“ರಾಮಣ್ಣನ 300 ಅಡಿ ಗಣಪ್ಪ!!”

“ರಾಮಣ್ಣನ 300 ಅಡಿ ಗಣಪ್ಪ!!”

 ದಾವಣಗೆರೆಯ ಸಾರ್ವಜನಿಕ ಗಣೇಶೋತ್ಸವಕ್ಕೆ ಮತ್ತೊಂದು ರೂಪ ಕೊಟ್ಟವರು ದಿ. ಪಿ. ಹಾಲೇಶ್. ಇವರು ಕನ್ನಡ ಪರ ಹೋರಾಟಗಾರರು, ಹಾಲೇಶ ಪ್ರಿಂಟಿಂಗ್ ಪ್ರೆಸ್ಸಿನ ಮಾಲೀಕರು, `ಬಹಿರಂಗ’ ಪತ್ರಿಕೆಯ ಸಂಪಾದಕರು, ನಗರಸಭಾ ಸದಸ್ಯರು ಸಹಾ ಆಗಿದ್ದರು. ವಸಂತ ರಸ್ತೆ (ಬಾರ್‌ಲೈನ್ ರೋಡ್, ಈಗ ಈ ರಸ್ತೆಗೆ  `ಪಿ.ಹಾಲೇಶ್ ರಸ್ತೆ’ ಎಂದೂ  ಕರೆಯುತ್ತಾರೆ)ಇಲ್ಲಿನ ಇವರ ಕಟ್ಟಡದ ಮೇಲೆ ದೊಡ್ಡ ಗಾತ್ರದ ಗಣೇಶನನ್ನು ಕೂರಿಸುವ ಪರಿಪಾಠ ಆರಂಭಿಸಿದರು. 40, 80 ಕೊನೆಗೆ 120 ಅಡಿಗಳವರೆಗೂ ಎತ್ತರದ ಗಣೇಶನನ್ನು ಕೂರಿಸಿದರೆಂದು ಕಾಣುತ್ತದೆ. ಪರ ಊರುಗಳಿಂದಲೂ ಜನ ಈ ಬೃಹತ್ ಗಣೇಶನನ್ನು ನೋಡಲು ಬರುತ್ತಿದ್ದರು. `ಹಾಲೇಶಿ ಗಣಪತಿ’ ಎಂದೇ ಇದು ಪ್ರಖ್ಯಾತವಾಯಿತು. ಟೈಲರ್ ರಾಮಣ್ಣ ತುಂಬಾ ಹಾಸ್ಯ ಪ್ರವೃತ್ತಿಯವನು, ಚುರುಕು ಬುದ್ಧಿಯವನೂ ಆಗಿದ್ದ. ಈತ ತಾನೂ ನಗುತ್ತಾ, ಎಲ್ಲರನ್ನೂ ನಗಿಸುತ್ತಾ ಇರುತ್ತಿದ್ದುದರಿಂದ ಅವನನ್ನು ಕೆಲವರು ಟೈಲರ್ ರಾಮಣ್ಣ ಎನ್ನುವ ಬದಲು `ತೆನಾಲಿ ರಾಮಣ್ಣ’ ಎನ್ನುತ್ತಿದ್ದರು. ಬೀದಿಯ ಮಕ್ಕಳು ಹಾಲೇಶಿ  ಗಣಪತಿಯ ಗಾತ್ರದ ಬಗ್ಗೆ ಮಾತಾಡುತ್ತಿದ್ದರು.

100 ಅಡಿಯಂತೆ ಅಂತ ಒಬ್ಬ,  ಅಲ್ಲಾ 120 ಅಡಿ ಯಂತೆ ಎಂದು ಇನ್ನೊಬ್ಬ ಹೇಳಿದ. ಮಕ್ಕಳಲ್ಲಿ ಚರ್ಚೆ ನಡೆದಿತ್ತು. ಅಲ್ಲೇ ಕಟ್ಟೆ ಮೇಲೆ ಬಟ್ಟೆ ಹೊಲಿಯುತ್ತಿದ್ದ ರಾಮಣ್ಣ `ಅದೇನ್ ದೊಡ್ಡದು ಬಿಡ್ರೋ ನಾನು 300 ಅಡಿ ಗಣಪ್ಪನ್ನ ನಮ್ಮನೇಲಿ ಕೂರ್ಸಿದೀನಿ’ ಎಂದ. ಮಕ್ಕಳು ಗೊಳ್  ಎಂದು ನಕ್ಕರು. `ನಗಬೇಡ್ರಲೇ  ಬೇಕಿದ್ರೆ ಸಾಯಂಕಾಲ ನಮ್ಮನಿಗೆ ಬಂದು ನೋಡ್ರಿ’ ಎಂದ ರಾಮಣ್ಣ. ಮಕ್ಕಳು ಬಿಡುತ್ತಾರೆಯೇ. ಸಾಯಂಕಾಲ ರಾಮಣ್ಣನ ಮನೆಗೆ ಹೋದರು. `300 ಅಡಿ ಗಣೇಶ ಎಲ್ಲಿ ರಾಮಣ್ಣ?’ ಎಂದರು. `ಒಳಗೆ ಬರ್ರಿ ತೋರಿಸ್ತೀನಿ ಅಂದ ರಾಮಣ್ಣ  ಒಳಗೆ ಕೂರಿಸಿದ್ದ ಸುಮಾರು ಒಂದು ಅಡಿ ಗಾತ್ರದ ಗಣೇಶನನ್ನು ತೋರಿಸಿ ನೋಡ್ರೋ 300 ಅಡಿ ಗಣಪ್ಪ’ ಎಂದ. `ಒಂದಡಿ ಗಣಪ್ಪನ ತೋರ್ಸಿ 300 ಅಡಿ ಅಂತ ಅಂತೀಯಲ್ಲ ರಾಮಣ್ಣ!!’ ಎಂದವು ಮಕ್ಕಳು. `ಒಂದು ಅಡಿ ಅಂದ್ರೆ 30 ಸೆಂಟಿ ಮೀಟ್ರು ಹೌದೋ ಅಲ್ವೋ, ಗಣಪ್ಪನ ಕೆಳಗೆ ನೋಡ್ರೀ’ ಎಂದ ರಾಮಣ್ಣ. ಒಂದು ಹಾಳೆಯ ಮೇಲೆ ದೊಡ್ಡ ಅಕ್ಷರದಲ್ಲಿ `1 ಸೆಂ.ಮೀ. = 10 ಅಡಿ’ ಎಂದು ಬರೆದಿಟ್ಟಿದ್ದ. `ಇದೆಂಗೆ ಆಗುತ್ತೆ?’ ಎಂದು ಕೇಳಿದವು ಮಕ್ಕಳು. ಪಕ್ಕದ ಗೋಡೆಗೆ ನೇತು ಹಾಕಿದ್ದ ಕರ್ನಾಟಕದ ಮ್ಯಾಪ್ ಅಂದರೆ ಭೂಪಟದಲ್ಲಿನ ಅಳತೆಯನ್ನು ತೋರಿಸಿದ ರಾಮಣ್ಣ. ‘1  ಸೆಂ.ಮೀ.=8 ಕಿಲೋ ಮೀಟರ್ ಎಂದು ಅದರಲ್ಲಿ ನಮೂದಾಗಿತ್ತು. `ಶಾಲ್ಯಾಗೆ ಈ ಲೆಕ್ಕ ಅಳತಿ  ಒಪ್ತೀರಿ ಅಂದ್ಮೇಲೆ ಇಲ್ಲಿ ಗಣಪ್ಪನ ಅಳತೀಗೂ ಒಪ್ಪಲೇಬೇಕು’ ಎಂದ ರಾಮಣ್ಣ. ಅಲ್ಲಿಂದ  ನಗುತ್ತಾ ಬಂದ ಮಕ್ಕಳು  ನಮಗೆ ಇದನ್ನೆಲ್ಲಾ ರಂಜನೀಯವಾಗಿ ಹೇಳಿದರು.

  ಹೆಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತ

error: Content is protected !!