ಹೆಚ್ಚಾದ ಚಳಿ : ಮಕ್ಕಳಲ್ಲಿ ವ್ಯಾಪಿಸುತ್ತಿರುವ ಶೀತ, ಕೆಮ್ಮು, ಜ್ವರ

ಹೆಚ್ಚಾದ ಚಳಿ : ಮಕ್ಕಳಲ್ಲಿ ವ್ಯಾಪಿಸುತ್ತಿರುವ ಶೀತ, ಕೆಮ್ಮು, ಜ್ವರ

ಮಲೇಬೆನ್ನೂರು, ಜ.17- ಹವಾಮಾನ ಬದಲಾವಣೆಯಿಂದಾಗಿ ಬಹುತೇಕ ಎಲ್ಲಾ ಕಡೆಗಳಲ್ಲಿ ಶೀತ, ಕೆಮ್ಮು, ಜ್ವರ ಕಾಣಿಸಿಕೊಳ್ಳುತ್ತಿದ್ದು, ಮಕ್ಕಳಲ್ಲಿ ಈ ಲಕ್ಷಣಗಳು ಹೆಚ್ಚಾಗಿ ಕಂಡುಬರುತ್ತಿವೆ. ಆಸ್ಪತ್ರೆಗಳಲ್ಲಿ ಈ ಲಕ್ಷಣಗಳಿರುವ ಮಕ್ಕಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಈ ಲಕ್ಷಣಗಳ ಕಾಯಿಲೆ ಬರುವುದು ಸಹಜವಾಗಿದ್ದರೂ ಒಬ್ಬರಿಂದ ಮತ್ತೊಬ್ಬರಿಗೆ ಬೇಗ ಹರಡುವುದರಿಂದ ಅಂತರ ಕಾಯ್ದುಕೊಳ್ಳುವುದು ಒಳಿತು ಎಂದ ಮಲೇಬೆನ್ನೂರಿನ ಆದಿತ್ಯ ಮಕ್ಕಳ ಆಸ್ಪತ್ರೆಯ ಮಕ್ಕಳ ವೈದ್ಯ ಡಾ. ಶ್ರೀನಿವಾಸ್‌ ಸಲಹೆ ನೀಡಿದ್ದಾರೆ.

ಮಕ್ಕಳಲ್ಲಿ ಶೀತ, ಕೆಮ್ಮು, ಜ್ವರ ಬಾಧೆ ಹೆಚ್ಚಾಗುತ್ತಿರುವ ಕುರಿತು `ಜನತಾವಾಣಿ’ಯೊಂದಿಗೆ ಮಾತನಾಡಿದ ಡಾ. ಶ್ರೀನಿವಾಸ್‌ ಅವರು, ಈಗಿನ ಯಾವುದೇ ಕಾಯಿಲೆಗಳಿಗೆ ಸ್ವಯಂ ಚಿಕಿತ್ಸೆಗಿಂತ ವೈದ್ಯರ ಸಲಹೆ ಪಡೆಯುವುದು ಸೂಕ್ತ. 

ಹವಾಮಾನ ಬದಲಾವಣೆಯಿಂದಾಗಿ ಚಳಿ, ಇಬ್ಬನಿ ಹೆಚ್ಚಾಗುತ್ತಿರುವುದರಿಂದ ದೊಡ್ಡವರಿಗಿಂತ ಮಕ್ಕಳಲ್ಲಿ ಶೀತ, ಕೆಮ್ಮು, ಜ್ವರ, ಕಫ, ಸುಸ್ತು ಕಂಡುಬರುತ್ತಿದೆ. ಚಿಕಿತ್ಸೆ ತೆಗೆದುಕೊಂಡರೆ 3-4 ದಿನಗಳಲ್ಲಿ ಕಡಿಮೆ ಆಗುತ್ತದೆ. ಔಷಧ ತೆಗೆದುಕೊಂಡ 3-4 ದಿನಗಳ ನಂತರವೂ ಕಡಿಮೆ ಆಗದಿದ್ದರೆ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಮನೆಯಲ್ಲಿ ದೊಡ್ಡವರಿಗೆ ಈ ಲಕ್ಷಣಗಳು ಕಂಡುಬಂದರೆ ಮಕ್ಕಳಿಂದ ದೂರವಿರಬೇಕು. ಮಾಸ್ಕ್‌ ಧರಿಸುವುದು ತುಂಬಾ ಒಳ್ಳೆಯದು. ಶೀತ, ಕೆಮ್ಮು, ಜ್ವರ ಬಂದಿರುವ ಮಕ್ಕಳು ಸಂಪೂರ್ಣವಾಗಿ ಗುಣಮುಖವಾಗುವವ ರೆಗೂ ಶಾಲೆಗೆ ಕಳುಹಿಸಬೇಡಿ. ಈ ವಾತಾವರಣದಲ್ಲಿ ಮಕ್ಕಳನ್ನು ಹಾಗೂ ವಯಸ್ಸಾದ ವೃದ್ಧರನ್ನು ಹೊರಗಡೆ ಕರೆದುಕೊಂಡು ಹೋಗದಿರುವುದು ಸೂಕ್ತ ಎಂದು ಡಾ. ಶ್ರೀನಿವಾಸ್‌ ತಿಳಿಸಿದರು. 

ಹೊರಗಡೆ ಪದಾರ್ಥಗಳನ್ನು ಮಕ್ಕಳಿಗೆ ತಿನ್ನಲು ಕೊಡಿಸಬೇಡಿ, ಮಕ್ಕಳಿಗೆ ಬಿಸಿ ನೀರು ಕುಡಿಸಿ, ಪೋಷಕರೂ ಕುಡಿಯುವುದು ಒಳ್ಳೆಯದು ಹಾಗೂ ದೇಹವನ್ನು ಆದಷ್ಟು ಬೆಚ್ಚಗಿರಿಸಿಕೊಳ್ಳಬೇಕು. ಈ ಲಕ್ಷಣಗಳು ಇರುವ ಕಾಯಿಲೆ ಕೋವಿಡ್‌ ಅಲ್ಲ ಎಂದು ಡಾ. ಶ್ರೀನಿವಾಸ್‌ ಸ್ಪಷ್ಟಪಡಿಸಿದರು.

ಅಲ್ಲಲ್ಲಿ ಚಿಕನ್‌ ಪಾಕ್ಸ್‌ ಕಾಯಿಲೆ ಮಕ್ಕಳಲ್ಲಿ ಕಂಡುಬರುತ್ತಿದ್ದು, ಈ ಬಗ್ಗೆಯೂ ಪೋಷಕರು ಆತಂಕ ಪಡಬೇಕಾಗಿಲ್ಲ. ಚಿಕಿತ್ಸೆ ನಂತರ ವಾರದೊಳಗೆ ಗುಣಮುಖರಾಗುತ್ತಾರೆ. ಈ ಕಾಯಿಲೆ ಬಂದ ಮಕ್ಕಳನ್ನು ಶಾಲೆೆ ಕಳುಹಿಸಬೇಡಿ ಮತ್ತು ಈ ಕಾಯಿಲೆ ಬಂದಾಗ ಮೂಡನಂಬಿಕೆಗೆ ಒಳಗಾಗದೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಡಾ. ಶ್ರೀನಿವಾಸ್‌ ಮನವಿ ಮಾಡಿದ್ದಾರೆ.

ಶೀತ, ಕೆಮ್ಮು, ಕಫ, ಜ್ವರ, ಕೈ-ಕೈ ನೋವು ದೊಡ್ಡವರಲ್ಲೂ ಕಂಡುಬರುತ್ತಿದ್ದು, ಚಿಕಿತ್ಸೆ ನಂತರ 2-3 ದಿನಗಳಲ್ಲಿ ವಾಸಿಯಾಗುತ್ತಿದ್ದಾರೆೆಂದು ಭಾರ ತೀಯ ವೈದ್ಯಕೀಯ ಸಂಘದ ಮಲೇಬೆನ್ನೂರು ಶಾಖೆ ಯ ಅಧ್ಯಕ್ಷ ಡಾ. ಬಿ. ಚಂದ್ರಶೇಖರ್‌ ತಿಳಿಸಿದರು.

ವಾತಾವರಣ ಬದಲಾಗುತ್ತಿದ್ದಂತೆಯೇ ಸಹಜ ವಾಗಿ ಈ ಲಕ್ಷಣಗಳ ಕಾಯಿಲೆ ಕಡಿಮೆ ಆಗಲಿದೆ. ಈ ಬಗ್ಗೆ ಯಾರಿಗೂ ಆತಂಕ ಬೇಡ ಎಂದರು. 

ಗರ್ಭಿಣಿ ಮಹಿಳೆಯರು ಮತ್ತು ಹೆರಿಗೆ ಆದ ಮಹಿಳೆಯರೂ ಕೂಡಾ ಚಳಿ ವಾತಾವರಣದ ಬಗ್ಗೆ ಎಚ್ಚರಿಕೆ ವಹಿಸಿ, ಬೆಚ್ಚಗಿರಬೇಕು. ನವಜಾತ ಶಿಶುಗಳನ್ನು ಬಹಳ ಜಾಗ್ರತೆಯಿಂದ ನೋಡಿಕೊಳ್ಳಬೇಕೆಂದು ಸ್ತ್ರೀ ರೋಗ ಹಾಗೂ ಹೆರಿಗೆ ತಜ್ಞ ಡಾ. ಅಪೂರ್ವ ಸಲಹೆ ನೀಡಿದ್ದಾರೆ.

ರಜೆ : ಕೆಲವು ಹಾಸ್ಟೆಲ್‌ ಮತ್ತು ಶಾಲೆಗಳಲ್ಲಿ ಶೀತ, ಕೆಮ್ಮು, ಜ್ವರ ಲಕ್ಷಣ ಇರುವ ಮಕ್ಕಳು ಹೆಚ್ಚಾಗಿ ಕಂಡುಬಂದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ರಜೆಯನ್ನೂ ನೀಡಿರುವ ಬಗ್ಗೆ ವರದಿಯಾಗಿದೆ. 

error: Content is protected !!