ರಿ ಅವರು, ಜೈ ಜವಾನ್, ಜೈ ಕಿಸಾನ್ ಎಂಬ ಘೋಷ ವಾಕ್ಯದ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಹೊಳಪು ನೀಡಿದರು ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಮಾತನಾಡಿ, ಗಾಂಧೀಜಿ ಈ ದೇಶಕ್ಕೆ ನೀಡಿದ ಕೊಡುಗೆ, ಸಾಹಿತ್ಯ ಕೊಡುಗೆ, ತತ್ವಗಳು, ಬೋಧನೆ, ಸ್ವಾತಂತ್ರ್ಯ ಹೋರಾಟ, ಸಿದ್ಧಾಂತಗಳು ಎಲ್ಲ ರೀತಿಯ ಕೊಡುಗೆಗಳಿಂದ ರಾಷ್ಟ್ರಪಿತನಾಗಿ ಎಲ್ಲರ ಮನದಲ್ಲಿ ಉಳಿದಿದ್ದಾರೆ. ಇಂದು ಅವರ ಜನ್ಮ ದಿನವನ್ನು ರಾಷ್ಟ್ರೀಯ ಹಬ್ಬವಾಗಿ ಗಾಂಧಿ ಜಯಂತಿ ಎಂದು ಪ್ರತಿವರ್ಷ ಆಚರಣೆ ಮಾಡುತ್ತಿದ್ದೇವೆ. ಈ ದೇಶದ ಸ್ವಾತಂತ್ರ್ಯಕ್ಕೆ ಅಹಿಂಸಾ ಮಾರ್ಗದಲ್ಲಿ ಹೋರಾಡಿದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮ ದಿನಾಚರಣೆಯಲ್ಲಿ ಅವರ ನೆನಪು ಎಂದಿಗೂ ಅಜರಾಮರ ಎಂದರು.

ಗಾಂಧೀಜಿಯವರ ತತ್ವಗಳಿಗೆ ಮುಖ್ಯ ಸ್ಫೂರ್ತಿ ಭಗವದ್ಗೀತೆ ಮತ್ತು ರಾಮಯಣ. 

ಪ್ರಸಿದ್ಧ ಸಾಹಿತಿ ಲಿಯೋ ಟಾಲ್‍ಸ್ಟಾಯ್ ರವರ ಬರಹಗಳು. ಪುಸ್ತಕಗಳನ್ನು ನಾವುಗಳು ಓದುವುದರಿಂದ ಹೆಚ್ಚಿನ ಜ್ಞಾನ ಮಾತ್ರವಲ್ಲದೇ ಸತ್ಯ, ಪ್ರಾಮಾಣಿಕತೆ, ಒಳ್ಳೆಯ ಗುಣಗಳನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕೆಂದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ,  ಎಸ್‌. ಮಲ್ಲಿಕಾರ್ಜುನ್, ಮಹಾಪೌರ ಕೆ.ಚಮನ್ ಸಾಬ್, ಉಪ ಮಹಾ ಪೌರ ಸೋಗಿ ಶಾಂತಕುಮಾರ್, ಕೆ.ಜಿ. ಶಿವಕುಮಾರ್, ಎ. ನಾಗರಾಜ್, ಜಿ.ಎಸ್. ಮಂಜುನಾಥ್, ಸುರಭಿ ಶಿವಮೂರ್ತಿ, ಅನಿತಾಬಾಯಿ ಮಾಲತೇಶ್ ಮತ್ತು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!