ಇಂಜಿನಿಯರಿಂಗ್ ಸೀಟು ಮಾರಾಟದ ವಿರುದ್ಧ ಎಬಿವಿಪಿ ಪ್ರತಿಭಟನೆ

ಇಂಜಿನಿಯರಿಂಗ್ ಸೀಟು ಮಾರಾಟದ ವಿರುದ್ಧ ಎಬಿವಿಪಿ ಪ್ರತಿಭಟನೆ

ದಾವಣಗೆರೆ, ಸೆ. 27- ನಗರದ ಯುಬಿಡಿಟಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶೇ.50ರಷ್ಟು ಸೀಟುಗಳನ್ನು ಪೇಮೆಂಟ್ ಕೋಟಾದಡಿ ಮಾರಾಟ ಮಾಡುವುದನ್ನು ಖಂಡಿಸಿ, ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಜ್ಯ ಕಾಂಗ್ರೆಸ್‌ ಸರ್ಕಾರವು ಯುಬಿಡಿಟಿಯಲ್ಲಿ ಬಡ ವಿದ್ಯಾರ್ಥಿಗಳಿಗೆ ಮೀಸಲಿಟ್ಟ ಸೀಟುಗಳನ್ನು ಪೇಮೆಂಟ್ ಸೀಟಗಳಾಗಿ ಮಾರ್ಪಡಿಸಿ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ದ್ರೋಹವೆಸಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸರ್ಕಾರಿ ಕಾಲೇಜುಗಳಲ್ಲಿ ಸೀಟ್ ಪಡೆಯಬೇಕೆಂದು ಬಡ ವಿದ್ಯಾರ್ಥಿಗಳು ಹಗಲಿರುಳು ಕಠಿಣ ಶ್ರಮವಹಿಸಿ ಸಿಇಟಿಯಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಉತ್ತೀರ್ಣರಾಗಿ ಬಂದರೆ, ಇಲ್ಲಿ ಸೀಟುಗಳನ್ನು ಖಾಸಗೀಕರಣ ಮಾಡಿ ಶೇ.50ರಷ್ಟು ಮೆರಿಟ್ ಸೀಟ್‌ಗಳನ್ನು ಸಂಪೂರ್ಣ ಪೇಮೆಂಟ್ ಸೀಟ್‌ಗಳಾಗಿ ಪರಿವರ್ತಿಸಿರುವುದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಇಂಜಿನಿಯರಿಂಗ್ ಸೀಟ್‌ಗಳಿಗೆ 43 ಸಾವಿರ ಇದ್ದಂತಹ ಪ್ರವೇಶ ಶುಲ್ಕವನ್ನು ದಿಢೀರನೆ 97 ಸಾವಿರಕ್ಕೆ ಏರಿಸಿರುವುದು ದೀನ, ದಲಿತರ ಹಾಗೂ ಹಿಂದುಳಿದ ವರ್ಗದ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಹುನ್ನಾರವಾಗಿದೆ ಎಂದು ಕಿಡಿ ಕಾರಿದರು.

ಸರ್ಕಾರಿ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ, ಮೂಲಸೌಕರ್ಯ ಹಾಗೂ ಸೌಲಭ್ಯಗಳನ್ನು ಸರ್ಕಾರಿ ಅನುದಾನದಿಂದ ಅಭಿವೃದ್ಧಿ ಪಡಿಸಿಕೊಳ್ಳಬೇಕೇ ಹೊರತು ಬಡ ವಿದ್ಯಾರ್ಥಿಗಳ ಶಿಕ್ಷಣದ ಕನಸಿನ ಮೇಲೆ ಅನಗತ್ಯ ಪ್ರಭಾವ ಬಿರುವಂತಹ ಕೆಲಸ ಮಾಡಬಾರದು ಎಂದು ಹೇಳಿದರು.

ಸ್ಕಾಲರ್‌ಶಿಪ್ ವಿತರಣೆಯಲ್ಲೂ ಸಾಕಷ್ಟು ಅನ್ಯಾಯವಾಗುತ್ತಿದ್ದು, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿ ಅಡಿಯಲ್ಲಿ ಇಂಜಿನಿಯರಿಂಗ್ ಓದುವ ಬಡ ವಿದ್ಯಾರ್ಥಿಗಳಿಗೆ 50 ಸಾವಿರ ಸ್ಕಾಲರ್‌ಶಿಪ್ ಸಿಗುತ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದ ನಂತರ 10 ಸಾವಿರಕ್ಕೆ ಇಳಿಸಿದ್ದಾರೆ ಎಂದು ದೂರಿದರು.

 ಸರ್ಕಾರವು ದಾವಣಗೆರೆಯ ಪ್ರತಿಷ್ಠಿತ ಯುಬಿಡಿಟಿ ಕಾಲೇಜು ಸೇರಿದಂತೆ ರಾಜ್ಯಾದ್ಯಂತ ಇರುವ ಎಲ್ಲಾ ಸರ್ಕಾರಿ ಇಂಜಿನಿಯರಿಂಗ್‌ ಕಾಲೇಜುಗಳ ಸರ್ವಾಂಗೀಣ ಅಭಿವೃದ್ಧಿಯ ಜತೆಗೆ ಖಾಸಗಿ ಕಾಲೇಜುಗಳನ್ನು ಮೀರಿಸು ವಂತಹ ಶೈಕ್ಷಣಿಕ ವಾತಾವರಣವನ್ನು ನಿರ್ಮಿಸಬೇಕು ಎಂದು ಆಗ್ರಹಿಸಿದ್ದಾರೆ.

ಯುಬಿಡಿಟಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರವೇಶ ಶುಲ್ಕ ಏರಿಕೆಯನ್ನು ತಕ್ಷಣವೇ ಹಿಂಪಡೆಯಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿ ಪರಿಷತ್ ನಿರಂತರ ಹೋರಾಟ ಹಮ್ಮಿಕೊಳ್ಳಲಿದೆ ಎಂದು ಎಚ್ಚರಿಸಿದರು.

ಈ ವೇಳೆ ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್, ನಗರ ಸಂಘಟನಾ ಕಾರ್ಯದರ್ಶಿ ವಿಜಯ್, ವಿಭಾಗ ಸಂಚಾಲಕ ವರುಣ್, ಜಿಲ್ಲಾ ಸಂಚಾಲಕ ನವೀನ್ ಹಾಗೂ ಪ್ರಜ್ವಲ್, ತನುಷ, ಅಲೋಕ್ ಮತ್ತು ಇತರೆ ಕಾರ್ಯಕರ್ತರಿದ್ದರು.

error: Content is protected !!