ಸಿಎಂ ಸ್ಥಾನಕ್ಕಾಗಿ ಸಾವಿರ ಕೋಟಿ !

ಸಿಎಂ ಸ್ಥಾನಕ್ಕಾಗಿ ಸಾವಿರ ಕೋಟಿ !

ಸ್ವಪಕ್ಷೀಯರ ವಿರುದ್ಧವೇ  ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪ

ದಾವಣಗೆರೆ, ಸೆ. 29 – ಕಾಂಗ್ರೆಸ್ ಸರ್ಕಾರ ಒಡೆದು ಮುಖ್ಯಮಂತ್ರಿಯಾಗಲು ಬಿಜೆಪಿಯಲ್ಲಿ ಕೆಲವರು ಸಾವಿರ ಕೋಟಿ ರೂ. ಇಟ್ಟುಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಡಿಸೆಂಬರ್‌ನಲ್ಲಿ ದೊಡ್ಡ ಕ್ರಾಂತಿ ಆಗಲಿದೆ. ಆಗ ಕಾಂಗ್ರೆಸ್ ಸರ್ಕಾರ ಕೆಡವಿ ನಾನೇ ಮುಖ್ಯಮಂತ್ರಿ ಆಗಬೇಕು ಎಂದು ಕೆಲವರು ಸಾವಿರ ಕೋಟಿ ರೂ. ಕಾಯ್ದಿಟ್ಟುಕೊಂಡಿದ್ದಾರೆ ಎಂದರು.

ಈ ಹಿಂದೆ 17 ಜನರನ್ನು ಪಕ್ಷಕ್ಕೆ ಕರೆತಂದು ಬಿಜೆಪಿಯ ಪರಿಸ್ಥಿತಿ ಹೀಗಾಗಿದೆ. ಮತ್ತೆ ಆಪರೇಷನ್ ಕಮಲ ನಡೆಸುವುದು ನಮಗೆ ಒಪ್ಪಿಗೆ ಇಲ್ಲ ಎಂದು ಯತ್ನಾಳ್ ಹೇಳಿದರು.

ಗ್ಯಾರಂಟಿ ಕಾರಣದಿಂದಾಗಿ ಸರ್ಕಾರ ಈಗಾ ಗಲೇ ದಿವಾಳಿಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಆಪರೇಷನ್, ಖರೀದಿ ಇತ್ಯಾದಿಗಳಿಗೆ ನಾವು ಹಾಗೂ ಪಕ್ಷದ ಹೈಕಮಾಂಡ್ ಒಪ್ಪುವುದಿಲ್ಲ ಎಂದವರು ತಿಳಿಸಿದರು.

ಕೆಲವರ ಬಳಿ ಭ್ರಷ್ಟಾಚಾರ ಮಾಡಿದ ಹಣ ಇರಬಹುದು. ಈ ಹಿಂದೆ ಕೆಲವರ ಮನೆಯಲ್ಲಿ ಹಣ ಎಣಿಕೆ ಯಂತ್ರ ದೊರೆತಿತ್ತು. ಅವರು ಮುಖ್ಯಮಂತ್ರಿಯಾಗಲು ಬಯಸಬಹುದು. ಇಂತಹವರು ಕೇವಲ ಬಿಜೆಪಿಯಲ್ಲಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲೂ ಇದ್ದಾರೆ ಎಂದು ಯತ್ನಾಳ್ ಹೇಳಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಿಂದಿದ್ದವರೇ ಶಾಸಕರ ಖರೀದಿಯಲ್ಲಿ ತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲೇ ಕುದುರೆ ವ್ಯಾಪಾರ ನಡೆಯುತ್ತಿದೆ. ಸಿದ್ದ ರಾಮಯ್ಯನವರ ಮುಡಾ ಹಗರಣದ ವಿಷಯ ಬಯಲಿಗೆ ಎಳೆದಿದ್ದು ಕಾಂಗ್ರೆಸ್‌ನವರೇ. ಈ ಕುರಿತ ಕಡತಗಳನ್ನು ಅವರೇ ತಂದುಕೊಟ್ಟಿದ್ದಾರೆ. ಪಾದಯಾತ್ರೆಯನ್ನೂ ಅವರೇ ಮಾಡಿಸಿದ್ದಾರೆ ಎಂದೂ ಬಿಜೆಪಿ ಶಾಸಕ ಹೇಳಿದರು. ಈಗಿನ ಸರ್ಕಾರ ವಿಸರ್ಜನೆ ಯಾಗಲಿ. ಮರು ಚುನಾವಣೆಯಾದಲ್ಲಿ ಬಿಜೆಪಿಗೆ ಪೂರ್ಣ ಬಹುಮತದಿಂದ ಅಧಿಕಾರ ಸಿಗಲಿದೆ. ಗೊಂದಲದ ವ್ಯವಸ್ಥೆಯಲ್ಲಿ ಬಿಜೆಪಿ ಸರ್ಕಾರ ರಚನೆಯಾಗುವುದು ಬೇಡ ಎಂದರು.

ನಾವು ಭಿನ್ನಮತೀಯರಲ್ಲ. ಪಕ್ಷದ ನಿಷ್ಠಾವಂತರು. ಪಕ್ಷದ ಬೆಳವಣಿಗೆಗಾಗಿ ಹೋರಾಟ ನಡೆಸುತ್ತಿದ್ದೇವೆ. ನಾವು ಬೆಳಗಾವಿಯಲ್ಲಿ ಸಭೆ ನಡೆಸಿದ ನಂತರ ಸಂಘ ಪರಿವಾರದ ಪ್ರಮುಖರು ನಮ್ಮ ಜೊತೆ ಮಾತನಾಡಿದ್ದಾರೆ. ನಮ್ಮ ನಿಲುವು ಪರಿಗಣಿಸಿದ್ದಾರೆ ಎಂದರು.

error: Content is protected !!