ಹೊನ್ನಾಳಿ, ಜ.17- ಕುಸ್ತಿ ಪಟುಗಳು ದೇಹಕ್ಕೆ ದೈವೀದತ್ತವಾದ ಮಣ್ಣನ್ನು ಹಚ್ಚಿಕೊಂಡು ಎದುರಾಳಿ ಪೈಲ್ವಾನರನ್ನು ಮಣ್ಣು ಮುಕ್ಕಿಸುತ್ತಿದ್ದರೆ ಕುಸ್ತಿ ನೋಡಲು ನೆರೆದಿದ್ದವರ ಶಿಳ್ಳೆ, ಕೇಕೆ ಹಾಕಿ ನೆಚ್ಚಿನ ಕುಸ್ತಿ ಪಟುಗಳನ್ನು ಹುರಿದುಂಬಿಸುತ್ತಿದ್ದ ದೃಶ್ಯ ಮೈ ರೋಮಾಂಚನಗೊಳಿಸುತ್ತಿದ್ದು ಗ್ರಾಮೀಣ ಕ್ರೀಡೆ ಎಂದೆಂದಿಗೂ ಪ್ರಶಕ್ತವಾದ ಜೀವಂತ ಕ್ರೀಡೆ.
ಪಟ್ಟಣದ ಶ್ರೀ ದುರ್ಗಮ್ಮ, ಮರಿಯಮ್ಮ ದೇವಿ ಜಾತ್ರೆ ಪ್ರಯುಕ್ತ ಮೂರು ದಿನಗಳ ಕಾಲ ಬಯಲು ಖಾಟಾ ಜಂಗೀ ಕುಸ್ತಿಯನ್ನು ಖಾಸಗಿ ಬಸ್ ನಿಲ್ದಾಣದ ಬಳಿ ಶ್ರೀ ಆಂಜನೇಯ ಟ್ರಸ್ಟ್ ಕಮಿಟಿಯವರು ಆಯೋಜಿಸಿದ್ದರು.
ಪ್ರೇಕ್ಷಕರ ಕೇಕೆ, ಚಪ್ಪಾಳೆ : ಕುಸ್ತಿ ಅಖಾಡದಲ್ಲಿ ಮೂರು ದಿನಗಳ ಕಾಲ ಪ್ರೇಕ್ಷಕರು ಪೈಲ್ವಾನರು ಎದುರಾಳಿ ಮಣಿಸಲು ಪಟ್ಟು ಹಾಕುತ್ತಿದ್ದರೆ, ಸುತ್ತಲೂ ಸೇರಿದ್ದ ಪ್ರೇಕ್ಷಕರು ಕೇಕೆ ಹಾಕಿ, ಚಪ್ಪಾಳೆ ತಟ್ಟುತ್ತಾ ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು. ನೆಚ್ಚಿನ ಪೈಲ್ವಾನರು ನೆಲಕ್ಕುರುಳಿದಾಗ `ಅಯ್ಯೋ…’ ಎಂಬ ಉದ್ಘಾರದ ಶಬ್ದ ಕೇಳಿಬರುತ್ತಿದ್ದರೆ, ಗೆದ್ದ ಪೈಲ್ವಾನರಿಗೆ ನೆರೆದಿದ್ದ ಜನತೆ ತಮ್ಮ ಕೈಯಲ್ಲಿದ್ದ ಹಣವನ್ನು ನೀಡಿ ಪ್ರೋತ್ಸಾಹಿಸಿದರು.
ಒಂದೊಂದು ಪಂದ್ಯವು ವಿಭಿನ್ನ : ಒಂದೊಂದು ಪಂದ್ಯವು ವಿಭಿನ್ನವಾಗಿದ್ದು ಕುಸ್ತಿ ಆಟದ ದೃಶ್ಯ ಮೈನವಿರೇಳಿಸುತ್ತಿತ್ತು. ಕುಸ್ತಿ ಪ್ರದರ್ಶನದಲ್ಲಿ ಆಕರ್ಷಕವಾಗಿ ಪ್ರದರ್ಶನ ನೀಡಿದ ಪೈಲ್ವಾನರಿಗೆ ಕುಸ್ತಿ ಆಯೋಜಕರು ವಿವಿಧ ದೇವರ ಫೋಟೋ, ಚಲನ ಚಿತ್ರ ನಟ ಪುನೀತ್ ರಾಜಕುಮಾರ್ (ಅಪ್ಪು) ಅವರ ಫೋಟೋ, ಬೆಳ್ಳಿ ದೀಪಗಳು, ಜೊತೆಗೆ ವಿಭಿನ್ನ ರೀತಿಯ ನೆನಪಿನ ಕಾಣಿಕೆ ಟ್ರೋಫಿಗಳನ್ನು ಬಹುಮಾನ ನೀಡಲಾಯಿತು.
ಮೂರು ದಿನಗಳ ಕಾಲ ಕುಸ್ತಿಯಲ್ಲಿ ನೂರಾರು ಕುಸ್ತಿ ಪಟುಗಳು 1 ಸಾವಿರದಿಂದ 30 ಸಾವಿರ ರೂ. ವರೆಗೆ ನಗದು ಹಣ ಬಹುಮಾನ ಪಡೆದರು. ಬಹುಮಾನ ವಿಜೇತರಾದ ಶಿವಮೊಗ್ಗ ಕಿರಣ್ 20 ಸಾವಿರ, ಗುಲ್ಬರ್ಗ ಸಿದ್ದಪ್ಪ 15 ಸಾವಿರ, ಬಿಜಾಪುರ ರಾಮಚಂದ್ರ 15 ಸಾವಿರ, ಕೊಲ್ಲಾಪುರ ಅಬ್ಬಾಸ್ 12 ಸಾವಿರ, ಮೈಸೂರು ಸುನೀಲ್ 8 ಸಾವಿರ, ಹರಪನಹಳ್ಳಿ ಕುಸ್ತಿಪಟು 10 ಸಾವಿರ, ಹೊಳೆಹೊನ್ನೂರು ಭಟ್ಟ 10 ಸಾವಿರ, ಹಿತ್ತಲಕಲ್ಮನಿ ಪಂಕಜ 10 ಸಾವಿರ, ಜೊತೆಗೆ ವಿಶೇಷವಾಗಿ ದಾವಣಗೆರೆ ರೂಪಾ ಉಷಾ ಸೇರಿದಂತೆ 2 ತಂಡಗಳು ಕುಸ್ತಿ ಅಖಾಡಕ್ಕಿಳಿದು ಕುಸ್ತಿ ಪ್ರದರ್ಶನ ನಡೆಸಿ ನೋಡುಗರ ಮನ ಸೆಳೆದರು. ಎರಡೂ ತಂಡಗಳಿಗೆ ಕಮಿಟಿಯಿಂದ ತಲಾ 4 ಸಾವಿರ ನಗದು ಹಣ ನೀಡಲಾಯಿತು.
ನಗದು 30 ಸಾವಿರ ಮತ್ತು 50 ಸಾವಿರ ಬೆಲೆ ಬಾಳುವ ಬೆಳ್ಳಿ ಗದೆಗೆ ಶಿವಮೊಗ್ಗ ಕಿರಣ್, ಉತ್ತರಪ್ರದೇಶದ ಬಂಟಿ, ಬಿಜಾಪುರದ ರಾಮಚಂದ್ರ ಕುಸ್ತಿ ಸ್ಪರ್ದಾಳುಗಳಿದ್ದು ಇವರಿಗೆ ಎದುರಾಳಿ ಯಾರೂ ಸರಿಸಾಟಿ ಇಲ್ಲದ ಕಾರಣ ಶ್ರೀ ಆಂಜನೇಯ ಟ್ರಸ್ಟ್ ಕಮಿಟಿಗೆ ಉಳಿಸಿಕೊಳ್ಳಲಾಯಿತು ಎಂದು ಟ್ರಸ್ಟ್ ಕಮಿಟಿ ಖಜಾಂಚಿ ವೊಡ್ಡಿ ಚನ್ನಪ್ಪ ತಿಳಿಸಿದರು.
ಶ್ರೀ ಆಂಜನೇಯ ಟ್ರಸ್ಟ್ ಕಮಿಟಿ ಅಧ್ಯಕ್ಷ ನರಸಿಂಹಪ್ಪ, ಮಾಜಿ ಅಧ್ಯಕ್ಷ ಬಾಬು ಹೋಬಳದರ್, ಖಜಾಂಚಿ ವೊಡ್ಡಿ ಚನ್ನಪ್ಪ, ಟಾಕೀಸ್ ಹೆಚ್.ಬಿ.ಶಿವಯೋಗಿ, ಹೆಚ್.ಎ.ರಾಜಪ್ಪ, ಎಂ.ಎಸ್. ಪಾಲಾಕ್ಷಪ್ಪ, ಮಹೇಶಣ್ಣ, ಹೆಚ್.ಎ.ಉಮಾಪತಿ, ಧರ್ಮಪ್ಪ,
ಇಂಚರ ಮಂಜು, ಹೆಚ್.ಎಸ್.ರಂಜಿತ, ಇಂಚರ ನವೀನ್, ಎಂ.ಪಿ.ರಾಜಣ್ಣ, ಜಿಪಂ ಮಾಜಿ ಸದಸ್ಯ ಎಂ.ಆರ್.ಮಹೇಶ್, ಯೋಗೀಶ್, ಕಾಯಿಬುರುಡೆ ಚನ್ನಪ್ಪ, ಮೇಘರಾಜ, ದೈಹಿಕ ಶಿಕ್ಷಕ ಸಣ್ಣಸಿದ್ದಪ್ಪ ಸೇರಿದಂತೆ ಮುಖಂಡರು ಇದ್ದರು.