ಯುವ ಮತ್ತು ಮಹಿಳಾ ನಾಯಕತ್ವ ಶಿಬಿರದಲ್ಲಿ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್ ಅಭಿಮತ
ದಾವಣಗೆರೆ. ಸೆ. 29 – ಪ್ರಸ್ತುತ ಧರ್ಮ, ಜಾತಿ, ವರ್ಗ, ಲಿಂಗಬೇಧವನ್ನು ಮೀರಿ ವಿಶಾಲವಾದ ತಳಹದಿಯ ಮೇಲೆ ಮಹಿಳಾ ನಾಯಕತ್ವದಲ್ಲಿ ದೇಶವನ್ನು ಕಟ್ಟುವ ಅಗತ್ಯವಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್ ಹೇಳಿದರು.
ನಗರದ ರೋಟರಿ ಬಾಲಭವನದಲ್ಲಿ ಸ್ಲಂ ಜನಾಂದೋಲನಾ ಕರ್ನಾಟಕ ಹಾಗೂ ಸಾವಿತ್ರಿ ಬಾಯಿ ಪುಲೆ ಮಹಿಳಾ ಸಂಘಟನೆ ಜಿಲ್ಲಾ ಸಮಿತಿಯಿಂದ ಕಳೆದ ವಾರ ಹಮ್ಮಿಕೊಂಡಿದ್ದ ಯುವ ಮತ್ತು ಮಹಿಳಾ ನಾಯಕತ್ವ ಶಿಬಿರ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂವಿಧಾನವು ಮಹಿಳೆಯರೆ ಲ್ಲರಿಗೂ ಸಮಾನತೆ, ಸಮಾನ ಅವಕಾಶ ಮತ್ತು ಸವಲತ್ತುಗಳನ್ನು ಹೊಂದುವ ಅವಕಾಶವನ್ನು ಕಲ್ಪಿಸಿದೆ. ಮಹಿಳೆಯರು ಸ್ಥಳೀಯ ಚಳುವಳಿಗಳ ಮುಖಾಂತರ ನಾಯಕಿಯರಾಗಿ ಮುಂದೆ ಬಂದಿದ್ದರೆ. ಅದೇ ನಿಟ್ಟಿನಲ್ಲಿ ಮಹಿಳೆಯರು ರಾಷ್ಟ್ರಮಟ್ಟದಲ್ಲಿ ಪಾಲ್ಗೊಳ್ಳಬೇಕಾಗಿದೆ.
ಇದಕ್ಕಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವಂತಹ ಮತ್ತು ಮಹಿಳೆಯರೇ ಸ್ವಯಂ ನಿರ್ಧಾರ ಕೈಗೊಳ್ಳುವಂತಹ ಅವಕಾಶ ಮಾಡಿಕೊಡಬೇಕಿದೆ. ಮಹಿಳೆಯರು ಸಮಾಜದ ಎಲ್ಲಾ ಸಮುದಾಯಗಳಲ್ಲಿ ಭಾಗವಹಿಸುವಂತಹ ವಾತಾವರಣ ಕಲ್ಪಿಸಬೇಕಾಗಿರುವುದು ನಮ್ಮ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಳೆದ 75 ವರ್ಷಗಳಿಂದಲೂ ಪುರುಷರಿಗೆ ಸಮಾನವಾದ ಕೆಲಸಗಳನ್ನು ಮಾಡುತ್ತಾ ಬಂದಿರುವ ಮಹಿಳೆಯರು ಇಂದಿಗೂ ಕೂಡ ದಬ್ಬಾಳಿಕೆ ದೌರ್ಜನ್ಯ ಎದುರಿಸಬೇಕಾಗಿದೆ. ರಾಜಕೀಯದಲ್ಲಿ ಮಹಿಳೆಯರನ್ನು ಬದಿಗಿಟ್ಟು ಪುರುಷ ಪ್ರಧಾನ ವ್ಯವಸ್ಥೆ ವಿಜೃಂಭಿಸುತ್ತಿರುವುದು ಸರಿಯಲ್ಲ. ಇಂದಿರಾ ಗಾಂಧಿ ಪ್ರಧಾನಿಯಾದರು ಮತ್ತು ಇತರೆ ಮಹಿಳೆಯರು ರಾಷ್ಟ್ರಪತಿಗಳಾದರು ಕೂಡ ದೇಶದ ಮಹಿಳೆಯರ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ. ಅನೇಕ ಅವಕಾಶಗಳಿಂದ ತಾಯಂದಿರು ವಂಚಿತರಾಗು ತ್ತಿದ್ದಾರೆ. ಈ ಸಂದರ್ಭದಲ್ಲಿ ಮಹಿಳೆಯರ ಸಬಲೀಕರಣ ಮತ್ತು ಅವರ ನಾಯಕತ್ವ ದೇಶಕ್ಕೆ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಜನಾಂದೋಲನ ಸಮಿತಿ ರಾಜ್ಯ ಸಂಚಾಲಕ ಎ. ನರಸಿಂಹ ಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಆರ್ಥಿಕ ಸುಸ್ಥಿರತೆ ಬೇಕಾದರೆ ಮಹಿಳೆಯರಿಗೆ ನಾಯಕತ್ವ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಈ ರೀತಿಯ ಕಾರ್ಯಾಗಾರಗಳು ಸಹಕಾರಿಯಾಗಿವೆ ಎಂದು ಹೇಳಿದರು.
ಜಿಲ್ಲಾ ಕಾರ್ಮಿಕ ಅಧಿಕಾರಿ ಇಬ್ರಾಹಿಂ ಮಾತ ನಾಡಿ, ಕಾರ್ಮಿಕರ ಪರವಾದ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಕಾಲ ಕಾಲಕ್ಕೆ ಸರಿಯಾಗಿ ಸಂಘಟಿತ ವಲಯದಲ್ಲಿ ನೋಂದಣಿ ಮಾಡಿಸಿಕೊಂಡು ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಸಂಘಟನೆಯ ಗೌರವಾಧ್ಯಕ್ಷ ಎಸ್.ಎಲ್. ಆನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಗೃಹ ಕಾರ್ಮಿಕರ ವೃತ್ತಿ ಸಂಘಟನೆಯ ಮುಖಂಡೆ ಶ್ರೀಮತಿ ರಂಗಮ್ಮ, ಸ್ಲಂ ಜನಾಂದೋಲನದ ಪ್ರಧಾನ ಕಾರ್ಯದರ್ಶಿ ರೇಣುಕಾ ಯಲ್ಲಮ್ಮ, ಸ್ಲಂ ಜನಾಂದೋಲನದ ಕರ್ನಾಟಕದ ಅಧ್ಯಕ್ಷ ಎಂ. ಶಬ್ಬೀರ್‍ಸಾಬ್, ನಿವೇಶನ ರಹಿತರ ಹೋರಾಟ ಸಮಿತಿಯ ಅಧ್ಯಕ್ಷೆ ಶ್ರೀಮತಿ ಮಂಜುಳ ಹಾಗೂ ಕಾರ್ಯಕರ್ತರು ಗಳಾದ ಜಂಷಿದಾ ಬಾನು, ಬಾಲಪ್ಪ, ರೇಷ್ಮಾ, ರೇಖಾ, ಅಸ್ಮಾ, ರಾಜೇಶ್ವರಿ, ಬೀಬೀಜಾನ್, ಗೀತಮ್ಮ, ಚಮನ್, ಸಲಾಂ ಸಾಬ್, ಆರಿಫ್, ಪರ್ವಿನ್ ಬಾನು, ರಜಿಯಾ ಬೀ, ನೂರ್‍ಜಹಾನ್, ಪವಿತ್ರ, ಸಿಕಂದರ್, ಯೂಸುಫ್ ಸಾಬ್, ಮಹಬೂಬ್ ಸಾಬ್, ಡಿ.ಕೆ. ನಯಾಜ್ ಎಲ್ಲಾ ಪದಾಧಿಕಾರಿಗಳು ಇತರರು ಉಪಸ್ಥಿತರಿದ್ದರು.